ನೀವು ನಿಮ್ಮ ದುಶ್ಚಟಗಳನ್ನು ಬಿಡಬಲ್ಲಿರಾ?

ಒಮ್ಮೆ ಕಲಿತ ಅಭ್ಯಾಸವನ್ನು ಸುಲಭವಾಗಿ ಬಿಡಲಾಗುವುದಿಲ್ಲ. ಹಾಗೆಂದು ಅದು ಅಸಾಧ್ಯವೂ ಅಲ್ಲ. ಈ ನಿಟ್ಟಿನಲ್ಲಿ ಕೆಲವು ಪ್ರಾಯೋಗಿಕ ಮಾರ್ಗಗಳನ್ನು ಇಲ್ಲಿ ತಿಳಿಸಲಾಗಿದೆ.

ಮೆದುಳಿನಲ್ಲಿ ವಿನ್ಯಾಸಗೊಂಡಿರುವ ಕೆಲವು ನರವ್ಯೂಹಗಳು ದುಶ್ಚಟಗಳನ್ನು ಅಷ್ಟು ಸುಲಭವಾಗಿ ತೊಡೆದು ಹಾಕಲು ಬಿಡುವುದಿಲ್ಲ. ಮೆದುಳಿನಲ್ಲಿರುವ ನರಮಂಡಲದಲ್ಲಿ ನಮ್ಮ ದುರಭ್ಯಾಸಗಳು ಅಚ್ಚಳಿಯದಂತೆ ಬಲವಾಗಿ ಉಳಿದುಕೊಂಡಿರುತ್ತವೆ. ಯಾವ ಸಂದರ್ಭದಲ್ಲಿ ಮೆದುಳಿಗೆ ನಿರ್ದಿಷ್ಟ ಸೂಚನೆ - ಸಂಕೇತಗಳು ದೊರೆಯುತ್ತವೆಯೋ ಆ ಸೂಚನೆಗಳಿಗೆ ಪ್ರತಿಕ್ರಿಯಿಸುವ ಮೆದುಳಿನಲ್ಲಿರುವ ಭಾಗವು ದುರಭ್ಯಾಸಗಳನ್ನು ಪುನರಾವರ್ತಿಸುವಂತೆ ಮಾಡುತ್ತದೆ.

ಈ ಕಾರಣದಿಂದಲೇ ದುಶ್ಚಟಗಳನ್ನು ಬಿಟ್ಟುಬಿಡುವುದು ಸ್ವಲ್ಪ ಕಷ್ಟಕರವಾಗಿ ತೋರುತ್ತದೆ. ಆದರೆ ಅದು ಖಂಡಿತವಾಗಿಯೂ ಅಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ನಿಮಗೆ ಸಹಕಾರಿಯಾಗಬಹುದಾದ ಕೆಲವು ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇವೆ:

  • ಜಾಗರೂಕತೆಯಿಂದಿರಿ - ಯಾವಾಗ ನಿಮಗೆ ನೀವು ದುರಭ್ಯಾಸಗಳಕಡೆಗೆ ವಾಲುತ್ತಿದ್ದೀರಿ ಎಂದು ಅನ್ನಿಸುತ್ತದೆಯೋ ಅಂತಹಾ ಪ್ರತಿ ಬಾರಿಯೂ ಜಾಗರೂಕತೆಯಿಂದಿರಿ. ನಿಮ್ಮ ವರ್ತನೆಯ ಬಗ್ಗೆ ನಿಮಗೆ ಎಚ್ಚರವಿರಲಿ. ನಮ್ಮ ದುರಭ್ಯಾಸಗಳಿಂದ  ಉಂಟಾಗುವ ಲಾಭವೆಷ್ಟು, ಹಾನಿಯೆಷ್ಟು ಎಂದು ಆಳವಾಗಿ ಆಲೋಚಿಸಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.  
  • ಕೆಟ್ಟ ಹವ್ಯಾಸಗಳನ್ನು ಬದಲಿಸಿಕೊಳ್ಳಿ - ನಿಮ್ಮ ದುಶ್ಚಟಗಳನ್ನು ಕಡಿಮೆ ಅಪಾಯವಿರುವ ಹವ್ಯಾಸಗಳೊಂದಿಗೆ ಬದಲಿಸಿಕೊಳ್ಳಿ. ಉದಾಹರಣೆಗೆ ನೀವು ಸದಾಕಾಲ ಏನನ್ನಾದರೂ ತಿನ್ನುತ್ತಲೇ ಇರುವ ದುರಭ್ಯಾಸವನ್ನು ಹೊಂದಿದ್ದರೆ, ಚ್ಯೂಯಿಂಗ್ ಗಮ್ ಪ್ಯಾಕನ್ನು ಸದಾ ನಿಮ್ಮ ಬಳಿ ಇಟ್ಟುಕೊಂಡಿರಿ. ಯಾವಾಗ ನಿಮಗೆ ಏನನ್ನಾದರೂ ತಿನ್ನಬೇಕೆನ್ನಿಸುತ್ತದೆಯೋ ಆಗ ಅದನ್ನು ಬಾಯಿಗೆ ಹಾಕಿಕೊಳ್ಳಿ.

    ಕ್ರಮೇಣ ಬದಲಿ ಆಹಾರವನ್ನು ಕಡಿಮೆ ಅಪಾಯಕಾರಿಯಿಂದ ನಿರಪಾಯಕಾರಿ – ಆತೋಗ್ಯಕಾರಿ ಆಹಾರದೊಡನೆ ಬದಲಿಸಿಕೊಳ್ಳಿ. ಕೊಬ್ಬಿನ ಅಂಶವಿರುವ, ಅಧಿಕ ಕ್ಯಾಲೊರಿಗಳುಳ್ಳ ಆಹಾರ ಪದಾರ್ಥಗಳಿಗೆ ಬದಲಾಗಿ ಆರೋಗ್ಯಕರ ಪದಾರ್ಥಗಳನ್ನು ಬಳಸಲು ಆರಂಭಿಸಿ. ನೀವು ಆರೋಗ್ಯಕರ ಆಹಾರವನ್ನು ಪರ್ಯಾಯವಾಗಿ ಬಳಸಲು ಆಸಕ್ತರಾಗಿದ್ದರೆ, ನಿಮ್ಮ ಆಯ್ಕೆ ಸೇಬು ಮತ್ತು ಮರಸೇಬು ಆಗಿರಬೇಕೇ ಹೊರತು, ಚಾಕೊಲೇಟ್ ಐಸ್-ಕ್ರೀಂ ಅಲ್ಲ. ಸಿಗರೇಟನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಡಿ.
  • ಪ್ರಚೋದನೆಗಳನ್ನು ತಡೆಗಟ್ಟಿ - ನೀವು ನಿರ್ದಿಷ್ಟ ಸಂದರ್ಭಗಳಲ್ಲಿ ಅತಿ ಹೆಚ್ಚು ತಿನ್ನುವುದು ಅಥವಾ ಧೂಮಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದರೆ; ಉದಾಹರಣೆಗೆ, ನೀವು ತಡರಾತ್ರಿಯವರೆಗೂ ಚಲನಚಿತ್ರ ವೀಕ್ಷಿಸುತ್ತಿದ್ದು, ಆ ಸಂದರ್ಭದಲ್ಲಿ ಧೂಮಪಾನ ಮಾಡುವ ದುರಭ್ಯಾಸ ಹೊಂದಿದ್ದರೆ; ತಡರಾತ್ರಿಯವರೆಗೆ ಚಲನಚಿತ್ರ ನೋಡುವುದನ್ನೇ ಅವಾಯ್ಡ್ ಮಾಡಿಕೊಳ್ಳಲು ಯತ್ನಿಸಿ. ಈ ಮೂಲಕ ಧೂಮಪಾನದ ಅವಕಾಶವನ್ನು ಕಡಿತಗೊಳಿಸಿಕೊಳ್ಳಿ.  
  • ದುಶ್ಚಟಗಳ ಬಗ್ಗೆ ತಿಳಿದುಕೊಳ್ಳಿ- ದುಶ್ಚಟಗಳ ಕಾರಣ ಮತ್ತು ಪರಿಣಾಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪ್ರತಿಬಾರಿಯೂ ಸಿಗರೇಟನ್ನು ಬಾಯಿಗೆ ಇಡಬೇಕಾದರೆ ಜಾಗೃತರಾಗಿರಿ; ಮತ್ತು ನಿಮ್ಮ ಸಾಮರ್ಥ್ಯ, ದೌರ್ಬಲ್ಯ, ಸದವಕಾಶ ಹಾಗೂ ಆತಂಕಗಳನ್ನು (SWOT : Strength Weakness Opportunities Threats ) ಪರಿಶೀಲಿಸಿಕೊಳ್ಳಿ. ಇದರಿಂದ ನಿಮ್ಮ ದುಶ್ಚಟಗಳ ಬಗ್ಗೆ ನಿಮಗೆ ಜಾಗೃತಿಯುಂಟಾಗಿ ಎಚ್ಚರದಿಂದಿರಲು ಅನುಕೂಲವಾಗುತ್ತದೆ.
  • ಬರವಣಿಗೆಯಲ್ಲಿ ದಾಖಲಿಸಿ – ನಿಮ್ಮ ವರ್ತನೆಗಳನ್ನು ಮನಸ್ಸಿನಲ್ಲಿ ದಾಖಲಿಸಿಟ್ಟುಕೊಳ್ಳುವುದಕ್ಕಿಂತ ಬರವಣಿಗೆಯ ರೂಪದಲ್ಲಿ ದಾಖಲಿಸಿಡುವುದು ಉತ್ತಮ. ಹೀಗೆ ಬರೆದಿಟ್ಟುಕೊಂಡಿದ್ದನ್ನು ಆಗಾಗ ಓದುತ್ತಿದ್ದರೆ ನಿಮಗೆ ನಿಮ್ಮ ತಪ್ಪುಒಪ್ಪುಗಳ ವಿಮರ್ಶೆ ಮಾಡುವುದು ಸುಲಭವಾಗುತ್ತದೆ. ಹಾಗೆಯೇ; ನಿಮ್ಮ ಆಹಾರ, ಕ್ಯಾಲೊರಿ ಮುಂತಾದವುಗಳನ್ನು ದಾಖಲಿಸಿಕೊಳ್ಳಲು ಸೂಕ್ತವಾದ “ಆ್ಯಪ್” ಡೌನ್ ಲೋಡ್ ಮಾಡಿಕೊಳ್ಳಿ.
    ಇದರಿಂದ ಸಿಗರೇಟ್ ಮತ್ತಿತರ ಮಾರಕ ಪದಾರ್ಥಗಳ ಬಗ್ಗೆ ಗಮನಹರಿಸಲು; ಅದರಿಂದ ಉಂಟಾಗುವ ಅನಾರೋಗ್ಯ - ದುಷ್ಪರಿಣಾಮಗಳು, ಹಾಗೂ ಅಪಾಯಗಳ ಬಗ್ಗೆ ಗಮನ ಹರಿಸುತ್ತಿರಲು ಅನುಕೂಲವಾಗುತ್ತದೆ.

ಈ ಮೇಲಿನ ಸಲಹೆಗಳನ್ನು ಅನುಸರಿಸಿ, ದುಶ್ಚಟಗಳಿಂದ ದೂರವಿರಲು ಪ್ರಯತ್ನಿಸಿ. ಈಗಾಗಲೇ ನೀವು ಇವನ್ನು ಪ್ರಯತ್ನಿಸಿಯೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರದಿದ್ದರೆ ವೈದ್ಯರ ನೆರವು ಪಡೆಯಿರಿ. ದುಶ್ಚಟಗಳನ್ನು ಕೇವಲ ಒಬ್ಬ ವ್ಯಕ್ತಿಯಿಂದ ತಡೆಗಟ್ಟಲು ಸಾಧ್ಯವಿಲ್ಲ. ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ತಜ್ಞರ ಬಾಹ್ಯ ಬೆಂಬಲದ ಅಗತ್ಯವೂ ಅವಶ್ಯವಾಗಿ ಬೇಕಾಗುತ್ತದೆ.

ಈ ಲೇಖನವನ್ನು ಡಾ.ಪೂರ್ವ ರಾನಡೆ, ಸೈಕಾಲಜಿಸ್ಟ್ ಮತ್ತು ಕೌನ್ಸೆಲರ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ.

References

Dr Judson Brewer, "A simple way to break a bad habit."
Association for Psychological Science, "How a Habit Becomes an Addiction."
editors, Benjamin J. Sadock, Virginia A. Sadock. Kaplan & Sadock's Comprehensive Textbook of Psychiatry. Philadelphia :Lippincott Williams & Wilkins, 2000.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org