ವ್ಯಾಯಾಮ ಮತ್ತು ಮಾನಸಿಕ ಆರೋಗ್ಯ

ದೈಹಿಕ ಚಟುವಟಿಕೆಯು ನಿಮ್ಮ ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದಾಗಿದೆ.

“ವ್ಯಾಯಾಮವು ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನಲ್ಲಿ ಎಂಡೊರ್ಫಿನ್ಸ್ ಗಳನ್ನು ಬಿಡುಗಡೆಗೊಳಿಸುವುದರ ಮೂಲಕ ಖಿನ್ನತೆ ಮತ್ತು ಉಳಿದ ಒತ್ತಡ- ಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ,” ಎನ್ನುತ್ತಾರೆ ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಸೈಕಾಲಜಿಸ್ಟ್ ಆಗಿರುವ ಡಾ. ಚೈತನ್ಯ ಶ್ರೀಧರ್.

ನಮ್ಮಲ್ಲಿ ಹೆಚ್ಚಿನವರು, ಆರೋಗ್ಯವೆಂದರೆ ( ಹೆಚ್ಚಿನದಾಗಿ ದೈಹಿಕ ಆರೋಗ್ಯ) ಕಾಯಿಲೆರಹಿತವಾಗಿರುವುದು  ಎಂದಷ್ಟೇ ಭಾವಿಸಿದ್ದಾರೆ. ನಮ್ಮ ಸರ್ವತೋಮುಖ ಆರೋಗ್ಯದಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವೂ ಸಹ ಮುಖ್ಯ ಎಂದು ಕೆಲವರಿಗೆ ಮಾತ್ರ ತಿಳಿದಿದೆ.

ನಮ್ಮ ದೇಹಕ್ಕೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯಿಂದಾಗುವ ಅನುಕೂಲದ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ, ಆದರೆ, ಇವುಗಳು ನಮ್ಮ ಮನಸ್ಸಿನ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರಬಲ್ಲವು ಎಂದು ನಿಮಗೆ ತಿಳಿದಿದೆಯೇ?

ಸ್ಪೋರ್ಟ್ಸ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾದ “Exercise and Brain Neurotransmission”1 ಎಂಬ ಸಂಶೋಧನಾ ಲೇಖನದ ಪ್ರಕಾರ ನಮ್ಮ ಮೆದುಳಿನಲ್ಲಿ ಸೆರೊಟೊನಿನ್ ಮತ್ತು ಡೊಪಮಿನ್ ರಾಸಾಯನಿಕಗಳ ಬಿಡುಗಡೆಗೂ ಮತ್ತು ವ್ಯಾಯಾಮಕ್ಕೂ ಸಂಬಂಧವಿರುವುದು ತಿಳಿದುಬಂದಿದೆ.

ಸೆರೊಟೊನಿನ್ ಮತ್ತು ಡೊಪಮಿನ್ ಗಳ ಪ್ರಮಾಣ ಹೆಚ್ಚಿದಂತೆ ಮಾನಸಿಕ ಚೈತನ್ಯವೂ ಸಹ ವೃದ್ಧಿಸುತ್ತದೆ. ಇದು ಶತ್ರುಭಾವವನ್ನು ಕಡಿಮೆ ಮಾಡಿ, ಸಾಮಾಜಿಕವಾಗಿ ಹೆಚ್ಚು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ. ಇದು ನಿಮ್ಮಲ್ಲಿ ಹಸಿವು, ಜ್ಞಾಪಕ ಶಕ್ತಿ, ಲೈಂಗಿಕ ಬಯಕೆ ಮತ್ತು ಕಾರ್ಯದಕ್ಷತೆಯಲ್ಲಿ ಸುಧಾರಣೆಯನ್ನು ತರುತ್ತದೆ. ನೀವು ಚೆನ್ನಾಗಿ ನಿದ್ರಿಸಬಹುದು. ಉಳಿದ ಚಟುವಟಿಕೆಯ ಮೇಲಿನ ನಿಮ್ಮ ಗಮನ ಮತ್ತು ಏಕಾಗ್ರತೆಯು ಇದರಿಂದ ಹೆಚ್ಚುತ್ತದೆ. ಜೊತೆಗೆ, ನಿಮ್ಮ ಆತ್ಮಗೌರವ, ಜೀವನೋದ್ದೇಶದ ಅರಿವು ಹಾಗೂ ನಿಮ್ಮ ಸ್ವ-ಮೌಲ್ಯವು ವೃದ್ಧಿಸುತ್ತದೆ.

ಒಳ್ಳೆಯ ವ್ಯಾಯಾಮದ ಅಭ್ಯಾಸದಿಂದ ನೀವು ಫಿಟ್ ಆಗಿರಲು ಸಾಧ್ಯವಿದೆ ಎಂಬುದು ನಿಮಗೆ ತಿಳಿದಿದೆ, ಅದಲ್ಲದೇ ವ್ಯಾಯಾಮವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮಗೆ ಅನಾರೋಗ್ಯವುಂಟಾಗುವ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ನಿಯಮಿತ ವ್ಯಾಯಾಮವು ನಿಮ್ಮ ದಿನನಿತ್ಯದ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆಯೆಂಬುದು ನಿಮಗೆ ತಿಳಿದಿದೆಯೇ? ವ್ಯಾಯಾಮದಿಂದ ಆಗುವ ಕೆಲವು ಭಾವನಾತ್ಮಕ ಅನುಕೂಲಗಳನ್ನು ಇಲ್ಲಿ ನೀಡಲಾಗಿದೆ:

  • ಒಳ್ಳೆಯ ದೈಹಿಕ ಆಕಾರವನ್ನು ಪಡೆಯುವುದರಿಂದ ನಿಮಗೆ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ.

  • ಕೆಲವು ವ್ಯಾಯಾಮದ ಗುರಿಗಳನ್ನು ಸಮರ್ಪಕವಾಗಿ ಪೂರೈಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಾಧನೆಯ ಮನೋಭಾವ ಜಾಗೃತಗೊಳ್ಳುತ್ತದೆ. ಉದಾಹರಣೆಗೆ, ನೀವು ನಿಮ್ಮ ಕೆಲಸದಲ್ಲಿ ಎಷ್ಟೇ ಮಗ್ನರಾಗಿದ್ದರೂ ಕೂಡ ಒಂದು ವಾರದಲ್ಲಿ ನಿಗದಿತ ಪ್ರಮಾಣದಲ್ಲಿ ವ್ಯಾಯಾಮವನ್ನು ಮಾಡಬೇಕೆಂದು ನಿರ್ಧರಿಸಿ, ನೀವು ಅದನ್ನು ಪೂರೈಸುವಲ್ಲಿ ಯಶಸ್ವಿಯಾದಾಗ ನಿಮಗೆ ನಿಮ್ಮ ಗುರಿಯನ್ನು ತಲುಪಿದ ತೃಪ್ತಿಯುಂಟಾಗುತ್ತದೆ ಮತ್ತು ಇದು ನೈತಿಕವಾಗಿ ನಿಮ್ಮನ್ನು ಬಲಗೊಳಿಸುತ್ತದೆ.

  • ನೀವು ದೈಹಿಕ ಚಟುವಟಿಕೆಯಲ್ಲಿ ಮಗ್ನರಾಗಿದ್ದಾಗ, ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಯೋಚನೆಗಳು ಉಂಟಾಗುತ್ತವೆ ಮತ್ತು ನಿತ್ಯ ಜೀವನದ ಒತ್ತಡ ಮತ್ತು ಚಿಂತೆಗಳಿಂದ ನಿಮ್ಮನ್ನು ದೂರವಿರಿಸುತ್ತವೆ.

  • ಹೊರಾಂಗಣ ದೈಹಿಕ ಚಟುವಟಿಕೆಯು ವಿನೋದಮಯವಾಗಿರುತ್ತದೆ; ಇದು ನಿಮಗೆ ಸಾಮಾಜಿಕವಾಗಿ ಬರೆಯಲು ಸಹಾಯ ಮಾಡುವ ಜೊತೆಗೆ ನಿಮ್ಮ ಚೈತನ್ಯವನ್ನು ವೃದ್ಧಿಸುತ್ತದೆ.

ಇವು ವ್ಯಾಯಾಮದ ಕೆಲವು ಅನುಕೂಲಗಳಾಗಿವೆ; ಮೂಲಭೂತವಾಗಿ, ವ್ಯಾಯಾಮವು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ಹೆಚ್ಚಿನವರು ವ್ಯಾಯಾಮವೆಂದರೆ ಜಿಮ್ ನಲ್ಲಿ ಮಾಡುವ ಅತ್ಯಂತ ಪರಿಶ್ರಮದ ದೈಹಿಕ ಚಟುವಟಿಕೆಗಳೆಂದು ಭಾವಿಸಿಕೊಂಡು ದೂರವುಳಿದುಬಿಡುತ್ತೇವೆ. ಆದರೆ, ನಿಗದಿತ ನಡಿಗೆ ಮತ್ತು ಜಾಗಿಂಗ್ ಕೂಡಾ ತುಂಬಾ ಪ್ರಯೋಜನಕಾರಿಯಾಗಿವೆ. ಅಲ್ಲದೇ ನಾವು ನಮ್ಮ ಮನಸ್ಥಿತಿಯ ಸಮಸ್ಯೆಗಳಿಗೆ ವ್ಯಾಯಾಮವು ಪರಿಹಾರವಾಗಬಲ್ಲದು ಎಂದು ಯೋಚಿಸುವುದೇ ಇಲ್ಲ. ಅದರ ಬದಲು ನಾವು ಏಕಾಂಗಿಯಾಗಿ ಒಂದೆಡೆ ಕುಳಿತು ಇನ್ನಷ್ಟು ಚಿಂತಾಮಗ್ನರಾಗುತ್ತೇವೆ. ಇದರಿಂದ ನಮ್ಮ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ನಮ್ಮ ಮನಸ್ಸು ಬೇರೆಡೆಗೆ ಹೊರಳಿ ಮನಸ್ಥಿತಿಯು ಸುಧಾರಿಸುತ್ತದೆ. “ಚಲನೆಯು ಮಾನವನ ಎನರ್ಜಿ ಮಟ್ಟವನ್ನು ಬದಲಾಯಿಸುತ್ತದೆ. ಆದ್ದರಿಂದ ಜಂಪ್ ಮಾಡುವುದರಿಂದಲೂ ಮಸಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ,” ಎನ್ನುತ್ತಾರೆ ಡಾ. ಶ್ರೀಧರ್.

ನೀವು ಮದ್ಯಪಾನ ಅಥವಾ ಧೂಮಪಾನದಂತಹ ವ್ಯಸನದಿಂದ ಹೊರಬರಲು ಪ್ರಯತ್ನಿಸುತ್ತಿದ್ದರೆ, ವ್ಯಾಯಾಮವು ನಿಮಗೆ ಬಹಳ ಉಪಯುಕ್ತ.  ಅದರಲ್ಲೂ ಮುಖ್ಯಾವಾಗಿ ಯೋಗಾಭ್ಯಾಸ ಆತಂಕ, ಖಿನ್ನತೆ, ನಿದ್ರಾಹೀನತೆ ಮತ್ತು ಸ್ಕಿಜೋಫ್ರೇನಿಯಾದಂತಹ ಖಾಯಿಲೆಗಳ ಲಕ್ಷಣಗಳನ್ನು ನಿರ್ವಹಿಸಲು ಬಹಳ ಪ್ರಯೋಜನಕಾರಿಯಾಗಿದೆ. ಇದು ಡಿಮೆನ್ಶಿಯಾ ಮತ್ತು ಮುಪ್ಪಿಗೆ-ಸಂಬಂಧಿಸಿದ ಖಾಯಿಲೆಗಳನ್ನು ಮುಂದೂಡಲು ಮತ್ತು ಬಾಲ್ಯದ ಸಮಸ್ಯೆಗಳನ್ನು, ಉದಾಹರಣೆಗೆ ಮಗುವಿನ ಏಕಾಗ್ರತೆ, ನಿರ್ವಹಿಸಲು ಸಹಾಯಕವಾಗಿದೆ.

ಆದರೆ ನಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತಿದೆ ಮತ್ತು ಭವಿಷ್ಯದಲ್ಲಿಯೂ ಈ ಮಟ್ಟವು ಇನ್ನಷ್ಟು ಕ್ಷೀಣಿಸಲಿದೆ. ನಮ್ಮ ಹಿಂದಿನ ತಲೆಮಾರಿನ ಜನರು ಶ್ರಮ-ಪ್ರಧಾನ ಕೆಲಸಗಳಲ್ಲಿ ತೊಡಗಿಕೊಂಡಿದ್ದರು ಮತ್ತು ಸಕ್ರಿಯ ಜೀವನವನ್ನು ನಡೆಸುತ್ತಿದ್ದರು. ಆದರೆ ನಾವು ದಕ್ಷತೆಯನ್ನು ಹೆಚ್ಚಿಸುವ ಭರದಲ್ಲಿ ಯಂತ್ರ-ಪ್ರಧಾನ ವ್ಯವಸ್ಥೆಗೆ ಒಗ್ಗಿಕೊಂಡಿದ್ದು, ದೈಹಿಕ ಶ್ರಮವೂ ಅತ್ಯಂತ ಕಡಿಮೆಯಾಗಿದೆ.

ನಾವು ಸ್ವಲ್ಪ ದೂರ ಹೋಗಲು ಸಹ ನಡೆಯದೆ ವಾಹನವನ್ನು ಬಳಸುತ್ತೇವೆ. ಮೆಟ್ಟಿಲುಗಳ ಬದಲು ಎಸ್ಕಲೇಟರುಗಳು, ಎಲಿವೇಟರುಗಳು ಬಂದಿವೆ. ಅಷ್ಟೇ ಏಕೆ, ಹಲ್ಲುಜ್ಜುವ ಬ್ರಶ್ ಗೂ ಕೂಡಾ ಮೊಟಾರ್ ಅಳವಡಿಸಬಹುದಾಗಿದೆ. ಆದರೆ, ಆತಂಕ ಮತ್ತು ಖಿನ್ನತೆಯಿಂದ ಬಳಲುವವರ ಸಂಖ್ಯೆಯು ಹೆಚ್ಚುತ್ತಿದ್ದು ನಮ್ಮ ಸರ್ವತೋಮುಖ ಆರೋಗ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ.

ಮಾನಸಿಕ ಸಮಸ್ಯೆಗೆ ದೈಹಿಕ ವ್ಯಾಯಾಮದ ಕೊರತೆಯೇ ಕಾರಣವೆಂದು ನೇರವಾಗಿ ಹೇಳು ಸಾಧ್ಯವಿಲ್ಲವಾದರೂ, ನಿಯಮಿತವಾದ ವ್ಯಾಯಾಮದಿಂದಾಗಿ ನೀವು ಒತ್ತಡ ಸಮಸ್ಯೆಯನ್ನು ಬಹುಮಟ್ಟಿಗೆ ತಪ್ಪಿಸಬಹುದು. ನಿಯಮಿತವಾದ ನಡಿಗೆಯಂತಹ ಸರಳ ಚಟುವಟಿಕೆಗಳು ಕೂಡಾ ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತವೆಯೆಂದರೆ, ಅವುಗಳಿಗಾಗಿ ನೀವು ಸ್ವಲ್ಪ ಸಮಯ ಮೀಸಲಿಡುವುದು ಒಳ್ಳೆಯದಲ್ಲವೇ?

ಓಟಗಾರರ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, “ತಮ್ಮ ಹೆಚ್ಚಿನ ದೈಹಿಕ ಕ್ಷಮತೆ ಮತ್ತು ಸಾಧನೆಯ ತೃಪ್ತಿ, ಹೆಮ್ಮೆ, ಸಾಮರ್ಥ್ಯದ ಬಗ್ಗೆ ಭರವಸೆಯ ಕಾರಣದಿಂದ ಓಟಗಾರರು ಅತ್ಯಂತ ಸಂತೋಷದಿಂದ ಹಾಗೂ ಆತ್ಮವಿಶ್ವಾಸದಿಂದ ಇರುತ್ತಾರೆ,” ಎಂದು ಡಾ. ಶ್ರೀಧರ್ ತಿಳಿಸುತ್ತಾರೆ.

1. R Meeusen, K De Meirleir, “Exercise and Brain Neurotransmission", Sports Medicine20.3 (1995): 160-188

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org