ಫ್ಯಾಮಿಲಿ ಥೆರಪಿಯಿಂದ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆ?

ಫ್ಯಾಮಿಲಿ ಥೆರಪಿಯಿಂದ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆ?

ಫ್ಯಾಮಿಲಿ ಥೆರಪಿಯು ಕುಟುಂಬದ ಸದಸ್ಯರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ.
Published on

ನಿಮ್ಮ ಕುಟುಂಬದಲ್ಲಿ ಜಗಳ, ಭಿನ್ನಾಭಿಪ್ರಾಯಗಳು ಉಂಟಾದಾಗ ನೀವೇನು ಮಾಡುತ್ತೀರಿ?

ನಾವು ಪರಸ್ಪರ ಮಾತನಾಡಿ ಒಬ್ಬರೊಬ್ಬರ ದೃಷ್ಟಿಕೋನವನ್ನು ತಿಳಿಯಲು ಪ್ರಯತ್ನಿಸುವ ಮೂಲಕ ಅದನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅಷ್ಟಾದರೂ ಸಮಸ್ಯೆಗೆ  ಪರಿಹಾರ ಕಾಣದೆ ಹೋದರೆ, ನಮ್ಮ ಕುಟುಂಬದ ಗೆಳೆಯರನ್ನೋ, ದೂರದ ಸಂಬಂಧಿಕರನ್ನೋ ಕರೆಸಿಕೊಂಡು ಮಾತನಾಡುತ್ತೇವೆ. ನಂತರದಲ್ಲೂ ಸಮಸ್ಯೆ ಹಾಗೆಯೇ ಉಳಿದುಕೊಂಡರೆ? ಆಗೇನು ಮಾಡುತ್ತೀರಿ?

ಫ್ಯಾಮಿಲಿ ಥೆರಪಿಯ ಅಗತ್ಯ ಬೀಳುವುದು ಈ ಸಂದರ್ಭದಲ್ಲೇ. ಸಂಬಂಧಗಳ ನಡುವಿನ ಸಮಸ್ಯೆಗೆ ಪರಿಹಾರ ಒದಗಿಸಲು ನೀಡುವ ಸಲಹಾ ಚಿಕಿತ್ಸೆಯನ್ನು ಫ್ಯಾಮಿಲಿ ಥೆರಪಿ ಎನ್ನಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಫ್ಯಾಮಿಲಿ ಥೆರಪಿಸ್ಟ್, ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಸಂಘರ್ಷದ ಕಾರಣವನ್ನು ತಿಳಿದುಕೊಳ್ಳುತ್ತಾರೆ. ಸಮಸ್ಯೆ ಏನೆಂದು ಕಂಡುಕೊಂಡರೆ ಪರಿಹಾರ ಹುಡುಕುವುದು ಸುಲಭ. ಈ ಥೆರಪಿಯಲ್ಲಿ ಕುಟುಂಬದ ಸದಸ್ಯರ ನಡುವಿನ ಮಾತುಕತೆಯನ್ನು ಉತ್ತಮಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಗಂಡ – ಹೆಂಡತಿಯ ನಡುವೆ ಅಥವಾ ಪೋಷಕರು – ಮಕ್ಕಳ ನಡುವೆ ಅಥವಾ ಕುಟುಂಬದ ಹಲವು ಸಂಬಂಧಗಳ ನಡುವೆ ಉತ್ತಮ ಸಂಬಂಧವನ್ನು ಯತ್ನಿಸಲಾಗುತ್ತದೆ.

ಫ್ಯಾಮಿಲಿ ಥೆರಪಿಯನ್ನು ಯಾವ ಸಂದರ್ಭಗಳಲ್ಲಿ ಪಡೆಯಬಹುದು?

ಫ್ಯಾಮಿಲಿ ಥೆರಪಿಯು ಕುಟುಂಬದ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:

  • ಮಕ್ಕಳ ಪಾಲನೆಯ ಸಮಸ್ಯೆ
  • ಹದಿಹರೆಯದ ಹಾಗೂ ಚಿಕ್ಕ ಮಕ್ಕಳ ನಡವಳಿಕೆ ಸಮಸ್ಯೆಗಳು
  • ಕುಟುಂಬದ ಸದಸ್ಯರಲ್ಲಿ ಯಾರಾದರೂ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದರೆ, ಅವರ ಕಾಯಿಲೆಯನ್ನು ಅರಿಯುವುದು ಮತ್ತು ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು
  • ಕುಟುಂಬದ ಸದಸ್ಯರ ಲೈಂಗಿಕ ಆದ್ಯತೆಗಳು ಮತ್ತು ಮದುವೆಯ ನಂತರ ಸಲಿಂಗ ಕಾಮಾಸಕ್ತಿಯ ಸಂಗಾತಿಯನ್ನು ಅರಿಯುವುದು:ಆಪ್ತತೆಯ ಕೊರತೆ, ಸಂವಹನ ಸಮಸ್ಯೆ
  • ಮದುವೆಗೆ ಮುನ್ನ ಸಮಾಲೋಚನೆ
  • ಮಧ್ಯವಯಸ್ಕ ದಂಪತಿಗಳಲ್ಲಿ ಒಂಟಿತನ

( ಕುಟುಂಬದಲ್ಲಿ ಪ್ರೀತಿಪಾತ್ರರ ಮಾನಸಿಕ ಅಸ್ವಸ್ಥತೆಯನ್ನು ಅರಿಯುವುದು ಒಂದು ಸವಾಲಿನ ಕೆಲಸ. ಅವರ ನೋವು ನಲಿವುಗಳನ್ನು ಅರಿತು ಸ್ಪಂದಿಸುವ ನಿಟ್ಟಿನಲ್ಲಿ ಫ್ಯಾಮಿಲಿ ಥೆರಪಿ ಅತ್ಯಂತ ಪ್ರಯೋಜನಕಾರಿ.)

“ನನಗೆ ಫ್ಯಾಮಿಲಿ ಥೆರಪಿ ಬೇಕಿಲ್ಲ!”

ಸಮಾಜದಲ್ಲಿ ಫ್ಯಾಮಿಲಿ ಥೆರಪಿ ಪಡೆಯಲು ಹಿಂದೇಟು ಹಾಕುವವರೇ ಹೆಚ್ಚು. ಕುಟುಂಬದೊಳಗಿನ ವಿಷಯಗಳನ್ನು 7ಅಪರಿಚಿತ ವ್ಯಕ್ತಿಯೊಡನೆ ಹಂಚಿಕೊಳ್ಳಲು ಅವರು ಇಷ್ಟಪಡದೆ ಇರುವುದೇ ಇದಕ್ಕೆ ಕಾರಣ. ಇನ್ನು ಕೆಲವರಿಗೆ ಇಂಥ ಚಿಕಿತ್ಸೆಗಳಲ್ಲಿಯೇ ನಂಬಿಕೆ ಇರುವುದಿಲ್ಲ. ತಿಳುವಳಿಕೆಯ ಕೊರತೆ ಮತ್ತು ಇಂಥ ಸಹಾಯಗಳನ್ನು ಪಡೆಯುವ ಕುರಿತು ಇರುವ ಯೋಚನೆಗಳು ಅವರ ದಿಕ್ಕುತಪ್ಪಿಸುತ್ತವೆ. ಅದೇ ವೇಳೆಗೆ ಕೆಲವು ಕುಟುಂಬಗಳು ತಮ್ಮ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಬಯಸಿ ಫ್ಯಾಮಿಲಿ ಥೆರಪಿಯನ್ನು ಆಯ್ದುಕೊಳ್ಳುತ್ತವೆ.

ಥೆರಪಿ ಹಾಗೂ ಫ್ಯಾಮಿಲಿ ಥೆರಪಿ ಕುರಿತು ಮುಕ್ತವಾಗಿ ಮಾತನಾಡುವ ಮೂಲಕ, ಅವುಗಳ ಬಗ್ಗೆ  ತಮಗಿರುವ ಆತಂಕಗಳನ್ನು ಹೇಳಿಕೊಳ್ಳುವ ಮೂಲಕ ಸಾಕಷ್ಟು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಬಹುದು.

ಫ್ಯಾಮಿಲಿ ಥೆರಪಿ ಹೇಗಿರುತ್ತದೆ?

ಫ್ಯಾಮಿಲಿ ಥೆರಪಿಯು ಮುಖ್ಯವಾಗಿ ಕುಟುಂಬದ ಸದಸ್ಯರ ಮನಸ್ಸಿನಲ್ಲಿರುವ ಭಾವನೆಗಳನ್ನು ಹೊರ ತೆಗೆದು, ಸಮಸ್ಯೆಯ ಮೂಲ ಕಾರಣವನ್ನು ಹುಡುಕುವ ಕೆಲಸ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಈ ಕೆಳಗಿನ ಅಂಶಗಳು ಒಳಗೊಳ್ಳುತ್ತವೆ:

ಮೌಲ್ಯಮಾಪನ: ಮೌಲ್ಯಮಾಪನ ನಡೆಸುವಾಗ ನೀವು ಥೆರಪಿಸ್ಟ್’ರಲ್ಲಿ ಈ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸ್ಪಷ್ಟ ಚಿತ್ರಣ ಪಡೆಯಬಹುದು:

  • ಚಿಕಿತ್ಸೆಯ ಅವಧಿ ಎಷ್ಟು ಕಾಲದವರೆಗೆ ಸಾಗುತ್ತದೆ?
  • ಥೆರಪಿಗೆ ಎಷ್ಟು ಸಮಯ ಹಿಡಿಯುತ್ತದೆ?
  • ಥೆರಪಿ ಸೆಶನ್’ಗಳು ನಡೆಯುವಾಗ ಯಾರೆಲ್ಲ ಜೊತೆಗಿರಬಹುದು?
  • ಹಂಚಿಕೊಳ್ಳುವ ಮಾಹಿತಿಯ ಗೌಪ್ಯತೆ ಎಷ್ಟು ಸುರಕ್ಷಿತ?
  • ಥೆರಪಿಸ್ಟ್ ಎಷ್ಟು ಅನುಭವ ಹೊಂದಿದ್ದಾರೆ? ಈ ಹಿಂದೆ ಇಂಥ ಸಮಸ್ಯೆಗಳನ್ನು ಬಗೆಹರಿಸಿದ್ದಾರೆಯೇ?

ಇದೇ ಸಂದರ್ಭದಲ್ಲಿ ಥೆರಪಿಸ್ಟ್, ಕುಟುಂಬದ ಸದಸ್ಯರನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಕೂರಿಸಿಕೊಂಡು ಮಾತಾಡಿ ಕುಟುಂಬದ ರೀತಿ ನೀತಿಗಳನ್ನು ಅರಿಯುತ್ತಾರೆ. ಕುಟುಂಬದೊಳಗಿನ ಮಿತಿಗಳು, ನಿರ್ಧಾರ ಕೈಗೊಳ್ಳುವ ಕ್ರಮ, ಸದಸ್ಯರ ಸ್ಥಾನಮಾನ ಮೊದಲಾದವುಗಳ ಆಧಾರದ ಮೇಲೆ ಕುಟುಂಬದ ಮೌಲ್ಯಮಾಪನ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕುಟುಂಬದ ಮಿತಿಗಳು, ನಿರ್ಬಂಧಗಳಿಗೆ ಸದಸ್ಯರು ಹೇಗೆ ಸ್ಪಂದಿಸುತ್ತಾರೆ; ಮತ್ತು ತಮ್ಮ ಮೇಲೆ ಇದನ್ನು ಹೊರಿಸುವ ಸದಸ್ಯರೊಂದಿಗೆ ಹೇಗೆ ವರ್ತಿಸುತ್ತಾರೆ ಅನ್ನುವ ಅಂಶಗಳೂ ಗೋಚರವಾಗುತ್ತವೆ. ಬಹುತೇಕವಾಗಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಂದೆಯೇ ಕುಟುಂಬದ ಯಜಮಾನನಾಗಿರುತ್ತಾನೆ.

ಥೆರಪಿಸ್ಟ್ ನಿಮ್ಮ ಬಳಿ ಪ್ರತ್ಯೇಕವಾಗಿ ಅಥವಾ ಇತರ ಸದಸ್ಯರೊಂದಿಗೆ ಕೂರಿಸಿಕೊಂಡು ಮಾತನಾಡಿ, ಸದ್ಯದ ಸಮಸ್ಯೆಯ ನೈಜ ಕಾರಣವನ್ನು ಪತ್ತೆ ಹಚ್ಚುವ ಯತ್ನ ಮಾಡುತ್ತಾರೆ. ಅದರ ಜೊತೆಯಲ್ಲೇ ಸಮಸ್ಯೆಯನ್ನು ಯಾವ ದಾರಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಕುಟುಂಬದ ಇತರ ಸದಸ್ಯರು ಫ್ಯಾಮಿಲಿ ಥೆರಪಿ ಪಡೆಯಲು ಮುಂದೆ ಬರದೆ ಹೋದರೆ, ನೀವೊಬ್ಬರೇ ವೈಯಕ್ತಿಕವಾಗಿ ವೃತ್ತಿಪರರ ಸಹಾಯ ಪಡೆಯಬಹುದು.

ಮಧ್ಯಸ್ಥಿಕೆಯ ಹಂತ

ಮೌಲ್ಯಮಾಪನದ ನಡೆಸುವಾಗ ಸಂಗ್ರಹಿಸಿದ ಮಾಹಿತಿಯನ್ನು ಇಟ್ಟುಕೊಂಡು ಚಿಕಿತ್ಸಕರು ಮುಂದಿನ ಪ್ರಕ್ರಿಯೆಯನ್ನು ನಿರ್ಧರಿಸುತ್ತಾರೆ. ಯಾವ ಬಗೆಯಲ್ಲಿ ಕುಟುಂಬದ ಸಮಸ್ಯೆ ಪರಿಹರಿಸಬೇಕೆಂದು ಯೋಜನೆ ರೂಪಿಸುತ್ತಾರೆ. ಇಲ್ಲಿ ಹಲವು ದಾರಿಗಳಿದ್ದು, ಸಮಸ್ಯೆಯ ತೀವ್ರತೆಗೆ ತಕ್ಕಂತೆ ಸೂಕ್ತ ದಾರಿಯನ್ನು ಚಿಕಿತ್ಸಕರು ಆಯ್ದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಆಲೋಚನಾಕ್ರಮವನ್ನು ಅರ್ಥೈಸಿಕೊಳ್ಳಲು ಯತ್ನಿಸಲಾಗುತ್ತದೆ.

ಕುಟುಂಬದ ಕಲ್ಪನೆ

ನಸಮಾಜ ಜೀವಿಗಳಾದ ನಾವು ನಮ್ಮ ಕುಟುಂಬವನ್ನು ನೆರೆಹೊರೆಯವರ, ಗೆಳೆಯರ ಅಥವಾ ಒಡಹುಟ್ಟಿದವರ ಕುಟುಂಬದೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆ. ನಮ್ಮ ಹೊರತಾಗಿ ಉಳಿದವರೆಲ್ಲರೂ ಸಂತೋಷದಿಂದ ಇದ್ದಾರೆ, ಎಲ್ಲ ಅನುಕೂಲಗಳೊಂದಿಗೆ ಸುಖವಾಗಿದ್ದಾರೆ ಎಂದು ನಂಬಿಕೊಳ್ಳುವುದು ಸಹಜ. ಇದನ್ನು ಆದರ್ಶ ಕುಟುಂಬದ ಕಲ್ಪನೆ ಎಂದು ಕರೆಯುತ್ತಾರೆ.

ಯಾವ ಕುಟುಂಬದಲ್ಲಿ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳೇ ಇರುವುದಿಲ್ಲವೋ, ಮಾತುಕತೆಯ ಕೊರತೆ ಇಲ್ಲವೋ, ಪರಸ್ಪರ ಅರ್ಥ ಮಾಡಿಕೊಂಡು ಕೂಡಿ ಬಾಳುತ್ತಾರೋ ಅದು ಆದರ್ಶ ಕುಟುಂಬ. ಸಾಕಷ್ಟು ಜನ ಇಂಥದೊಂದು ಕಲ್ಪನೆ ಇಟ್ಟುಕೊಂಡು ಥೆರಪಿಗೆ ಮುಂದಾಗುತ್ತಾರೆ. ಕೌಟುಂಬಿಕ ಚಿಕಿತ್ಸೆ ಪಡೆದರೆ ತಮ್ಮ ಕುಟುಂಬವೂ ಆದರ್ಶ ಕುಟುಂಬ ಆಗುತ್ತದೆ ಎಂದು ಭ್ರಮಿಸುತ್ತಾರೆ. ಆದರೆ ಅದು ಸಾಧ್ಯವಾಗದ ಮಾತು. ಇಬ್ಬರು ವ್ಯಕ್ತಿಗಳು ಜೊತೆ ಇರುವಾಗಲೂ ಅಪಾರ್ಥ, ಭಿನ್ನಾಭಿಪ್ರಾಯ, ಮಾತುಕಥೆಗಳಲ್ಲಿ ತೊಂದರೆ ಉಂಟಾಗಬಾರದು ಎಂದಿಲ್ಲ. ಫ್ಯಾಮಿಲಿ ಥೆರಪಿಯು ಇಂತಹ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತದೆ.

ಫ್ಯಾಮಿಲಿ ಥೆರಪಿಯಿಂದ ನಾನು ಏನನ್ನು ನಿರೀಕ್ಷಿಸಬಹುದು?

ಫ್ಯಾಮಿಲಿ ಥೆರಪಿಯಿಂದ ಕುಟುಂಬದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕುಬಿಡುತ್ತದೆ ಎಂದು ಭಾವಿಸುವುದು ಸಹಜ. ಆದರೆ ಹಾಗೆ ಆಗುವುದಿಲ್ಲ. ಆದರೆ ಈ ಚಿಕಿತ್ಸೆಯಿಂದ ನೀವು ಇಷ್ಟನ್ನು ನಿರೀಕ್ಷಿಸಬಹುದು :

  • ನಿಮ್ಮ ಸಮಸ್ಯೆಗಳಿಗೆ ತೀರ್ಪು ನೀಡದೆ, ಗಮನವಿಟ್ಟು ಕೇಳಬಲ್ಲ ಚಿಕಿತ್ಸಕರು ನಿಮ್ಮೆದುರು ಇರುತ್ತಾರೆ.
  • ಸಂಭಾಷಣೆಗಳನ್ನು ಇತರ ಸದಸ್ಯರಿಂದ ಗುಟ್ಟಾಗಿ ಇರಿಸಲಾಗುತ್ತದೆ.
  • ಸಂಭಾಷಣೆಯು ರಚನಾತ್ಮಕವಾಗಿ ಇರುತ್ತವೆ ಹೊರತು ವಿಚಾರಣೆಯಂತೆ ಇರುವುದಿಲ್ಲ.
  • ಕುಟುಂಬದ ಪ್ರತಿ ಸದಸ್ಯರಿಗೂ ತಮ್ಮ ಅನ್ನಿಸಿಕೆ ಹೇಳಿಕೊಳ್ಳಲು ಸಮಾನ ಅವಕಾಶ ನೀಡಲಾಗುತ್ತದೆ.
  • ಥೆರಪಿಸ್ಟ್, ಕುಟುಂಬದ ಯಾವುದೇ ಸದಸ್ಯರ ಪರ ಅಥವಾ ವಿರೋಧ ವಹಿಸುವುದಿಲ್ಲ. ಬದಲಿಗೆ, ಕುಟುಂಬವು ಸುಲಭ ಹಾಗೂ ಶೀಘ್ರವಾಗಿ ಪರಿಹಾರ ಪಡೆಯಲಿ ಎಂದು ಬಯಸುತ್ತಾರೆ.

ಥೆರಪಿಯ ಸಂದರ್ಭದಲ್ಲಿ ಪಡೆದ ಒಳನೋಟಗಳನ್ನು ಎಷ್ಟರಮಟ್ಟಿಗೆ ಅನ್ವಯಮಾಡಿಕೊಳ್ಳುತ್ತೇವೆ ಅನ್ನುವುದರ ಮೇಲೆ ಅದರ ಪರಿಣಾಮ ನಿರ್ಧಾರಗೊಳ್ಳುತ್ತದೆ.

ಈ ಲೇಖನವನ್ನು ನಿಮ್ಹಾನ್ಸ್’ನ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ವೀಣಾ ಸತ್ಯನಾರಾಯಣ ಅವರು ನೀಡಿದ ವಿವರಗಳನ್ನು ಆಧರಿಸಿ ಸಿದ್ಧಗೊಳಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org