ಸಂದರ್ಶನ: ಡಾ. ಸಿ.ಆರ್.ಚಂದ್ರಶೇಖರ್

ಪ್ರಶ್ನೆ: ಮಾನಸಿಕ ಆರೋಗ್ಯ ಎಂದರೇನು? 

ಮಾನಸಿಕ ಆರೋಗ್ಯ ಎಂದರೆ ಮನಸ್ಸು ನೆಮ್ಮದಿಯಿಂದಿರುವುದು. ಮನಸ್ಸು ಪ್ರಶಾಂತವಾಗಿದ್ದು, ನಮ್ಮ ಆಲೋಚನೆಗಳು, ಭಾವನೆಗಳು, ನಿರ್ಧಾರಗಳು ಎಲ್ಲವೂ ಪರಿಸ್ಥಿತಿಗೆ ಅಥವಾ ವಾಸ್ತವಿಕತೆಗೆ ತಕ್ಕಂತೆ ಇರುತ್ತದೆ. ಈ ಸ್ಥಿತಿಯಲ್ಲಿ ನಮಗೆ ಯಾವುದೇ ಅಹಿತ ಭಾವ, ನೋವು, ದುಃಖ, ಕೋಪ, ಭಯ ಇರುವುದಿಲ್ಲ. ಇಂತಹ ಮನೋಸ್ಥಿತಿಯನ್ನು ಮಾನಸಿಕ ಆರೋಗ್ಯ ಎನ್ನಬಹುದು.

ಪ್ರಶ್ನೆ: ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೇನು? ಇದಕ್ಕೆ ಚಿಕಿತ್ಸೆ ಅಗತ್ಯ ಎಂದು ಸೂಚಿಸುವ ಸಂಜ್ಞೆಗಳು ಯಾವವು?

 • ಊಟ, ನಿದ್ದೆ ಸರಿಯಾಗಿ ಮಾಡುವುದಿಲ್ಲ.
 • ದೇಹದಲ್ಲೆಲ್ಲ ನೋವು ಎಂದು ಹೇಳುತ್ತಾರೆ.
 • ಸುಖ, ಸಂತೋಷ, ಪ್ರೀತಿ ಮುಂತಾದ ಧನಾತ್ಮಕ ಭಾವನೆಗಳು ಇರುವುದಿಲ್ಲ.
 • ಭಯ, ಕೋಪ, ದುಃಖ, ಮತ್ಸರದಂತಹ ಋಣಾತ್ಮಕ ಭಾವನೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಇರುತ್ತವೆ.
 • ಮಾತು, ವರ್ತನೆ, ನಡತೆ, ಪ್ರತಿಕ್ರಿಯೆ ಎಲ್ಲವೂ ವಾಸ್ತವಿಕತೆಗೆ ತಕ್ಕಂತೆ ಇರುವುದಿಲ್ಲ.
 • ದೈನಂದಿನ ಕೆಲಸಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
 • ಪರಸ್ಪರ ಸಂಬಂಧಗಳಲ್ಲಿ ವ್ಯತ್ಯಾಸವಾಗುತ್ತದೆ.

ಪ್ರಶ್ನೆ: ವೈದ್ಯರ ಸಹಾಯವನ್ನು ಪಡೆದುಕೊಳ್ಳುವಲ್ಲಿ ಜನರು ಎದುರಿಸಬಹುದಾದ ಸಮಸ್ಯೆಗಳಾವವು?

 • ಅರಿವು ಇಲ್ಲದಿರುವುದು: ದೇಹಕ್ಕೆ ಖಾಯಿಲೆ ಬಂದರೆ (ತಲೆ ನೋವು, ಜ್ವರ ಇತ್ಯಾದಿ) ವೈದ್ಯರ ಬಳಿ ಹೋಗಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮನಸ್ಸಿನಲ್ಲಿ ನಿಭಾಯಿಸಲು ಸಾಧ್ಯವಾಗದಷ್ಟು ಅಶಾಂತಿ, ಭಯ, ಸಿಟ್ಟು, ದುಃಖ ಮತ್ತು ಆಲೋಚನೆಯಲ್ಲಿ ವ್ಯತ್ಯಾಸವಾಗುತ್ತಿದ್ದರೆ ಅದು ಖಾಯಿಲೆಯ ಲಕ್ಷಣ ಎಂದು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ.
 • ಸಾಮಾಜಿಕ ಕಳಂಕ: ದೇಹದ ಖಾಯಿಲೆ ಅಂದರೆ ಜನ ‘ಅಯ್ಯೋ ಪಾಪ’, ‘ಡಾಕ್ಟರ್ ಬಳಿ ಹೋಗು’ ಎನ್ನುತ್ತಾರೆ. ಮಾನಸಿಕ ಖಾಯಿಲೆ ಎಂದರೆ, ವ್ಯಕ್ತಿಯನ್ನು ಕಂಡು ಭಯ ಪಡುತ್ತಾರೆ. “ಈತ/ಈಕೆ ಮನೋರೋಗಿ, ಅವರಿಗೆ ಹುಚ್ಚು ಹಿಡಿಯಬಹುದು, ಅವರು ಅಪಾಯಕಾರಿ”, ಎಂಬ ತಪ್ಪು ಕಲ್ಪನೆಗಳು ಜನರಲ್ಲಿ ಇರುವುದರಿಂದ ಅವರು ವೈದ್ಯರ ಬಳಿ ಹೋಗುವುದಿಲ್ಲ. ಮೂವತ್ತು ನಲವತ್ತು ವರ್ಷಗಳ ಹಿಂದೆ ಇದ್ದಷ್ಟು ಸಾಮಾಜಿಕ ಕಳಂಕ ಈಗಿಲ್ಲ. ಕೇವಲ ಮಧ್ಯಮ ವರ್ಗದವರು ಜನ ಏನು ತಿಳಿದುಕೊಳ್ಳುತ್ತಾರೋ ಎಂಬ ಆತಂಕದಲ್ಲಿರುತ್ತಾರೆ. ಜನರಿಗೆ ಸೂಕ್ತ ಮಾಹಿತಿ ಸಿಕ್ಕಲ್ಲಿ ಅವರು ಚಿಕಿತ್ಸೆಗಾಗಿ ವೈದ್ಯರ ಬಳಿ ಬರುತ್ತಾರೆ.
 • ವೈದ್ಯರ ಅಭಾವ: 125 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ 5 ಅಥವಾ 6 ಲಕ್ಷ ಜನರಿಗೆ ಒಬ್ಬರು ಮನೋವೈದ್ಯರು ಇದ್ದಾರೆ. ಇಡೀ ದೇಶದಲ್ಲಿ ಸುಮಾರು 4000 ಜನ ಮನೋವೈದ್ಯರು ಇರಬಹುದು ಅಷ್ಟೇ. ಹೆಚ್ಚಿನವರು ಮುಂಬೈ, ಕೋಲ್ಕಟ, ಬೆಂಗಳೂರು, ಹುಬ್ಬಳ್ಳಿ, ಮೈಸೂರು ನಗರಗಳಲ್ಲಿ ಇದ್ದಾರೆ.
 • ತಪ್ಪು ನಂಬಿಕೆಗಳು: ಮಾನಸಿಕ ಖಾಯಿಲೆ ವಂಶಪಾರಂಪರ್ಯವಾಗಿ ಬರುತ್ತದೆ ಎಂಬ ಕಲ್ಪನೆಯೂ ನಮ್ಮಲ್ಲಿದೆ. ‘ನಾನು ಮಾನಸಿಕ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಗೊತ್ತಾದರೆ ನನ್ನ ಮಗಳನ್ನು, ಅಥವಾ ನನ್ನ ತಂಗಿಯನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ.’ ಎಂಬ ಭಯದಿಂದಲೂ ಜನ ಮನೋವೈದ್ಯರ ಬಳಿ ಬರುವುದಿಲ್ಲ.

ಪ್ರಶ್ನೆ: ಮಾನಸಿಕ ಸಮಸ್ಯೆ ಇರುವವರು ಸಹಾಯ ಪಡೆಯಲು ಇಚ್ಛಿಸಿದರೂ ಅವರಿಗೆ ಸಹಾಯ ಸಿಗದೇ ಇರುವುದಕ್ಕೆ ಏನು ಕಾರಣ?

 • ಮನೋವೈದ್ಯರು ಎಲ್ಲಿದ್ದಾರೆ, ಅವರನ್ನು ಕಾಣಬೇಕಾದರೆ ಏನು ಮಾಡಬೇಕು ಎನ್ನುವುದೇ ಎಷ್ಟೋ ಜನಕ್ಕೆ ಗೊತ್ತಿರುವುದಿಲ್ಲ.
 • ಮಾನಸಿಕ ಆಸ್ಪತ್ರೆ ಎಂದರಂತೂ ಜನ ಭಯ ಪಡುತ್ತಾರೆ. ಅಲ್ಲಿ ಅಪಾಯಕಾರಿ ರೋಗಿಗಳನ್ನು ಕೂಡಿಹಾಕಿರುತ್ತಾರೆ ಎಂದು ನಂಬುತ್ತಾರೆ.
 • ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಮಾನಸಿಕ ಆಸ್ಪತ್ರೆಗಳನ್ನು ಜೈಲಿನ ರೀತಿ ತೋರಿಸಿದ್ದಾರೆ. “ಅಂತಹ ಕಡೆ ನನ್ನ ಪ್ರೀತಿಪಾತ್ರರನ್ನು ಕರೆದುಕೊಂಡು ಹೋಗುವುದೆ? ಸಾಧ್ಯವೇ ಇಲ್ಲ” ಎಂದು ಜನ ಹಿಂದೆ ಸರಿಯುತ್ತಾರೆ.

ಪ್ರಶ್ನೆ: ಭೂತ-ಪ್ರೇತಗಳು, ಮೂಢನಂಬಿಕೆಗಳು ಮತ್ತು ಧಾರ್ಮಿಕ ಆಚರಣೆಗಳು ಜನರಿಗೆ ಸಹಾಯ ಮಾಡುವ ಬದಲಾಗಿ ಹಾನಿ ಮಾಡಬಹುದೆ?

ದೆವ್ವ, ಭೂತ, ಪಿಶಾಚಿಗಳು ನಮ್ಮ ಕಲ್ಪನೆಯಷ್ಟೆ. ಸತ್ತಮೇಲೆ ನಮ್ಮ ದೇಹ, ಮಿದುಳು, ಮನಸ್ಸು ಎಲ್ಲಾ ಅಳಿದುಹೋಗುತ್ತವೆ. ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಮನರಂಜನೆಗಾಗಿ ಮನುಷ್ಯರಿಗೆ ವೇಷ ಹಾಕಿ ದೆವ್ವ ಎಂದು ತೋರಿಸುತ್ತಾರೆ ಅಷ್ಟೆ.

ಜನ ತಮ್ಮ ಸಮಸ್ಯೆಗಳಿಗೆ, ಅನಾರೋಗ್ಯಕ್ಕೆ, ಗ್ರಹಚಾರ ಅಥವಾ ಮಾಟ-ಮಂತ್ರ ಕಾರಣ ಎಂದು ನಂಬುತ್ತಾರೆ. ಈಗೀಗ ಮಾಧ್ಯಮಗಳಲ್ಲಿ ಈ ರೀತಿಯ ತಪ್ಪು ನಂಬಿಕೆಗಳನ್ನು ಹುಟ್ಟಿಸುವ ಜನರ ಸೈನ್ಯವೇ ಕಾಣಿಸಿಕೊಳ್ಳುತ್ತಿದೆ. ಮಾಟಮಂತ್ರದಿಂದ ಇನ್ನೊಬ್ಬರಿಗೆ ಕೆಡಕು ಮಾಡುವ ಶಕ್ತಿ ಮನುಷ್ಯನಿಗಿಲ್ಲ. ಒಳ್ಳೆಯದಾಗಲಿ, ಕೆಟ್ಟದಾಗಲಿ ಅದಕ್ಕೆ ನಾವೇ ಜವಾಬ್ದಾರರು.

ಪ್ರಶ್ನೆ: ಈ ಕುರಿತ ಜನರ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬಹುದು?

ಜನರು ಈ ರೀತಿಯ ಅವೈಜ್ಞಾನಿಕ ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಆಲೋಚಿಸಬೇಕು. ಪ್ರತಿಯೊಂದು ಸಮಸ್ಯೆಗೂ ನಿರ್ದಿಷ್ಟ ಕಾರಣ ಮತ್ತು ಪರಿಹಾರ ಏನು ಎಂಬುದನ್ನು ವಿಚಾರ ಮಾಡಬೇಕು. ತಮ್ಮ ಸ್ವಸಾಮರ್ಥ್ಯದಲ್ಲಿ ವಿಶ್ವಾಸವಿಡಬೇಕು. ಯಾವುದೇ ಖಾಯಿಲೆ ಬರಲಿ ವೈದ್ಯರ ಹತ್ತಿರ ಹೋಗಿ ಅವರು ಸೂಚಿಸಿದ ಚಿಕಿತ್ಸೆ ತೆಗೆದುಕೊಳ್ಳಬೇಕು. ಪರ್ಯಾಯ ಪದ್ಧತಿಗಳಲ್ಲಿರುವ ಮ್ಯಾಜಿಕ್ ರೂಪದ ಪರಿಹಾರಗಳಿಂದ ಖಾಯಿಲೆ ಗುಣ ಮಾಡಲು ಸಾಧ್ಯವಿಲ್ಲ. 

ಪ್ರಶ್ನೆ: ಮಾನಸಿಕ ಸಮಸ್ಯೆ ಬರಲು ನಿರ್ದಿಷ್ಟ ಕಾರಣಗಳಿದೆಯೇ?

ದೇಹದ ಖಾಯಿಲೆಗಳು ಹೇಗೆ ನಿರ್ದಿಷ್ಟ ಕಾರಣಗಳಿಂದ ಬರುತ್ತವೆಯೋ, ಹಾಗೆಯೇ ಮಾನಸಿಕ ಖಾಯಿಲೆ ಬರಲು ನಿರ್ದಿಷ್ಟ ಕಾರಣಗಳು ಈ ಕೆಳಗಿನಂತಿವೆ:

 • ಮಿದುಳಿನಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆ.
 • ಮಾನಸಿಕ ಒತ್ತಡ, ವೇದನೆ, ಚಿಂತೆ, ವ್ಯಥೆ
 • ಮಿದುಳು ಸವೆಯುವುದು, ಮಿದುಳಿಗೆ ಪೆಟ್ಟಾಗುವುದು
 • ಥೈರಾಯ್ಡ್, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ದೀರ್ಘಕಾಲೀನ ದೈಹಿಕ ಖಾಯಿಲೆಗಳನ್ನು ನಿಭಾಯಿಸುವ ಒತ್ತಡದಿಂದ ಖಿನ್ನತೆ, ಆತಂಕ ಮುಂತಾದ ಸಾಮಾನ್ಯ ಮಾನಸಿಕ ಖಾಯಿಲೆಗಳು ಕಾಣಿಸಿಕೊಳ್ಳಬಹುದು.
 • 10% ರಷ್ಟು ಜನರಲ್ಲಿ ಆನುವಂಶಿಕವಾಗಿ ಕೂಡ ಬರಬಹುದು

ಪ್ರಶ್ನೆ: ಮಾನಸಿಕ ಆರೋಗ್ಯದ ಕುರಿತು ಜನ ಸೂಕ್ತ ತಿಳುವಳಿಕೆಯನ್ನು ಹೊಂದುವುದು ಯಾಕೆ ಅವಶ್ಯಕ?

ಮಾನಸಿಕ ಖಾಯಿಲೆಗಳು ಬರಲು ನಿರ್ದಿಷ್ಟ ಕಾರಣಗಳಿರುವುದರಿಂದ ಅದನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಮನೆಯವರು ಖಾಯಿಲೆ ತೀವ್ರವಾಗುವವರೆಗೂ ಕಾಯದೆ ಖಾಯಿಲೆಯ ಲಕ್ಷಣವನ್ನು ಆರಂಭದಲ್ಲಿಯೇ ಗುರುತಿಸಲು ಸಾಧ್ಯವಾಗಬೇಕು. ಬಟ್ಟೆ ಸರಿಯಾಗಿ ಹಾಕಿಕೊಳ್ಳದೇ ಇರುವುದು, ಕೂದಲು ಕೆದರಿರುವುದು, ಬೀದಿ ಸುತ್ತುವುದು, ಇವೆಲ್ಲಾ ಮಾನಸಿಕ ಖಾಯಿಲೆಯ ಕೊನೆಯ ಹಂತಗಳು. 

ಪ್ರಶ್ನೆ: ಮನೋವೈದ್ಯರನ್ನು ಯಾವಾಗ ಕಾಣಬೇಕು?

ಮೇಲೆ ತಿಳಿಸಿರುವ ಮಾನಸಿಕ ಸಮಸ್ಯೆಗಳ ಲಕ್ಷಣಗಳು ಕಂಡುಬಂದಾಗ ’ಇದು ಮಾನಸಿಕ ಖಾಯಿಲೆ ಇರಬಹುದೇ?’ ಎಂದು ಮೊದಲು ಪತ್ತೆ ಮಾಡಿ, ದೃಢಪಡಿಸಿಕೊಳ್ಳಬೇಕು. ಇದಕ್ಕಾಗಿ ಕುಟುಂಬ ವೈದ್ಯರನ್ನೇ ಕಾಣಬಹುದು. ಸಣ್ಣ ಮಟ್ಟದಲ್ಲಿರುವ ಯಾವುದೇ ಮಾನಸಿಕ ಖಾಯಿಲೆಗಳಿಗೆ ಅವರು ಖಿನ್ನತೆ ನಿವಾರಕ ಔಷಧಿಗಳನ್ನು ಕೊಡಬಹುದು ಅಥವಾ ಆಪ್ತಸಮಾಲೋಚನೆಯ ಮೂಲಕ ಸಾಂತ್ವನ ಹೇಳಬಹುದು. ಅವರಿಗೆ ಸಾಧ್ಯವಿಲ್ಲವೆಂದರೆ ಮನೋವೈದ್ಯರಿಗೆ ಶಿಫಾರಸು ಮಾಡಬಹುದು. 

ಹೇಗೆ ಮಧುಮೇಹವನ್ನು ಬೇಗ ಪತ್ತೆ ಮಾಡಿದರೆ ಅದನ್ನು ನಿಯಂತ್ರಿಸಬಹುದೋ, ಹಾಗೆಯೇ ಮಾನಸಿಕ ಖಾಯಿಲೆಗಳಿಗೆ ಬೇಗ ಚಿಕಿತ್ಸೆ ಅಥವಾ ಮಧ್ಯಸ್ತಿಕೆ ಆರಂಭಗೊಂಡರೆ ಬೇಗ ಖಾಯಿಲೆ ವಾಸಿಯಾಗುತ್ತದೆ.

ಪ್ರಶ್ನೆ: ಮನೋವೈದ್ಯರನ್ನು ಎಲ್ಲಿ ಕಾಣಬಹುದು?

ಕರ್ನಾಟಕದಲ್ಲಿ, ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ, ಖಾಸಗಿಯಾಗಿ ಅಭ್ಯಾಸ ಮಾಡುವ ಅಥವಾ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ಮನೋವೈದ್ಯರಿದ್ದಾರೆ. ದೊಡ್ಡಾಸ್ಪತ್ರೆಗಳಲ್ಲಿ ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ ಮನೋವೈದ್ಯಕೀಯ ವಿಭಾಗ ಇದ್ದೇ ಇರುತ್ತದೆ. ಕೆಲವು ತಾಲೂಕು ಕೇಂದ್ರಗಳಲ್ಲಿಯೂ ಈಗ ಮನೋವೈದ್ಯರು ಲಭ್ಯರಿದ್ದಾರೆ. ಈಗ ಎಲ್ಲೆಡೆ ಮಾನಸಿಕ ರೋಗಗಳ ಬಗ್ಗೆ ಮಾಹಿತಿ ಕೂಡ ಲಭ್ಯವಿದೆ.

ಪ್ರಶ್ನೆ: ನಾವು ಮಾನಸಿಕ ಖಾಯಿಲೆ ಹೊಂದಿದ ಜನರಿಗೆ ಬೆಂಬಲವನ್ನು ಯಾವ ರೀತಿಯಲ್ಲಿ ನೀಡಬಹುದು?

 • ಈ ವಿಷಯದಲ್ಲಿ ಮನೋವೈದ್ಯರ ಪಾತ್ರ ಮುಖ್ಯ. ಅಲ್ಪಮಟ್ಟದ ಮಾನಸಿಕ ಸಮಸ್ಯೆ ಇರುವವರು ದೈಹಿಕ ರೋಗಲಕ್ಷಣಗಳಿಂದಾಗಿಯೇ (ತಲೆನೋವು, ಸುಸ್ತು, ಆಯಾಸ, ನಿದ್ರಾಹೀನತೆ, ಕೆಲಸದಲ್ಲಿ ಏಕಾಗ್ರತೆಯ ಕೊರತೆ, ಉತ್ಸಾಹದ ಕೊರತೆ) ವೈದ್ಯರ ಬಳಿ ಹೋಗುತ್ತಾರೆ. ಎಲ್ಲ ಪರೀಕ್ಷೆಗಳ ಫಲಿತಾಂಶಗಳೂ ಸಹಜವಾಗೇ ಇದ್ದಾಗ ಇದು ಮನಸ್ಸಿಗೆ ಸಂಬಂಧಿಸಿದ ಖಾಯಿಲೆಯೆಂದು ಅವರಿಗೆ ತಿಳಿಸಬೇಕು.
 • ಡಾಕ್ಟರ್ ಹೇಳಿದ್ದನ್ನು ಕುಟುಂಬದ ಇತರರು ಬೆಂಬಲಿಸಬೇಕು. ’ನಮಗೆ ಹುಚ್ಚಿಲ್ಲ, ನಮಗೆ ಮನೋವೈದ್ಯರ ಅಗತ್ಯ ಇಲ್ಲ’ ಎಂದು ತಿರಸ್ಕಾರ ಮಾಡಬಾರದು. 
 • ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸುವ ಸ್ಥಾನದಲ್ಲಿರುತ್ತಾರೆ. ಮಕ್ಕಳಿಗೇನಾದರೂ ತೊಂದರೆಯಿದ್ದಲ್ಲಿ ಪಾಲಕರಿಗೆ ತಿಳಿಹೇಳಿ ಮನೋವೈದ್ಯರನ್ನು ಕಾಣುವಂತೆ ಅವರು ಒಪ್ಪಿಸಬೇಕು.
 • ಸ್ನೇಹಿತರು, ಸಹೋದ್ಯೋಗಿಗಳು, ಹೀಗೆ ಯಾರೇ ಆದರೂ ಈ ಕೆಲಸ ಮಾಡಬಹುದು.

ಪ್ರಶ್ನೆ: ಮನೋರೋಗ ಇದ್ದವರು ಸಹಜ ಬದುಕು ನಡೆಸಲು ಸಾಧ್ಯವೇ?

ವ್ಯಕ್ತಿಯನ್ನು ಪ್ರೀತಿ ವಿಶ್ವಾಸಗಳಿಂದ ನೋಡಿಕೊಂಡು, ಅವರು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಟ್ಟರೆ ಖಾಯಿಲೆ ಬೇಗ ವಾಸಿಯಾಗುತ್ತದೆ.

ಮನೋರೋಗ ಗುಣವಾದ ನಂತರ ಮದುವೆ ಆಗಲು, ಮಕ್ಕಳನ್ನು ಪಡೆಯಲು, ಕೆಲಸ ಮಾಡಲು ಯಾವುದೇ ಅಡ್ಡಿ ಇಲ್ಲ. ಸಮಸ್ಯೆ ಇದ್ದ ಅನೇಕ ವ್ಯಕ್ತಿಗಳು ವಿಜ್ಞಾನಿಗಳಾಗಿದ್ದಾರೆ, ವೈದ್ಯರಾಗಿದ್ದಾರೆ, ಶಿಕ್ಷಕರಾಗಿದ್ದಾರೆ, ಉದ್ಯಮಿಗಳಾಗಿದ್ದಾರೆ. ನಿಮ್ಮ ಮನಸ್ಸು ಚೆನ್ನಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. 

Related Stories

No stories found.