ನೈಸರ್ಗಿಕ ವಿಪತ್ತಿನ ಪರಿಣಾಮ

ನೈಸರ್ಗಿಕ ವಿಕೋಪಗಳನ್ನು ಎದುರಿಸಿ ಬದುಕುಳಿದವರಿಗೆ ವೈದ್ಯಕೀಯ, ವಸತಿ ಮತ್ತು ಆರ್ಥಿಕ ಬೆಂಬಲದ ಜೊತೆಗೆ ಮನೋಸಾಮಾಜಿಕ ಬೆಂಬಲದ ಅವಶ್ಯಕತೆಯೂ ಇರುತ್ತದೆ

ನಾವು ರೆಸ್ಟೋರೆಂಟಿನ ಬಾಗಿಲ ಕಡೆಗೆ ಓಡಿದೆವು. ಪರ್ವತ ಪ್ರದೇಶದಲ್ಲಿ  ವಾಸಿಸುವ ನಾನು ಮತ್ತು ನನ್ನ ಸ್ನೇಹಿತರಿಗೆ ಭೂಮಿ ನಡುಗುವುದೇನು ಹೊಸ ವಿಷಯವಾಗಿರಲಿಲ್ಲ, ಆದರೆ ಇದರ ಪ್ರಭಾವ ಬೇರೆಯದೇ ಆಗಿತ್ತು. ಇದಕ್ಕೂ ಮೊದಲು ಭೂಮಿ ಆ ರೀತಿ ಎಂದೂ ನಡುಗಿರಲಿಲ್ಲ. ಜನರು ಕಟ್ಟಡಗಳಿಂದ ಬಂದು, ನಡು ರಸ್ತೆಯಲ್ಲಿ ನಿಂತರು. ಈ ಮುಂಚೆ ನಾನು ನೋಡಿದ ಎಲ್ಲಾ ಭೂಕಂಪನಗಳಿಗಿಂತಲೂ ಈ ಬಾರಿಯ ಕಂಪನ ದೀರ್ಘವಾಗಿತ್ತು. ಕಂಪನವು ನಿಂತ ಮೇಲೆ ಬೀದಿಯೆಲ್ಲಾ ಜನರಿಂದ ತುಂಬಿಹೋಗಿತ್ತು.

ಅದೃಷ್ಟವಶಾತ್, ಕೆಲವು ಹಳೆಯ ಕಟ್ಟಡಗಳಲ್ಲಿ ಬಿರುಕುಂಟಾಗಿದ್ದನ್ನು ಹೊರತುಪಡಿಸಿ ಹೆಚ್ಚು ಹಾನಿಯೇನೂ ಸಂಭವಿಸಿರಲಿಲ್ಲ. ನಾವು ನಡುರಸ್ತೆಯಲ್ಲಿ ಒಬ್ಬರಿಗೆ ಒಬ್ಬರು ಆತುಕುಳಿತು ಕಂಪನದ ನಂತರದ ಆಘಾತವನ್ನು ನಿರೀಕ್ಷಿಸುತ್ತ ಕುಳಿತೆವು. ಸ್ವಲ್ಪಹೊತ್ತಿನಲ್ಲಿ ಆರಂಭಿಕ ಆಘಾತವು ಕಡಿಮೆಯಾಗಿ ಸ್ವಲ್ಪ ನೆಮ್ಮದಿಯೆನಿಸಿತು. 

ಆದರೆ  ಈ ಮೊದಲು ರಮಣೀಯವೆನಿದ್ದ ಪಟ್ಟಣದ ಹಳೆಯ ಭಾಗವು ಧೂಳಿನ ಅವಶೇಷವಾಗಿ ಪರಿವರ್ತನೆಯಾಗಿತ್ತು.  ಅವಶೇಷಗಳಡಿ ಸಿಲುಕಿರುವವರನ್ನು ಹುಡುಕುತ್ತಿದ್ದ ಒಂದು ಗುಂಪಿನ ಜೊತೆ ಸೇರಿಕೊಂಡು ಹುಡುಕಲು ಶುರು ಮಾಡಿದೆವು. ಜನರ ಸಂಕಟ ನೋಡಿ ತುಂಬ ದುಖವಾಯಿತು. ಆಘಾತ ಮತ್ತು ಭಯದಿಂದ ಮತ್ತೆ ನಡುಗತೊಡಗಿದೆ.

ಸಂಜೆ ನಾನು ಮನೆಗೆ ಮರಳಿದಾಗ ಎಲ್ಲದರಿಂದ ದೂರವಾಗಿದ್ದೆ; ನನ್ನನ್ನು ನೋಡಿ ಪಾಲಕರಿಗೆ ಸಮಾಧಾನವಾಯಿತು ಆದರೆ ನಾನು ಮೌನವಾಗಿದ್ದೆ. ಅವರು ನನ್ನ ಪರಿಸ್ಥಿತಿಯನ್ನು ಅರಿತು ನನ್ನನ್ನು ನನ್ನ ಪಾಡಿಗೆ ಕೆಲಸಮಯ ಬಿಟ್ಟರು. ಆ ರಾತ್ರಿ ನಾನು ಸರಿಯಾಗಿ ನಿದ್ರಿಸಲಿಲ್ಲ.

ಭೂಕಂಪನವಾಗಿ ಮೂರು ತಿಂಗಳುಗಳೇ ಕಳೆದಿವೆ. ಆದರೆ ನಗರವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುವುದು ಇನ್ನೂ ಸಾಧ್ಯವಾಗಿಲ್ಲ. ಇಟ್ಟಿಗೆಯ ಮನೆಗಳಿಗೆ ಮರಳಲು ಭಯಭೀತರಾಗಿರುವ ಜನರು ಈಗಲೂ ಟೆಂಟುಗಳಲ್ಲಿಯೇ ವಾಸವಾಗಿದ್ದಾರೆ. ಅದೃಷ್ಟಕ್ಕೆ ನಾಗರಿಕ ಸೌಲಭ್ಯಗಳು ಸುಧಾರಿಸಿವೆ, ಆಹಾರ ಮತ್ತು ನೀರಿನ ಸರಬರಾಜು, ವಿದ್ಯುತ್ ಮತ್ತು ನೀರಿನ ಹರಿವು ಕೂಡ ಸರಿಯಾಗಿದೆ.

ಹಳೆಯ ನಗರದ ಪುರಾತನ ಭಾಗದಲ್ಲಿ ವಾಸವಾಗಿರುವ ನನ್ನ ಸ್ನೇಹಿತ ಆಕಾಶ್ ಈ ಘಟನೆಯಿಂದ ತೀವ್ರವಾಗಿ ಭಾದಿತನಾಗಿದ್ದಾನೆ. ಭೂಕಂಪದ ಸಮಯದಲ್ಲಿ ಮನೆಯಲ್ಲೇ ಇದ್ದ ಆತನು ಆ ದಿನದ ದುರಂತವನ್ನು ಕಣ್ಣಾರೆ ಕಂಡಿದ್ದಾನೆ.

ಅವನಿಗೆ ಹಲವು ಬಾರಿ ನಿದ್ರೆಯಲ್ಲಿಯೂ ಕಂಪನದ ಅನುಭವವಾಗುತ್ತದೆ, ಇತ್ತೀಚೆಗೆ ಸರಿಯಾಗಿ ನಿದ್ರಿಸುವುದಿಲ್ಲ,  ಸರಿಯಾಗಿ ಆಹಾರ  ಸೇವಿಸುವುದಿಲ್ಲ ಮತ್ತು ಪೂರ್ತಿ ಸಮಯ ತನ್ನ ರೂಮಿನಲ್ಲಿಯೇ ಇರುತ್ತಾನೆ ಎಂದು ಆತನ ತಾಯಿ ತಿಳಿಸುತ್ತಾರೆ. ಆಕಾಶ್ ಆಘಾತಕ್ಕೆ ಒಳಗಾಗಿದ್ದಾನೆ ಮತ್ತು ಕೆಲವು ದಿನಗಳಲ್ಲಿಯೇ ಇದರಿಂದ ಚೇತರಿಸಿಕೊಳ್ಳುತ್ತಾನೆ ಎಂದು ಅವನ ತಂದೆ ಹೇಳುತ್ತಾರೆ. ನಾವು ಆಗಾಗ ಅವನ ಮನೆಗೆ ಹೋಗುತ್ತೇವೆ. ಅವನು ಉತ್ಸಾಹವನ್ನೇ ಕಳೆದುಕೊಂಡಿದ್ದಾನೆ. ಆದರೆ ನಾವು ಸಾಧ್ಯವಾದಷ್ಟು ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸುತ್ತೇವೆ ಎಂದು ಆತನ ತಾಯಿ ಹೇಳುತ್ತಾರೆ.

ಈ ಕಾಲ್ಪನಿಕ ದೃಷ್ಟಾಂತವನ್ನು ತಜ್ಞರ ಸಹಾಯದಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ನೈಜಜೀವನಕ್ಕೆ ಅನ್ವಯವಾಗುವ ರೀತಿಯಲ್ಲಿ ರಚಿಸಲಾಗಿದೆ.

ಹೌದು, ವಿಕೋಪಗಳಲ್ಲಿ ಬದುಕುಳಿದವರಿಗೆ ಮನೋಸಾಮಾಜಿಕ ಬೆಂಬಲದ ಅಗತ್ಯವಿರುತ್ತದೆ.

ನೈಸರ್ಗಿಕ ವಿಕೋಪಗಳಿಂದ ಭಾದಿತರಾದ ಎಲ್ಲರಿಗೂ ಸಹಾಯದ ಅಗತ್ಯವಿರುತ್ತದೆ. ಆದರೆ ಪರಿಮಾಣ ಮಾತ್ರ ಬೇರೆ ಬೇರೆಯಾಗಿರತ್ತದೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಮತ್ತು ನಂತರ ಕೆಲವು ವ್ಯಕ್ತಿಗಳು ತಮ್ಮ ಭಾವನೆಗಳನ್ನು ಸೂಕ್ತವಾಗಿ ನಿರ್ವಹಿಸಲು ಯಶಸ್ವಿಯಾಗುತ್ತಾರೆ. ವಿಕೋಪದಿಂದ ಬಚಾವಾಗಿ ಉಳಿದವರು ಕೆಲವು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬಹುದು.

 • ಆಘಾತ
 • ಭಯ
 • ಪಶ್ಚಾತಾಪ
 • ಕೋಪ
 • ಆತಂಕ 
 • ಉಮ್ಮಳಿಸಿ ಬರುವ ನೆನಪು
 • ದುಃಖ ಮತ್ತು ಹತಾಶೆ

ಅನಿರೀಕ್ಷಿತ ಅವಘಡಗಳನ್ನು ಎದುರಿಸಿದ ಎಲ್ಲರೂ ಸಾಮಾನ್ಯವಾಗಿ ಈ ಭಾವನೆಗಳನ್ನು ಅನುಭವಿಸುತ್ತಾರೆ. ದಿನಕಳೆದಂತೆ ಜನರು ಈ ಸ್ಥಿತಿಯಿಂದ ಚೇತರಿಸಿಕೊಂಡು ಮುನ್ನಡೆಯುತ್ತಾರೆ. ಆದರೆ ಕೆಲವರು ಇನ್ನಷ್ಟು ಹತಾಶೆಗೊಳಗಾಗಿ ಖಿನ್ನತೆ, ಆಘಾತದ ನಂತರದ ಒತ್ತಡದ ಸಮಸ್ಯೆ (post-traumatic stress disorder ) ನಿದ್ರೆಯ ಸಮಸ್ಯೆ ಮತ್ತು ವ್ಯಸನದಂತಹ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ.

ಸಮಸ್ಯೆ ಕಂಡುಬಂದರೆ , ವ್ಯಕ್ತಿಯ ಪರಿಸ್ಥಿತಿಗೆ ಅನುಸಾರವಾಗಿ ಮನೋಸಾಮಾಜಿಕ ಬೆಂಬಲ ಒದಗಿಸಬೇಕಾಗುತ್ತದೆ. ಅವರು ಸಾವಿನ ಅಂಚಿನಿಂದ ಪಾರಾಗಿ ಬಂದಿರಬಹುದು. ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ಕಳೆದುಕೊಂಡಿರಬಹುದು. ಇಲ್ಲವೇ ಅವರ ಮನೆಯು ಅವಘಡದಲ್ಲಿ ನಾಶವಾಗಿರಬಹುದು. ಇದರ ಜೊತೆಗೆ ಆಹಾರ ಹಾಗೂ ನೀರಿಗಾಗಿ ಪರದಾಡಬೇಕಾಗುತ್ತದೆ. ಎಲ್ಲಾ ಜನರು ಈ ಒತ್ತಡಗಳನ್ನು ಸಹಿಸಿಕೊಳ್ಳಲು ಭಾವನಾತ್ಮಕವಾಗಿ ಶಕ್ತರಾಗಿರುವುದಿಲ್ಲ.

ಸೂಚನೆ: ಅವಘಡಗಳನ್ನು ಎದುರಿಸಿ ಉಳಿಯುವ ಜನರು ಕೂಡಲೇ ಆಘಾತಕ್ಕೆ ಒಳಗಾಗದಿರಬಹುದು. ಇದು ಕೆಲಸಮಯದ ನಂತರ ಕಾಣಿಸಿಕೊಳ್ಳಬಹುದು. ಅವಘಡದ ನಂತರ ಕೆಲಕಾಲ ಸಹನೆಯಿಂದ ಇದ್ದು ಅವರ ಭಾವನೆಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ಕೆಲವು ತಿಂಗಳುಗಳ ಬಳಿಕವೂ ಈ ಸಮಸ್ಯೆಯು ಮುಂದುವರಿದರೆ ಮನೋ ಸಾಮಾಜಿಕ ಮಧ್ಯಸ್ಥಿಕೆಯು ಅನಿವಾರ್ಯವಾಗುತ್ತದೆ.

ನೈಸರ್ಗಿಕ ಅವಘಡಗಳ ನಂತರ ಜನರಿಗೆ ಈ ಕೆಳಗಿನ ಸಹಾಯದ ಅಗತ್ಯವಿರುತ್ತದೆ:

 • ಬೇರೆ ಬೇರೆಯಾಗಿರುವ ಸ್ನೇಹಿತರು ಅಥವಾ ಕುಟುಂಬದ ಸದಸ್ಯರನ್ನು ಹುಡುಕಲು ಅಥವಾ ವಿಭಿನ್ನ ಆಶ್ರಯ ಕೇಂದ್ರಗಳಲ್ಲಿ ಇರುವವರನ್ನು ಒಂದುಗೂಡಿಸಲು ಸಹಾಯಬೇಕಾಗುತ್ತದೆ.

 • ಅವಘಡದ ಬಗ್ಗೆ ಮಾತನಾಡಿ ಆಘಾತದ ಅನುಭವವನ್ನು ಹಂಚಿಕೊಳ್ಳುವುರಿಂದ ಒಂಟಿತನದ ಭಾವನೆಯು ಕಡಿಮೆಯಾಗಿ ಮನಸ್ಸು ಹಗುರಾಗುತ್ತದೆ.

 • ಮುಂದೆ ಎದುರಿಸಬೇಕಾಗಿರುವ ಸಮಸ್ಯೆಗಳ ಬಗ್ಗೆ ಅವರು ಭಯಗೊಂಡಿರಬಹುದು; ಅವರು ನೆರವೇರಿಸಬೇಕಾಗಿರುವ ಕಾರ್ಯಗಳ ಆದ್ಯತೆಯ ಪಟ್ಟಿಯನ್ನು ತಯಾರಿಸುವುದು ಹಾಗೂ ಅವರಿಗೆ ಸಮಾಧಾನ ನೀಡುವುದು ಕೂಡ ಮುಖ್ಯವಾಗಿರುತ್ತದೆ.

ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ನೈಸರ್ಗಿಕ ಅವಘಡಗಳಿಂದ ಆಘಾತಕ್ಕೆ ಒಳಗಾಗಿದ್ದರೆ ನೀವು ಈ ರೀತಿ ಸಹಾಯ ಮಾಡಬಹುದು.

 • ಸಹನೆಯಿಂದ ಅವರಿಗೆ ಬೆಂಬಲ ನೀಡಿ, ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಅವರು ಅತಿಯಾಗಿ ಆಘಾತವುಂಟು ಮಾಡಿರುವ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಿ. ಘಟನೆಯ ಬಗ್ಗೆ ಮತನಾಡಲು ಹಿಂಜರಿಯಬೇಡಿ. ಆದರೆ ಆ ಬಗ್ಗೆ ಅವರ ಮೇಲೆ ಒತ್ತಡ ಹಾಕಬೇಡಿ. ಅನುಭವವನ್ನು ಹಂಚಿಕೊಳ್ಳುವುದರಿಂದ ಅವರ ಪರಿಸ್ಥಿತಿಯು ಹಗುರಾಗಿ ಅಘಾತವು ಕಡಿಮೆಯಾಗುತ್ತದೆ. 

 • ದೀರ್ಘಸಮಯದ ನಂತರವೂ ತಮ್ಮ ಭಾವನಾತ್ಮಕ ಸಮಸ್ಯೆಯನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗದಿದ್ದರೆ ಆಪ್ತಸಮಾಲೋಚಕರನ್ನು ಭೇಟಿ ಮಾಡಲು ಸೂಚಿಸಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org