ಮನಸ್ಸನ್ನು ಹಗುರಾಗಿಸಲು ತಿನ್ನುವ ಅಭ್ಯಾಸ ಮಾಡಿಕೊಂಡಿರುವಿರಾ ?

ಈ ಹಿಂದೆ ನಿಮಗೆ  ಆಯಾಸವಾದಾಗ ಬಿಸಿಬಿಸಿ ಕಿಚಡಿ ತಿನ್ನಬೇಕು ಎಂದು ಅನ್ನಿಸಿದೆಯೇ ?  ನಿಮಗೆ ಬೇಸರವಾದಾಗ ಪಿಜ್ಜಾ ಅಥವಾ ಪೊಟಾಟೋ ಚಿಪ್ಸ್ ತಿನ್ನಬೇಕು ಅನ್ನಿಸಿದೆಯೇ ? ಬಿಸಿನೆಸ್ ನಲ್ಲಿ ಲಾಭ ಬಂದಾಗ ಅಥವಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಾಗ ಸಿಹಿ ತಿನ್ನಬೇಕು ಎಂಬ ಆಸೆ ಉಂಟಾಗಿತ್ತೇ ? ಮಳೆಗಾಲದಲ್ಲಿ ಶುಂಠಿ ಟೀ ಜೊತೆ ಪಕೋಡ ತಿನ್ನಲು ಮನಸ್ಸಾಗಿತ್ತೇ ?

ನಾವು ತಿನ್ನುವುದಕ್ಕೂ, ನಮ್ಮ ಮನಸ್ಸಿನ ಸ್ಥಿತಿಗೂ ಸಂಬಂಧವಿರುವುದೇ ?

ಆಹಾರ ನಮ್ಮ ಬದುಕಿನ ಮುಖ್ಯ ಭಾಗ. ಚಿಕ್ಕವರಿದ್ದಾಗ ಬೆಳವಣಿಗೆಗೆ ಆಹಾರ ಅಗತ್ಯವಾಗಿರುತ್ತದೆ. ಆದರೆ ನಾವು ದೊಡ್ಡವರಾದಂತೆ, ಇತರ  ಅಗತ್ಯಗಳೊಂದಿಗೆ ಆಹಾರದ ಅಗತ್ಯತೆ ಬದಲಾಗುತ್ತಾ ಹೋಗುತ್ತದೆ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಊಟ, ಹಬ್ಬದಲ್ಲಿ ಊಟ, ಮದುವೆ, ಮುಂಜಿಯಲ್ಲಿ ಊಟ, ಪಾರ್ಟಿ, ಟೀಮ್ ಲಂಚ್, ಹೀಗೆ ಹಲವು ಸಂದರ್ಭಗಳಲ್ಲಿ ಊಟ ಮಾಡುತ್ತಿರುತ್ತೇವೆ.

ಕೆಲವೊಮ್ಮೆ, ನಮಗೆ ಬೇಸರ, ದುಃಖ, ಬೋರ್ ಆದಾಗ, ಮನಸ್ಸು ಹಗುರಾಗಲು ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಕೆಲವೊಂದು ಆಹಾರ, ನಮ್ಮ ಭಾವನೆ/ ಒತ್ತಡವನ್ನು ನಿಭಾಯಿಸಲು ಸಹಾಯವಾಗುತ್ತದೆ. ಆದರೆ ಪರಿಸ್ಥಿತಿಯನ್ನು ಧೀರ್ಘಕಾಲದವರೆಗೆ ನಿಭಾಯಿಸಲು ಇದೊಂದು ಒಳ್ಳೆಯ ಅಭ್ಯಾಸವಲ್ಲ. ಹಾಗೆಯೇ, ಯಾವುದಾದರೂ ಇಂಟರ್ವ್ಯೂ ಅಥವಾ ಪರೀಕ್ಷೆಯ ವೇಳೆ ಒತ್ತಡಕ್ಕೆ ಸಿಲುಕಿ, ಊಟ ಮಾಡುವುದಿಲ್ಲ.  

ಕ್ಲಿನಿಕಲ್ ಸೈಕಾಲಜಿಸ್ಟ್ ಬೋನಾ ಕೊಲಾಕೋ ಹೇಳುವ ಪ್ರಕಾರ “ಪ್ರತಿಯೊಬ್ಬರೂ ತಮ್ಮ ಮೂಡ್ ಮತ್ತು ಭಾವನೆಗಳನ್ನು ನಿಭಾಯಿಸಲು ತಮ್ಮದೇ  ಮಾರ್ಗ ಹೊಂದಿರುತ್ತಾರೆ, ನಮಗೆ ಸಮಸ್ಯೆಯಾದಾಗ,  ಮನಸ್ಸನ್ನು ಹಗುರಾಗಿಸಲು ಹಲವಾರು ಪ್ರಯತ್ನ ಮಾಡುತ್ತೇವೆ. ಇದರಲ್ಲಿ ಆಹಾರವೂ ಒಂದು.” ಕೆಲವು ಆಹಾರಗಳು ಮೆದುಳಿನಲ್ಲಿ ಡೊಪಾಮೈನ್ ಉತ್ಪಾದನೆಯಿಂದ ಸಂತಸದ ಮನೋಭಾವ ಉಂಟಾಗುತ್ತದೆ.

ಉದಾಹರಣೆಗೆ: ಸ್ವೀಟ್ಸ್. ಸಂಶೋಧನೆಗಳ ಪ್ರಕಾರ ಒತ್ತಡ, ಆತಂಕ, ಚಿಂತೆ, ಮತ್ತಿತರ ಭಾವನೆಗಳಿಗೂ, ನಮ್ಮ ಆಹಾರಕ್ಕೂ ಪರಸ್ಪರ ಸಂಬಂಧವಿದೆ.

Source: https://www.ncbi.nlm.nih.gov/pubmed/19391020

ಇದರಿಂದ ಅಪಾಯವಿದೆಯೇ ?

ನಮಗೆ ಸಮಾಧಾನವಾಗಲು ತಿನ್ನುವ ಅಭ್ಯಾಸ ಮಾಡಿಕೊಳ್ಳುವ  ನಡವಳಿಕೆಗೆ, ತಜ್ಞರು ‘ಎಮೋಷನಲ್ ಈಟಿಂಗ್’ ಎನ್ನುತ್ತಾರೆ. ಹೀಗೆ ಒತ್ತಡ ಅಥವಾ ಆತಂಕವಾದಾಗ, ಏನಾದರೂ ತಿನ್ನುತ್ತೇವೆ. ಇದು ಕೇವಲ ಆ ಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿರುತ್ತದೆ. ಆದರೆ  ಸಮಸ್ಯೆ ಹಾಗೇ ಉಳಿಯುತ್ತದೆ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ತಿಳಿಯುವುದಿಲ್ಲ.

ಧೀರ್ಘಕಾಲದವರೆಗೆ ಎಮೋಷನಲ್ ಈಟಿಂಗ್ ಮುಂದುವರೆದರೆ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗಬಹುದು, ಅದರಲ್ಲಿಯೂ ಸಿಹಿ ಪದಾರ್ಥ ಅಥವಾ ಜಂಕ್ ಫುಡ್  ಆರೋಗ್ಯಕ್ಕೆ ಹಾನಿಕಾರಕ. ಇದರಿಂದ  ಆಲಸ್ಯ ಮತ್ತು ಸೋಮಾರಿತನ ಹೆಚ್ಚಾಗಿ ಕಾಣಿಸಿ, ಡಯಾಬಿಟೀಸ್ಗೆ ತಿರುಗಬಹುದು.

ಕೆಲವು ಸನ್ನಿವೇಶಗಳಲ್ಲಿ ಆತಂಕ ಮತ್ತು ಖಿನ್ನತೆಯಿಂದ ಎಮೋಷನಲ್ ಈಟಿಂಗ್ ಸಮಸ್ಯೆ ಉಂಟಾಗಬಹುದು. ಕೆಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ, ನೋವನ್ನು ಮರೆಯಲು, ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ನೋವಿನಿಂದ ಹೊರಗೆ ಬರಲು ಆಪ್ತ ಸಲಹೆಗಾರರ ಸಹಾಯ ಪಡೆಯಬೇಕು.

ಪತ್ತೆ ಹಚ್ಚುವುದು ಹೇಗೆ?

ಕೊಲಾಕೋರವರು ಹೇಳುವ ಪ್ರಕಾರ, “ಹಸಿವಾದಾಗ ನಮ್ಮ ದೇಹದಲ್ಲಿ ಉಂಟಾಗುವ  ಬದಲಾವಣೆಯನ್ನು ಗ್ರಹಿಸಬೇಕು. ಹಸಿವಾದಾಗ, ಏನಾದರೂ ತಿಂದ ತಕ್ಷಣ ತೃಪ್ತಿಯಾಗುತ್ತದೆ. ಆದರೆ ಭಾವನೆಗಳ ಏರುಪೇರಾದಾಗ ಏನೇ ತಿಂದರೂ ಸಮಾಧಾನ ಇರುವುದಿಲ್ಲ. ಇದರಿಂದ  ಹಸಿವಾದಾಗ ತಿನ್ನುವುದಕ್ಕೂ ಮತ್ತು ಭಾವನೆಗಳನ್ನು ನಿಭಾಯಿಸಲು ತಿನ್ನುವುದಕ್ಕೂ ವ್ಯತ್ಯಾಸ ಗೊತ್ತಾಗುತ್ತದೆ.  

ಭಾವನೆಗಳನ್ನು ನಿಭಾಯಿಸಲು ಕೆಲವು ಸಲಹೆಗಳು :

  • ದೈಹಿಕವಾಗಿ: ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ. ಸರಿಯಾಗಿ ನಿದ್ರಿಸಿ. ವ್ಯಾಯಾಮ ಮಾಡುವುದರಿಂದ ಮೆದುಳಿನಲ್ಲಿ ಎಂಡೋರ್ಫಿನ್ಸ್ ಉತ್ಪಾದನೆಯಾಗುತ್ತದೆ. ಇದರಿಂದ ಆಹ್ಲಾದಕರ ಅನುಭವ ಉಂಟಾಗಿ ಅನಗತ್ಯವಾಗಿ ತಿನ್ನುವ ಚಪಲ ಕಡಿಮೆಯಾಗುತ್ತದೆ.
  • ಭಾವನಾತ್ಮಕವಾಗಿ: ತಿನ್ನಬೇಕು ಅನ್ನಿಸಿದಾಗ ಏಕೆ ಹೀಗೆ ಆಗುತ್ತಿದೆ ಎಂದು ಯೋಚಿಸಿ. ಇದನ್ನು ಅರಿತಾಗ ತಿನ್ನುವ ಚಪಲ ಕಡಿಮೆಯಾಗುತ್ತದೆ.

ಮಾಹಿತಿ : ಡಾ. ಪೌಲೊಮಿ ಸುಧೀರ್, ಹೆಚ್ಚುವರಿ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ ವಿಭಾಗ, ನಿಮ್ಹಾನ್ಸ್; ಬೋನಾ ಕೋಲಾಕೋ, ಕ್ಲಿನಿಕಲ್ ಸೈಕಾಲಜಿಸ್ಟ್

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org