ನಾನೊಬ್ಬ ಥೆರಪಿಸ್ಟ್ ಮತ್ತು ನನಗೂ ಒಬ್ಬ ‌ಥೆರಪಿಸ್ಟ್ ಇದ್ದಾರೆ

ನಾನೊಬ್ಬ ಥೆರಪಿಸ್ಟ್ ಮತ್ತು ನನಗೂ ಒಬ್ಬ ‌ಥೆರಪಿಸ್ಟ್ ಇದ್ದಾರೆ

ವಾಣಿ ತಮ್ಮ ಆಪ್ತಸಮಾಲೋಚನೆಯ ಕೆಲಸವನ್ನು ಪ್ರಾರಂಭಿಸಿದಾಗ ಸ್ವತಃ ತಾವೂ ಸ್ವಲ್ಪಮಟ್ಟಿಗೆ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದರು. ತಾನು ಸಮಾಲೋಚಕರಲ್ಲಿ/ಥೆರಪಿಸ್ಟ್ರಲ್ಲಿ ಹಂಚಿಕೊಳ್ಳಲು, ಹೇಳಿಕೊಳ್ಳಲು ಬಯಸುತ್ತಿರುವ ವಿಷಯಗಳನ್ನು ಅವರು ಕೇಳಿಸಿಕೊಳ್ಳುತ್ತಾರೆಯೇ ಎಂಬ ಕುತೂಹಲ ಅವರಿಗಿತ್ತು. ತನ್ನ ಥೆರಪಿಸ್ಟ್ ಸಾಮರ್ಥ್ಯದ ಬಗ್ಗೆ ಮತ್ತು ತನ್ನ ಅನಿಸಿಕೆ ಹಾಗು ಭಾವನೆಗಳನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಬಗ್ಗೆ ಅವರು ಕಾಳಜಿ ಹೊಂದಿದ್ದರು. “ನನಗೆ ಆಶ್ಚರ್ಯವಾಗುತ್ತದೆ, ಪ್ರತಿನಿತ್ಯ ಥೆರಪಿಸ್ಟ್ರು ಹೇಗೆ ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ! ಇದು ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ನನ್ನ ಥೆರಪಿಸ್ಟ್ರು ದುರ್ಬಲರಲ್ಲ ಎಂಬ ವಿಶ್ವಾಸ ನನಗಿದೆ ಮತ್ತು ಅವರು ನನಗೆ ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿದೆ” ಎಂದು ವಾಣಿ ಹೇಳುತ್ತಾರೆ.

ಕೆಲವೊಮ್ಮೆ ಗ್ರಾಹಕರು ಕುತೂಹಲದಿಂದ ನನ್ನನ್ನು ಪ್ರಶ್ನಿಸುತ್ತಾರೆ, ”ಪ್ರತಿನಿತ್ಯ ಎಲ್ಲರ ಸಮಸ್ಯೆಗಳನ್ನು ಆಲಿಸುವ ನೀವು ಒತ್ತಡವನ್ನು ಅನುಭವಿಸುವುದಿಲ್ಲವೇ?”

ಸಾಮಾನ್ಯವಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಇಂಥಾ ಆಲೋಚನೆಗಳು ಕಂಗೆಡಿಸುತ್ತವೆ, ಥೆರಪಿಸ್ಟ್ರು ತಮ್ಮ ಗ್ರಾಹಕರೊಂದಿಗೆ ಸೂಕ್ಷ್ಮ ಬಾಂಧವ್ಯವನ್ನು ಹೊಂದಿರುತ್ತಾರೆ. ಸ್ವತಃ ತಾವೂ ತಮ್ಮ ಜೀವನದಲ್ಲಿ  ಹಾಗೂ ವೃತ್ತಿಯಲ್ಲಿ ಒತ್ತಡವನ್ನು ಎದುರಿಸುತ್ತಿರುತ್ತಾರೆ. ಆದ್ದರಿಂದ ಥೆರಪಿಸ್ಟ್ರ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಪ್ರಮುಖ ವಿಷಯವಾಗಿರುತ್ತದೆ. ಥೆರಪಿಸ್ಟ್ರು ಸೇವಾಕ್ಷೇತ್ರದಲ್ಲಿರುವುದರಿಂದ, ಉತ್ತಮ ಸೇವೆ ಒದಗಿಸುವಂತಾಗಲು ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವುದು ಅತ್ಯಗತ್ಯ.

ಥೆರಪಿಸ್ಟ್ರು ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಮತ್ತು ಆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ತಮ್ಮದೇ ಆದ ವೈಯಕ್ತಿಕ ಕಾರಣಗಳಿರುತ್ತವೆ. ಅವರು ತಮ್ಮ ವೃತ್ತಿಯನ್ನು ಪ್ರಾಂಭಿಸುವುದಕ್ಕಿಂತ ಮುಂಚಿತವಾಗಿ ಅಗತ್ಯ ಕೌಶಲ್ಯಗಳ ಬಗ್ಗೆ ಅಧ್ಯಯನ ನಡೆಸಿರುತ್ತಾರೆ ಮತ್ತು ಸೂಕ್ತ ತರಬೇತಿ ಪಡೆದಿರುತ್ತಾರೆ. ಥೆರಪಿಸ್ಟ್ರಿಗೂ ಚಿಕಿತ್ಸೆ ಪಡೆಯುವ ಅಗತ್ಯವಿರುತ್ತದೆ. ಸ್ವತಃ ಅವರು ಹಿಂದಿನ ಅಥವಾ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಗತ ವೈಮನಸ್ಯಗಳ ಬಗ್ಗೆ ಜಾಗೃತರಾಗಿರಬೇಕಾಗುತ್ತದೆ ಮತ್ತು ಎಲ್ಲಾ ಸಮಸ್ಯೆಗಳಿಂದ ಹೊರಬಂದು, ಚೇತರಿಸಿಕೊಂಡು, ಅನಂತರ ವೃತ್ತಿಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ವೃತ್ತಿಪರ ಆಪ್ತ ಸಮಾಲೋಚಕ ತರಬೇತಿಯ ಕಾರ್ಯಾಗಾರದಲ್ಲಿ, ತರಬೇತಿ ಪಡೆಯಲುಬಂದಿರುವ ವಿದ್ಯಾರ್ಥಿಗಳಿಗೆ “ಸ್ವ-ಚಿಕಿತ್ಸೆ” ವಿಷಯಕ್ಕಾಗಿಯೇ ಒಂದಷ್ಟು ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಇದರಿಂದ ಥೆರಪಿಸ್ಟ್ರ ಕಾರ್ಯಕ್ಷಮತೆ ವೃದ್ಧಿಸುತ್ತದೆ.

ಸಮಾಲೋಚಕರಿಗೇಕೆ ಚಿಕಿತ್ಸೆಯ ಅಗತ್ಯವಿರುತ್ತದೆ ?

ಚಿಕಿತ್ಸೆಗೊಳಪಡುವುದರಿಂದ ತರಬೇತುದಾರರಿಗೆ ಗ್ರಾಹಕರನ್ನು ಯಾವ ರೀತಿ ಪರೀಕ್ಷಿಸಬೇಕು, ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ಮೂಲಕ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವಲ್ಲಿ ಅವರು ಹೆಚ್ಚು ಕ್ಷಮತೆ ಪಡೆಯಬಹುದು. ಒಬ್ಬ ಥೆರಪಿಸ್ಟ್ರಾಗಿ ತಮ್ಮ ಗ್ರಾಹಕರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಇದರಿಂದ ಥೆರಪಿಸ್ಟ್ರಿಗೆ ಆತ್ಮವಿಶ್ವಾಸಹೆಚ್ಚಾಗುತ್ತದೆ, ಅದರ ಮೌಲ್ಯದ ಅರಿವು ಮೂಡುತ್ತದೆ ಮತ್ತು ಸಮಸ್ಯೆಗಳನ್ನು ಗುರುತಿಸಲು ಹಾಗೂ ವೈಯಕ್ತಿಕವಾಗಿಯೂ ಅಭಿವೃದ್ಧಿಹೊಂದಲು ಸಹಾಯವಾಗುತ್ತದೆ.

ತಮ್ಮನ್ನು ತಾವು ಅರಿಯುವುದು ಹಾಗೂ ನಿರಂತರವಾಗಿ ವೃತ್ತಿಯಲ್ಲಿ ಹೊಸ ಅನುಭವಗಳನ್ನು, ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಅಭ್ಯಾಸ ಥೆರಪಿಸ್ಟ್ರಿಗೆ ಅತಿಮುಖ್ಯ. ಇದರಿಂದ ಅವರಿಗೆ ಗ್ರಾಹಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು, ಅವರ ಚಿಂತನೆಗಳನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ. ಗ್ರಾಹಕರಿಗೆ ಸೂಕ್ತ ಚಿಕಿತ್ಸೆ ನೀಡುವಂತಾಗಲು ಮತ್ತು ಅವರಿಗೆ ಉತ್ತಮವಾದ / ಕರಾರುವಕ್ಕಾದ ಸೇವೆಯನ್ನು ಒದಗಿಸಲು ಥೆರಪಿಸ್ಟ್ರು ಸದಾ ಜಾಗೃತರಾಗಿರುವುದು ಮುಖ್ಯ.

ಉದಾಹರಣೆಗೆ, ಥೆರಪಿಸ್ಟ್ ತಮ್ಮನ್ನು ತಾವು ಚಿಕಿತ್ಸೆಗೆ ಒಳಪಡಿಸಿಕೊಂಡು ತನ್ನಲ್ಲಿರುವ ಕೋಪ, ಉದ್ವೇಗ, ಇನ್ನಿತರ ಸಮಸ್ಯೆಗಳನ್ನು ಅರಿತುಕೊಂಡು ಸ್ವ ಜಾಗೃತಿಮೂಡಿಸಿಕೊಂಡಾಗ, ಮುಂದೆ ತಾವು ಗ್ರಾಹಕನನ್ನು ಪರೀಕ್ಷಿಸುವ ಸಂದರ್ಭದಲ್ಲಿ ಇದು ಒಂದು ಮಾನದಂಡವಾಗುತ್ತದೆ.

ವಿಕ್ರಂ ಆಪ್ತ ಸಮಾಲೋಚನೆಗಾಗಿ ಥೆರಪಿಸ್ಟ್ರ ಬಳಿ ಬಂದಾಗ, ಅವನು ವಿಪರೀತ ಕೋಪ, ಉದ್ವೇಗ ಮುಂತಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಹಾಗು ಇದು ಅವನ ವೈಯಕ್ತಿಕ ಜೀವನದ ಮೇಲೆ ಮತ್ತು ಬಾಂಧವ್ಯದ ಮೇಲೆ ವಿಪರೀತ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲಿ ಥೆರಪಿಸ್ಟ್ರಿಗೆ ತಮ್ಮ ಅನುಭವಗಳಿಂದ, ತಾವು ಪಡೆದುಕೊಂಡ ತರಬೇತಿಯಿಂದ ಸಮಸ್ಯೆಯನ್ನು ಅರಿತುಕೊಳ್ಳಲು ಸುಲಭವಾಯಿತು ಮತ್ತು ಅವರು ವಿಕ್ರಂನನ್ನು ಸಂತೈಸಿದರು ಮತ್ತು ಸಹಾನುಭೂತಿ ವ್ಯಕ್ತಪಡಿಸಿದರು. ಮುಂದೆ ವಿಕ್ರಂ ಗೆ ತನ್ನ ಸಮಸ್ಯೆಯಿಂದ ಹೊರಬರಲು ನೆರವಾದರು.

ಬಹಳಷ್ಟು “ಸೈಕೋಥೆರಪಿಸ್ಟ್”ಗಳು, ಥೆರಪಿಸ್ಟ್ರು ಚಿಕಿತ್ಸೆಗೊಳಪಡುವುದರ ಔಚಿತ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜಾಗತಿಕವಾಘಿ ದೊಡ್ಡ ಸಂಖ್ಯೆಯ “ಆಪ್ತಸಮಾಲೋಚಕ ತರಬೇತಿ ಶಿಕ್ಷಣ” ನಿಯಂತ್ರಣ ಮಂಡಳಿಗಳು  ಥೆರಪಿಸ್ಟ್ರ ಪರವಾನಗಿ ಪಡೆದುಕೊಳ್ಳಲು “ಸ್ವ-ಚಿಕಿತ್ಸೆ”ಗೊಳಪಡುವುದನ್ನು ಕಡ್ಡಾಯಗೊಳಿಸಿದೆ. ”ದ ಬ್ರಿಟಿಷ್ ಅಸೋಸಿಯೇಷನ್ ಆಫ್ ಕೌನ್ಸಲಿಂಗ್ ಆ್ಯಾಂಡ್ ಸೈಕೋಥೆರಪಿ” (ಬಿ ಎ ಸಿ ಪಿ) ಸಂಸ್ಥೆಯು ನೈತಿಕವಾಗಿ ವೃತ್ತಿಯನ್ನು ನಡೆಸಲು ಥೆರಪಿಸ್ಟ್ರು ಸ್ವ-ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವರ ಹೊಣೆಗಾರಿಕೆ ಎಂದು ಹೇಳಿದೆ.

ಆಶಾ, ವಂಶಪಾರಂಪರಿಕವಾದ ಸಮಸ್ಯೆಯನ್ನು ಎದುರಿಸುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು. ಅವರು ತನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದಾಗ ತಾನು ಬಾಲ್ಯದಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡಿದ್ದರ ಬಗ್ಗೆ ಚಿಂತಿಸುತ್ತಿದ್ದರು. ಥೆರಪಿಸ್ಟ್ರು ಆಶಾರ ನೋವು, ಸಂಕಟವನ್ನು ಆಳವಾಗಿ ಅರ್ಥಮಾಡಿಕೊಂಡು  ಭಾವನಾತ್ಮಕವಾಗಿ ಸ್ಪಂದಿಸಿದರು ಮತ್ತು ಅವರಿಗೆ ಅಗತ್ಯ ಬೆಂಬಲನೀಡಿದರು. ಇವೆಲ್ಲಾ ಸಾಧ್ಯವಾಗಬೇಕೆಂದರೆ, ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುವ ಸ್ವಯಂಕಾಳಜಿ ಮುಖ್ಯ.

ಥೆರಪಿಸ್ಟ್ರು ಕೂಡಾ ಮನುಷ್ಯರೇ, ಅವರೂ ಎಲ್ಲರಂತೆಯೇ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುತ್ತಾರೆ. ಒಬ್ಬ ಥೆರಪಿಸ್ಟ್ ಜೀವನದಲ್ಲಾಗುವ ಗುರುತರ ಬದಲಾವಣೆಗಳನ್ನು, ತುರ್ತಾಗಿ ಉದ್ಭವಿಸುವ ಸಮಸ್ಯೆಗಳನ್ನು, ಕೋಪ, ಉದ್ವೇಗ ಹಾಗು ಸೋಲನ್ನು ಎದುರಿಸಬೇಕಾಗುತ್ತದೆ. ಥೆರಪಿಸ್ಟ್ರು ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಎದುರಿಸಬೇಕು ಮತ್ತು ಯಾವುದಕ್ಕೂ,ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೆ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಹೊಣೆ ಹೊರಬೇಕು. ಇದು ಅವರ ಜವಾಬ್ದಾರಿಯಾಗಿರುತ್ತದೆ.

ಥೆರಪಿಸ್ಟ್ರು ಚಿಕಿತ್ಸೆಗೊಳಪಟ್ಟಂತಹ ಸಂದರ್ಭದಲ್ಲಿ, ಅಗತ್ಯವಿರುವ ಬೆಂಬಲ ಮತ್ತು ಆರೈಕೆಯನ್ನು ಪಡೆದುಕೊಳ್ಳುತ್ತಾರೆ. ಈ ಮೂಲಕ ಅವರ ಸಹಿಷ್ಣುತೆ ಪ್ರಬಲಗೊಳ್ಳುತ್ತದೆ ಮತ್ತು ಉದ್ವೇಗವೇ ಮೊದಲಾದ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಬಹುದು. ಎಲ್ಲದಕ್ಕಿಂತ, ಇದು ಥೆರಪಿಸ್ಟ್ರ ಮಾನಸಿಕಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಅವರಲ್ಲಿ ಶಕ್ತಿಯನ್ನು ತುಂಬುತ್ತದೆ ಅಂತೆಯೇ ಅವರ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತದೆ.

ಥೆರಪಿಸ್ಟ್ರು ನೋವು-ಸಂಕಷ್ಟಗಳಿಂದ ಹೊರತಾಗಿಲ್ಲ. ಅವರೂ ಸಹ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿರುತ್ತಾರೆ ಮತ್ತು ಇದು ಗ್ರಾಹಕರೊಡನೆ ವ್ಯವಹರಿಸುವ ಸಂದರ್ಭದಲ್ಲಿ ಅವರಿಗೆ ನೆರವಾಗುತ್ತದೆ. ಒಬ್ಬ ಥೆರಪಿಸ್ಟ್ರ ಸ್ವ-ಅನುಭವಗಳು ಬಹಳಷ್ಟು ಉಪಯುಕ್ತವಾಗಿದೆ. ಅವರ ಅನುಭವಗಳು ತಮ್ಮ ಗ್ರಾಹಕರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಗ್ರಾಹಕರ ಮಾನಸಿಕ ಹಾಗು ಭಾವನಾತ್ಮಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಬೆಂಬಲವಾಗಿ ನಿಲ್ಲುತ್ತವೆ.

ಅರ್ಚನಾ ರಾಮನಾಥನ್, ಪರಿವರ್ತನ್ ಕೌನ್ಸೆಲಿಂಗ್ ಟ್ರೈನಿಂಗ್ & ರಿಸರ್ಚ್ ಸೆಂಟರ್ ನಲ್ಲಿ ಕೌನ್ಸೆಲರ್ ಮತ್ತು ಟ್ರೈನರ್ ಆಗಿದ್ದಾರೆ.

 ಆಧಾರ : British Association for Counselling and Psychotherapy (BACP) – Guidelines for ethical framework - https://www.bacp.co.uk/ethical_framework/

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org