ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ
ನಿಮ್ಮ ಕೈಬೆರಳಿಗೆ ಗಾಯವಾದಾಗ ಏನು ಮಾಡುತ್ತೀರಿ? ಬೆರಳನ್ನು ನೀರಿನಿಂದ ಸ್ವಚ್ಛಗೊಳಿಸಿ ಅದಕ್ಕೆ ಮುಲಾಮು ಹಚ್ಚಿ ,ಸೋಂಕು ಹರಡದಂತೆ ಬ್ಯಾಂಡ್ ಏಡ್ ಕಟ್ಟುತ್ತೀರಿ. ಇದನ್ನು ಪ್ರಥಮ ಚಿಕಿತ್ಸೆ ಎನ್ನುವರು. ಹಾಗೆಯೇ, ಮನಸ್ಸಿನ ಸಮಸ್ಯೆಗಳಿಗೂ ಪ್ರಥಮ ಚಿಕಿತ್ಸೆ ಇದೆ. ಇದನ್ನೇ ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ ಎನ್ನುತ್ತೇವೆ.
ವ್ಯಕ್ತಿಯ ಮಾನಸಿಕ ಸಮಸ್ಯೆಯನ್ನು ಪತ್ತೆ ಮಾಡಿ ಅವರಿಗೆ ಒದಗಿಸುವ ಸಹಾಯವನ್ನು ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ ಎನ್ನುತ್ತೇವೆ. ಮಾನಸಿಕ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆ ಮಾಡಿ ಮಧ್ಯಸ್ಥಿಕೆ ವಹಿಸಿದರೆ ಬೇಗನೆ ಪರಿಹಾರ ಕಂಡುಕೊಂಡು ಸಮಸ್ಯೆಯನ್ನು ಬಗೆಹರಿಸಬಹುದು.
ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ ಯಾರಿಗೆ ಅಗತ್ಯವಿದೆ ?
ವ್ಯಕ್ತಿಗೆ ಭಾವನಾತ್ಮಕ ತೊಂದರೆಯಿದ್ದರೆ ಅದಕ್ಕೆ ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ ಅಗತ್ಯವಿರುತ್ತದೆ. ಉದಾಹರಣೆಗೆ, ಸಂಬಂಧಗಳಲ್ಲಿ ಬಿರುಕು ಮೂಡಿದಾಗ, ಹೊಸ ಸ್ಥಳಕ್ಕೆ ವಲಸೆ ಹೋದಾಗ, ಪ್ರೀತಿಪಾತ್ರರನ್ನು ಕಳೆದುಕೊಂಡಾಗ, ಕೆಲಸದಿಂದ ವಜಾ ಆದಾಗ, ಹಣಕಾಸಿನ ತೊಂದರೆ, ಖಿನ್ನತೆ, ಆತಂಕ, ಇತ್ಯಾದಿ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಭಾವನಾತ್ಮಕವಾಗಿ ಕುಸಿಯಬಹುದು. ಈ ರೀತಿ ತೊಂದರೆಯನ್ನು ತಡೆಗಟ್ಟಲು ಸೂಕ್ತ ಸಮಯದಲ್ಲಿ ಸಹಾಯ ಪಡೆಯಬೇಕು.
ಸೂಚನೆ :ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ ಎಂದರೆ, ಮಾನಸಿಕ ಕಾಯಿಲೆಗೆ ಚಿಕಿತ್ಸೆ , ಪರಿಹಾರ ನೀಡುವುದು , ಆಪ್ತ ಸಮಾಲೋಚನೆ ಅಥವಾ ಥೆರಪಿ ಪ್ರಕ್ರಿಯೆಯನ್ನು ಒಳಗೊಂಡಿರುವುದಿಲ್ಲ.
ಮಾನಸಿಕ ಮತ್ತು ಭಾವನಾತ್ಮಕ ತೊಂದರೆ ಇದ್ದಲ್ಲಿ ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಭಾವನೆಯಲ್ಲಿ ಬದಲಾವಣೆ ಇರುತ್ತದೆ. ಅವು ಹೀಗೆವೆ:
- ಅಳುವುದು, ಚಿಂತೆ ಮತ್ತು ಆತಂಕ
- ಕಿರಿಕಿರಿಯಾಗುವುದು ಮತ್ತು ಆಕ್ರಮಣಕಾರಿ ಸ್ವಭಾವ
- ಗುಂಪಿನಿಂದ ದೂರ ಉಳಿಯುವುದು
- ಶಾಲೆ/ ಕಾಲೇಜ್/ ಕಛೇರಿಗೆ ಹೋಗಲು ಮನಸ್ಸಾಗದೇ ಇರುವುದು
- ಸ್ವಯಂ ದೂಷಣೆ
- ಅಪರಾಧ ಪ್ರಜ್ಞೆ
- ಜೀವನದ ಮೇಲೆ ನಿರಾಶೆ
ಕೆಲವು ವೇಳೆ ವ್ಯಕ್ತಿಗೆ ಮಾನಸಿಕ ಆರೋಗ್ಯ ತಜ್ಞರ ಸಹಾಯ ಬೇಕಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇವರಿಗೆ ನಮ್ಮ ಸಹಾನುಭೂತಿ ಮತ್ತು ನೆರವಿನ ಅಗತ್ಯವಿರುತ್ತದೆ.
ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ ಹೇಗೆ ನೀಡಬಹುದು?
ನಿಮ್ಮ ಆತ್ಮೀಯರು ಈ ರೀತಿಯ ತೊಂದರೆಗೊಳಗಾದಾಗ ಅವರನ್ನು ಭೇಟಿ ಮಾಡಿ ಸಹಾನುಭೂತಿಯಿಂದ ಮಾತನಾಡಿಸಿ. ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ ಮತ್ತು ಈ ವಿಷಯವನ್ನು ಮತ್ತೊಬ್ಬರೊಂದಿಗೆ ಚರ್ಚಿಸಬೇಡಿ.
- ಅವರ ಆಲೋಚನೆಯನ್ನು ನಿಂದಿಸಬೇಡಿ ( ಉದಾಹರಣೆಗೆ ಆತ್ಮಹತ್ಯಾ ಭಾವನೆ)
- ಭಾವನೆಗಳನ್ನು ಗೌರವಿಸಿ
- ಪರಿಹಾರ ಸೂಚಿಸಬೇಡಿ, ಅವರೇ ಪರಿಹಾರವನ್ನು ಹುಡುಕಲು ಸಹಾಯ ಮಾಡಿ
- ಸ್ನೇಹಿತರ ಅಥವಾ ಕುಟುಂಬದವರ ಬೆಂಬಲ ಇದೆಯೇ ವಿಚಾರಿಸಿ
- ನಿಮ್ಮೊಂದಿಗೆ ಸಮಸ್ಯೆಯನ್ನು ಹೇಳಿಕೊಳ್ಳಲು ಬಲವಂತ ಮಾಡಬೇಡಿ. ಅವರ ಇತಿಮಿತಿಯನ್ನು ಗೌರವಿಸಿ
- ಒಂದು ವೇಳೆ ವ್ಯಕ್ತಿಯು ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿದ್ದರೆ, ಭಾವನಾತ್ಮಕವಾಗಿ ಕುಸಿದಿದ್ದರೆ ಅಥವಾ ಸಮಸ್ಯೆ ತೀವ್ರವಾಗಿದೆ ಎಂದನಿಸಿದರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಸಲಹೆ ನೀಡಿ.
ಮಾಹಿತಿ ಕೊಡುಗೆ : ಡಾ. ಕೆ. ಎಸ್. ಮೀನಾ, ಸಹ ಪ್ರಾಧ್ಯಾಪಕರು, ಮಾನಸಿಕ ಆರೋಗ್ಯ ಶಿಕ್ಷಣ ಇಲಾಖೆ