ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ

ಸೂಕ್ತ ಬೆಂಬಲ ಮತ್ತು ನಿರ್ದಿಷ್ಟ ಚಿಕಿತ್ಸಾ ಯೋಜನೆಯ ಮೂಲಕ ನೀವು ನಿಮ್ಮ ಆರೋಗ್ಯವನ್ನು ಮರಳಿಪಡೆಯಬಹುದು ಮತ್ತು ಎಲ್ಲರಂತೆಯೇ ಸಾಮಾನ್ಯ ಜೀವನ ನಡೆಸಬಹುದು.

ಮಾನಸಿಕ ತೊಂದರೆಯ ಚಿಕಿತ್ಸೆ ಎಂದರೇನು?

ಸಾಧ್ಯವಾದಷ್ಟು ಬೇಗ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಮಾಡಿದರೆ ಮಾನಸಿಕ ತೊಂದರೆಗಳನ್ನು ಸಮರ್ಥವಾಗಿ ಮತ್ತು ಸೂಕ್ತವಾಗಿ ನಿಭಾಯಿಸಬಹುದು. ದೈಹಿಕ ಅನಾರೋಗ್ಯಕ್ಕೆ ನಿರ್ದಿಷ್ಟ ಚಿಕಿತ್ಸೆಗಳಿರುವಂತೆ, ಹೆಚ್ಚಿನ ಮಾನಸಿಕ ತೊಂದರೆಗಳಿಗೂ ವೈಜ್ಞಾನಿಕವಾಗಿ ಸಿದ್ಧಗೊಂಡ ಮತ್ತು ವೈದ್ಯಕೀಯವಾಗಿ ಕೂಡ ಪ್ರಮಾಣೀಕರಿಸಲಾದ ಚಿಕಿತ್ಸೆಗಳು ಲಭ್ಯವಿದೆ.

ನಾವೀಗ ಮಾನಸಿಕ ಅನಾರೋಗ್ಯದ ಚಿಕಿತ್ಸೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ದೈಹಿಕ ಅನಾರೋಗ್ಯಗಳಾದ ಜ್ವರ, ಮಧುಮೇಹ, ಥೈರಾಯ್ಡ್ ತೊಂದರೆ ಅಥವಾ ಹೃದಯದ ತೊಂದರೆಗಳಿಗೆ ಔಷಧಿಗಳು ಅಥವಾ ಶಸ್ತ್ರ ಚಿಕಿತ್ಸೆ ಪರಿಹಾರವನ್ನು ಒದಗಿಸಿ ರೋಗಿಗಳನ್ನು ಗುಣಮುಖವಾಗಿಸುತ್ತವೆ. ಕೆಲವು ಬಾರಿ ಮಾನಸಿಕ ಆರೋಗ್ಯಕ್ಕೆ ಬೇರೆ ವಿಧದ ಚಿಕಿತ್ಸೆಯ ಅಗತ್ಯವುಂಟಾಗಬಹುದು. ಹೆಚ್ಚಿನ ಸಂದರ್ಭದಲ್ಲಿ ವ್ಯಕ್ತಿಗೆ ಔಷಧಗಳ (ಖಾಯಿಲೆಯ ಗಂಭೀರತೆ ಮತ್ತು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಗಳನ್ನು ಆಧರಿಸಿ) ಜೊತೆಗೆ ಮಾನಸಿಕ ಸ್ಥಿತಿಯ ನಿರ್ವಹಣೆಯ ಕುರಿತು ಸಲಹೆ ನೀಡಬೇಕಾಗಬಹುದು.

ಪ್ರಮುಖ ಸಂಗತಿ: ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವುದೆಂದರೆ, ವ್ಯಕ್ತಿಯು ನ್ಯೂನ್ಯತೆಗೆ ಒಳಗಾದನೆಂದೋ ಅಥವಾ ಸ್ವತಂತ್ರವಾದ, ಕ್ರಿಯಾತ್ಮಕ ಜೀವನ ನಡೆಸಲು ಅಸಮರ್ಥನಾದನೆಂದೋ ಅರ್ಥವಲ್ಲ. ವ್ಯಕ್ತಿಯು ಭಾವನಾತ್ಮಕವಾಗಿ ದುರ್ಬಲಗೊಂಡಿದ್ದು ಸ್ವಲ್ಪ ಸಮಯದವರೆಗೆ ಬೆಂಬಲದ ಅವಶ್ಯಕತೆಯಿದೆಯೆಂದಷ್ಟೇ ಅರ್ಥ. ಸೂಕ್ತ ಬೆಂಬಲ ಮತ್ತು ನಿರ್ದಿಷ್ಟ ಚಿಕಿತ್ಸೆಗಳಿಂದ ಅವರು ತಮ್ಮ ಆರೋಗ್ಯವನ್ನು ಮತ್ತೆ ಮರಳಿ ಪಡೆದು ಮೊದಲಿನಂತೆ ಸಾಮಾನ್ಯ ಜೀವನ ನಡೆಸಬಲ್ಲರು.

ಚಿಕಿತ್ಸೆ ಏಕೆ ಅಗತ್ಯವಿರುತ್ತದೆ?

ರೋಗಿಯು ಅನಾರೋಗ್ಯದಿಂದ ಚೇತರಿಸಿಕೊಂಡು ಸಾಮಾನ್ಯ ಜೀವನ ನಡೆಸಿ ತಮ್ಮ ದೈನಂದಿನ ಕೆಲಸಗಳನ್ನು ಪೂರೈಸಿಕೊಳ್ಳಲು ಶಕ್ತರಾಗುವಂತೆ ಮಾಡುವುದು ಯಾವುದೇ ಚಿಕಿತ್ಸೆಯ ಉದ್ದೇಶ. ಸಕ್ಕರೆ ಖಾಯಿಲೆಯಿರುವ ಒಬ್ಬ ವ್ಯಕ್ತಿಯ ಚಿಕಿತ್ಸೆಯ ರೂಪುರೇಷೆಯು ಔಷಧಗಳ ಜೊತೆ ಜೀವನ ಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಒಳಗೊಂಡಿದ್ದರೆ, ಕ್ಯಾನ್ಸರ್, ಎಚ್ಐವಿ, ಏಡ್ಸ್ ನಂತಹ ಮಾರಣಾಂತಿಕ ಖಾಯಿಲೆ ಇರುವವರಿಗೆ ಪರಿಸ್ಥಿತಿಯನ್ನು ಎದುರಿಸಲು ಮತ್ತು ಸಾಧ್ಯವಾದಷ್ಟು ಸ್ವತಂತ್ರವಾಗಿ ಜೀವನ ನಡೆಸಲು ಚಿಕಿತ್ಸೆಯು ಸಹಾಯ ಮಾಡುತ್ತದೆ.

ಮಾನಸಿಕ ರೋಗದ ಚಿಕಿತ್ಸೆಯು ಸಾಮಾನ್ಯವಾಗಿ ದೈಹಿಕ ಅನಾರೋಗ್ಯದ ಚಿಕಿತ್ಸೆಗಿಂತ ಸಂಕೀರ್ಣವಾಗಿರುತ್ತದೆ. ಹಾಗೂ ಔಷಧ ಹಾಗೂ ಚಿಕಿತ್ಸೆಗಳ ಸಂಯೋಜನೆಯಿಂದ ಕೂಡಿರುತ್ತದೆ. ಚಿಕಿತ್ಸಾ ವಿಧಾನವು ಖಾಯಿಲೆಯ ಗಂಭೀರತೆ ಮತ್ತು ರೋಗಿಯು ನಿರ್ದಿಷ್ಟ ಚಿಕಿತ್ಸೆಯನ್ನು ಯಾವ ರೀತಿ ಸ್ವೀಕರಿಸುತ್ತಿದ್ದಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮಾನಸಿಕ ತಜ್ಞರು ಯಾವುದೇ ನಿರ್ದಿಷ್ಟ ಚಿಕಿತ್ಸಾ ಮಾದರಿಯನ್ನು ಸಲಹೆ ಮಾಡುವ ಮೊದಲು ಕೂಲಂಕುಷವಾದ ಪರೀಕ್ಷೆಯನ್ನು ಕೈಗೊಂಡಿರುತ್ತಾರೆ. ನಿಮ್ಮ ಖಾಯಿಲೆಯ ತೀವ್ರತೆಯ ಆಧಾರದ ಮೇಲೆ ನೀವು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು. ಅಥವಾ ಮನೋಸಾಮಾಜಿಕ ಪುನರ್ ವಸತಿಯ ಅಗತ್ಯವುಂಟಾಗಬಹುದು.

ಆಸ್ಪತ್ರೆಗೆ ದಾಖಲಾತಿ

ವ್ಯಕ್ತಿಯ ಅನಾರೋಗ್ಯವು ಗಂಭೀರವಾಗಿದ್ದಾಗ ಮತ್ತು ಅವರಿಗೆ ನಿರಂತರ ವೈದ್ಯಕೀಯ ಕಾಳಜಿ ಮತ್ತು ಮೇಲ್ವಿಚಾರಣೆಯ ಅಗತ್ಯವಿದ್ದಾಗ ವೈದ್ಯರು ಆಸ್ಪತ್ರೆಗೆ ದಾಖಲಾಗಲು ಸೂಚಿಸಬಹುದು. ವ್ಯಕ್ತಿಗಳು ತಮಗೆ ತಾವೇ ಹಾನಿಯುಂಟು ಮಾಡಿಕೊಳ್ಳುವ ಸಂಭವವಿದ್ದಾಗಲೂ ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ಈ ವಿಷಯದಲ್ಲಿರುವ ಕೆಲವು ಆಯ್ಕೆಗಳೆಂದರೆ 24 ಗಂಟೆಯ ಒಳರೋಗಿ ಕಾಳಜಿ, ಭಾಗಶಃ ಅಥವಾ ಹಗಲು ದಾಖಲಾತಿ.

ಮನೋಸಾಮಾಜಿಕ ಪುನರ್ ವಸತಿ

ರೋಗಿಗಳು ವಾಸಿಸುವ ಮತ್ತು ಸೂಚಿಸಲಾದ ಥೆರಪಿ ಅಥವಾ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಅಗತ್ಯವಾದ ವೈದ್ಯಕೀಯ ಸೌಲಭ್ಯ ಹೊಂದಿರುವ ತಾತ್ಕಾಲಿಕ ನೆಲೆ ಪುನರ್ ವಸತಿ ಕೇಂದ್ರಗಳು (ಹಗಲು ಕಾಳಜಿ ಅಥವಾ ವಸತಿ ಸಹಿತ). ರೋಗಿಗಳು ಸಮಾಜದ ಮುಖ್ಯವಾಹಿನಿಗೆ ಹೊಂದಿಕೊಳ್ಳಲು ಬೇಕಾದ ಕ್ರಿಯಾತ್ಮಕ, ಸಾಮಾಜಿಕ, ಬೌದ್ಧಿಕ ಕೌಶಲ್ಯಗಳನ್ನು ಗಳಿಸಲು ಇವು ಸಹಾಯ ಮಾಡುತ್ತವೆ. ರೋಗಿಗಳು ಮನೆ ಮತ್ತು ಕಛೇರಿಗಳಲ್ಲಿ ಸಾಧ್ಯವಾದಷ್ಟು ಸ್ವತಂತ್ರವಾಗಿ ತಮ್ಮ ದೈನಂದಿನ ಚಟುವಟಿಕೆಯನ್ನು ನಡೆಸಲು ಶಕ್ತರಾಗಲು ಪುನರ್ ವಸತಿ ಕೇಂದ್ರಗಳು ನೆರವು ನೀಡುತ್ತದೆ

ಪುನರ್ವಸತಿ ಕೇಂದ್ರಗಳಲ್ಲಿ ಮನೋವೈದ್ಯರು, ದಾದಿಯರು, ಮನಃಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಮನೋಚಿಕಿತ್ಸಕರು ಮತ್ತು ವೃತ್ತಿಪರ ಚಿಕಿತ್ಸಕರ ತಂಡವು ಒಟ್ಟಾಗಿ ಸೇವೆಯನ್ನು ಒದಗಿಸುತ್ತದೆ.

ಬೈಪೋಲಾರ್ ಡಿಸಾರ್ಡರ್ ಅಥವಾ ಸ್ಕಿಜೋಫ್ರೇನಿಯಾ ಮುಂತಾದ ಗಂಭೀರವಾದ ಮತ್ತು ದೀರ್ಘಕಾಲೀನ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಅನಾರೋಗ್ಯದ ಕಾರಣದಿಂದ ಮಾನಸಿಕ ವಿಕಲತೆಗೆ ಒಳಗಾಗಿರಬಹುದು ಮತ್ತು ಅವರಿಗೆ ದೈನಂದಿನ ಕ್ರಿಯೆಗಳನ್ನು ನಡೆಸುವ ಕೌಶಲ್ಯಗಳನ್ನು ಕಲಿಯಲು ಪುನರ್ ವಸತಿ ಕೇಂದ್ರದ ಅವಶ್ಯಕತೆಯಿರಬಹುದು. ಬೌದ್ಧಿಕ ಅಸಾಮರ್ಥ್ಯಕ್ಕೆ ಒಳಗಾದವರಿಗೆ ಪುನಶ್ಚೇತನ ವಿಧಾನವನ್ನು ಬಳಸಿ ದಿನನಿತ್ಯ ಅವಶ್ಯವಿರುವ ಕೌಶಲಗಳನ್ನು ಕಲಿಸಲಾಗುವುದು. ಪುನರ್ ವಸತಿಯು ವ್ಯಸನಿಗಳಿಗೆ ಮತ್ತು ನಡವಳಿಕೆಯ ಸಮಸ್ಯೆಯಿರುವವರಿಗೂ ಪ್ರಯೋಜನಕಾರಿಯಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org