ಮಾನಸಿಕ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು?

ದೈಹಿಕ ಅನಾರೋಗ್ಯ ಚಿಕಿತ್ಸೆಗೆ ವೈದ್ಯರಿರುವಂತೆ ಮಾನಸಿಕ ಸಮಸ್ಯೆಗಳಿಗೆ ವಿಶೇಷ ತಜ್ಞರಿರುತ್ತಾರೆ.

ನಿಮಗೆ ಹಲ್ಲುನೋವು ಬಂದಾಗ, ನೀವು ಚಿಕಿತ್ಸೆಗಾಗಿ ದಂತವೈದ್ಯರಲ್ಲಿ ಹೋಗುತ್ತೀರಿ; ಸಂಧಿ ನೋವು ಉಂಟಾದಾಗ, ಕೀಲು ಮತ್ತು ಮೂಳೆ ತಜ್ಞರ ಬಳಿ ಹೋಗುತ್ತೀರಿ. ನಮ್ಮಲ್ಲಿ ಹೆಚ್ಚಿನ ಜನರಿಗೆ ದೈಹಿಕ ಆರೋಗ್ಯ ತೊಂದರೆಗಳಿಗೆ ಚಿಕಿತ್ಸೆ ನೀಡುವ ತಜ್ಞರ ಬಗ್ಗೆ ತಿಳಿದಿರುತ್ತದೆ.ಆದರೆ ಮಾನಸಿಕ ಖಾಯಿಲೆ ಮತ್ತು ಅದರ ಚಿಕಿತ್ಸೆಗಳ ಕುರಿತು ಎಷ್ಟು ಜನರಿಗೆ ತಿಳಿದಿರುತ್ತದೆ?

ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ವಿಶೇಷ ಪರಿಣತಿ ಹೊಂದಿರುವ ತಜ್ಞರು  ಇರುತ್ತಾರೆ. ಇವರಲ್ಲಿ ಪ್ರಮುಖವಾದವರೆಂದರೆ, ಮನಃಶಾಸ್ತ್ರಜ್ಞರು, ಮನೋವೈದ್ಯರು, ಆಪ್ತ ಸಮಾಲೋಚಕರು, ಮನೋ-ಸಾಮಾಜಿಕ ಕಾರ್ಯಕರ್ತರು ಮತ್ತು ಸೈಕಿಯಾಟ್ರಿಕ್ ನರ್ಸ್.

ಈ ಲೇಖನದಲ್ಲಿ ಪ್ರತಿಯೊಬ್ಬ ತಜ್ಞರು ಮತ್ತು ಅವರ ಕಾರ್ಯಗಳ ಬಗ್ಗೆ ತಿಳಿಸಲಾಗಿದೆ.ಇದರಿಂದ ಯಾವುದೇ ಮಾನಸಿಕ ಸಮಸ್ಯೆಯ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬಹುದು ಎಂಬುದು ತಿಳಿಯುತ್ತದೆ.

ಮನೋವೈದ್ಯರು

ಮನಃಶಾಸ್ತ್ರ ಎಂದರೇನು?

ಮನಃಶಾಸ್ತ್ರವು ವೈದ್ಯಕೀಯ ಕ್ಷೇತ್ರದ ಒಂದು ವಿಭಾಗ. ಇದರಲ್ಲಿ ತರಬೇತಿ ಪಡೆದ ತಜ್ಞರು ವ್ಯಕ್ತಿಯ ಭಾವನೆ, ಕಲ್ಪನೆ ಮತ್ತು ನಡವಳಿಕೆಗಳನ್ನು ಬಾಧಿಸುವ ಹಲವು ಮಾನಸಿಕ ತೊಂದರೆಯನ್ನು ಪರೀಕ್ಷಿಸಿ, ಗುರುತಿಸಿ, ಸೂಕ್ತ ಚಿಕಿತ್ಸೆ ನೀಡುತ್ತಾರೆ. 

ಮನೋವೈದ್ಯರೆಂದರೆ ಯಾರು?

ಮನಃಶಾಸ್ತ್ರದಲ್ಲಿ ಪರಿಣತಿ ಪಡೆದಿರುವ ವೈದ್ಯರನ್ನು ಮನೋವೈದ್ಯರು ಎಂದು ಗುರುತಿಸಲಾಗುತ್ತದೆ. ಅವರ ವೈದ್ಯಕೀಯ ತರಬೇತಿಯ ಅವಧಿಯಲ್ಲಿ, ಅವರಿಗೆ ಮಿದುಳಿನ ಕಾರ್ಯಗಳು ಮತ್ತು ಮಿದುಳು ಹಾಗೂ ದೇಹಕ್ಕಿರುವ ಸಂಕೀರ್ಣ ಸಂಬಂಧಗಳ ಬಗ್ಗೆ ಸವಿಸ್ತಾರವಾಗಿ ತರಬೇತಿ ನೀಡಲಾಗುತ್ತದೆ. ಅವರು ಮಾನಸಿಕ ಸಮಸ್ಯೆಗಳನ್ನು ಗುರುತಿಸಲು ಸಮರ್ಥರಾಗಿರುತ್ತಾರೆ.

ಮನೋವೈದ್ಯರು ಮಾನಸಿಕ ಸಮಸ್ಯೆಯನ್ನು ಹೇಗೆ ಪತ್ತೆ ಹಚ್ಚುತ್ತಾರೆ?

ಅವರು ಮೂಲತಃ ವೈದ್ಯರಾಗಿರುವ ಕಾರಣ, ಹಲವಾರು ರೀತಿಯ ವೈದ್ಯಕೀಯ ಪರೀಕ್ಷೆಗಳ ಮೂಲಕ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಪರೀಕ್ಷಿಸುತ್ತಾರೆ. ಈ ರೀತಿ ಪಡೆದ ಮಾಹಿತಿಯನ್ನು ಪರಿಶೀಲಿಸಿ, ಸಮಸ್ಯೆಯನ್ನು ಪತ್ತೆ ಹಚ್ಚುತ್ತಾರೆ ಹಾಗೂ ಸೂಕ್ತ ಚಿಕಿತ್ಸೆಯ ಸಲಹೆ ನೀಡುತ್ತಾರೆ.

ಮನೋವೈದ್ಯರು ಯಾವ ರೀತಿಯ ಚಿಕಿತ್ಸೆಗಳನ್ನು ನೀಡುತ್ತಾರೆ?

ಔಷಧಗಳೂ ಸೇರಿದಂತೆ, ಮನೋವೈದ್ಯರು ಹಲವು ರೀತಿಯ ಚಿಕಿತ್ಸೆಗಳನ್ನು ನೀಡುತ್ತಾರೆ. ಅವರು ವ್ಯಕ್ತಿಯ ಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿ ಆಸ್ಪತ್ರೆಗೆ ದಾಖಲಾಗುವಂತೆಯೂ ಸೂಚಿಸಬಹುದು. ಒಂದು ವೇಳೆ ವ್ಯಕ್ತಿಗೆ ಸೈಕೊಥೆರಪಿಯ ಅವಶ್ಯಕತೆ ಇದ್ದಲ್ಲಿ ಅವರು ಕ್ಲಿನಿಕಲ್ ಸೈಕಾಜಿಸ್ಟ್ ಅವರನ್ನು ಕಾಣಲು ತಿಳಿಸಬಹುದು.

ಮನೋವೈದ್ಯರು ಎಲ್ಲಿ ಕಾರ್ಯ ನಿರ್ವಹಿಸುತ್ತಾರೆ?

ಮನೋವೈದ್ಯರು ಸಾಮಾನ್ಯ ಮತ್ತು ಮಾನಸಿಕ ಆಸ್ಪತ್ರೆ, ವಿಶ್ವವಿದ್ಯಾಲಯಗಳ ವೈದ್ಯಕೀಯ ಕೇಂದ್ರ, ಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ,  ಉದ್ದಿಮೆ, ಸರಕಾರ, ರಕ್ಷಣಾ ವಲಯ, ನ್ಯಾಯಾಲಯ, ಜೈಲು, ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಮನೋವಿಜ್ಞಾನಿ

ಮನೋವಿಜ್ಞಾನ ಎಂದರೇನು?

ಮಾನವನ ಮನಸ್ಸು ಮತ್ತು ನಡವಳಿಕೆಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸುವುದನ್ನು ಮನೋವಿಜ್ಞಾನ ಎನ್ನುತ್ತಾರೆ. ನಮ್ಮನ್ನು ಕಾರ್ಯೋನ್ಮುಖಗೊಳಿಸುವ ಎಲ್ಲಾ ತರಹದ ಯೋಚನೆಗಳು,  ಮತ್ತು ಭಾವನೆಗಳನ್ನು ಹಲವು ರೀತಿಯ ಪ್ರಯೋಗ ಮತ್ತು ಪರೀಕ್ಷೆಗಳ ಮೂಲಕ ಅವಲೋಕಿಸಲಾಗುತ್ತದೆ. ಮಾನಸಿಕ ಸಮಸ್ಯೆಯೂ ಸೇರಿದಂತೆ, ನಡವಳಿಕೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಮನೋವಿಜ್ಞಾನದ ನೆರವಿನಿಂದ ಪರಿಹರಿಸಲಾಗುತ್ತದೆ.

ಮನೋವಿಜ್ಞಾನಿ ಯಾರು?

ಮನಃಶಾಸ್ತ್ರದಲ್ಲಿ ಪದವಿಯನ್ನು ಪಡೆದಿರುವ ಹಾಗೂ ನಡವಳಿಕೆಗಳ ಕುರಿತು ಪರಿಣಿತಿ ಪಡೆದಿರುವವರನ್ನು ಮನೋವಿಜ್ಞಾನಿ ಎನ್ನುತ್ತಾರೆ. ಅವರು ವೈಜ್ಞಾನಿಕ ವಿಧಾನಗಳ ಮೂಲಕ ಮಾನವರ ಭಾವನೆಗಳು, ಯೋಚನೆಗಳು ಮತ್ತು ಗ್ರಹಿಕೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪತ್ತೆ ಹಚ್ಚುತ್ತಾರೆ. ಆಧಾರಗಳನ್ನಾಧರಿಸಿದ ಚಿಕಿತ್ಸೆಗಳನ್ನು ಉಪಯೋಗಿಸಿ ಅವರು ಜನರ ಸಮಸ್ಯೆಗಳನ್ನು ಉಪಶಮನಗೊಳಿಸಲು ಸಹಾಯ ಮಾಡುತ್ತಾರೆ.

ಸಂಬಂಧಗಳಲ್ಲುಂಟಾದ ಸಮಸ್ಯೆಗಳು, ಮಕ್ಕಳ ಲಾಲನೆ-ಪಾಲನೆಯ ಸಮಸ್ಯೆಗಳು, ಯೌವ್ವನದ ಸವಾಲುಗಳು, ಜೀವನ ಶೈಲಿಯಿಂದಾಗುವ ತೊಂದರೆ, ಮುಂತಾದ ಸಮಸ್ಯೆಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಾರೆ. ಆತಂಕ, ಖಿನ್ನತೆ, ತಿನ್ನುವ ಸಮಸ್ಯೆ, ತೀವ್ರ ಸ್ವರೂಪದ ಖಾಯಿಲೆ, ವ್ಯಸನ ಮುಂತಾದ ಸಮಸ್ಯೆಗಳನ್ನು ಗುಣಪಡಿಸಲು ಮನೋವಿಜ್ಞಾನಿ ತಮ್ಮ ವೈದ್ಯಕೀಯ ಕೌಶಲ್ಯಗಳನ್ನು ಬಳಸುತ್ತಾರೆ.

ವಿಷಯದ ಮೂಲ ವಿಜ್ಞಾನ ಮತ್ತು ವಿನ್ಯಾಸ ಒಂದೇ ಆಗಿದ್ದಾಗ್ಯೂ ಕೂಡ, ಮನೋವಿಜ್ಞಾನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಜನರಿಗೆ ಚಿಕಿತ್ಸೆ ಒದಗಿಸುತ್ತಾರೆ.

 1. ಕ್ಲಿನಿಕಲ್ ಸೈಕಾಲಜಿಸ್ಟ್: ಇವರು ಮಾನಸಿಕ ಯಾತನೆಯನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯ ವರ್ಧನೆಗೆ ಪ್ರಯತ್ನಿಸುತ್ತಾರೆ. ಅಬ್ನಾರ್ಮಲ್ ಸೈಕಾಲಜಿಯನ್ನು ಅಧ್ಯಯನ ಮಾಡಿದ ಮನಃಶಾಸ್ತ್ರಜ್ಞರು ಆತಂಕ, ಖಿನ್ನತೆ, ಅಥವಾ ವ್ಯಸನಗಳಂತಹ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾರೆ.
 2. ಆಪ್ತಸಮಾಲೋಚಕರು: ವ್ಯಕ್ತಿಗೆ ಮಾನಸಿಕ ಖಾಯಿಲೆಯಿಲ್ಲದಿದ್ದರೂ ಯಾವುದೋ ಭಾವನಾತ್ಮಕ ಸಮಸ್ಯೆಯಿದ್ದಲ್ಲಿ ಆಪಾತಸಮಾಲೋಚಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವ್ಯಕ್ತಿಯ  ಅಸಮತೋಲನಕ್ಕೆ ಕಾರಣವಾದ ಆತಂರಿಕ ಸಮಸ್ಯೆಗಳನ್ನು ಇವರು ಪರಿಹರಿಸುತ್ತಾರೆ. ಉದ್ದಾಹರಣೆ: ಪೂರ್ವ ಮತ್ತು ಸದ್ಯದ ಸಂಬಂಧಗಳಲ್ಲಿ ಉಂಟಾಗುವ ಸಮಸ್ಯೆ, ನಡವಳಿಕೆಯ ಸಮಸ್ಯೆ, ಎಂಬಂತೆ ಹಲವು ರೀತಿಯ ಸಮಸ್ಯೆಗಳನ್ನು  ಬಗೆಹರಿಸಲು ನೆರವು ನೀಡುತ್ತಾರೆ. ಅಲ್ಲದೇ ಆಪ್ತಸಮಾಲೋಚಕರು ವ್ಯಕ್ತಿ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ನೆರವಾಗುತ್ತಾರೆ.
 3. ಸ್ಕೂಲ್ ಸೈಕಾಲಜಿಸ್ಟ್: ಇವರು ಮಕ್ಕಳ ಮತ್ತು ಹದಿಹರೆಯದವರ ಕಲಿಕೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಅಥವಾ ಶಿಕ್ಷಣ ನೀತಿಯನ್ನು ರೂಪಿಸುವ ಆಡಳಿತಾತ್ಮಕ ಸಂಸ್ಥೆಗಳಲ್ಲಿ ಇವರು ಕಾರ್ಯ ನಿರ್ವಹಿಸುತ್ತಾರೆ.
 4. ಫೋರೆನ್ಸಿಕ್ (ತಬ್ಬರಿಮೆಯ) ಮನಃಶಾಸ್ತ್ರಜ್ಞರು: ಇವರು ಕಾನೂನಿಗೆ ಸಂಬಂಧಿಸಿದ ಅಪರಾಧ ಪತ್ತೆಯಲ್ಲಿ ಮನಃಶಾಸ್ತ್ರದ ಸಿದ್ದಾಂತಗಳನ್ನು ಮನಃಶಾಸ್ತ್ರೀಯ ಅಂಶಗಳನ್ನು ಅಂದರೆ ಬಳಸಿ ಅಪರಾಧಿಯ ನಡವಳಿಕಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅಪರಾಧಿಗೆ ಚಿಕಿತ್ಸೆ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವರನ್ನು ‘ಕ್ರಿಮಿನಲ್ ಸೈಕಾಲಜಿಸ್ಟ್, ಲೀಗಲ್ ಸೈಕಾಲಜಿಸ್ಟ್ ಅಥವಾ ಕ್ರಿಮಿನಾಲಜಿಸ್ಟ್’ ಎಂದು ಕರೆಯುತ್ತಾರೆ.
 5. ನ್ಯೂರೋ-ಸೈಕಾಲಜಿಸ್ಟ್: ಇವರು ಮೆದುಳು ಮತ್ತು ಅದರ ನರ-ಮನಃಶ್ಶಾಸ್ತ್ರೀಯ ಕಾರ್ಯಗಳ ನಡುವಿನ ಸಂಬಂಧವನ್ನು, ಉದಾಹರಣೆಗೆ, ಕಲ್ಪನೆ, ನೆನಪುಮುಂತಾದ ಸಂಗತಿಗಳನ್ನು ಅಧ್ಯಯನ ಮಾಡುತ್ತಾರೆ. ಅವರು ಮೆದುಳಿಗೆ ಸಂಬಂಧಿಸಿದ ಪೆಟ್ಟು ಅಥವಾ ಉಳಿದ ನರಸಂಬಂಧಿ ಖಾಯಿಲೆಗಳಾದ ಲಕ್ವ, ಚಿತ್ತವೈಕಲ್ಯ, ಟ್ಯೂಮರ್ ಮತ್ತು ವಯೋಸಹಜ ಮೆದುಳಿನ ಖಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪುನಃಶ್ಚೇತನಕ್ಕೆ ಸಹಾಯ ಮಾಡುತ್ತಾರೆ.
 6. ವೃತ್ತಿ/ಔದ್ಯೋಗಿಕ ಸೈಕಾಲಜಿಸ್ಟ್: ಇವರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಂದ ಉತ್ತಮವಾದ ಉತ್ಪಾದಕತೆ ಪಡೆಯಲು ಮತ್ತು ಉದ್ಯೋಗಿಗಳ ವೃತ್ತಿ ಸಂತೃಪ್ತಿಯನ್ನು ಹೆಚ್ಚಿಸಲು ನೆರವಾಗುತ್ತಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮನಃಶಾಸ್ತ್ರಜ್ಞರು ಉದ್ಯೋಗಿಗಳಿಗೆ ಸೂಕ್ತವಾದ ಕೌಶಲ್ಯಗಳನ್ನು ಕಲಿಸುತ್ತಾರೆ. ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮತ್ತು ವೃತ್ತಿ ಅನಿಶ್ಚತೆಯನ್ನು ಎದುರಿಸಲು ಸಹಾಯ ಮಾಡುತ್ತಾರೆ.

ಸೈಕಲಾಜಿಕ್ ಅಸೆಸ್ಮೆಂಟ್ ಎಂದರೇನು?

ಮನಃಶಾಸ್ತ್ರಜ್ಞರು ವ್ಯಕ್ತಿಯ ಯೋಚನೆ, ಭಾವನೆ, ನಡವಳಿಕೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲು ಸೈಕಾಲಾಜಿಕಲ್ ಅಸೆಸ್ಮೆಂಟ್ ಮಾಡುತ್ತಾರೆ. ಇದು ಸಂದರ್ಶನ, ಅವಲೋಕನ, ಮೌಲ್ಯಮಾಪನ, ಅಧಿಕೃತ ಮಾನಸಿಕ ಪರೀಕ್ಷೆಗಳು ಮತ್ತು ಸಮರ್ಪಕ ಮಾಹಿತಿಯನ್ನು ಕಲೆಹಾಕಲು ಉಳಿದ ವೃತ್ತಿತಜ್ಞರ ಜೊತೆ ಸಮಾಲೋಚನೆಗಳನ್ನು ಒಳಗೊಂಡಿರುತ್ತದೆ.

ವ್ಯಕ್ತಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಪರಿಪೂರ್ಣವಾದ ಮಾಹಿತಿ ತಯಾರಿಸಲು ಮನಃಶಾಸ್ತ್ರಜ್ಞರು ಬೇರೆ ಬೇರೆ ಅಸೆಸ್ಮೆಂಟ್ ಮಾಡುತ್ತಾರೆ. ಈ ಮಾಹಿತಿಗಳನ್ನು ವ್ಯಕ್ತಿಯ ಚಿಕಿತ್ಸೆ ನಿರ್ಧರಿಸಲು ಆಧಾರವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಹದಿಹರೆಯದವರಲ್ಲಿ ಕರಿಯರ್ ಪ್ಲ್ಯಾನ್ ಮಾಡಲು ಅಥವಾ ಮಾನಸಿಕ ಖಾಯಿಲೆಯಿರುವ ವಯಸ್ಕ ವ್ಯಕ್ತಿಯ ಚಿಕಿತ್ಸೆಯ ಕ್ರಮಗಳನ್ನು ನಿರ್ಧರಿಸಲು ಈ ಮಾಹಿತಿಯನ್ನು ಆಧಾರವಾಗಿ ಬಳಸಲಾಗುತ್ತದೆ. 

ಮನೋವೈಜ್ಞಾನಿಕ ಪರೀಕ್ಷೆ ಎಂದರೇನು?

ವ್ಯಕ್ತಿಗಳ ಸಾಮರ್ಥ್ಯಗಳನ್ನು, ಅಂದರೆ ಆಪ್ಟಿಟ್ಯೂಡ್ ಹಾಗೂ ಬುದ್ದಿಮತ್ತೆಯನ್ನು ಅಳೆಯಲು ಮನೋವೈಜ್ಞಾನಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳನ್ನು ಪ್ರಮಾಣೀಕೃತ ಮನೋವೈಜ್ಞಾನಿಕ ಮತ್ತು ವೈಜ್ಞಾನಿಕ ನಿಯಮಗಳ ಅನುಸಾರ ನಡೆಸಲಾಗುತ್ತದೆ.

ಮನೋವೈಜ್ಞಾನಿಕ ಚಿಕಿತ್ಸೆಗಳ ವಿಧಾನಗಳು ಬರೆಯುವ, ಚಿತ್ರಿಸುವ ಅಥವಾ ಕಂಪ್ಯೂಟರ್-ಆಧಾರಿತ ಚಟುವಟಿಕೆಗಳನ್ನು ಹೊಂದಿರಬಹುದು. ಅಲ್ಲದೇ, ಒಗಟುಗಳನ್ನು ಬಿಡಿಸುವ, ಚಿತ್ರ ಬಿಡಿಸುವ, ಸಮಸ್ಯೆಗಳನ್ನು ಬಿಡಿಸುವ ಅಥವಾ ಸ್ಮರಣೆಗೆ ಸಂಬಂಧಿಸಿದ ಪರೀಕ್ಷೆಗಳನ್ನು ಒಳಗೊಂಡಿರಬಹುದು. ಈ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಮನಃಶಾಸ್ತ್ರಜ್ಞರು ವ್ಯಕ್ತಿಯಲ್ಲಿ ಅಡಕವಾಗಿರುವ ಸಾಮರ್ಥ್ಯ ಮತ್ತು ಕೌಶಲ್ಯಗಳ ಬಗ್ಗೆ ವರದಿ ನೀಡುತ್ತಾರೆ. ವ್ಯಕ್ತಿಯಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳನ್ನು ಅಳೆಯುವುದಕ್ಕೂ ಸೂಕ್ತ ವಿಧಾನಗಳಿವೆ.- ಉದಾಹರಣೆಗೆ ಥಿಮಾಟಿಕ್ ಅಪರ್ಸೆಪ್ಷನ್ ಟೆಸ್ಟ್ ಮತ್ತು ರೊಸಾರ್ಕ್ ಟೆಸ್ಟ್.

ಸೈಕಾಲಾಜಿಕಲ್ ಪರೀಕ್ಷೆಯಲ್ಲಿ ಯಾವ ಅಂಶಗಳನ್ನು ಅಳೆಯಲಾಗುತ್ತದೆ?

ಮನೋವೈಜ್ಞಾನಿಕ ಪರೀಕ್ಷೆಗಳು ಹಲವು ವಿಷಯಗಳನ್ನು ಒಳಗೊಳ್ಳುತ್ತವೆ. ಅವೆಂದರೆ:

ಅಡಾಪ್ಟಿವ್ ಬಿಹೇವಿಯರ್ ಅಸೆಸ್ಮೆಂಟ್: ಇದನ್ನು ವ್ಯಕ್ತಿಯ ಸಾಮಾಜಿಕ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಅಳೆಯಲು ಬಳಸುತ್ತಾರೆ. ಉದಾಹರಣೆಗೆ, ಮಗುವು ಸಾಮಾಜಿಕ ವಾತಾವರಣದಲ್ಲಿ ಹೇಗೆ ವರ್ತಿಸುತ್ತದೆ? ಮಗುವು ಶಾಲೆ ಅಥವಾ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಅಗತ್ಯವಾದ ಜೀವನ ಕೌಶಲಗಳನ್ನು ಕಲಿತಿದೆಯೆ? ಎಂದು ಮೌಲ್ಯಮಾಪನ ಮಾಡುತ್ತಾರೆ. ಮುಖ್ಯವಾಗಿ ವ್ಯಕ್ತಿಯು ದೈನಂದಿನ ಕೆಲಸಗಳನ್ನು ನಿಭಾಯಿಸಲು ಅಸಮರ್ಥನಾದಾಗ ಅಥವಾ ಕಡಿಮೆ ಪ್ರಮಾಣದಲ್ಲಿ ಗ್ರಹಿಕೆಯ ಸಾಮರ್ಥ್ಯ ಹೊಂದಿದ್ದಾಗ ಈ ಪರೀಕ್ಷೆಗಳನ್ನು ಕಾಗ್ನಿಟಿವ್ ಪರೀಕ್ಷೆಗಳ ಜೊತೆಗೆ ನಡೆಸಲಾಗುತ್ತದೆ.

ಆಪ್ಟಿಟ್ಯೂಡ್ ಪರೀಕ್ಷೆ: ಇದು ಹಲವಾರು ಕೆಲಸಗಳನ್ನು ನಿಭಾಯಿಸಲು ವ್ಯಕ್ತಿಗಿರುವ ಸಾಮರ್ಥ್ಯವನ್ನು ಅಳೆಯುತ್ತಾರೆ. ಉದಾಹರಣೆಗೆ, ಕೆಲವು ವ್ಯಕ್ತಿಗಳಲ್ಲಿ ಉಳಿದವರಿಗಿಂತ ಹೆಚ್ಚಿನ ತಾಂತ್ರಿಕ ಕೌಶಲ್ಯಗಳಿರಬಹುದು. ಇನ್ನು ಕೆಲವರ ಭಾಷಾ ಸಾಮರ್ಥ್ಯ ಚೆನ್ನಾಗಿರಬಹುದು. ಕೆಲವರ ತಾರ್ಕಿಕ ಕೌಶಲ ಚೆನ್ನಾಗಿದ್ದರೆ, ಉಳಿದವರ ಕ್ರಿಯಾತ್ಮಕ ಕೌಶಲಗಳು ಚೆನ್ನಾಗಿರಬಹುದು. ಈ ಪರೀಕ್ಷೆಗಳು ವಿಭಿನ್ನ ರೀತಿಯ ಕೌಶಲಗಳನ್ನು ಅಳೆಯಲು ಅಥವಾ ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯದ ಆಧಾರದ ಮೇಲೆ ಒಂದು ನಿರ್ದಿಷ್ಟ ವೃತ್ತಿಗೆ ಹೊಂದಿಕೊಳ್ಳಬಲ್ಲರೇ ಎಂದು ತಿಳಿಯಲು ನೆರವಾಗುತ್ತದೆ.

ಕಾಗ್ನಿಟಿವ್ ಪರೀಕ್ಷೆ: ವ್ಯಕ್ತಿಯ ಕೌಶಲಗಳನ್ನು (ಸಮಸ್ಯೆ ಬಿಡಿಸುವ, ತಾರ್ಕಿಕ ಮತ್ತು ಭಾಷಾ ಕೌಶಲ, ಗ್ರಹಣ ಮತ್ತು ಸ್ಮರಣಾ ಕೌಶಲ) ಈ ಪರೀಕ್ಷೆ ಅಳೆಯುತ್ತದೆ. ಇದನ್ನು ಐಕ್ಯೂ ಪರೀಕ್ಷೆ, ಜನರಲ್ ಎಬಿಲಿಟಿ ಟೆಸ್ಟ್ ಎಂದೂ ಕರೆಯಲಾಗುತ್ತದೆ. ಇವನ್ನು ಹೆಚ್ಚಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ, ಮಕ್ಕಳ ಸಾಮರ್ಥ್ಯವನ್ನು ಅಳೆದು ಅವರು ತಮ್ಮ ಸಾಮರ್ಥ್ಯದ ಪೂರ್ಣ ಪ್ರಯೋಜನವನ್ನು ಪಡೆಯಲು ನೆರವಾಗುವುದಕ್ಕೆ ಬಳಸುತ್ತಾರೆ.

ಶೈಕ್ಷಣಿಕ/ಸಾಧನಾ ಪರೀಕ್ಷೆ: ವ್ಯಕ್ತಿಯು ಒಂದು ವಿಷಯದ ಕಲಿಕೆಯಲ್ಲಿ (ಗಣಿತ, ಓದುವುದು, ಇತ್ಯಾದಿ) ಸಾಧಿಸಿರುವ ಪ್ರಗತಿಯನ್ನು ಅಳೆಯಲು ಮತ್ತು ಯಾವುದೇ ನಿರ್ದಿಷ್ಟ ವಿಷಯದ ಕಲಿಕೆಯಲ್ಲಿ ಅವರಿಗೆ ಇರಬಹುದಾದ ತೊಡಕುಗಳನ್ನು ತಿಳಿಯಲು ಇದು ನೆರವಾಗುತ್ತದೆ. ಸಾಧನಾ ಪರೀಕ್ಷೆಗಳನ್ನು ಶೈಕ್ಷಣಿಕ ಪರೀಕ್ಷೆಗಳಲ್ಲಿ ಮಗುವಿನ ಪ್ರಗತಿಯನ್ನು ಅಳೆಯಲು ಬಳಸುತ್ತಾರೆ.

ಫೊರೆನ್ಸಿಕ್ ಪರೀಕ್ಷೆ: ವ್ಯಕ್ತಿಯು ಅಪರಾಧಿಯೇ ಅಲ್ಲವೇ ಎಂಬುದನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಇದನ್ನು ಕಾನೂನು ಕ್ಷೇತ್ರದಲ್ಲಿ ಬಳಸುತ್ತಾರೆ.

ಮಾನಸಿಕ ಆರೋಗ್ಯ ಮೌಲ್ಯಮಾಪನ: ಈ ಪರೀಕ್ಷೆಯು ವ್ಯಕ್ತಿಯ ವೈದ್ಯಕೀಯ ಹಿನ್ನೆಲೆ, ಕುಟುಂಬದ ಹಿನ್ನೆಲೆ ಮತ್ತು ವ್ಯಕ್ತಿಯ ಸದ್ಯದ ಮಾನಸಿಕ ಪರಿಸ್ಥಿತಿಯ ಕುರಿತ ಮಾಹಿತಿಯನ್ನು ಕಲೆಹಾಕುತ್ತದೆ. ಈ ಪರೀಕ್ಷೆಯಿಂದ ಮಾನಸಿಕ ಸಮಸ್ಯೆಗಳಿದ್ದಲ್ಲಿ ತಿಳಿದುಬರುತ್ತವೆ ಮತ್ತು ಚಿಕಿತ್ಸೆಯನ್ನು ನಿರ್ಧರಿಸಲು ನೆರವಾಗುತ್ತದೆ.

ನರ-ಮನೋವೈಜ್ಞಾನಿಕ ಪರೀಕ್ಷೆ: ಈ ಪರೀಕ್ಷೆಯಿಂದ ಮೆದುಳು ಹೇಗೆ ಕಾರ್ಯ ನಿರ್ವಸುತ್ತಿದೆ ಮತ್ತು ಮೆದುಳಿನಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ ಎಂದು ತಿಳಿದುಕೊಳ್ಳಬಹುದು. ಉದಾಹರಣೆಗೆ, ಮೆದುಳಿಗೆ ಪೆಟ್ಟಾಗಿರುವ ಅಥವಾ ಚಿತ್ತವೈಕಲ್ಯದ ಅಪಾಯವಿರುವ ವ್ಯಕ್ತಿಯ ಸ್ಮರಣ ಶಕ್ತಿಯನ್ನು ಪರೀಕ್ಷಿಸಲು ಇದನ್ನು ಬಳಸುತ್ತಾರೆ.

ವ್ಯಕ್ತಿತ್ವದ ಮೌಲ್ಯಮಾಪನ​: ಈ ಪರೀಕ್ಷೆಯು ವ್ಯಕ್ತಿತ್ವದ ಗುಣಗಳನ್ನು ಅವಲೋಕಿಸುತ್ತದೆ. ವ್ಯಕ್ತಿಯು ಅಂತರ್ಮುಖಿಯೇ, ಅಥವಾ ಬಹಿರ್ಮುಖಿಯೇ, ಆತ್ಮವಿಶ್ವಾಸವುಳ್ಳವನೇ ಅಥವಾ ಬಿಗುಮಾನದ ವ್ಯಕ್ತಿಯೇ ಎಂದು ತಿಳಿಯಲು ಮತ್ತು ಜೀವನದ ವಿವಿಧ ಪರಿಸ್ಥಿತಿಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿಯಲು ಸಹಕಾರಿಯಾಗಿದೆ.

ಆಪ್ತಸಮಾಲೋಚಕ

ಆಪ್ತಸಮಾಲೋಚಕರೆಂದರೆ ಯಾರು?

ಆಪ್ತಸಮಾಲೋಚನೆಯು ಒಂದು ವಿಶೇಷ ಮತ್ತು ಒಂದು ಬಗೆಯ ಅನ್ವಯಿಕ ಮನಃಶಾಸ್ತ್ರವಾಗಿದ್ದು ಜೀವನದ ಹಲವು ಪರಿಸ್ಥಿತಿಗಳಿಂದ ಉದ್ಭವಿಸುವ ಮಾನಸಿಕ ಅಥವಾ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೆರವಾಗುತ್ತದೆ. ಉದಾಹರಣೆಗೆ, ಕೆಲಸದ ಜಾಗದಲ್ಲಿನ ಸಮಸ್ಯೆ, ಶಾಲೆ ಅಥವಾ ಕಾಲೇಜು, ಕೌಟುಂಬಿಕ ಸಮಸ್ಯೆಗಳು ಇತ್ಯಾದಿ. ಆಪ್ತಸಮಾಲೋಚನೆಯು ಹಲವು ರೀತಿಯ ನಿರ್ಧರಿತ ವಿಧಾನಗಳ ಮೂಲಕ ವ್ಯಕ್ತಿಗೆ ವೈಚಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಆಪ್ತಸಮಾಲೋಚನೆಯು ಸಂಪೂರ್ಣವಾಗಿ ಗೌಪ್ಯವಾಗಿರುತ್ತದೆ.

ಆಪ್ತಸಮಾಲೋಚನೆಯು ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತದೆ.

 • ಜೀನದ ಘಟನೆಗಳು ಅಥವಾ ಒತ್ತಡದಿಂದ ಉಂಟಾಗುವ ಸಾಮಾನ್ಯ ಅಥವಾ ಸಾಧಾರಣ ಸಮಸ್ಯೆಗಳ ಪರಿಹಾರ.

 • ವ್ಯಕ್ತಿಯ ಕ್ರಿಯೆಗೆ ಕಾರಣವಾಗುವ ಯೋಚನಾ ಪ್ರಕ್ರಿಯೆ, ನಂಬಿಕೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು.

 • ಹಿಂದೆ ನಡೆದಿರುವ ಘಟನೆಗಳ ಬದಲು ಪ್ರಚಲಿತ ಘಟನೆಗಳಿಗೆ ಆದ್ಯತೆ ಕೊಡುವುದು.

 • ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುವುದು.

 • ವಿವೇಕ, ವೈಚಾರಿಕ ಚಿಂತನೆ ಮತ್ತು ಜೀವನದ ಸಂದರ್ಭಗಳಿಗೆ ಧನಾತ್ಮಕವಾಗಿ ಪ್ರತಿಸ್ಪಾಂದಿಸುವುದು.

ಆಪ್ತಸಮಾಲೋಚಕರೆಂದರೆ ಯಾರು?

ಆಪ್ತಸಮಾಲೋಚಕರು ಆಪ್ತಸಮಾಲೋಚನೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬಹುದು. ಆಪ್ತಸಮಾಲೋಚಕರಿಗೆ ಗಮನವಿಟ್ಟು ಕೇಳುವ ತರಬೇತಿಯನ್ನು ನೀಡಲಾಗುತ್ತದೆ. ವ್ಯಕ್ತಿಗೆ ತಮ್ಮ ಸಮಸ್ಯೆಗಳನ್ನು ಗುರುತಿಸಲು ಹಾಗೂ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಇವರು ನೆರವಾಗುತ್ತಾರೆ. ಇವರು ಮನೋವೈದ್ಯರು, ಮನಃಶಾಸ್ತ್ರಜ್ಞರು ಮತ್ತು ಮನೋಚಿಕಿತ್ಸಕರು ನಿರ್ವಹಿಸುವ ಎಲ್ಲಾ ತರಹದ ಸಮಸ್ಯೆಗಳನ್ನು ನಿಭಾಯಿಸುತ್ತಾರೆ.

ಒಂದು ವೇಳೆ ಆಪ್ತಸಮಾಲೋಚಕರಿಗೆ ವ್ಯಕ್ತಿಯ ಸಮಸ್ಯೆಯು ಗಂಭಿರವಾಗಿದ್ದು ಚಿಕಿತ್ಸೆಯ ಅಗತ್ಯವಿದೆಯೆಂದು ತಿಳಿದುಬಂದಲ್ಲಿ ಅವರು ವ್ಯಕ್ತಿಗೆ ಚಿಕಿತ್ಸೆಗಾಗಿ ಮಾನಸಿಕ ಆರೋಗ್ಯ ತಜ್ಞರ ಬಳಿ ತೆರಳಲು ಸೂಚಿಸುತ್ತಾರೆ.

ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್

ಇವರು ತರಬೇತಿ ಹೊಂದಿದ ಮಾನಸಿಕ ಆರೋಗ್ಯ ತಜ್ಞರಾಗಿದ್ದು, ಮಾನಸಿಕ ಅನಾರೋಗ್ಯದಿಂದ ಉಂಟಾಗುವ ಜೀವನದ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸಲು ವ್ಯಕ್ತಿಗೆ ನೆರವಾಗುತ್ತಾರೆ. ಮಾನಸಿಕ ಖಾಯಿಲೆಯು ವ್ಯಕ್ತಿಯ ಸಂಬಂಧಗಳು, ಜೀವನ ಮಟ್ಟ ಮತ್ತು ಔದ್ಯೋಗಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದು ವ್ಯಕ್ತಿಗೆ ಕಷ್ಟದಾಯಕ ಪರಿಸ್ಥಿತಿಯಾಗಿ ತೋರಬಹುದು. ಇಂತಹ ಸಂದರ್ಭಗಳನ್ನು ಎದುರಿಸಲು ತಜ್ಞರು ಸಹಾಯ ಮಾಡುತ್ತಾರೆ.

ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಈ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ:

 • ವ್ಯಕ್ತಿಯ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಆರೋಗ್ಯದ ಅಗತ್ಯಗಳನ್ನು ಅವಲೋಕಿಸುವುದು. ಮತ್ತು ಅವರಿಗೆ ಪ್ರಯೋಜನವಾಗುವ ಸಮುದಾಯದ ಸಂಪನ್ಮೂಲಗಳನ್ನು ಹುಡುಕುವುದು.

 • ವ್ಯಕ್ತಿಯ ಕುಟುಂಬದವರಿಗೆ ಹಾಗೂ ಖಾಯಿಲೆಯ ಕುರಿತು ಶಿಕ್ಷಣ ನೀಡುವುದು ಮತ್ತು ಚಿಕಿತ್ಸೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನೆರವಾಗುವುದು.

 • ವ್ಯಕ್ತಿಯ, ಗುಂಪಿನ ಅಥವಾ ಕೌಟುಂಬಿಕ ಥೆರಪಿ ಅವಧಿಗಳನ್ನು ಆಯೋಜಿಸುವುದು.

 • ವ್ಯಕ್ತಿ , ಕುಟುಂಬದ ಸದಸ್ಯರು ಮತ್ತು ವೈದ್ಯಕೀಯ ತಂಡದ ನಡುವೆ ಸಂವಹನ ಉತ್ತಮಗೊಳಿಸುವುದು.

 • ವ್ಯಕ್ತಿಯು ಯಥಾಪ್ರಕಾರದ ಜೀವನಕ್ಕೆ  ಮರಳಲು ಯೋಜನೆ ರೂಪಿಸುವುದು. 

ಒಟ್ಟಿನಲ್ಲಿ ಅವರು, ವ್ಯಕ್ತಿ ಮತ್ತೆ ಕುಟುಂಬ ಮತ್ತು ಸಮುದಾಯವನ್ನು ಸೇರಲು ಸಹಾಯ ಮಾಡುತ್ತಾರೆ.

ಸೈಕಿಯಾಟ್ರಿಕ್ ನರ್ಸ್

ಸೈಕಿಯಾಟ್ರಿಕ್ ನರ್ಸ್ ಮಾನಸಿಕ ಆರೋಗ್ಯ ಕ್ಷೇತ್ರದ ವೃತ್ತಿ ತಜ್ಞರಾಗಿದ್ದು ಮಾನಸಿಕ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಅರ್ಹತೆ ಪಡೆದಿರುತ್ತಾರೆ. ಅವರು ಮನಃ ಶಾಸ್ತ್ರಜ್ಞರೊಂದಿಗೆ ಕೆಲಸ ಮಾಡುತ್ತಾರೆ. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org