ಕಾಗ್ನೇಟಿವ್ ಬಿಹೆವಿಯರ್ ಥೆರಪಿ

ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಿದ ಹಾಗೂ ನಿಗದಿತ ಗುರಿಯನ್ನು ಖಚಿತವಾಗಿ ತಲುಪುವ ದೃಷ್ಟಿಕೋನವನ್ನು ಹೊಂದಿದ ಚಿಕಿತ್ಸೆ - ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ.

ಜನರ ಭಾವನಾತ್ಮಕ ಪ್ರತಿಕ್ರಿಯೆಗಳು ಹಾಗೂ ನಡವಳಿಕೆಗಳು, ಜೀವನದಲ್ಲಿ ಅವರ ಅನುಭವಕ್ಕೆ ಬರುವ ಪ್ರತಿ ಘಟನೆ ಬಗೆಗಿನ ಯೋಚನೆ, ನಂಬಿಕೆ ಹಾಗೂ ಗ್ರಹಿಕೆಯಿಂದ ಗಾಢವಾಗಿ ಪ್ರಭಾವಿಸಿತ್ತವೆ. ಆದ್ದರಿಂದ ಸಹಜವಾಗಿಯೇ, ಜನ ಹೇಗೆ ಯೋಚಿಸುತ್ತಾರೆ ಎನ್ನುವುದು, ಅವರು ಅದನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಅವಲಂಬಿಸಿರುತ್ತದೆ ಹಾಗೂ ಅಂತಿಮವಾಗಿ ಅದು ಅವರ ನಡವಳಿಕೆಯನ್ನು ನಿರ್ಧರಿಸುತ್ತದೆ.

ಉದಾಹರಣೆಗೆ ಖಿನ್ನತೆಯಿಂದ ಇರುವ ಜನರು ತಮ್ಮ ಬಗ್ಗೆ, ಇತರರ ಬಗ್ಗೆ ಹಾಗೂ ಇಡೀ ವಿಶ್ವದ ಬಗ್ಗೆ ತಪ್ಪು ಯೋಚನೆ ಹಾಗೂ ನಂಬಿಕೆ ಹೊಂದಿರುತ್ತಾರೆ. ಅಂಥ ತಪ್ಪು ತಿಳಿವಳಿಕೆಗಳನ್ನು ಸರಿಪಡಿಸಿದಲ್ಲಿ ಅವರ ಭಾವನಾತ್ಮಕ ಸ್ಥಿತಿ ಸುಧಾರಿಸುತ್ತದೆ ಹಾಗೂ ವಿಶ್ವದ ಬಗೆಗಿನ ಅವರ ತಿಳಿವಳಿಕೆ ಬದಲಾಗುತ್ತದೆ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಎಂದರೇನು?
ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಎಂದರೆ, ಬಹಳ ಸಂಶೋಧನೆಯ ಬಳಿಕ ಕಂಡುಕೊಂಡ ಹಾಗೂ ಇದೀಗ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಒಂದು ವಿಧದ ಮಾನಸಿಕ ಚಿಕಿತ್ಸೆ. ಇದು ಮೂಲಭೂತವಾಗಿ ಆಯಾ ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಿದ ಹಾಗೂ ನಿಗದಿತ ಗುರಿಯನ್ನು ಖಚಿತವಾಗಿ ತಲುಪುವ ದೃಷ್ಟಿಕೋನವನ್ನು ಹೊಂದಿದ ಚಿಕಿತ್ಸೆ. ಈ ಚಿಕಿತ್ಸೆಯನ್ನು ಹಲವು ಬಗೆಯ ಭಾವನಾತ್ಮಕ, ನಡವಳಿಕೆ ಸಂಬಂಧದ ಹಾಗೂ ಮಾನಸಿಕ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಕೆಲ ಸಮಸ್ಯೆಗಳಿಗೆ ತೀವ್ರ ಆತಂಕ ಹಾಗೂ ಖಿನ್ನತೆಗಳಿಗೂ ಬಳಸಲಾಗುತ್ತದೆ. ಈ ಚಿಕಿತ್ಸೆ ಸ್ವತಃ ಒಂದು ಉತ್ತಮ ಔಷಧಿಯಾಗಿದ್ದು, ಇತರ ಔಷಧಿಗಳ ಪರಿಣಾಮವನ್ನು ವಿಸ್ತೃತಗೊಳಿಸುವ ಚಿಕಿತ್ಸಾ ವಿಧಾನವಾಗಿಯೂ ಇದನ್ನು ಬಳಸಬಹುದಾಗಿದೆ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಲ್ಲಿ ಸಮಸ್ಯೆಯನ್ನು ಉಂಟುಮಾಡಿರುವ ನಿಷ್ಕ್ರಿಯ ಯೋಚನಾ ವಿಧಾನಗಳು ಹಾಗೂ ನಡವಳಿಕೆಗಳನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ. ಇಲ್ಲಿ ಚಿಕಿತ್ಸಕರು ಆ ವ್ಯಕ್ತಿಯ ಜತೆಗೆ ಕಾರ್ಯ ನಿರ್ವಹಿಸುವ ಮೂಲಕ ಅವರಿಗೆ ರಚನಾತ್ಮಕ ಕೌಶಲ ಹಾಗೂ ಹವ್ಯಾಸಗಳನ್ನು ಕಲಿಸಲು ಮತ್ತು ಕೆಲವೊಮ್ಮೆ ಪದೇ ಪದೇ ಕಲಿಸಲು ನೆರವಾಗುತ್ತಾರೆ.  ಅಂತಿಮವಾಗಿ ಇದು ಜೀವನದ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳನ್ನು ಕೂಡಾ ನಿಭಾಯಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಅವರಿಗೆ ನೆರವಾಗುತ್ತದೆ. ಇಂಥ ಅರಿವಿನ ಚಿಕಿತ್ಸೆಯ ಫಲಿತಾಂಶ ಧೀರ್ಘಕಾಲಿಕವಾಗಿದ್ದು, ವಿವೇಚನಾತ್ಮಕವಾಗಿ ಯಾವುದೇ ಸಮಸ್ಯೆಗಳನ್ನು ವಿಶ್ಲೇಷಿಸಿ ಅದನ್ನು ಪರಿಹರಿಸುವ ಕೌಶಲವನ್ನು ಅವರಲ್ಲಿ ಬೆಳೆಸುತ್ತದೆ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಹಲವು ಮನಃಶಾಸ್ತ್ರೀಯ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.

ಕಾಗ್ನೇಟಿವ್‌ ಬಿಹೆವಿಯರ್‌ ಹಲವು ಮಾನಸಿಕ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದ್ದು, ಅಂಥ ಪ್ರಮುಖ ಸಮಸ್ಯೆಗಳೆಂದರೆ:

 • ಖಿನ್ನತೆ, ಆತಂಕದ ಅಸಮತೋಲನ, ಸೇವನೆಯ ಅಸಮತೋಲನ, ನಿರಂತರ ನಿಂದನೆ ಹಾಗೂ ವ್ಯಕ್ತಿತ್ವದ ದೋಷ ಇವೇ ಮೊದಲಾದ ಮಾನಸಿಕ ಕಾಯಿಲೆಗಳು.
 • ಬೈಪೋಲಾರ್ ಅಸ್ವಸ್ಥತೆ ಹಾಗೂ ಛಿದ್ರಮನಸ್ಕತೆಗೆ ಇತರ ಚಿಕಿತ್ಸಾ ವಿಧಾನಗಳಿಗೆ ಪೂರಕವಾಗಿ ಇದನ್ನು ಬಳಸಬಹುದಾಗಿದೆ.
 • ಮನಃಶಾಸ್ತ್ರೀಯ ಅಂಶಗಳನ್ನೊಳಗೊಂಡ ಅನಾರೋಗ್ಯದ ಪರಿಸ್ಥಿತಿಯಲ್ಲೂ ಇದು ಪ್ರಯೋಜನಕಾರಿ. ಇಂಥ ಅನಾರೋಗ್ಯಗಳಾದ ತೀವ್ರ ನೋವು, ತಾಳಲಾರದ ಬಳಲಿಕೆ ಲಕ್ಷಣಗಳು, ಮುಟ್ಟಿನ ಮೊದಲಿನ ತೊಂದರೆಗಳು, ಮೆದುಳು ಗಾಯ, ಬೊಜ್ಜು, ಅರೆಪ್ರಜ್ಞಾವಸ್ಥೆ, ಸೊಮೊಟೊಫೋರ್ಮ್ ಅಸ್ವಸ್ಥತೆ.
 • ಕೋಪ, ಆತಂಕ, ಸಂಬಂಧದ ಸಮಸ್ಯೆಗಳು, ಜೂಜು ಮತ್ತಿತರ ಮನಃಶಾಸ್ತ್ರೀಯ ತೊಂದರೆಗಳು.
 • ಮಕ್ಕಳ ಆತಂಕದ ಅಸ್ವಸ್ಥತೆ ಅಥವಾ ಮಕ್ಕಳಲ್ಲಿ ಖಿನ್ನತೆ, ನಡವಳಿಕೆ ತೊಂದರೆಗಳು.
 • ಇತರ ತೊಂದರೆಗಳಾದ ಒತ್ತಡ, ಆತಂಕ, ಕೀಳರಿಮೆ, ನಿದ್ರೆಯ ಸಮಸ್ಯೆಗಳು, ದುಃಖ ಮತ್ತು ನಷ್ಟ, ವೃತ್ತಿಸಂಬಂಧಿ ಸಮಸ್ಯೆಗಳು ಹಾಗೂ ವಯಸ್ಸಿನ ತೊಂದರೆಗಳಿಗೂ ಇದು ಪರಿಣಾಮಕಾರಿ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಲಾಭಗಳೇನು?
ಇದು ಮಾತಿನ  ಮೂಲಕ ನೀಡುವ ಚಿಕಿತ್ಸೆ. ಇಲ್ಲಿ ಚಿಕಿತ್ಸಕ ಆ ವ್ಯಕ್ತಿಗೆ ಅರಿವಿಗೆ ಸಂಬಂಧಿಸಿದ, ನಡವಳಿಕೆ ಹಾಗೂ ಭಾವನಾತ್ಮಕ ನಿಯಂತ್ರಣ ಕೌಶಲಗಳನ್ನು ಹೇಳಿಕೊಡುತ್ತಾರೆ. ಅವರಿಗೆ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹಾಗೂ ಎಂಥದ್ದೇ ಪರಿಸ್ಥಿತಿ ಬಂದರೂ ಅದನ್ನು ವಿವೇಚನಾತ್ಮಕವಾಗಿ ಹಾಗೂ ತಾರ್ಕಿಕ ರೀತಿಯಲ್ಲಿ ಬಗೆಹರಿಸಲು ಸಾಧ್ಯ ಮಾಡುತ್ತದೆ.

ಪ್ರಮುಖ ಪ್ರಯೋಜನಗಳು:

 • ವ್ಯಕ್ತಿಗಳು ತಮ್ಮ ಹುದುಗಿದ ಯೋಜನೆಗಳು, ಭಾವನೆಗಳು ಹಾಗೂ ಗ್ರಹಿಕೆಗಳನ್ನು ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತದೆ.
 • ಅರಿವಿನ ಚಿಕಿತ್ಸೆ ಇತರ ಚಿಕಿತ್ಸಾ ವಿಧಾನಗಳಿಗೆ ಪೂರಕವಾಗಿದ್ದು, ಇದು ಔಷಧಿಗಳನ್ನು ಸೇವಿಸುತ್ತಿರುವವರಿಗೆ ಹಾಗೂ ಸಲಹಾ ಚಿಕಿತ್ಸೆ ಪಡೆಯುತ್ತಿರುವವರಿಗೆ ಇದು ಹೆಚ್ಚುವರಿ ಪ್ರಯೋಜನವಾಗಿ ಪರಿಣಮಿಸುತ್ತದೆ.
 • ಈ ಚಿಕಿತ್ಸೆಯಲ್ಲಿ ಸಕ್ರಿಯವಾಗಿ ಪಾಳ್ಗೊಂಡ ವ್ಯಕ್ತಿಗಳಿಗೆ ಇದು ಇದನ್ನು ಮುಂದುವರಿಸಲು ಉತ್ತೇಜಿಸುತ್ತದೆ. ಅವರು ಕೆಲ ಅಭ್ಯಾಸಗಳನ್ನು ಪೂರ್ಣಗೊಳಿಸಬೇಕಾಗುತ್ತದೆ ಹಾಗೂ ಅವರು ತಾವು ಕಲಿತ ಅಂಶಗಳನ್ನು ಪುನರ್ ಮನನ ಮಾಡಿಕೊಳ್ಳಬೇಕಾಗುತ್ತದೆ.
 • ಅರಿವಿನ ಚಿಕಿತ್ಸೆಯು ಅತ್ಯಂತ ಹೊಂದಿಕೊಳ್ಳುವ ಹಾಗೂ ಅವರವರ ಸಮಸ್ಯೆಯ ತೀವ್ರತೆಗೆ ತಕ್ಕಂತೆ ಮಾರ್ಪಡಿಸಬಹುದಾದ ಗುಣವನ್ನು ಹೊಂದಿದೆ. ಇದು ಜನರಿಗೆ ಆ ಚಿಕಿತ್ಸೆ ಸ್ವೀಕಾರಾರ್ಹವಾಗುವಂತೆ ಮಾಡುತ್ತದೆ.
 • ಕಾಗ್ನೇಟಿವ್‌ ಬಿಹೆವಿಯರ್‌ ಚಿಕಿತ್ಸೆಯಲ್ಲಿ ಕಲಿತದ್ದನ್ನು ಈ ವ್ಯಕ್ತಿಗಳು ಜೀವನದ ವಿವಿಧ ಪರಿಸ್ಥಿತಿಗಳಲ್ಲಿ ಬಳಸಿಕೊಳ್ಳಬಹುದಾಗಿದ್ದು, ಚಿಕಿತ್ಸೆ ಪೂರ್ಣಗೊಳಿಸಿದ ಬಳಿಕವೂ ಈ ತಂತ್ರಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಹೇಗೆ ಕೆಲಸ ಮಾಡುತ್ತದೆ?
ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ತೀರಾ ಸಕ್ರಿಯ ಹಾಗೂ ಫಲ ನಿರೀಕ್ಷಿತ ಚಿಕಿತ್ಸಾ ವಿಧಾನವಾಗಿದ್ದು, ಈ ಕೆಳಗಿನ ಕೌಶಲಗಳನ್ನು ಜನರು ಕಲಿತುಕೊಳ್ಳಲು ಸಹಾಯಕವಾಗುತ್ತದೆ.

 • ತಮ್ಮ ಭಾವನೆಗಳನ್ನು ವಿಶ್ಲೇಷಿಸಲು ಹಾಗೂ ಆರೋಗ್ಯಕರ ಮತ್ತು ಅನಾರೋಗ್ಯಕರ ಭಾವನೆಗಳ ನಡುವಿನ ವ್ಯತ್ಯಾಸವನ್ನು ಗಮನಿಸಲು ಇದು ಸಹಕರಿಸುತ್ತದೆ.
 • ಇದು ಅವರ ಸ್ವಯಂ ಅರಿವು ಹಾಗೂ ಭಾವನಾತ್ಮಕ ಅಂಶಗಳ ನಿಯಂತ್ರಣ ಶಕ್ತಿಯನ್ನು ಹೆಚ್ಚಿಸುತ್ತದೆ.
 • ತಪ್ಪು ತಿಳಿವಳಿಕೆಗಳು ಹಾಗೂ ಯೋಚನೆಗಳು ಹೇಗೆ ಭಾವನಾತ್ಮಕವಾಗಿ ನೋವು ತರುವ ಅಂಶಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
 • ಋಣಾತ್ಮಕ ಆಲೋಚನೆಗಳನ್ನು ಗುರುತಿಸಲು ಹಾಗೂ ಮಾರ್ಪಡಿಸಿಕೊಳ್ಳುವ ಕೆಲ ನಿರ್ದಿಷ್ಟ ತಂತ್ರಗಳನ್ನು ಕಲಿಯಲು ಇದು ಅನುಕೂಲವಾಗುತ್ತದೆ. ಇದರಿಂದ ಅವರ ಯೋಚನೆ ವಿವೇಚನಾತ್ಮಕ ಹಾಗೂ ರಚನಾತ್ಮಕವಾಗಿ ಬದಲಾಗುವ ಸಾಧ್ಯತೆ ಇರುತ್ತದೆ.
 • ಒತ್ತಡ ಅಥವಾ ಹತಾಶೆಗೆ ಕಾರಣವಾಗುವ ಅಂಶಗಳನ್ನು ಹಾಗೂ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತದೆ.
 • ತಮ್ಮ ನರಳಿಕೆಗೆ ಕಾರಣವಾದ ಪ್ರಮುಖ ಅಂಶಗಳನ್ನು ಹಾಗೂ ಪ್ರಬಲ ನಂಬಿಕೆಗಳನ್ನು ಬದಲಿಸಿ, ಭವಿಷ್ಯದಲ್ಲಿ ಇಂಥ ಭಾವನಾತ್ಮಕ ವ್ಯತ್ಯಯಗಳಾಗದಂತೆ ತಡೆಯಲು ಇದು ಸಹಕರಿಸುತ್ತದೆ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಹೇಗೆ ಕೆಲಸ ಮಾಡುತ್ತದೆ?
ವ್ಯಕ್ತಿಗಳು ತಮ್ಮ ಅನಾರೋಗ್ಯಕರ ಯೋಚನೆಗಳನ್ನು ಬದಲಿಸಿಕೊಂಡು ಆರೋಗ್ಯಕರ ಹಾಗೂ ರಚನಾತ್ಮಕವಾಗಿ ತರ್ಕಿಸುವುದು ಈ ಚಿಕಿತ್ಸೆಯ ಪ್ರಮುಖ ಗುರಿ.

ಇಲ್ಲಿ ಚಿಕಿತ್ಸಕರು ಮುಖ್ಯವಾಗಿ ರೋಗಿಗಳ ಪೂರ್ವನಿರ್ಧಾರ, ನಂಬಿಕೆ, ವಿವೇಚನಾತ್ಮಕತೆಯನ್ನು ಪರಿಶೀಲಿಸಿಕೊಳ್ಳಲು ಸಹಕರಿಸುತ್ತಾರೆ. ಈ ಮೂಲಕ ಋಣಾತ್ಮಕ ಆಲೋಚನೆಗಳಗೆ ಕಾರಣವಾಗುವ ಪ್ರಕ್ರಿಯೆಯ ಮಾಹಿತಿಯನ್ನು ಅವರಿಗೆ ಮನದಟ್ಟು ಮಾಡಿ, ಭವಿಷ್ಯದಲ್ಲಿ ತಮ್ಮ ಬಗೆಗಿನ ಹಾಗೂ ಪ್ರಪಂಚದ ಬಗೆಗಿನ ಪರಿಕಲ್ಪನೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ.

ವಿವೇಚನಾ ಶೂನ್ಯವಾಗಿ ಯೋಚಿಸುವ ವಿಧಾನಗಳನ್ನು ಪತ್ತೆ ಮಾಡಿ, ಅವುಗಳಿಗೆ ಕಾರಣಗಳನ್ನು ಪತ್ತೆ ಹೆಚ್ಚಿ, ಯಾವ ಸಂದರ್ಭದಲ್ಲಿ ಅದು ಉದ್ಭವಿಸಿದೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಲು ಇದು ಪ್ರೇರಣೆ ನೀಡುತ್ತದೆ.

ಉದಾಹರಣೆಗೆ ಖಿನ್ನತೆ ಇರುವ ವ್ಯಕ್ತಿಗಳಿಗೆ, ಅವರಿಗೆ ನಿರ್ದಿಷ್ಟ ವಿಷಯಗಳನ್ನು ಹೇಗೆ ಗುರುತಿಸಬೇಕು ಎಂಬ ಬಗ್ಗೆ ಹಾಗೂ ಹೇಗೆ ಅವರು ಒಂದು ನಿರ್ದಿಷ್ಟ ಪರಿಸ್ಥಿತಿಯ ಬಗ್ಗೆ ಕೇವಲ ಋಣಾತ್ಮಕ ಅಂಶಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ, ಒಂದು ನಿರ್ದಿಷ್ಟ ಅಹಿತಕರ ಘಟನೆಗಳನ್ನು ಹೇಗೆ ಅವರು ಸಾರ್ವತ್ರೀಕರಿಸಿಕೊಳ್ಳುತ್ತಾರೆ ಎಂಬ ಬಗ್ಗೆ, ಒಂದು ನಿರ್ದಿಷ್ಟ ಘಟನೆಗೆ ತಾವೇ ಕಾರಣ ಎಂಬ ಕೀಳರಿಮೆಯನ್ನು ಹೇಗೆ ಬೆಳೆಸಿಕೊಳ್ಳುತ್ತಾರೆ ಎಂಬ ಬಗೆಗೆ, ತಮ್ಮನ್ನು ತಾವೇ ಶಪಿಸಿಕೊಳ್ಳುವ ಪರಿಸ್ಥಿತಿಯನ್ನು ಹೇಗೆ ನಿರ್ಮಿಸಿಕೊಳ್ಳುತ್ತಾರೆ ಎಂಬ ಬಗ್ಗೆಯೂ ಸಮರ್ಪಕ ಅರಿವು ಮೂಡಿಸಲಾಗುತ್ತದೆ.

ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿ ಒಂದು ನಿರ್ದಿಷ್ಟ ಕಾಲ ಮಿತಿಯ ಚಿಕಿತ್ಸೆಯಾಗಿ ನೀಡಲಾಗುತ್ತಿದ್ದು, ಅದರಲ್ಲಿ ಈ ಕೆಳಗಿನ ಪ್ರಮುಖ ಅಂಶಗಳು ಸೇರುತ್ತವೆ.

 1. ಮೊದಲ ಹಂತದಲ್ಲಿ, ಚಿಕಿತ್ಸಕರು ತೀರಾ ಆಳವಾದ ಮೌಲ್ಯಮಾಪನ ಮಾಡುತ್ತಾರೆ. ಆ ವ್ಯಕ್ತಿಯ ಹಳೆಯ ಅನುಭವಗಳ ಬಗ್ಗೆ, ವೈದ್ಯಕೀಯ ಇತಿಹಾಸದ ಬಗ್ಗೆ ಕೇಳಿ ಮನದಟ್ಟು ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಸ್ವಭಾವ ಹಾಗೂ ಕಷ್ಟಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಯಾವ ಕಾರಣಕ್ಕೆ ಚಿಕಿತ್ಸೆಗೆ ಮುಂದಾಗಿದ್ದೀರಿ ಎಂಬ ಅಂಶದ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.
 2. ಎರಡನೇ ಹಂತದಲ್ಲಿ ಚಿಕಿತ್ಸಕ ಅರಿವಿನ ಚಿಕಿತ್ಸೆ ಪ್ರಕ್ರಿಯೆ ಬಗ್ಗೆ ವಿವರ ನೀಡುತ್ತಾರೆ. ಇದನ್ನು ಏಕೆ ಮತ್ತು ಹೇಗೆ ಬಳಸಲಾಗುತ್ತದೆ ಹಾಗೂ ಇದು ಹೇಗೆ ನಿಮಗೆ ಪ್ರಯೋಜನವಾಗುತ್ತದೆ ಎಂಬ ಬಗ್ಗೆ ತಿಳಿಹೇಳುತ್ತಾರೆ.
 3. ಸಮಸ್ಯೆಯ ಸಂಕೀರ್ಣತೆ, ಮುಂದುವರಿದ ಸಂವಾದಗಳಿಗೆ ಚಿಕಿತ್ಸಕರ ಲಭ್ಯತೆ, ಪಾಲ್ಗೊಳ್ಳುವಿಕೆ ಹಾಗೂ ಮೌಲ್ಯಮಾಪನದಲ್ಲ ರೋಗಿಯ ಸಹಕಾರ ಮತ್ತಿತರ ಅಂಶಗಳನ್ನು ಅವಲಂಬಿಸಿ ಈ ಚಿಕಿತ್ಸೆಯ ಅವಧಿ ಎಷ್ಟಾಗಬಹುದು ಎನ್ನುವುದನ್ನು ಚಿಕಿತ್ಸಕರು ವಿವರಿಸುತ್ತಾರೆ.
 4. ನಾಲ್ಕನೇ ಹಂತದಲ್ಲಿ ಚಿಕಿತ್ಸಕ ರೋಗಿಗೆ ಆತನ ಸ್ವಭಾವದ ಗುಣಲಕ್ಷಣಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ. ಉದಾಹರಣೆಗೆ, ಆತಂಕದ ಹಿಂದಿನ ಮನಃಶಾಸ್ತ್ರೀಯ ಕಾರಣಗಳು, ತೀವ್ರ ಸ್ಥಿತಿಯಲ್ಲಿ ಇದು ಹೇಗೆ ಬದಲಾಗಿ, ಹೃದಯಾಘಾತ, ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ ಎಂಬ ಬಗ್ಗೆ ಅರ್ಥ ಮಾಡಿಸುತ್ತಾರೆ.
 5. ಚಿಕಿತ್ಸೆಯ ಯೋಜನೆಯ ಬಗ್ಗೆ ವಿವರ ನೀಡುವ ಜತೆಗೆ ಅದರ ಗುರಿ ಹಾಗೂ ಪ್ರಗತಿಯ ಮೇಲ್ವಿಚಾರಣೆಯ ಮಾರ್ಗಗಗಳನ್ನು ಮನವರಿಕೆ ಮಾಡಿಕೊಡುತ್ತಾರೆ.
 6. ಒಮ್ಮೆ ಈ ಪ್ರಕ್ರಿಯೆ ಮುಗಿದ ಬಳಿಕ ಚಿಕಿತ್ಸಕ ಹಾಗೂ ವ್ಯಕ್ತಿ ಜತೆಗೆ ಕೆಲಸ ಮಾಡಿ ದೋಷಯುಕ್ತ ಅಥವಾ ಋಣಾತ್ಮಕ ಯೋಚನಾ ವಿಧಾನವನ್ನು ಪತ್ತೆ ಮಾಡುತ್ತಾರೆ. ಅದನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಿ, ಈ ಯೋಚನೆಗಳು ವ್ಯಕ್ತಿಯ ನಡವಳಿಕೆಗೆ ಜೀವನದಲ್ಲಿ ಎಷ್ಟರಮಟ್ಟಿಗೆ ಕಾರಣವಾಗುತ್ತವೆ ಎಂಬ ಬಗ್ಗೆ ಮನದಟ್ಟು ಮಾಡಿಕೊಳ್ಳಲಾಗುತ್ತದೆ.
 7. ಇಬ್ಬರೂ ಜತೆಯಾಗಿಯೇ ಕಾರ್ಯ ನಿರ್ವಹಿಸಿ ಸಮಸ್ಯೆಗಳನ್ನು ಗುರುತಿಸುತ್ತಾರೆ. ಗುರಿಗಳನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಸೂಕ್ತವಾದ ಪರ್ಯಾಯ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇದರ ಜತೆಗೆ ಸಂಭಾವ್ಯ ಅಪಾಯ ಹಾಗೂ ಪ್ರಯೋಜನಗಳನ್ನೂ ಅಂದಾಜು ಮಾಡುತ್ತಾರೆ. ಇಬ್ಬರೂ ಜತೆಗೂಡಿ ಆಯ್ಕೆ ಮಾಡಿದ ಪರಿಹಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೊದಲು ವ್ಯಕ್ತಿ ಅದನ್ನು ಅಭ್ಯಸಿಸುತ್ತಾರೆ. ಉದಾಹರಣೆಗೆ ಕೋಪದ ಸಮಸ್ಯೆ ಇದೆ ಎಂದುಕೊಳ್ಳೋಣ. ಇಲ್ಲಿ ವ್ಯಕ್ತಿ ಯಾಕೆ ಮತ್ತು ಯಾವ ಪರಿಸ್ಥಿತಿ ಆ ಕೋಪಕ್ಕೆ ಕಾರಣವಾಯಿತು ಎನ್ನುವುದನ್ನು ವಿಶ್ಲೇಷಿಸುತ್ತಾರೆ. ಅದಕ್ಕೆ ಹೇಗೆ ವಿವೇಚನಾತ್ಮಕವಾಗಿ ಸ್ಪಂದಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳುತ್ತಾರೆ. ಇಂಥ ಕೋಪದ ಭಾವನೆಯನ್ನು ಕಡಿಮೆ ಮಾಡಲು ಹಾಗೂ ನಿಯಂತ್ರಿಸಲು ಯಾವ ತಂತ್ರಗಳನ್ನು ಅನುಸರಿಸಬಹುದು ಎಂಬ ಬಗ್ಗೆ ತಿಳಿದುಕೊಳ್ಳುತ್ತಾರೆ.

ಚಿಕಿತ್ಸೆ ನೀಡುವ ತಜ್ಞರು
ಮಾನಸಿಕ ಆರೋಗ್ಯ ವೃತ್ತಿಪರರಂಥ ಕೌಶಲಯುಕ್ತ ಚಿಕಿತ್ಸಕರು ಇದನ್ನು ನೀಡುತ್ತಾರೆ. ಇವರಿಗೆ ಕಾಗ್ನೇಟಿವ್‌ ಬಿಹೆವಿಯರ್‌ ಥೆರಪಿಯಲ್ಲಿ ಸೂಕ್ತ ತರಬೇತಿ ನೀಡಲಾಗುತ್ತದೆ. ಇದರ ಜತೆಗೆ ಮನಃಶಾಸ್ತ್ರಜ್ಞರು, ಮನಃಶಾಸ್ತ್ರ ದಾದಿಯರು, ಮನಃಶಾಸ್ತ್ರದ ಸಮಾಜ ಕಾರ್ಯಕರ್ತರು ಕೂಡಾ ಸೂಕ್ತ ತರಬೇತಿಯೊಂದಿಗೆ ಈ ಚಿಕಿತ್ಸೆ ನೀಡಬಹುದಾಗಿದೆ. ಈ ಚಿಕಿತ್ಸೆಯಲ್ಲಿ ಕೂಡಾ ಚಿಕಿತ್ಸಕರು ವೃತ್ತಿ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ.

ಚಿಕಿತ್ಸೆಯ ಅವಧಿ
ಇದು ಅಲ್ಪಾವಧಿ ಚಿಕಿತ್ಸೆಯಾಗಿದ್ದು, ವ್ಯಕ್ತಿಯ ಕಷ್ಟಗಳು ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ನಿರ್ಧರಿಸಲಾಗುತ್ತದೆ. ಇಂಥ ಬಹುತೇಕ ಸಮಸ್ಯೆಗಳ ಚಿಕಿತ್ಸೆ ಅವಧಿ ೫ ರಿಂದ ೨೦ ವಾರಗಳ ವರೆಗೆ ಇರಬಹುದು. ಎಷ್ಟು ಬಾರಿ ಸಂವಾದ ನಡೆಸಬೇಕಾಗುತ್ತದೆ ಹಾಗೂ ಎಷ್ಟು ಅವಧಿಯ ಚಿಕಿತ್ಸೆ ನೀಡಬೇಕು ಎನ್ನುವುದು, ಆ ನಿರ್ದಿಷ್ಟ ವ್ಯಕ್ತಿ ಎಷ್ಟು ಸಕ್ರಿಯವಾಗಿ ಈ ಚಿಕಿತ್ಸೆಯಲ್ಲಿ ಪಾಲ್ಗೊಂಡು, ಅಪೇಕ್ಷಿತ ಫಲಿತಾಂಶ ಪಡೆಯಲು ಮುಂದಾಗುತ್ತಾನೆ ಎನ್ನುವುದನ್ನು ಅವಲಂಬಿಸಿದೆ.

ಚಿಕಿತ್ಸೆಯ ಅವಧಿಯ ಚಟುವಟಿಕೆಗಳು

 1. ಈ ಚಿಕಿತ್ಸೆಯ ಅವಧಿಯಲ್ಲಿ ಸ್ವಯಂಪ್ರೇರಿತ ಋಣಾತ್ಮಕ ಚಿಂತನೆಗಳ ಬಗ್ಗೆ ತಿಳಿದುಕೊಳ್ಳಲು ತರಬೇತಿ ನೀಡಲಾಗುತ್ತದೆ.
 2. ಅವರು ಪರ್ಯಾಯ ಆಲೋಚನಾ ಕ್ರಮಗಳನ್ನು ಅನುಸರಿಸಲು ಕಲಿಯುತ್ತಾರೆ. ಮುಖ್ಯವಾಗಿ ಧನಾತ್ಮಕ, ರಚನಾತ್ಮಕ ಹಾಗೂ ವಿವೇಚನಾತ್ಮಕ.
 3. ಜೀವನದ ಒತ್ತಡಗಳನ್ನು ನಿರ್ವಹಿಸುವ ಕೌಶಲಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿಯುತ್ತಾರೆ.
 4. ಅವರು ಒಂದು ದಿನಚರಿ ಪುಸ್ತಕವನ್ನು ನಿರ್ವಹಿಸಿ, ಎಲ್ಲ ಋಣಾತ್ಮಕ ಯೋಚನೆಗಳನ್ನು ಮತ್ತು ಅದು ಸೃಷ್ಟಿಯಾಗಲು ಕಾರಣವಾದ ಪರಿಸ್ಥಿತಿಗಳ ಬಗ್ಗೆ ದಾಖಲಿಸಿಕೊಳ್ಳುತ್ತಾರೆ ಹಾಗೂ ಅದನ್ನು ವಿಶ್ಲೇಷಿಸುತ್ತಾರೆ.
 5. ಈ ಕಲಿಕೆಯನ್ನು ಅಳವಡಿಸಿಕೊಳ್ಳುವ ಮೊದಲು ಅವರು ಅದನ್ನು ಅಭ್ಯಾಸ ಮಾಡುತ್ತಾರೆ ಮತ್ತು ಚಿಕಿತ್ಸಕರು ನೀಡಿದ ಕೆಲಸಗಳ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ.
 6. ಚಿಕಿತ್ಸಕರು ಸಾಮಾನ್ಯವಾಗಿ ಪ್ರತಿ ಸಂವಾದದ ವೇಳೆಯೂ ಮೌಲ್ಯಮಾಪನವನ್ನು ನಿರಂತರವಾಗಿ ಮಾಡುತ್ತಾರೆ. ಆ ಮೂಲಕ ವ್ಯಕ್ತಿಗೆ ವಾಸ್ತವವಾಗಿ ಪ್ರಯೋಜನವಾಗಿದೆಯೇ ಎಂಬ ಬಗ್ಗೆ ಹಾಗೂ ಚಿಕಿತ್ಸಾ ತಂತ್ರದಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳುತ್ತಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org