ಮಾನಸಿಕ ಅನಾರೋಗ್ಯ: ಕಲ್ಪನೆ ಮತ್ತು ವಾಸ್ತವಗಳು
ಕಲ್ಪನೆ: ಮಾನಸಿಕ ಆರೋಗ್ಯ ಎಂಬುದೇ ಇಲ್ಲ. ಇದು ಜನರ ನಕಲಿ ಸೃಷ್ಟಿ.
ವಾಸ್ತವ: ಮಾನಸಿಕ ಆರೋಗ್ಯವಿದೆ ಎಂಬುದು ಸತ್ಯ. ನಿಮ್ಮ ದೇಹದ ಇತರ ಅಂಗಗಳು ಎದುರಿಸುವ ಆರೋಗ್ಯ ಸಮಸ್ಯೆಯಂತೆ ನಿಮ್ಮ ಮಿದುಳು ಕೂಡ ಒಂದು ಅಥವಾ ಅದಕ್ಕಿಂತ ಹೆಚ್ಚು ಮಾನಸಿಕ ಖಾಯಿಲೆಗಳಿಂದ ಬಳಲಬಹುದು. ಇದು ನಿಮ್ಮ ಸಹಜವಾದ ಬದುಕಿನ ಮೇಲೆ ಪರಿಣಾಮ ಬೀರುತ್ತದೆ.
ನಾನಾ ಬಗೆಯ ಮಾನಸಿಕ ಅನಾರೋಗ್ಯಗಳಿವೆ ಮತ್ತು ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಮಾನಸಿಕ ಖಾಯಿಲೆಗಳು ನಿಜವಾದವು ಎಂಬುವುದನ್ನು ನಾವು ಸ್ವೀಕರಿಸಬೇಕು ಮತ್ತು ವೈದ್ಯರ ಸಹಾಯದೊಂದಿಗೆ ಇದನ್ನು ಬಗೆಹರಿಸಿಕೊಳ್ಳುವ ಅಗತ್ಯವಿದೆ.
ಕಲ್ಪನೆ: ನಾನು ಯಾವತ್ತೂ ಮಾನಸಿಕ ಅನಾರೋಗ್ಯ ಹೊಂದಿಲ್ಲ/ಇದು ದುರ್ಬಲ ಜನರನ್ನು ಮಾತ್ರ ಕಾಡುತ್ತದೆ.
ವಾಸ್ತವ: 5ರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಾರೆ. ಇದು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾದ ಮಾನಸಿಕ ಅನಾರೋಗ್ಯಕ್ಕೆ ಕಾರಣಗಳು ಮೊದಲಿಗಿಂತ ಹೆಚ್ಚುತ್ತಿವೆ. ಎಲ್ಲಾ ವಯೋಮಾನದ, ಸಮುದಾಯದ, ಆರ್ಥಿಕ ಸ್ಥರದ ಮತ್ತು ಸಂಪ್ರದಾಯದ ಜನರು ಮಾನಸಿಕ ಖಾಯಿಲೆಗಳಿಂದ ಬಳಲಬಹುದು. ನಾವು ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಮತ್ತು ಮಾನಸಿಕ ಖಾಯಿಲೆಯನ್ನು ತಡೆಗಟ್ಟುವ, ಚಿಕಿತ್ಸೆಗೊಳಪಡಿಸುವ, ಇದರೊಂದಿಗೆ ಸಹಕರಿಸುವ ಮಾರ್ಗಗಳನ್ನು ಅರ್ಥ ಮಾಡಿಕೊಳ್ಳವುದು ಅವಶ್ಯಕ.
ಕಲ್ಪನೆ: ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆಯಿಲ್ಲ
ವಾಸ್ತವ: ಹೆಚ್ಚಿನ ಮಾನಸಿಕ ಖಾಯಿಲೆಗಳನ್ನು ತಪಾಸಣೆ ಮಾಡಿ ಸೂಕ್ತವಾದ ಚಿಕಿತ್ಸೆ ನೀಡುತ್ತಾರೆ. ವ್ಯಕ್ತಿಯು ತನ್ನ ಕುಟುಂಬದವರ ಹಾಗೂ ಸ್ನೇಹಿತರ ಸಹಾಯ ಮತ್ತು ಬೆಂಬಲವಿದ್ದರೆ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ. ಖಾಯಿಲೆಯ ಗುಣಲಕ್ಷಣಗಳಿಗೆ ಆದಷ್ಟು ಬೇಗ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ತಮ್ಮ ಜೀವನವನ್ನು ನಿಭಾಯಿಸಬಹುದು.
ಕಲ್ಪನೆ: ಮಾನಸಿಕ ಆರೋಗ್ಯ ಎಂಬುದು ದುರ್ಬಲರಾಗಿರುವ ವ್ಯಕ್ತಿಗಳಲ್ಲಿ ಮಾತ್ರ ಕಾಣಿಸುತ್ತದೆ.
ವಾಸ್ತವ: ಮಾನಸಿಕ ಆರೋಗ್ಯದ ಸಮಸ್ಯೆಗಳು ವ್ಯಕ್ತಿಯ ಮಾನಸಿಕ ಶಕ್ತಿಯ ಮೇಲೆ ಆಧರಿಸುವುದಿಲ್ಲ. ಇದು ಅವರ ವ್ಯಕ್ತಿತ್ವಕ್ಕೂ ಸಂಬಂಧಿಸಿದ್ದಲ್ಲ. ಸಾಮಾಜಿಕ, ವಂಶವಾಹಿ, ಜೈವಿಕ, ಪರಿಸರ ಮತ್ತು ಮಾನಸಿಕ ಕಾರಣಗಳು ಯಾವುದಾದರೊಂದರಿಂದ ಮಾನಸಿಕ ಅನಾರೋಗ್ಯ ಉಂಟಾಗಬಹುದು.
ಕಲ್ಪನೆ: ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಭಯ ಹುಟ್ಟುಹಾಕುತ್ತಾರೆ. ಅವರು ಸದಾ ಇತರರಿಗೆ ಹಿಂಸೆ ಮತ್ತು ಹಾನಿಯುಂಟು ಮಾಡುತ್ತಾರೆ.
ವಾಸ್ತವ: ಮಾನಸಿಕ ಅನಾರೋಗ್ಯ ಹೊಂದಿರುವ ವ್ಯಕ್ತಿಗಳು ಸದಾ ಹಿಂಸೆ ಮಾಡುವುದಿಲ್ಲ ಮತ್ತು ಖಂಡಿತವಾಗಿಯೂ ಅವರ ಮಾನಸಿಕ ಅನಾರೋಗ್ಯದಿಂದಲ್ಲ. ಅವರಿಗೆ ನೀಡಿದ ಚಿಕಿತ್ಸೆ ಫಲಿಸದಿದ್ದರೆ ಹೆಚ್ಚಿನ ವೇಳೆ ಅವರು ಎಲ್ಲರಂತೆಯೇ ಅವರು ಹಿಂಸೆ ಪ್ರವೃತ್ತಿ ಹೊಂದಿರುತ್ತಾರೆ. ನಿಜ ಸಂಗತಿಯೆಂದರೆ ಅವರು ತಮಗೆ ಹಾನಿ ಮಾಡಿಕೊಳ್ಳುವ ಸಂಭಾವನೆ ಹೆಚ್ಚು. ಅದಕ್ಕಿಂತ ಹೆಚ್ಚಾಗಿ ಸಾಮಾನ್ಯರಿಂದ ಹಾನಿಗೊಳಗಾಗುತ್ತಾರೆ. ನಮ್ಮೊಂದಿಗಿರುವ ಮಾನಸಿಕ ಅಸ್ವಸ್ಥ ಜನರು ನಮ್ಮನ್ನು ಭಯಗೊಳಿಸುತ್ತಾರೆ ಎಂಬುದು ತಪ್ಪು ಕಲ್ಪನೆ.
ಕಲ್ಪನೆ: ಮಾನಸಿಕ ಅನಾರೋಗ್ಯ ಹೊಂದಿರುವವರನ್ನು ಕಡ್ಡಾಯವಾಗಿ ಆಸ್ಪತ್ರೆಗೆ ಸೇರಿಸಬೇಕು.
ವಾಸ್ತವ: ಮಾನಸಿಕ ಅನಾರೋಗ್ಯ ಹೊಂದಿರುವ ಹೆಚ್ಚಿನ ಮಂದಿಯನ್ನು ಆಸ್ಪತ್ರೆಗೆ ಸೇರಿಸಬೇಕಿಲ್ಲ. ಕೆಲವು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆದಾಗ್ಯೂ ಅವರನ್ನು ಶಾಶ್ವತವಾಗಿ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಆರೈಕೆದಾರರು ಅಥವಾ ಪ್ರೀತಿಪಾತ್ರರು ವ್ಯಕ್ತಿಯ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮನೆಯಲ್ಲಿಯೂ ಸಹ ಆರಾಮದಾಯಕ ವಾತಾವರಣವಿದ್ದರೆ ಅವರು ಬೇಗ ಚೇತರಿಸಿಕೊಳ್ಳುತ್ತಾರೆ.
ಕಲ್ಪನೆ: ದುರ್ಬಲ ಮನಸ್ಥಿತಿಯಿದ್ದರೆ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ನೀವು ಪ್ರಬಲ ಮನಸ್ಥಿತಿ ಹೊಂದಿದ್ದರೆ ಯಾವುದೇ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.
ವಾಸ್ತವ: ಮಾನಸಿಕ ಖಾಯಿಲೆಗಳು ವ್ಯಕ್ತಿಯ ಮಾನಸಿಕ ಬಲದೊಂದಿಗೆ ಸಂಬಂಧ ಹೊಂದಿಲ್ಲ. ನಮ್ಮ ಮನಸ್ಸು, ಪರಿಸರ, ಜೈವಿಕ ಮತ್ತು ಮನೋವೈಜ್ಞಾನಿಕ ಅಂಶಗಳ ಮೇಲೆ ಅವಲಂಭಿಸಿರುತ್ತದೆ.
ಕಲ್ಪನೆ: ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳು ಅವರ ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಸುಲಭವಾಗಿ ಸಮಸ್ಯೆಯಿಂದ ಹೊರಬರಬಹುದು.
ವಾಸ್ತವ: ಮಾನಸಿಕ ಆರೋಗ್ಯ ಮಿದುಳಿಗೆ ಸಂಬಂಧ ಹೊಂದಿದೆ ಎಂಬುದು ವಾಸ್ತವ ಮತ್ತು ಇದಕ್ಕೆ ವೈದ್ಯರ ಸಲಹೆ ಪಡೆದು ನಿರ್ಧಿಷ್ಟ ಚಿಕಿತ್ಸೆ ಪಡೆಯಬೇಕು. ವ್ಯಕ್ತಿಯು ತಾನು ಖಾಯಿಲೆಯಿಂದ ಗುಣಹೊಂದಬೇಕು ಹಾಗೂ ಚಿಕಿತ್ಸೆ ಪಡೆಯಬೇಕು ಎಂದು ನಿರ್ಧರಿಸಿದರೆ ಸ್ವಲ್ಪ ಸಮಯದಲ್ಲೇ ಚೇತರಿಸಿಕೊಳ್ಳಬಹುದು. ಆದ್ದರಿಂದ ಮನಸನ್ನು ನಿಯಂತ್ರಿಸಿದರೆ ಮಾತ್ರ ಸಮಸ್ಯೆಯಿಂದ ಹೊರಬರಲು ಸಾಧ್ಯವಿಲ್ಲ.
ಕಲ್ಪನೆ: ಮಾನಸಿಕ ಅನಾರೋಗ್ಯ ಹೊಂದಿರುವವರು ಉದ್ಯೋಗ ನಿರ್ವಹಿಸಲು ಸಾಧ್ಯವಿಲ್ಲ.
ವಾಸ್ತವ: ವ್ಯಕ್ತಿಯು ತನ್ನ ಜೀವನವನ್ನು ಸ್ವಾವಲಂಬಿಯಾಗಿ ಜೀವಿಸಬಹುದು, ಆದರೆ ಇದು ಮಾನಸಿಕ ಅನಾರೋಗ್ಯದ ತೀವ್ರತೆಯ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮಾನಸಿಕ ಅನಾರೋಗ್ಯದಿಂದ ಚೇತರಿಸಿಕೊಂಡು ವ್ಯಕ್ತಿಯು ಉದ್ಯೋಗ ಪಡೆಯಬಹುದು ಅಥವಾ ಮುಂಚೆ ಮಾಡುತ್ತಿದ್ದ ಉದ್ಯೋಗವನ್ನು ಮುಂದುವರೆಸಬಹುದು.
ಕಲ್ಪನೆ: ಚಿಕಿತ್ಸೆ ಮತ್ತು ಸಲಹೆ ಮಾನಸಿಕ ಅನಾರೋಗ್ಯ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದಿಲ್ಲ. ಮಾತನಾಡುವುದರಿಂದ ಅವರ ಖಾಯಿಲೆ ಗುಣವಾಗುವುದಿಲ್ಲ.
ವಾಸ್ತವ: ಹೆಚ್ಚಿನ ಮಾನಸಿಕ ಖಾಯಿಲೆಗಳಿಗೆ ಸಲಹೆ ಮತ್ತು ಚಿಕಿತ್ಸೆ ಚೇತರಿಕೆಯ ಅವಿಭಾಜ್ಯ ಅಂಗ. ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯ ಚೇತರಿಕೆಗೆ ಚಿಕಿತ್ಸೆ ಅಥವಾ ಸಲಹೆ ಸಾಕಾಗುತ್ತದೆ. ಕೆಲವುದರಲ್ಲಿ ಸೂಚಿಸಿದ ಔಷಧವೂ ಅಗತ್ಯವಾಗುತ್ತದೆ. ವೈಜ್ಞಾನಿಕವಾಗಿ ನೀಡಿದ ಚಿಕಿತ್ಸೆ ಮತ್ತು ಸಲಹೆಗಳು ವ್ಯಕ್ತಿಯ ಚೇತರಿಕೆಗೆ ಸಹಕಾರಿ ಎಂಬುದು ಸಾಬೀತಾಗಿದೆ.
ಕಲ್ಪನೆ: ಮಾನಸಿಕ ಖಾಯಿಲೆಗಳನ್ನು ತಡೆಯಲು ಸಾಧ್ಯವಿಲ್ಲ.
ವಾಸ್ತವ: ಮೇಲೆ ತಿಳಿಸಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳು ಜೈವಿಕ, ಪರಿಸರ ಮತ್ತು ಮನೋವೈಜ್ಞಾನಿಕ ಕಾರಣಗಳಿಂದಾಗಿ ಕಾಣಿಸಿಕೊಳ್ಳುತ್ತವೆ. ನಾವಿದರಲ್ಲಿ ಕೆಲ ಅಂಶಗಳನ್ನು ನಿಯಂತ್ರಿಸಿದರೆ ಸಾಕಷ್ಟು ಮಾನಸಿಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಇದಕ್ಕೆ ಉದಾಹರಣೆಯೆಂದರೆ ಮಾದಕವಸ್ತು ಸೇವನೆ. ಸೂಕ್ತವಾದ ಬದುಕುವ ಪರಿಸರದೊಂದಿಗೆ ನಾವು ಹಲವು ಸಾಮಾನ್ಯ ಮಾನಸಿಕ ಖಾಯಿಲೆಗಳನ್ನು ತಡೆಗಟ್ಟಬಹುದು.
ಕಲ್ಪನೆ: ದೆವ್ವ ಅಥವಾ ಆತ್ಮ ದೇಹವನ್ನು ಸೇರಿಕೊಂಡಾಗ ವ್ಯಕ್ತಿಯು ಮಾನಸಿಕ ಅನಾರೋಗ್ಯದಿಂದ ಬಳಲುತ್ತಾರೆ.
ವಾಸ್ತವ: ನಮ್ಮತಲೆಯಿಂದ ತೆಗೆದು ಹಾಕಲೇ ಬೇಕಾದ ಹಳೆಯ ತಪ್ಪು ಕಲ್ಪನೆಯಿದು. ಮಾನಸಿಕ ಆರೋಗ್ಯ ಮಿದುಳಿಗೆ ಸಂಬಂಧಿಸಿದ್ದು, ಇದಕ್ಕೂ ಧರ್ಮಕ್ಕೂ ಅಥವಾ ಧಾರ್ಮಿಕ ನಂಬಿಕೆಗಳಿಗೂ ಯಾವುದೇ ಸಂಬಂಧವಿಲ್ಲ. ಇಂಥ ಕುರುಡು ನಂಬಿಕೆಗಳು ಮತ್ತು ಸುಳ್ಳುಗಳು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ ಮತ್ತು ಚೇತರಿಕೆಯ ಸಾಧ್ಯತೆಯನ್ನು ನಾಶ ಮಾಡುತ್ತವೆ.
ಕಲ್ಪನೆ: ನಿಮ್ಮೆಲ್ಲ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀವು ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.
ವಾಸ್ತವ: ಮನಃಶಾಸ್ತ್ರಜ್ಞರು ಮಾನಸಿಕ ಆರೋಗ್ಯ ತಜ್ಞರು. ನೀವು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಅವರನ್ನು ಸಂಪರ್ಕಿಸಬಹುದು. ಕೆಲವು ಸಾಮಾನ್ಯವಾದ ಮತ್ತು ಅತಿಯಲ್ಲದ ಖಾಯಿಲೆಗಳಿಗೆ ಇತರ ವೃತ್ತಿಪರರಾದ ವೈದ್ಯಕೀಯ ಮನಃಶಾಸ್ತ್ರಜ್ಞರು, ಸಲಹೆಗಾರರು, ಥೆರೆಪಿಸ್ಟ್‌ಗಳಿಂದ ಚಿಕಿತ್ಸೆ ಪಡೆಯಬಹುದು. ಈ ತಜ್ಞರು ಇಂಥ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆದಿರುತ್ತಾರೆ. ಇನ್ನು ತೀವ್ರವಾದ ಖಾಯಿಲೆಗಳಿಗೆ ಮನೋವೈದ್ಯರು, ಮನೋವಿಜ್ಞಾನಿಗಳು ಮತ್ತು ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸುತ್ತಾರೆ.
ಕಲ್ಪನೆ: ಮಾನಸಿಕ ಅನಾರೋಗ್ಯ ಹೊಂದಿರುವ ವ್ಯಕ್ತಿಗೆ ನೀವು ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ.
ವಾಸ್ತವ: ನೀವು ಆರೈಕೆದಾರರಾಗಿ ನಿಮ್ಮ ನೆಚ್ಚಿನವರ ಮಾನಸಿಕ ಆರೋಗ್ಯ ಚೇತರಿಕೆಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಬಹುದು. ಮಾನಸಿಕ ಅಸ್ವಸ್ಥ ವ್ಯಕ್ತಿಯ ಚೇತರಿಕೆಯಲ್ಲಿ ಅತ್ಯಗತ್ಯತೆ ಎಂದರೆ ಬೆಂಬಲ ಮತ್ತು ಪ್ರೀತಿ ಹಾಗೂ ಮಮತೆಯಿಂದ ತುಂಬಿದ ವಾತಾವರಣ. ನೀವು ನಿಮ್ಮ ನೆಚ್ಚಿನವರಿಗೆ ಇಂಥ ವಾತಾವರಣ ಸೃಷ್ಟಿಸಬಹುದು. ನೀವು ಅವರ ಬೆಂಬಲಕ್ಕೆ ಇದ್ದೀರಿ ಎಂದು ಅವರಿಗೆ ತಿಳಿಸುವ ಮೂಲಕ, ಸಾಮಾನ್ಯ ವ್ಯಕ್ತಿಗಳಂತೆ ಅವರನ್ನು ಪರಿಪಾಲನೆ ಮಾಡುವ ಮೂಲಕ ನೀವು ಅವರ ಭಾವನೆಯಲ್ಲಿ ಬದಲಾವಣೆ ತರಬಹುದು. ಅವರು ಸುರಕ್ಷಿತವಾಗಿದ್ದಾರೆ ಎಂದು ಧೈರ್ಯನೀಡಿ ಚೇತರಿಕೆಯತ್ತ ತಿರುಗಿಸಬಹುದು. ನೀವು ಹೀಗೆ ಮಾಡಲು ಮಾನಸಿಕ ಆರೋಗ್ಯದ ಕುರಿತು ಸರಿಯಾದ ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯ.