ಪುನಃಶ್ಚೇತನ ಎಂದರೇನು?

ಪುನಃಶ್ಚೇತನ ಸೌಲಭ್ಯ ಸಹಜ ಜೀವನಕ್ಕೆ ಮರಳಲು ಸಹಾಯ ಮಾಡುತ್ತದೆ.

 ಮಾನಸಿಕ ಸಮಸ್ಯೆಗಳ ಚಿಕಿತ್ಸೆಯು ಎರಡು ಅಂಶಗಳನ್ನು ಹೊಂದಿರುತ್ತದೆ. ಚಿಕಿತ್ಸೆ ಮತ್ತು ಪುನಃಶ್ಚೇತನ. 

ದೈಹಿಕ ಅನಾರೋಗ್ಯದಲ್ಲಿ ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ವ್ಯಕ್ತಿಯು ಗುಣಮುಖನಾದರೆ ಮಾನಸಿಕ ಸಮಸ್ಯೆ ನಿವಾರಣೆಗೆ ಔಷಧದ ಜೊತೆಗೆ ಉಳಿದ ರೀತಿಯ ಚಿಕಿತ್ಸೆಯನ್ನು ಬಳಸಬೇಕಾಗುತ್ತದೆ. ಕೆಲವು ವ್ಯಕ್ತಿಗಳಿಗೆ ಒಂದಕ್ಕಿಂತ ಹೆಚ್ಚು ಚಿಕಿತ್ಸಾ ವಿಧಾನದ ಅಗತ್ಯವುಂಟಾಗಬಹುದು. ಔಷಧ, ಚಿಕಿತ್ಸೆ, ಆಪ್ತಸಮಾಲೋಚನೆ, ಮೆದುಳನ್ನು ಉತ್ತೇಜಿಸುವ ಚಿಕಿತ್ಸೆ ಮತ್ತು ಮಾನಸಿಕ ಪುನಃಶ್ಚೇತನ, ಇತ್ಯಾದಿ. 

ವ್ಯಕ್ತಿ ಮತ್ತೆ ಸಹಜ ಜೀವನಕ್ಕೆ ಮರಳಿ ತಮ್ಮ ಜೀವನದ ಕೆಲಸಗಳನ್ನು ಸಾಧ್ಯವಾದಷ್ಟು ನೆರವೇರಿಸಿಕೊಳ್ಳಲು  ಪುನಃಶ್ಚೇತನದ ಅಗತ್ಯವಿರುತ್ತದೆ. 

ಮಾನಸಿಕ ಸಮಸ್ಯೆಯಿರುವ ಎಲ್ಲಾ ವ್ಯಕ್ತಿಗಳಿಗೆ ಕಡ್ಡಾಯವಾಗಿ ಪುನಃಶ್ಚೇತನ ವಿಧಾನದ ಅಗತ್ಯವಿರುವುದಿಲ್ಲ. ಹೆಚ್ಚಿನ ವ್ಯಕ್ತಿಗಳಿಗೆ ಔಷಧ ಅಥವಾ ಚಿಕಿತ್ಸೆಯಿಂದ ಸಹಜ ಜೀವನಕ್ಕೆ ಮರಳುವುದು ಸಾಧ್ಯ. ಇನ್ನುಳಿದವರಿಗೆ ಪುನರ್ ವಸತಿಯನ್ನು ಚಿಕಿತ್ಸೆಯ ಕೊನೆಯ ಹಂತವಾಗಿ ಬಳಸಬೇಕಾಗುತ್ತದೆ.

ಪುನಃಶ್ಚೇತನ ಏಕೆ ಅಗತ್ಯವಾಗುತ್ತದೆ?

ಮಾನಸಿಕ ಅಸ್ವಸ್ಥತೆಯ ನಂತರ ಜೀವನ ಕೌಶಲಗಳನ್ನು ಇನ್ನೊಮ್ಮೆ ಕಲಿಯಬೇಕಾಗಿರುವ ವ್ಯಕ್ತಿಗೆ ಪುನಃಶ್ಚೇತನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಅಂತಹ ಕೌಶಲಗಳನ್ನು ಇನ್ನೂ ಕಲಿಯದಿರುವ ವ್ಯಕ್ತಿಗೆ ಅವನ್ನು ಮೊದಲ ಬಾರಿಗೆ ಕಲಿಸಬೇಕಾಗುತ್ತದೆ. 

ಆದ್ದರಿಂದ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಬೌದ್ಧಿಕ ಕೌಶಲಗಳನ್ನು ಕಲಿಸುತ್ತಾರೆ. ಇದರಿಂದ ವ್ಯಕ್ತಿಯು ಮನೆ ಮತ್ತು ಉದ್ಯೋಗದ ಸ್ಥಳದಲ್ಲಿ ಉತ್ತಮ ಪಾತ್ರ ನಿರ್ವಹಿಸಲು ನೆರವಾಗುತ್ತದೆ. ಪುನಃಶ್ಚೇತನ ವ್ಯಕ್ತಿಗೆ ಹಲವು ಪ್ರಕಾರದ ಅವಕಾಶಗಳನ್ನು ಒದಗಿಸಿ, ಅವರ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಅವರಿಗೆ ತಾರತಮ್ಯದ ಅನುಭವವಾಗದಂತೆ ನೋಡಿಕೊಳ್ಳುತ್ತದೆ.

ಮಾನಸಿಕ ಸಮಸ್ಯೆಯಿಂದ ಚಿಕಿತ್ಸೆಗೆ ಒಳಗಾದ ವ್ಯಕ್ತಿಗಳನ್ನು ಈ ರೀತಿಯಾಗಿ ವಿಂಗಡಿಸಲಾಗುತ್ತದೆ:

  • ವ್ಯಕ್ತಿ ಚಿಕಿತ್ಸೆಯ ನಂತರ ಸುಧಾರಿಸಿಕೊಂಡಿದ್ದರೂ ಅವರ (ಕಾರ್ಯಕ್ಷಮತೆಯ ಮೇಲೆ) ಅನಾರೋಗ್ಯವು ಕೆಲವು ತೊಂದರೆಗಳಿರಬಹುದು (ಉದಾ: ನಿಧಾನವಾಗಿ ಕೆಲಸ ಮಾಡುವುದು, ಮನೆ ಕೆಲಸ ಮಾಡಲು ಆಗದೆ ಇರುವುದು)
  • ವ್ಯಕ್ತಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಶಕ್ತರಾದರೂ ಪರಿಸ್ಥಿತಿಯ ಒತ್ತಡದಿಂದ ಅಥವಾ ಅವರು ಎದುರಿಸಬೇಕಾದ ಕಳಂಕದಿಂದ ಅಥವಾ ತಮ್ಮಷ್ಟಕ್ಕೇ ಎದೆಗುಂದಿ ಪ್ರಯತ್ನವನ್ನು ಕೈ ಬಿಟ್ಟಿರಬಹುದು.
  • ವ್ಯಕ್ತಿ ಕಾರ್ಯ ನಿರ್ವಹಿಸಬಲ್ಲವರಾಗಿದ್ದರೂ ಅವರಿರುವ ವಾತಾವರಣವು ಅವಕಾಶ ನೀಡದಿರಬಹುದು. 

ಹೆಚ್ಚಿನ ಮಾನಸಿಕ ಖಾಯಿಲೆಗಳು 18 ರಿಂದ 25 ವರ್ಷಗಳ ಅವಧಿಯಲ್ಲಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿ ತಮ್ಮ ಜೀವನದ ಗುರಿಯನ್ನು ಮುಟ್ಟಲು ಶ್ರಮಿಸುತ್ತಾರೆ. ಅಂತಹ ವ್ಯಕ್ತಿಗೆ ಮಾನಸಿಕ ಖಾಯಿಲೆಯುಂಟಾದಾಗ ಅವರಿಗೆ ತಿಂಗಳುಗಳ ಕಾಲ ಅಥವಾ ವರ್ಷಗಟ್ಟಲೇ ಓದಲು ಅಥವಾ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಚಿಕಿತ್ಸೆಯ ನಂತರವೂ ಅವರಿಗೆ ಅವಕಾಶ ದೊರಕದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಕೆಲವೊಮ್ಮೆ ಅವರ ಸ್ನೇಹಿತರು ಅಥವಾ ಕುಟುಂಬದವರು ಅವರ ಬಗ್ಗೆ ಅತಿಯಾಗಿ ವಿಮರ್ಶಾತ್ಮಕವಾಗಿ ಅಥವಾ ರಕ್ಷಣಾತ್ಮಕವಾಗಿ ವರ್ತಿಸಬಹುದು. ಇದರಿಂದ ಅವರಿಗೆ ಬಹಳ ನೋವಾಗುತ್ತದೆ.

5 ವರ್ಷಗಳ ಕಾಲ ಸ್ಕಿಜೋಫ್ರೆನಿಯಾದಿಂದ ಬಳಲಿದ 30 ವರ್ಷದ ವ್ಯಕ್ತಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅವರ ಖಾಯಿಲೆಯು ಪತ್ತೆಯಾಗಿ ಚಿಕಿತ್ಸೆಯು ಆರಂಭವಾದಾಗ ವರ್ಷಗಳೇ ಸಂದಿರುತ್ತದೆ. ಚಿಕಿತ್ಸೆಯ ನಂತರ ಆತ ಮನೆಗೆ ಮರಳಿದಾಗ ಆತನ ಸಹಪಾಠಿಗಳು ಮತ್ತು ಸ್ನೇಹಿತರು ತಮ್ಮ ವೃತ್ತಿಯಲ್ಲಿ ಸೆಟಲ್ ಆಗಿ ತಮ್ಮ ತಮ್ಮ ಕುಟುಂಬದವರೊಂದಿಗೆ ಹಾಯಾಗಿರುತ್ತಾರೆ. ಈತನ ಕುಟುಂಬದವರು ಈತ ಯಾವುದಾದರೊಂದು ಕೆಲಸ ಮಾಡಲೆಂದು ಬಯಸುತ್ತಾರೆ. ಯಾವುದಾದರೂ ಉತ್ತಮ ಉದ್ಯೋಗ ಹುಡುಕಲು ಸೂಚಿಸುತ್ತಾರೆ. ಇದು ಆತನನ್ನು ಎದೆಗುಂದಿಸುತ್ತದೆ. ಆತ ಗೊಂದಲಕ್ಕೊಳಗಾಗುತ್ತಾನೆ. ಆದರೆ ಆತ ಎಲ್ಲವನ್ನೂ ನೆನಪಿಡುವಷ್ಟು ಸಾಮರ್ಥ್ಯ ಹೊಂದಿದ್ದು, ತನ್ನ ಶಕ್ತಿ, ಸಾಮರ್ಥ್ಯ ಬಳಸಿಕೊಳ್ಳಲು ಶಕ್ತನಾಗಿರುತ್ತಾನೆ. ಆತನಿಗೆ ತನ್ನ ಕೌಶಲ್ಯವನ್ನು ಹೇಗೆ ಬಳಸಿ ಯಾವ ಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಮಾನಸಿಕ ಆರೋಗ್ಯ ತಜ್ಞರ ಸಲಹೆ ಬೇಕಾಗಿರುತ್ತದೆ. ಅದೇ ಸಂದರ್ಭದಲ್ಲಿ ಆತನು ತನ್ನ ಕುಟುಂಬದವರೆದುರು ತನ್ನನ್ನು ತಾನು ಸಾಬೀತು ಪಡಿಸಲು ಹಂಬಲಿಸುತ್ತಾನೆ.

 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯು ಸ್ಕಿಜೋಫ್ರೆನಿಯಾದಿಂದ ಬಳಲುತ್ತಿರುವುದು ಪತ್ತೆಯಾಯಿತು. ಆತ 3 ವರ್ಷದವರೆಗೆ ಚಿಕಿತ್ಸೆಯನ್ನು ಪಡೆದ. ಚಿಕಿತ್ಸೆಯ ನಂತರ ಆತನಿಗೆ ಮೊದಲಿನಂತೆ ಕಾಲೇಜಿಗೆ ಹೋಗಿ ಅಧ್ಯಯನ ಮಾಡಲು ಸವಾಲಿನ ಸಂಗತಿಯಾಯಿತು. ಆತ ಮತ್ತೇನನ್ನೋ ಮಾಡಲು ಬಯಸುತ್ತಿದ್ದ ಆದರೆ ಆತನ ಕುಟುಂಬದವರು ಆತನು ಇಂಜಿನಿಯರಿಂಗ್ ವ್ಯಾಸಂಗವನ್ನು ಮುಗಿಸಿ ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕೆಂದು ಬಯಸುತ್ತಿದ್ದರು. ಅದಕ್ಕಿಂತ ಕೆಳಮಟ್ಟದ ವೃತ್ತಿ ಮಾಡುವುದು ಅವರ ಅಂತಸ್ತಿಗೆ ತಕ್ಕದಲ್ಲವೆಂದು ಅವರು ಭಾವಿಸಿದ್ದರು. ಈ ವಿಷಯದಲ್ಲಿ ವ್ಯಕ್ತಿಯ ಸಾಮರ್ಥ್ಯ ಮತ್ತು ಆಸಕ್ತಿ ಬದಲಾಗಿರುವುದನ್ನು ಕುಟುಂಬದವರು ಒಪ್ಪಿಕೊಂಡು ಆತನನ್ನು ಬೆಂಬಲಿಸುವುದು ಅಗತ್ಯವಾಗಿದೆ.

(ಮಾನಸಿಕ ಆರೋಗ್ಯ ತಜ್ಞರು ನೀಡಿದ ಮಾಹಿತ್ಯನ್ನು ಅನ್ವಯಿಸಿ ಈ ಘಟನೆಗಳನ್ನು ಇಲ್ಲಿ ವಿವರಿಸಲಾಗಿದೆ.)

ಪುನಶ್ಚೇತನ ಕಾರ್ಯಕ್ರಮ

ಮನೋವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರು ವ್ಯಕ್ತಿ ಮತ್ತು ಆತನ ಕುಟುಂಬದವರ ಜೊತೆ ಮಾತನಾಡಿ ರಿಹ್ಯಾಬಿಲಿಟೇಶನ್ ಕಾರ್ಯಕ್ರಮ ಆರಂಭವಾಗುತ್ತದೆ. ಈ ಸಮಯದಲ್ಲಿ ಕುಟುಂಬದವರು ವ್ಯಕ್ತಿಯ ಸಾಮರ್ಥ್ಯವನ್ನು ಅರಿತು ಅವರಿಂದ ವಾಸ್ತವಿಕ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಉದಾಹರಣೆಗೆ ಗಂಭೀರ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಎಲ್ಲರಂತೆ ಸಾಮಾಜಿಕವಾಗಿ ವ್ಯವಹರಿಸಿ ಕೆಲವು ಕೆಲಸಗಳನ್ನು ಮಾಡಲು ವಿಫಲನಾಗಬಹುದು. ಮನೆಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ನಿರೀಕ್ಷೆಗಳನ್ನು ಪೂರೈಸುವಂತೆ ಒತ್ತಡ ಹೇರಬಾರದು.

ಕೆಲವೊಮ್ಮೆ ತಜ್ಞರು ಕುಟುಂಬದವರೊಂದಿಗೆ ವ್ಯಕ್ತಿಯು ಅನುಭವಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಸಲು ಅಥವಾ ಆತನ ಖಾಯಿಲೆಯ ಬಗ್ಗೆ ಕುಟುಂಬದವರ ಅಭಿಪ್ರಾಯವನ್ನು ಬದಲಿಸಲು ಮತ್ತೆ ಮತ್ತೆ ಸಮಾಲೋಚನೆ ನಡೆಸುತ್ತಾರೆ. 

ವೃತ್ತಿಪರರು ಪುನಶ್ಚೇತನ ಕಾರ್ಯಕ್ರಮದಲ್ಲಿ ವ್ಯಕ್ತಿಯ ಸಾಮಥ್ರ್ಯವನ್ನು ಅಳೆದು (ಕೌಶಲ್ಯ, ಶಕ್ತಿ, ಸಾಮರ್ಥ್ಯ), ಅಸ್ವಸ್ಥತೆಯು ಉಂಟುಮಾಡಿದ ಇತಿಮಿತಿಯನ್ನು ಅರಿತು  ಸೂಕ್ತ ತರಬೇತಿ ಯೋಜಿಸುತ್ತಾರೆ . 

ಕೌಶಲ್ಯ ತರಬೇತಿ ಮತ್ತು ಅಭಿವೃದ್ಧಿ

ಸಮಸ್ಯೆ ಇರುವ ವ್ಯಕ್ತಿಗೆ ಅವರ ಅವಶ್ಯಕತೆಗನುಗುಣವಾಗಿ ಬೇಕಾದ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ತರಬೇತಿ ನೀಡುತ್ತಾರೆ. ವ್ಯಕ್ತಿಯು ಹೊಸ ಕೌಶಲ್ಯವನ್ನು ಕಲಿಯಲು ಆರಂಭಿಸಿ ಅದರಲ್ಲಿ ಆಸಕ್ತಿ  ಬೆಳೆಸಿಕೊಂಡರೆ, ಇದನ್ನು ತಜ್ಞರು ಪಾಸಿಟಿವ್ ಸೈಕಲ್‍ (positive cycle) ಎಂದು ಗುರುತಿಸುತ್ತಾರೆ ಮತ್ತು ಇದು ವ್ಯಕ್ತಿಯ ಜೀವನವನ್ನು ಸುಧಾರಿಸುತ್ತದೆ. ಚಿಕಿತ್ಸೆಯ ನಂತರ ಕೆಲವು ವ್ಯಕ್ತಿಗಳಿಗೆ ತಮ್ಮ ಮುಂಚಿನ ಸಾಮರ್ಥ್ಯಕ್ಕೆ ಮರಳಿ ಉದ್ಯೋಗ ಮಾಡಲು ಸಾಧ್ಯವಾಗುತ್ತದೆ

ಪುನಃಶ್ಚೇತನ ಪ್ರಕ್ರಿಯೆಯಲ್ಲಿ ಕುಟುಂಬದವರ ಪಾತ್ರವೇನು?

ಒಮ್ಮೆ ವ್ಯಕ್ತಿಗೆ ಮಾನಸಿಕ ಸಮಸ್ಯೆಯಿರುವುದು ಪತ್ತೆಯಾದರೆ ಆತನ ಕುಟುಂಬದವರು ಮತ್ತು ಆರೈಕೆದಾರರು ಇದನ್ನು ಅರಗಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಯ ಸಾಮರ್ಥ್ಯದ ಕುರಿತು ಅಪನಂಬಿಕೆ, ಮತ್ತು ಕುಟುಂಬದಲ್ಲಿ ಅವರ ಪಾತ್ರವೇನು ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.

ಮನೋವೈದ್ಯರ ಪ್ರಕಾರ ಕುಟುಂಬದವರು ಸಕ್ರಿಯವಾಗಿ ಪಾಲ್ಗೊಂಡರೆ ವ್ಯಕ್ತಿಯ ಚೇತರಿಕೆಯಲ್ಲಿ ಸಹಾಯವಾಗುತ್ತದೆ. ಮನೆಯವರು ವ್ಯಕ್ತಿಯ ಜೊತೆ ಸಮಯ ಕಳೆದಾಗ ಮತ್ತು ಅವರಿಗೆ ಬೆಂಬಲ ನೀಡಿದಾಗ ವ್ಯಕ್ತಿ ಹೊಸ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಂಭವನೀಯತೆ ಹೆಚ್ಚುತ್ತದೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org