ಒತ್ತಡ ಎಂದರೇನು?

ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಸಮಯದಿಂದ ಸಮಯಕ್ಕೆ ಒತ್ತಡದ ಅನುಭವವು ಏಕೆ ಭಿನ್ನವಾಗಿರುತ್ತದೆ?

 ಪ್ರತಿನಿತ್ಯದ ಬದುಕಿನಲ್ಲಿ ನಾವೆಲ್ಲರೂ ಒತ್ತಡವನ್ನು ಅನುಭವಿಸುತ್ತೇವೆ. ಜೀವನದ ಹಲವು ಪರಿಸ್ಥಿತಿಗಳು ನಮ್ಮಲ್ಲಿ ಒತ್ತಡವನ್ನು ಉಂಟುಮಾಡುತ್ತದೆ.  ಮಗುವು ಶಾಲೆಯ ಕುರಿತು, ಹದಿಹರೆಯದವರು ಸ್ನೇಹಿತರು ತಮ್ಮನ್ನು ಸ್ವೀಕರಿಸದಿರುವ ಕುರಿತು , ಉದ್ಯೋಗದಿಂದ, ಅಥವ ಸಂಬಂಧಗಳ ಕುರಿತು  ಒತ್ತಡವನ್ನು ಅನುಭವಿಸುತ್ತೇವೆ. ಹಾಗೆಯೇ ವಾಹನ ಚಲಾಯಿಸುವಾಗ , ಅಡಿಗೆ ಮಾಡುವಾಗ , ದೈನಂದಿನ ಕೆಲಸಗಳಿಂದ ಹಿಡಿದು, ಪರೀಕ್ಷೆಗೆ ಅಥವಾ ಉದ್ಯೋಗದ ಸಂದರ್ಶನಕ್ಕೆ ತಯಾರಿ ನಡೆಸುವಾಗ, ಹೊಸ ಜಾಗಕ್ಕೆ ತೆರಳುವಾಗ  ಹಾಗೂ ನೈಸರ್ಗಿಕ ವಿಕೋಪ, ಮತ್ತಿತರ  ಗಂಭೀರ ಖಾಯಿಲೆಗಳು ನಮ್ಮಲ್ಲಿ ಒತ್ತಡವನ್ನು ಉಂಟುಮಾಡುತ್ತವೆ.

ಹಾಗಾದರೆ ಒತ್ತಡವೆಂದರೇನು ?

ಪರಿಸ್ಥಿತಿಯನ್ನು ಎದುರಿಸಲು ಕಷ್ಟವೆಂದು ಅನಿಸಿದಾಗ ಅದರಿಂದ ಗಾಬರಿ ಮತ್ತು ಕಿರಿಕಿರಿಯನ್ನು ಅನುಭವಿಸುತ್ತೇವೆ. ಅದನ್ನು ನಾವು ಒತ್ತಡದ ಸ್ಥಿತಿಯೆಂದು ಹೇಳುತ್ತೇವೆ. ಡಾ. ವಿಲಿಯಮ್. ಆರ್. ಲೊವ್ಯಾಲೊ ಅವರು ತಮ್ಮ ‘ಒತ್ತಡ ಮತ್ತು ಆರೋಗ್ಯ’ ಎಂಬ ಪುಸ್ತಕದಲ್ಲಿ ಒತ್ತಡವು  ಎರಡು ಅಂಶಗಳನ್ನು  ಒಳಗೊಂಡಿರುತ್ತದೆ ಎಂದು ಬರೆಯುತ್ತಾರೆ. ಅವು ನೇರವಾದ ದೈಹಿಕ ಬದಲಾವಣೆ ಮತ್ತು ಜನರು ತಮ್ಮ ಜೀವನದಲ್ಲಿ ಉಂಟಾಗುವ ಪರಿಸ್ಥಿತಿಗಳನ್ನು ಹೇಗೆ ನೋಡುತ್ತಾರೆ ಎಂಬ ಅಂಶಗಳು.  

ಒತ್ತಡ: ಪ್ರಚೋದಕ ಅಥವಾ ಪ್ರತಿಕ್ರಿಯೆ

ನಾವು ಯಾವುದಾದರು ಸವಾಲಿನ , ಸಂಕಟದ ಅಥವ ಅಪಾಯದ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದಾಗ ಒತ್ತಡವುಂಟಾಗುತ್ತದೆ. ಒತ್ತಡವು ಕೆಲವೊಮ್ಮೆ ನಮ್ಮನ್ನು ಸಾಂದರ್ಭಿಕವಾಗಿ ಕಾರ್ಯೋನ್ಮುಖವಾಗಲು ಪ್ರಚೋದಿಸುತ್ತದೆ  ಅಥವಾ ನೈಸರ್ಗಿಕವಾಗಿ ಪ್ರತಿಕ್ರಿಯಿಸಲು  ಅಣಿಗೊಳಿಸುತ್ತದೆ.   ನಾವು ಅನುಭವಿಸುವ ಒತ್ತಡ , ಅಪಾಯಕಾರಿ ಇಲ್ಲವೇ ಸವಾಲಿನ ಪರಿಸ್ಥಿತಿಗಳಿಗೆ ನಮ್ಮ ಪ್ರತಿಕ್ರಿಯೆಯ ಮೇಲೆ ನಿರ್ಭರವಾಗಿರುತ್ತದೆ. ಒತ್ತಡವುಂಟಾದಾಗ  ಹೆದರಿಕೆಯಾಗುತ್ತದೆ, ಹೃದಯದ ಬಡಿತ ಜೋರಾಗುತ್ತದೆ, ಬಾಯಿಯು ಒಣಗುತ್ತದೆ ಮತ್ತು ಕೆಲವೊಮ್ಮೆ ಬೆವರುತ್ತೇವೆ. ಕೆಲವರಿಗೆ ಒತ್ತಡದಿಂದ ಅತೀ ಗಾಬರಿ ಉಂಟಾಗುತ್ತದೆ.

ಒತ್ತಡವು ಒಂದು ವಿಷಯಾಧಾರಿತ ಅನುಭವವಾಗಿದೆ

ನಾವೆಲ್ಲರೂ ಆಗಾಗ ಒತ್ತಡಕ್ಕೆ ಒಳಗಾಗುತ್ತೇವೆ. ಒತ್ತಡವೇ ಇಲ್ಲದಿದ್ದರೆ ಜೀವನವು ಸಪ್ಪೆಯೆನಿಸುತ್ತದೆ ಮತ್ತು ಕಲಿತು ಬೆಳೆಯುವ ಅವಕಾಶವು ದೊರೆಯುವುದಿಲ್ಲ. ಜೀವನದಲ್ಲಿ ಕೆಲವು ತೆರನಾದ ಒತ್ತಡವು ಒಳ್ಳೆಯದು. ಅವು ನಮ್ಮ ಜೀವನಾನುಭವವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ ಜೀವನದಲ್ಲಿ ಬದಲಾವಣೆಯನ್ನು ತರುವ ಸನ್ನಿವೇಶಗಳು - ಮೊಟ್ಟಮೊದಲ ಬಾರಿ ಶಾಲೆಗೆ ಹೋಗುವುದು, ಕೆಲಸವನ್ನು ಆರಂಭಿಸುವುದು, ಮದುವೆ ಮತ್ತು ಪಾಲಕರಾಗುವುದು, ಇತ್ಯಾದಿ.

ಉಳಿದ ಒತ್ತಡದ ಸಂದರ್ಭಗಳೆಂದರೆ:

  • ಅನಿರೀಕ್ಷಿತ ಘಟನೆಗಳು: ಅಪಘಾತಗಳು, ಪ್ರೀತಿಪಾತ್ರರ ಹಠಾತ್ ಸಾವು, ನಾವು ಗೌರವಿಸುವ ವ್ಯಕ್ತಿಗಳಿಂದ ಅನಿರೀಕ್ಷಿತ ನಡವಳಿಕೆ
  • ನಾವು ಸ್ಪಷ್ಟತೆ ಬಯಸುವ ಸಂದರ್ಭಗಳು: ನಮ್ಮ ಆರೋಗ್ಯ ಅಥವಾ ಚಿಕಿತ್ಸೆಯ ಬಗ್ಗೆ ಸ್ಪಷ್ಟತೆ ಬಯಸುವಾಗ
  • ಬಯಸದೇ ಇರುವ ಸನ್ನಿವೇಶಗಳು: ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ಆಸ್ತಿ ಅಥವಾ ವಸ್ತುಗಳನ್ನು ಕಳೆದುಕೊಳ್ಳುವುದು
  • ನಿಯಂತ್ರಣ ಮೀರಿದ ಸನ್ನಿವೇಶಗಳು: ಆಘಾತಕಾರಿ ಅನುಭವದ ಬಗ್ಗೆ ಸದಾ ಯೋಚಿಸುವುದು

ಕೆಲವು ಸಂದರ್ಭದಲ್ಲಿ ಒತ್ತಡವು ಅಲ್ಪಾವಧಿಗೆ ಸೀಮಿತವಾಗಿದ್ದರೆ ಇನ್ನು ಕೆಲವೊಮ್ಮೆ ಬಹಳ ಕಾಲದವರೆಗೆ ಉಳಿಯುತ್ತದೆ. ಕೆಲವೊಮ್ಮೆ ನಾವು ತೀವ್ರವಾದ ಒತ್ತಡವನ್ನು ಅನುಭವಿಸಿದರೆ ಉಳಿದ ಕೆಲವು ಸಂದರ್ಭಗಳಲ್ಲಿ ಒತ್ತಡವೇ ಅನುಭವಕ್ಕೆ ಬರುವುದಿಲ್ಲ.

ಕೆಲವು ನಿರ್ದಿಷ್ಟ ಅನುಭವಗಳು (ಉದಾಹರಣೆಗೆ ಪರೀಕ್ಷೆ ಮತ್ತು ಹೊಸ ನಗರಕ್ಕೆ ಸ್ಥಳಾಂತರಗೊಳ್ಳುವುದು) ಒಬ್ಬ ವ್ಯಕ್ತಿಗೆ ಒತ್ತಡಕಾರಿ ಎಂದು ಅನಿಸಿದರೆ ಇನ್ನೊಬ್ಬರಲ್ಲಿ ಯಾವುದೇ ರೀತಿಯ ಒತ್ತಡವನ್ನು ಉಂಟುಮಾಡದೇ ಇರಬಹುದು. ಆದ್ದರಿಂದ ಸಮಯದಿಂದ ಸಮಯಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಒತ್ತಡದ ಅನುಭವವು ವಿಭಿನ್ನವಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ನಾವು ಅನುಭವಿಸುವ ಒತ್ತಡದ ಪ್ರಮಾಣವು ಆ ಸನ್ನಿವೇಶವನ್ನು ನಾವು ಹೇಗೆ ಪರಾಮರ್ಶಿಸುತ್ತೇವೆ ಎಂಬುದರ ಮೇಲೆ  ಅವಲಂಬಿತವಾಗಿದೆ.

ಒತ್ತಡದ ಪರಿಣಾಮವನ್ನು ಕಡಿಮೆ ಮಾಡುವುದು:

ಒತ್ತಡ ಅನುಭವಿಸದೇ ಇರಲು ಸಾಧ್ಯವಿಲ್ಲ. ಆದರೆ ಅದನ್ನು ನಿಭಾಯಿಸಲು ಹಲವು ವಿಧಾನಗಳನ್ನು ಕಲಿತು ಒತ್ತಡದಿಂದಾಗುವ ಅಡ್ಡ ಪರಿಣಾಮಗಳನ್ನು ತಡೆಯಬಹುದು. 

  • ಸಾಮಾಜಿಕ ಬೆಂಬಲವನ್ನು ಹೆಚ್ಚಿಸಿ: ನಮ್ಮ ಪ್ರೀತಿಪಾತ್ರರ/ ಸ್ನೇಹಿತರ ಸಹಾಯ ಮತ್ತು ಬೆಂಬಲವನ್ನು ಪಡೆಯುವುದರಿಂದ ಸಮಸ್ಯೆಯು ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ.

  • ವೈಯಕ್ತಿಕ ಭಾವನೆಗಳ ಮೇಲೆ ಹಿಡಿತ: ಸ್ವನಿಯಂತ್ರಣವನ್ನು ಸಾಧಿಸುವ ಮೂಲಕ ಒತ್ತಡಕಾರಿ ಸನ್ನಿವೇಶಗಳನ್ನು ಸವಾಲಾಗಿ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ ಮತ್ತು ಇದರಿಂದ ನಮ್ಮ ದಕ್ಷತೆಯು ಹೆಚ್ಚುತ್ತದೆ.

  • ಜೀವನವನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವುದು: ನಮ್ಮ ಜೀವನವನ್ನು ಸುವ್ಯವಸ್ಥಿತವಾಗಿ ರೂಪಿಸಿಕೊಳ್ಳುವುದರ ಮುಖಾಂತರ  ಹತಾಶೆ ಮತ್ತು ಒತ್ತಡದಂತಹ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.  ಉದಾಹರಣೆಗೆ, ಸಮಯ ನಿರ್ವಹಣೆ ಮತ್ತು ವಸ್ತುಗಳನ್ನು ಕೈಗೆ ಸಿಕ್ಕುವ ಹಾಗೆ ಒಪ್ಪವಾಗಿ ಇಟ್ಟುಕೊಳ್ಳುವುದು.

  • ಜೀವನಶೈಲಿಯ ಬಗ್ಗೆ ಗಮನ ವಹಿಸುವುದು: ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಆರೋಗ್ಯವು ಉತ್ತಮಗೊಳ್ಳುತ್ತದೆ ಮತ್ತು ಒತ್ತಡವನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ.

  • ಒತ್ತಡಕಾರಿ ಸನ್ನಿವೇಶಗಳಿಗೆ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳುವುದು: ಜೀವನದಲ್ಲಿ ಕೆಲವು ನಿರ್ದಿಷ್ಟ ಘಟನೆಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧವಾಗುವುದರಿಂದ ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org