ಚಿಕಿತ್ಸೆಗೆ ಅಷ್ಟೊಂದು ಹಣವ್ಯಯಿಸುವುದು ಸೂಕ್ತವೇ?

ಚಿಕಿತ್ಸೆ ದುಬಾರಿಯಾಗಿದ್ದು ಯಾವುದೇ ಭರವಸೆಯನ್ನು ನೀಡುವುದಿಲ್ಲ; ಆದ್ದರಿಂದ ಯಾಕೆ ಖರ್ಚು ಮಾಡಬೇಕು?

ಚಿಕಿತ್ಸೆಯಲ್ಲಿ, ಮುಖ್ಯವಾಗಿ ವಾಕ್ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯು ವ್ಯಕ್ತಿಗೆ ಆತ/ಆಕೆಯ ಯೋಚನೆಗಳು, ಭಾವನೆಗಳು ಮತ್ತು ನಡವಳಿಕೆ ಹಾಗೂ ಅವುಗಳಿಗೆ ಕಾರಣವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಒಮ್ಮೆ ವ್ಯಕ್ತಿಯು ತನ್ನ ಯೋಚನೆ ಮತ್ತು ಭಾವನೆಗಳನ್ನು ಅರಿತುಕೊಂಡ ಮೇಲೆ ಚಿಕಿತ್ಸಕರು ಅವರಿಗೆ ತಮ್ಮ ಭಾವನಾತ್ಮಕ ವಿಷಯಗಳನ್ನು ಸರಿಯಾಗಿ ನಿರ್ವಹಿಸುವ ಕೌಶಲ್ಯಗಳನ್ನು ಕಲಿಸಿಕೊಡುತ್ತಾರೆ.

ಹೆಚ್ಚಿನ ಚಿಕಿತ್ಸೆಗಳು ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸುತ್ತವೆ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುತ್ತವೆ. ಇವು ವ್ಯಕ್ತಿಯ ಸಮಸ್ಯೆಗೆ ಕಾರಣವಾಗುವ ಆಂತರಿಕ, ಭಾವನಾತ್ಮಕ ವಿಷಯಗಳನ್ನು ನಿರ್ವಹಿಸುತ್ತವೆ. ಅವುಗಳ ಪ್ರಗತಿ ಅಳೆಯಲು ಸುಲಭವಾಗುವಂತೆ ಈ ಗುರಿಯನ್ನು ಚಿಕ್ಕ ಚಿಕ್ಕ ಉದ್ದೇಶಗಳಾಗಿ ವಿಭಜಿಸಲಾಗುತ್ತದೆ. ಚಿಕಿತ್ಸಕರು ರೋಗಿಗಳಿಗೆ ಅವರ ಯೋಚನಾ ಲಹರಿ ಬದಲಾಯಿಸಿಕೊಂಡು ಈ ಗುರಿಗಳನ್ನು ಮುಟ್ಟಲು ಸಹಾಯ ಮಾಡುತ್ತಾರೆ.

ಹಲವಾರು ಪ್ರಯೋಜನಗಳ ಹೊರತಾಗಿಯೂ ಜನರು ಇಂತಹ ಚಿಕಿತ್ಸೆಗಳು ದುಬಾರಿಯೆಂಬ ತಪ್ಪು ಕಲ್ಪನೆಯಿಂದ ಇವುಗಳ ಪ್ರಯೋಜನ ಪಡೆಯಲು ಹಿಂಜರಿಯುತ್ತಾರೆ. ಈ ನಿಟ್ಟಿನಲ್ಲಿ ಜನರು ತಿಳಿಸುವ ಕೆಲವು ಸಾಮಾನ್ಯ ಸಂಗತಿಗಳೆಂದರೆ:

  • ನಾನು ಚಿಕಿತ್ಸಕರ ವೆಚ್ಚ ಭರಿಸಲು ಸಾಧ್ಯವಿಲ್ಲ.
  • ನನ್ನ ಮಾತುಗಳನ್ನು ಆಲಿಸಲು ಇನ್ನೊಬ್ಬ ವ್ಯಕ್ತಿಗೆ ಏಕೆ ಅಷ್ಟೊಂದು ಹಣ ನೀಡಬೇಕು?
  • ಒಬ್ಬರ ಜೊತೆ ಮಾತನಾಡುವ ಸಲುವಾಗಿ ಅಷ್ಟೊಂದು ಹಣ ನೀಡುವ ಬದಲು ನಾನು ನನ್ನ ಸಮಸ್ಯೆಯನ್ನು ಅನುಭವಿಸುತ್ತೇನೆ. ಇತ್ಯಾದಿ.

ಅಲ್ಲದೇ, ಚಿಕಿತ್ಸೆಯ ನಂತರ ನೀವು ಬದಲಾಗಬಲ್ಲಿರಿ ಎಂಬ ಬಗ್ಗೆ ಚಿಕಿತ್ಸಕರು ಯಾವುದೇ ಭರವಸೆ ನೀಡುವುದಿಲ್ಲ. ಚಿಕಿತ್ಸೆಯು ರೋಗಿ ಮತ್ತು ಚಿಕಿತ್ಸಕರ ಸಹ ಪ್ರಯತ್ನ. ಕೆಲವೊಮ್ಮೆ ಅವರಿಬ್ಬರ ನಡುವೆ ಉತ್ತಮ ಸಂಬಂಧವಿರುವುದಿಲ್ಲ. ಇದರಿಂದ ಕೆಲವು ಕೇಸುಗಳ ಪ್ರಗತಿಯು ನಿಧಾನವಾಗಬಹುದು, ಪ್ರಗತಿಯೇ ಸಾಧ್ಯವಾಗದಿರಬಹುದು ಅಥವಾ ರೋಗಿಯು ಇನ್ನೊಬ್ಬ ಚಿಕಿತ್ಸಕನನ್ನು ಹುಡುಕಬಹುದು. ಕೆಲವೊಮ್ಮೆ ರೋಗಿಯು ಹಲವಾರು ಚಿಕಿತ್ಸಕರನ್ನು ಭೇಟಿ ಮಾಡಿ ತಮಗೆ ಸರಿಹೊಂದುವ ಚಿಕಿತ್ಸಕರನ್ನು ಪಡೆಯಬೇಕಾಗುತ್ತದೆ. ಈ ಕಾರಣಗಳನ್ನು ನೋಡಿದರೆ ಚಿಕಿತ್ಸೆಯು ಪ್ರಯೋಜನಕಾರಿಯೆಂಬ ಭರವಸೆಯೂ ಇಲ್ಲದೇ ಏಕೆ ಆಪ್ತಸಮಾಲೋಚನೆಗೆ ಅಷ್ಟೊಂದು ಹಣ ನೀಡಬೇಕು? ಎಂದೆನಿಸುತ್ತದೆ.

ಆದರೆ, ಚಿಕಿತ್ಸೆಯನ್ನು ಪಡೆಯದ ರೋಗಿಗಳಿಗಿಂತ ಚಿಕಿತ್ಸೆಯನ್ನು ಪಡೆದ ಹೆಚ್ಚಿನ ಜನರು ಸುಧಾರಿಸಿದ್ದಾರೆ ಎಂಬ ಅಧ್ಯಯನವು ಇದಕ್ಕೆ ಉತ್ತರ ನೀಡುತ್ತದೆ. ಇದು ದುಬಾರಿಯೆನಿದರೂ ರೋಗಿಯು ಏಕೆ ಚಿಕಿತ್ಸೆಯನ್ನು ಪಡೆಯಬೇಕು ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ:

  • ಪರಿಣಾಮಕಾರಿತ್ವ: ಕೆಲವು ಕೇಸುಗಳಲ್ಲಿ, ದೀರ್ಘಕಾಲದ ಚಿಕಿತ್ಸೆಯು ಔಷಧಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ.
  • ಬೆಲೆ: ಚಿಕಿತ್ಸೆಗೆ ದಾಖಲಾಗುವುದು ಅತ್ಯಂತ ದುಬಾರಿಯೆಂಬ ಸಾಮಾನ್ಯ ನಂಬಿಕೆಯಿದೆ. ಇದು ಸಂಪೂರ್ಣ ಸರಿಯಲ್ಲ. ಹೆಚ್ಚಿನ ಚಿಕಿತ್ಸಕರು ಅತ್ಯಂತ ಸೂಕ್ತವಾದ ದರ ವಿಧಿಸುತ್ತಾರೆ. ಕೆಲವರು ರೋಗಿಯ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿ ಬೇರೆ ಬೇರೆ ದರ್ಜೆಯ ದರಗಳನ್ನು ವಿಧಿಸುತ್ತಾರೆ.
  • ಪ್ರಾಯೋಗಿಕ ಸೆಷನ್ನುಗಳು: ಹೆಚ್ಚಿನ ಚಿಕಿತ್ಸಕರು ಉಚಿತ ಪ್ರಾಯೋಗಿಕ ಸೆಷನ್ನುಗಳನ್ನು ನಡೆಸುತ್ತಾರೆ. ಇದರಿಂದ ರೋಗಿಗಳು ತಮಗೆ ಆ ಚಿಕಿತ್ಸಕರು ಸರಿ ಹೊಂದುತ್ತಾರೆಯೇ ಎಂದು ತಿಳಿಯಬಹುದು. ಒಂದೊಮ್ಮೆ ಸರಿ ಹೊಂದದಿದ್ದರೂ ರೋಗಿಗೆ ಯಾವ ನಷ್ಟವೂ ಇಲ್ಲ.
  • ಗಂಭೀರ ದೈಹಿಕ/ಮಾನಸಿಕ ಖಾಯಿಲೆಯ ನಿಯಂತ್ರಣ: ಜನರಲ್ಲಿ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿರುವುದು ನಮಗೆಲ್ಲಾ ತಿಳಿದಿದೆ. ಅತಿಯಾದ ಒತ್ತಡವು ಗಂಭೀರವಾದ ದೈಹಿಕ ಖಾಯಿಲೆಗಳಿಗೂ ಎಡೆ ಮಾಡಬಹುದು. ಅಂತಹ ಚಿಕಿತ್ಸೆಗಳ ವೆಚ್ಚವು ಅತ್ಯಂತ ದುಬಾರಿಯಾಗಿರುತ್ತದೆ. ಆದ್ದರಿಂದ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ.
  • ಜೀವನಮಟ್ಟ: ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವರ ಜೀವನ ಮಟ್ಟವು ಅತ್ಯಂತ ಕನಿಷ್ಟವಾಗಿರುತ್ತದೆ: ಅವರು ತಮ್ಮಲ್ಲಿ ಹೆಚ್ಚಿದ ಒತ್ತಡದಿಂದಾಗಿ  ಉದ್ಯೋಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ದಕ್ಷತೆಯು ಕುಸಿಯುತ್ತದೆ. ಅವರಲ್ಲಿ ಬದಲಾಗುತ್ತಿರುವ ಮೂಡಿನಿಂದಾಗಿ ಅವರ ಸಾಂಗತ್ಯವನ್ನು ಯಾರೂ ಬಯಸುವುದಿಲ್ಲ. ಜನರು ಅವರನ್ನು ದೂರವಿಡುವುದರಿಂದ ಅವರ ಒತ್ತಡ ಇನ್ನಷ್ಟು ಹೆಚ್ಚುತ್ತದೆ.

ಈ ಅಂಶಗಳನ್ನು ಪರಿಗಣಿಸಿದಾಗ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯು ಪ್ರಯೋಜನಕಾರಿಯಾಗಿದ್ದು, ಬೆಲೆಗೆತಕ್ಕ ಪ್ರತಿಫಲ ನೀಡುತ್ತದೆ ಎಂಬುದನ್ನು ತಿಳಿಯಬಹುದು. ಇಲ್ಲಿ ಮುಖ್ಯವಾಗಿ, ವ್ಯಕ್ತಿಗೆ ತಾನು ಸುಧಾರಿಸಬೇಕೆಂಬ ಬಯಕೆಯಿರಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಹಣದ ಮೌಲ್ಯದ ಪರಿಗಣನೆ ಬೇರೆಯಾಗಿರುವುದರಿಂದ ಮೇಲೆ ಹೇಳಿರುವ ಪ್ರಯೋಜನಗಳನ್ನು ಹಣದ ದೃಷ್ಟಿಯಿಂದಲೇ ನೋಡುವುದು ಸಾಧ್ಯವಿಲ್ಲ. ಆದ್ದರಿಂದ ಚಿಕಿತ್ಸೆಯು ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳ ಸುಧಾರಣೆಗೆ ನೆರವಾಗಿದೆ ಎನ್ನಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org