ಫೋನ್ ಮತ್ತು ಕಂಪ್ಯೂಟರ್ ಬಳಕೆ ಹೆಚ್ಚಾದರೆ ಏನಾಗಬಹುದು?

ತಂತ್ರಜ್ಞಾನ ಬಳಕೆ ಈ ಕಾಲದ ಅನಿವಾರ್ಯಗಳಲ್ಲೊಂದು. ಬಳಕೆ ಹೆಚ್ಚಾಗಿ ತೊಂದರೆಯಾಗಿರುವುದು ವಿಪರ್ಯಾಸ

ಇಂಟರ್ನೆಟ್ ಅಥವಾ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ನಿಮ್ಮ ಮಕ್ಕಳು ಇನ್ನಷ್ಟು ಕಿರಿಕಿರಿಗೊಳ್ಳಬಹುದು ಅಥವಾ ಸಿಟ್ಟಾಗಬಹುದು. ಕಂಪ್ಯೂಟರ್ ಮತ್ತು ಫೋನನ್ನು ದೂರವಿಟ್ಟಾಗ ಕೆಲವು ಮಕ್ಕಳು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಜಗಳವಾಡಿ ಬಹಳ ದಿನಗಳವರೆಗೆ ಅವರೊಂದಿಗೆ ಮಾತನಾಡದೆ ಇರಬಹುದು. ಈ ಕಾರಣಕ್ಕಾಗಿಯೇ, ಮಾನಸಿಕ ಆರೋಗ್ಯ ತಜ್ಞರು ತಂತ್ರಜ್ಞಾನದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಬದಲು ಮಿತಗೊಳಿಸಲು ಸಲಹೆ ನೀಡುತ್ತಾರೆ. “ನಿಷೇಧದಿಂದ ವ್ಯಸನವನ್ನು ನಿಲ್ಲಿಸಲು ಸಾಧ್ಯವಿಲ್ಲ, ಉದಾಹರಣೆಗೆ ಧೂಮಪಾನವನ್ನೇ ತೆಗೆದುಕೊಳ್ಳಿ. ವೈಯಕ್ತಿಕ ನಿಯಂತ್ರಣ ಮತ್ತು ಸ್ವಯಂಪ್ರೇರಣೆಯಿಂದ ಮಾತ್ರ ವ್ಯಸನದಿಂದ ಹೊರಬರಲು ಸಾಧ್ಯ” ಎನ್ನುತ್ತಾರೆ, ನಿಮ್ಹಾನ್ಸಿನ SHUT ಕ್ಲಿನಿಕ್ಕಿನ ಡಾ. ಮನೋಜ್ ಶರ್ಮಾ.

ಫೋನಿನ ಬಳಕೆ ಒಂದು ವ್ಯಸನವಾಗಿದೆ ಎಂದು ನನಗೆ ಅನ್ನಿಸುತ್ತಿದೆ, ನಾನು ಏನು ಮಾಡಬಹುದು?

ನಿಮ್ಮ ವ್ಯಸನವನ್ನು ನಿಯಂತ್ರಿಸಲು ಅಥವಾ ಮಿತಗೊಳಿಸಲು ಇಲ್ಲಿ ಕೆಲವು ಸಲಹೆಗಳಿವೆ:

 • ಅಗತ್ಯವಿದ್ದಾಗ ಮಾತ್ರ ಫೋನ್‌ ಬಳಸಿ.
 • ಕರೆಗಳು ಮಿತವಾಗಿರಲಿ.
 • ಕುಟುಂಬವರು ಮತ್ತು ಸ್ನೇಹಿತರೊಂದಿಗಿರುವಾಗ ಫೋನ್‌ ಬಳಸದಿರಲು ಪ್ರಯತ್ನಿಸಿ.
 • ವಾಹನ ಚಲಿಸುವಾಗ, ಓದುವಾಗ, ಆಹಾರ ಸೇವಿಸುವಾಗ ಮತ್ತು ವ್ಯಾಯಾಮ ಮಾಡುವಾಗ ಮುಂತಾದ ಚಟುವಟಿಕೆಗಳನ್ನು ಮಾಡುತ್ತಿರುವಾಗ ಫೋನನ್ನು ದೂರವಿಡಿ.
 • ಪ್ರತಿ ದಿನ ಫೋನಿನ ಬಳಕೆಗೆ ನಿಗದಿತ ಸಮಯ ಮತ್ತು ಹಣವನ್ನು ಮೀಸಲಿಡಿ. ಅದಕ್ಕಿಂತ ಜಾಸ್ತಿ ಬಳಸದಿರಲು ಪ್ರಯತ್ನಿಸಿ.
 • ನಿಮ್ಮಿಂದ ಫೋನಿನ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಆಪ್ತ ಸಮಾಲೋಚಕರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.
 • ನಿಮ್ಮ ಇ-ಮೇಲ್, ವಾಟ್ಸಪ್ ಮೆಸೇಜುಗಳನ್ನು ನೋಡಲು ಸಮಯವನ್ನು ನಿಗದಿಪಡಿಸಿಕೊಳ್ಳಿ. (ಪ್ರತಿ 3 ಗಂಟೆಗಳಿಗೊಮ್ಮೆ, ಮುಂತಾಗಿ). ಇದರಿಂದ ದಿನಪೂರ್ತಿ ಫೋನಿನಲ್ಲಿ ಮುಳುಗಿರುವುದನ್ನು ತಪ್ಪಿಸಬಹುದು.

ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕವೂ 3 ರಿಂದ 6 ತಿಂಗಳ ಅವಧಿಯಲ್ಲಿ ಆರೋಗ್ಯಕರ ಅಭ್ಯಾಸಕ್ಕೆ ಮರಳಬಹುದು.

(ಈ ಮೇಲಿನ ಅಂಶಗಳನ್ನು  http://www.nimhans.kar.nic.in/ncw/leaflets2.pdf  ಜಾಲತಾಣವನ್ನು ಅವಲೋಕಿಸಿ  ಸಂಗ್ರಹಿಸಲಾಗಿದೆ.)

ಮಕ್ಕಳ ಕಂಪ್ಯೂಟರ್ ಮತ್ತು ಫೋನ್ ಬಳಕೆ ನಿಯಂತ್ರಿಸಲು ಪಾಲಕರು ಏನು ಮಾಡಬಹುದು?

ಮಕ್ಕಳ ಕಂಪ್ಯೂಟರ್ ಮತ್ತು ಫೋನ್ ಬಳಕೆ ಹೆಚ್ಚಾಗಿದೆ ಎಂದು ತಿಳಿದಾಗ, ಪಾಲಕರಿಗೆ ಮಕ್ಕಳ ಶಿಕ್ಷಣ ಮತ್ತು ಆರೊಗ್ಯದ ಬಗ್ಗೆ ಚಿಂತೆ ಕಾಡಬಹುದು. ಹಾಗಿದ್ದಲ್ಲಿ ನೀವು ಅವರಿಗೆ ಈ ರೀತಿ ಸಹಾಯ ಮಾಡಬಹುದು:

 • ಗಾಬರಿಯಾಗಬೇಡಿ. ಸೂಕ್ತ ಬೆಂಬಲ ಪಡೆದು ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ.
 • ಅವರು ಅತಿಯಾಗಿ ಕಂಪ್ಯೂಟರ್ ಮತ್ತು ಫೋನ್  ಬಳಸುವುದನ್ನು ಟೀಕಿಸದೇ, ತಾಳ್ಮೆಯಿಂದ ಮಾತನಾಡಿ.
 • ನಿಮ್ಮ ಮಕ್ಕಳು ತಮ್ಮ ಜೀವನಶೈಲಿ ಬದಲಾಯಿಸಲು ಅವರಿಗೆ ಇಷ್ಟವಾದ ಬೇರೆ ಚಟುವಟಿಕೆಗಳನ್ನು ಆರಂಭಿಸಿ. 
 • ಇಂಟರ್‌ನೆಟ್ ಮೂಲಕ ಯಾವ ಮಾಹಿತಿ ಪಡೆಯುತ್ತಿದ್ದಾರೆ ಎಂಬ ಬಗ್ಗೆ ತಿಳಿದುಕೊಳ್ಳಿ
 • ನಿಮ್ಮ ಗಾಬರಿ ಮತ್ತು ಭಾವನೆಗಳಿಗೆ ತಜ್ಞರ ಸಹಾಯ ಪಡೆಯಿರಿ. ಇದರಿಂದ ನೀವು ನಿಮ್ಮ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.
 • ಸಮಸ್ಯೆಯ ಸ್ವರೂಪವನ್ನು ಅರ್ಥಮಾಡಿಕೊಂಡು ಅದನ್ನು ನಿರ್ವಹಿಸುವ ವಿಧಾನಗಳನ್ನು ಅರಿತುಕೊಳ್ಳಿ.
 • ಒಂದು ನಿಗದಿತ ಸಮಯದಲ್ಲಿ (ಊಟದ ಸಮಯದಲ್ಲಿ ಅಥವಾ ವಾರದ ಒಂದು ದಿನ ಇಲ್ಲವೇ ವಾರಾಂತ್ಯದಲ್ಲಿ) ಕುಟುಂಬದ ಎಲ್ಲಾ ಸದಸ್ಯರು ಇಂಟರ್ನೆಟ್ ಬಳಕೆಯಿಂದ ದೂರವಿರುವಂತೆ ನೋಡಿಕೊಳ್ಳಿ.
 • ಕುಟುಂಬಕ್ಕೆ ಮೀಸಲಾದ ಸಮಯದಲ್ಲಿ, ನೀವೂ ಕೂಡಾ ನಿಮ್ಮ ಫೋನನ್ನು ಬಳಸದೇ ಅವರಿಗೆ ಮಾದರಿಯಾಗಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org