ನನ್ನ ಥೆರಪಿಸ್ಟ್ ನನಗೆ ಸರಿಯೆಂದು ಹೇಗೆ ಗೊತ್ತಾಗುತ್ತದೆ?

ನನ್ನ ಥೆರಪಿಸ್ಟ್ ನನಗೆ ಸರಿಯೆಂದು ಹೇಗೆ ಗೊತ್ತಾಗುತ್ತದೆ?

ಒಬ್ಬ ಒಳ್ಳೆಯ ಥೆರಪಿಸ್ಟ್‌ ಅನ್ನು ಹುಡುಕುವುದೆಂದರೆ, ದೀರ್ಘಕಾಲ ಬಾಳಿಕೆ ಬರುವ, ಆರಾಮದಾಯಕ ಪಾದರಕ್ಷೆಗಳನ್ನು ಹುಡುಕಿದಂತೆ. ಜೀವನದಪಥದಲ್ಲಿ ಸಾಗುತ್ತಿರುವಾಗ, ನಮ್ಮ ಮನಸ್ಸು, ಹೃದಯ ಮತ್ತು ನಮ್ಮ ಪಾದಗಳಿಗೆ, ಒಂದಲ್ಲ ಒಂದು ರೀತಿಯಲ್ಲಿ ಗಾಯಗಾಳಾಗುತ್ತವೆ. ಕೆಲವು ದೊಡ್ಡವು, ಕೆಲವು ಸಣ್ಣ – ಪುಟ್ಟ ಗಾಯಗಳು. ಪಾದಗಳಿಗೆ ಪೆಟ್ಟಾದಾಗ, ಆ ಗಾಯವು ವಾಸಿಯಾಗಲು ಬಹಳಷ್ಟು ಸಮಯ ಬೇಕಾಗುತ್ತದೆ. ಏಕೆಂದರೆ ನಾವು ಸದಾ ನಮ್ಮ ಪಾದಗಳನ್ನು ಬಳಸುತ್ತಿರುತ್ತೇವೆ. ಅದೇ ರೀತಿ ನಮ್ಮ ಮನಸ್ಸನ್ನು ಕೂಡ. ಅದನ್ನು ನಾವು ನಿರಂತರವಾಗಿ, ಎಡೆಬಿಡದೆ ಬಳಸುತ್ತೇವೆ. ನಾವು ನಿದ್ರಿಸುತ್ತಿರುವಾಗಲೂ ಅದು ಕೆಲಸ ಮಾಡುತ್ತಿರುತ್ತದೆ. ಮನಸ್ಸಿಗೆ ಆಗಿರುವ ಗಾಯ ಮಾಸಲು ಬಹಳಷ್ಟು ಸಮಯ ಬೇಕಾಗುತ್ತದ. ಚಿಕಿತ್ಸೆಗಳಿಂದ ತಕ್ಷಣದ ಪರಿಹಾರ ಸಿಗುವುದಿಲ್ಲ ಮತ್ತು ಇದು ಸಂಪೂರ್ಣ ಸರಿಹೊಂದಲು ನಿರಂತರ ಚಿಕಿತ್ಸೆಯ ಅಗತ್ಯವಿದೆ. ಇದಕ್ಕಾಗಿ ಸೂಕ್ತ ಥೆರಪಿಸ್ಟ್‌ ಅನ್ನು ಹುಡುಕುವುದು ಅತ್ಯಗತ್ಯ.

ಒಬ್ಬ ಉತ್ತಮ ಥೆರಪಿಸ್ಟ್ ನಮ್ಮ ಮಾನಸಿಕ ಉದ್ವೇಗವನ್ನು ಹಂಚಿಕೊಳ್ಳಲು ಸುರಕ್ಷಿತವಾದ, ಪೂರ್ವಾಗ್ರಹ ಪೀಡಿತವಲ್ಲದ, ಮತ್ತು ಮುಕ್ತವಾದ ಅವಕಾಶ ಕಲ್ಪಿಸುತ್ತಾರೆ. ಸಹಾನುಭೂತಿಯಿಂದ ತಮ್ಮ ಅನುಭವ ಮತ್ತು ತಿಳುವಳಿಕೆಯಿಂದ ಅಗತ್ಯ ಬೆಂಬಲ ನೀಡುತ್ತಾರೆ. ನಮಗೆ ಸರಿಹೊಂದದ ಪಾದರಕ್ಷೆಗಳು ಕೆಲವೊಮ್ಮೆ ಗಾಯ ಮಾಡುತ್ತವೆ, ನೋವುಂಟುಮಾಡುತ್ತವೆ. ಹಾಗೆಯೇ ಚಿಕಿತ್ಸಕರ ವಿಷಯದಲ್ಲಿ ತಪ್ಪು ಆಯ್ಕೆ ನಮ್ಮನ್ನು ಹೆಚ್ಚು ಘಾಸಿಗೊಳಿಸುವ ಅವಕಾಶವಿರುತ್ತದೆ. ಆದ್ದರಿಂದ ನಮಗೆ ಸರಿಹೊಂದುವಂತಹ ಚಿಕಿತ್ಸಕರನ್ನು ಆಯ್ಕೆ ಮಾಡಿಕೊಳ್ಳುವುದು ಅತಿಮುಖ್ಯ. ಇಲ್ಲಿ ಸೂಕ್ತ ಚಿಕಿತ್ಸಕರನ್ನು ಆಯ್ಕೆಮಾಡಲು ಅನುಸರಿಸಬೇಕಾದ ಕೆಲವು ಮಾನದಂಡಗಳನ್ನು ನೀಡಲಾಗಿದೆ.

ಉತ್ತಮ ಥೆರಪಿಸ್ಟ್‌ ಅನ್ನು ಆಯ್ದುಕೊಳ್ಳಿ, ಅನುಕೂಲವಾದವರನ್ನಲ್ಲ…

ನಮ್ಮ ಜೀವನದಲ್ಲಿ ಹಣ ಮತ್ತು ಅನುಕೂಲಗಳಿಗೆ ಎಷ್ಟು ಪ್ರಾಮುಖ್ಯ ನೀಡುತ್ತೇವೆಯೋ, ನಮ್ಮ ಮಾನಸಿಕ ಆರೋಗ್ಯಕ್ಕೂ ಅಷ್ಟೇ (ವಾಸ್ತದಲ್ಲಿ, ಅದಕ್ಕಿಂತ ಹೆಚ್ಚು) ಪ್ರಾಧಾನ್ಯತೆ ನೀಡಬೇಕು. ಆದರೆ ಅದು ತುಂಬಾ ಕಷ್ಟದ ವಿಷಯ. ಏಕೆಂದರೆ ಮಾನಸಿಕ ಖಿನ್ನತೆಗೆ ಒಳಗಾದಾಗ ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುವುದು ಅಷ್ಟು ಸುಲಭವಲ್ಲ.

ಥೆರಪಿಸ್ಟ್‌ ಅನ್ನು ಹುಡುಕುವಾಗ ನಿಮಗೆ ಸಮೀಪವಿರುವ ಮತ್ತು ನಿಮಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವ ಸಾಧ್ಯತೆ ಇರುವಂಥವರನ್ನು ಹುಡುಕುವುದು ಒಳ್ಳೆಯದು. ಆದರೆ ಇದೊಂದೇ ನಿಮ್ಮ ಆಯ್ಕೆಯಾಗಿರಬಾರದು. ಯಾವಾಗಲೂ, ಏನಾದರೊಂದು ಅಡೆತಡೆ ಇದ್ದೇ ಇರುತ್ತದೆ. ಉದಾಹರಣೆಗೆ, ನಿಮ್ಮ ಉದ್ಯೋಗ / ಶಾಲಾ - ಕಾಲೇಜಿನ ಸಮಯ ಇತ್ಯಾದಿ. ಆದರೆ ನೆನಪಿಡಿ, ಚಿಕಿತ್ಸೆ ನಿಮ್ಮ ಸಮಯಕ್ಕಾಗಿ ಕಾಯುವುದಿಲ್ಲ. ನೀವು ನಿಮ್ಮ ವೇಳಾಪಟ್ಟಿಯಲ್ಲಿ  ನಿಮಗೋಸ್ಕರ ಸಮಯವನ್ನು ಹೊಂದಿಸಿಕೊಳ್ಳಬೇಕು. ಗ್ರಾಹಕರಿಗೆ / ರೋಗಿಗೆ ಚಿಕಿತ್ಸೆಯೇ ಪ್ರಮುಖ ಆದ್ಯತೆ. “ಗೂಗಲ್”ನಲ್ಲಿ ಹುಡುಕಿದಾಗ ಮೊಟ್ಟಮೊದಲು ದೊರೆಯುವ ವಿಳಾಸ/ಮಾಹಿತಿಯು ನಮಗೆ ಸಂಪರ್ಕ ಸಾಧಿಸಲು ಸುಲಭವೆನಿಸುತ್ತದೆ. ಆದರೆ ಸರಿಯಾಗಿ ಸಮಾಲೋಚನೆ ನಡೆಸದೆ ತೆಗೆದುಕೊಳ್ಳುವ ನಿರ್ಧಾರಗಳು ಸಮಂಜಸವಾಗಿರುವುದಿಲ್ಲ. ಸಮಯಾವಕಾಶ ತೆಗೆದುಕೊಳ್ಳಿ, ಯೋಚಿಸಿ ನಿರ್ಧರಿಸಿ. ಭಾರತದಲ್ಲಿ ತಜ್ಞ ಮನೋಚಿಕಿತ್ಸಕರ ಕೊರತೆಯಿದೆ. ಆದ್ದರಿಂದ ಸೂಕ್ತ ವೈದ್ಯರನ್ನು ಕಂಡುಕೊಳ್ಳಲು ಆನ್ ಲೈನ್ ನಲ್ಲಿ ಸರಿಯಾಗಿ ಹುಡುಕಾಟ ನಡೆಸುವುದು ಸೂಕ್ತ.

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಥೆರಪಿಸ್ಟ್‌ ಅನ್ನು ಆಯ್ಕೆ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಖರ್ಚು ವೆಚ್ಚಗಳು ಕಡಿಮೆಯಾಗುತ್ತವೆ ಹಾಗು ಮಾನಸಿಕ ಮತ್ತು ದೈಹಿಕ ಚಿಕಿತ್ಸೆಗಾಗಿ ಹೂಡುವ ಬಂಡವಾಳವು ಸಾರ್ಥಕವಾಗುತ್ತದೆ. ಚಿಕಿತ್ಸಕರ ಶುಲ್ಕ, ಅವರ ಅನುಭವ, ಅರ್ಹತೆಗೆ ಅನುಗುಣವಾಗಿ ನಿಗದಿಯಾಗಿರುತ್ತದೆ. ಹೆಚ್ಚು ಹಣ ಪಡೆಯುವ ಚಿಕಿತ್ಸಕರು ಚೆನ್ನಾಗಿ ಚಿಕಿತ್ಸೆ ನೀಡುವವರೆಂದೇನಲ್ಲ. ಹಾಗೆಯೇ ಸರಿಯಾಗಿ ತರಬೇತಿ ಹೊಂದಿರದೆ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವೈದ್ಯರು ಕೂಡಾ ಸೂಕ್ತ ಚಿಕಿತ್ಸೆ ನೀಡಲಾರರು. ಇದರಿಂದ ನಿಮ್ಮ ಆರೋಗ್ಯಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಎಲ್ಲ ರೀತಿಯಲ್ಲೂ ಪರಿಶೀಲಿಸಿ ಸರಿಯಾದ ಥೆರಪಿಸ್ಟ್‌ರನ್ನು ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲಾ ಥೆರಪಿಸ್ಟ್‌ಗಳು ಎಲ್ಲರಿಗೂ ಹೊಂದಾಣಿಕೆಯಾಗುವುದಿಲ್ಲ; ನಿಮಗೆ ಸರಿಹೊಂದುವವರನ್ನು ಆಯ್ದುಕೊಳ್ಳಿ

ಯಾವುದೇ ಒಂದು ಜೊತೆ ಪಾದರಕ್ಷೆ ಎಲ್ಲರ ಪಾದಗಳಿಗೂ ಸರಿಹೊಂದುವುದಿಲ್ಲ. ಪ್ರತಿಯೊಬ್ಬರ ಪಾದದ ಅಳತೆ, ಅಗತ್ಯಗಳು, ಮತ್ತು ಅದರ ಅನುಕೂಲಗಳು ಬೇರೆಬೇರೆಯಾಗಿರುತ್ತವೆ. ನಮಗೆ ಸರಿಹೊಂದುವ ಪಾದರಕ್ಷೆಗಳನ್ನೇ ನಾವು ಆರಿಸುತ್ತೇವೆ. ಅಂತೆಯೇ ನಿಮ್ಮ ನಿರೀಕ್ಷೆಗೆ ತಕ್ಕಂತೆ ಸೂಕ್ತ ಚಿಕಿತ್ಸಕರನ್ನು ಸಂಪರ್ಕಿಸಿ. ಬಹಳಷ್ಟು ಚಿಕಿತ್ಸಕರ ಜಾಲತಾಣಗಳು / ಬರಹಗಳು ನಿಮಗೆ ಅಗತ್ಯವಿರುವ ಸಲಹೆಗಳನ್ನು ನೀಡಬಲ್ಲವು. ನಿಮ್ಮ ಅಗತ್ಯಗಳನ್ನು ಪೂರೈಸಬಲ್ಲ ಚಿಕಿತ್ಸಕರನ್ನು ಕಂಡುಕೊಳ್ಳಲು, ಆಯ್ಕೆ ಮಾಡಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ.

ನಿಮ್ಮ ಒಳ ದನಿಯನ್ನು ಆಲಿಸಿ

ಮೊದಲ ಭೇಟಿಗೆ ಸಮಯ ನಿಗದಿ ಮಾಡುವ ಮುನ್ನ ಅಥವಾ ಮೊದಲ ಭೇಟಿಯ ನಂತರ ವೈದ್ಯರ ಕುರಿತು ನಿಮಗೆ ಏನನ್ನಿಸಿತು ಎಂದು ಸ್ಪಷ್ಟವಾಗಿ ಕಂಡುಕೊಳ್ಳಿ. ಅವರೊಡನೆ ನಿಸ್ಸಂಕೋಚವಾಗಿ ಮಾತನಾಡಬಹುದೇ? ಅವರೊಡನೆ ಈ ಹಿಂದೆ / ಪ್ರಸ್ತುತ / ನಂತರದಲ್ಲಿ ಭೇಟಿಯಾದಾಗ / ಇ-ಮೇಲ್ ಮೂಲಕ ಸಂಪರ್ಕಿಸಿದಾಗ ಹೇಗೆನ್ನಿಸಿತು? ಆ ಸಮಯದಲ್ಲೇ ನೀವು ನಿರ್ಧಾರಕ್ಕೆ ಬಂದಿರಾ? ಅವರನ್ನು ಹೇಗೆ ನಂಬಿದಿರಿ?

ಇಲ್ಲಿ ನೀವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಯಾವುದೇ ಚಿಕಿತ್ಸೆಯು ತಕ್ಷಣದಲ್ಲಿ ಪರಿಹಾರ ನೀಡುವುದಿಲ್ಲ. ವೈದ್ಯರೊಂದಿಗೆ ಕೇವಲ ಕೆಲವು ಭೇಟಿಗಳಲ್ಲಿ ರೂಪಾಂತರ ಹೊಂದುವುದು ಸಾಧ್ಯವಿಲ್ಲ. ನಿಮ್ಮ ವೈಯಕ್ತಿಕ ಅಡ್ಡಿ – ಆತಂಕಗಳಿಂದಾಗಿ ವೈದ್ಯರೊಡನೆ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲಾಗದಿದ್ದರೆ, ಮಾತನಾಡಲು ಅನಾನುಕೂಲವೆನಿಸಿದರೆ, ಆ ಚಿಕಿತ್ಸಕರು ನಿಮಗೆ  ಸರಿಹೊಂದುತ್ತಿಲ್ಲ ಅನ್ನಿಸಬಹುದು. ಈ ವಿಷಯವನ್ನು ಅವರಿಗೆ ತಿಳಿಸುವುದು ಮತ್ತು ಏಕೆ ಹೀಗಾಗುತ್ತಿದೆಯೆಂದು ತಿಳಿದುಕೊಳ್ಳುವುದು ಒಳ್ಳೆಯದು. ಇಂತಹ ವಿಷಯಗಳನ್ನು ಗುರುತಿಸುವುದರಿಂದ, ಪ್ರಾಮಾಣಿಕವಾಗಿ ಹೇಳಿಕೊಳ್ಳುವುದರಿಂದ ವೈದ್ಯರೊಡನೆ ನಿಮ್ಮ ಬಾಂಧವ್ಯ ಚೆನ್ನಾಗಿರುತ್ತದೆ.  ವೈದ್ಯರು ನಿಮ್ಮ ಕಾಳಜಿಯನ್ನು ಗಮನಿಸಿ ಸೂಕ್ತವಾಗಿ ಪ್ರತಿಕ್ರಿಯಿಸುವುದರಿಂದ ಅವರ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಥೆರಪಿಸ್ಟ್‌ರ ತಾತ್ವಿಕ ನಿಲುವುಗಳನ್ನು ಅರ್ಥಮಾಡಿಕೊಳ್ಳಿ

ತಾತ್ವಿಕ ನಿಲುವುಗಳು ಎಂದರೆ; ಚಿಕಿತ್ಸಕರು ರೋಗಿಯ ನಿರ್ದಿಷ್ಟ ಮಾನಸಿಕ ಸಮಸ್ಯೆಯನ್ನು ತಿಳಿದುಕೊಳ್ಳಲು / ಗುರುತಿಸಲು ಬಳಸುವ ಚಿಂತನಾ ವಿಧಾನವಾಗಿದೆ. ಆಪ್ತ ಸಮಾಲೋಚನೆ ಹಾಗೂ ಸೈಕೋ ಥೆರಪಿಯಲ್ಲಿ ಎರಡು ವಿಭಾಗಗಳಿವೆ; ಪರಿಹಾರ ಕೇಂದ್ರಿತ ಮತ್ತು ಮನಸ್ಸಿನ ಅಂತರಾಳದ ಭಾವನೆಗಳ ಆಧಾರಿತ ಚಿಕಿತ್ಸೆ.

ಉದಾಹರಣೆಗೆ: ಧೂಮಪಾನವನ್ನು ತ್ಯಜಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ರೋಗಿಯ ಸಮಸ್ಯೆ ಎಂದಾದರೆ, ಥೆರಪಿಸ್ಟ್ ಗೆ ಅದನ್ನು ಸರಿಪಡಿಸಲು ಹಲವಾರು ಮಾರ್ಗಗಳಿವೆ. ಪರಿಹಾರ ಕೇಂದ್ರೀಕೃತ ಚಿಕಿತ್ಸೆಯ ಅಧಾರದ ಮೇಲೆ ಚಿಕಿತ್ಸೆ ನೀಡುವವರು, ಅಂದರೆ ಸಿ ಬಿ ಟಿ ಪ್ರಾಕ್ಟೀಶನರ್. ಇವರು ರೋಗಿಯ ಸಮಸ್ಯೆಯನ್ನು ಗುರುತಿಸಿ ಅವರ ಆಲೋಚನೆಯ ವಿಧಾನವನ್ನು ಬದಲಿಸಿ, ಅವರ ಪರಿಸರವನ್ನು ಗುರುತಿಸಿ, ಚಿಕಿತ್ಸೆ ನೀಡಬಲ್ಲರು. ಆದ್ದರಿಂದ ಈ ಚಿಕಿತ್ಸೆಯು ಸಮಸ್ಯೆಯ ಮೇಲೆ ಪ್ರಬಲವಾದ ಪರಿಣಾಮವನ್ನೇ ಬೀರಬಹುದು.

ಅಂತರಂಗದ  ಭಾವನೆಗಳನ್ನು ಅರಿತು ಚಿಕಿತ್ಸೆ ನೀಡುವ ವೈದ್ಯರು, ತನ್ನ ಗ್ರಾಹಕನಿಗೆ / ರೋಗಿಗೆ ಇರುವ ಧೂಮಪಾನದ ಚಟಕ್ಕೆ ಕಾರಣವಾಗಿರುವ ಅಂಶಗಳನ್ನು ಬೇರುಮಟ್ಟದಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ರೋಗಿಯ ಈ ದುಶ್ಚಟಕ್ಕಿರುವ ಕಾರಣಗಳು, ಉದ್ದೇಶಗಳು ಮತ್ತು ಅವನ ಅನಿವಾರ್ಯತೆಯನ್ನು ಗಮನಿಸುವುದು ಈ ಚಿಕಿತ್ಸೆಯ ಭಾಗವಾಗಿರುತ್ತದೆ. ಈ ವಿಧಾನದಿಂದ ಚಿಕಿತ್ಸೆ ನಡೆಸುವಾಗ ವ್ಯಕ್ತಿಯ ಭಾವನೆಗಳ, ಮಾನಸಿಕ ಸ್ಥಿತಿ ಗತಿಗಳ, ಸಂಬಂಧಗಳ ಮೇಲೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಈ ಚಿಕಿತ್ಸಾ ವಿಧಾನವು, ನಿಮ್ಮ  ದುಶ್ಚಟವನ್ನು ಬಿಡಿಸಿ ಸರಿ ದಾರಿಗೆ ತರುವ ನಿಟ್ಟಿನಲ್ಲಿ, ನಿಮ್ಮ ಅಂತರಾಳದ ಗೊಂದಲಗಳನ್ನು ಪೀನಮಸೂರದಿಂದ ಹುಡುಕಿ ಜಾಲಾಡಿದಂತೆ. ಒಳಗೆ ಹುದುಗಿರುವ ಯಾವ ಭಾವನೆ ನಿಮ್ಮ ದುಶ್ಚಟಕ್ಕೆ ಕಾರಣವಾಗಿದೆ ಎಂದು ಹುಡುಕಿ ತೆಗೆದು, ಅದಕ್ಕೆ ಪರಿಹಾರ ನೀಡುತ್ತದೆ.

ಅರ್ಹತೆಗಳು, ಅರ್ಹತೆಗಳು, ಅರ್ಹತೆಗಳು

ದುರಾದೃಷ್ಟವಶಾತ್, ಭಾರತದಲ್ಲಿ ನಿಯಂತ್ರಣ ಸಂಸ್ಥೆಗಳ ಕೊರತೆಯಿಂದಾಗಿ ಸೂಕ್ತ ವಿದ್ಯಾರ್ಹತೆ ಹೊಂದಿರದೆ ತಮ್ಮನ್ನು ತಾವು “ಆಪ್ತ ಸಮಾಲೋಚಕರು” ಎಂದು ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೀವು ಒಬ್ಬರನ್ನು ಭೇಟಿಯಾಗುವುದಕ್ಕೆ ಮುಂಚೆ, ಅವರ ವಿದ್ಯಾರ್ಹತೆಯನ್ನು ಗಮನಿಸುವುದು ಅತ್ಯವಶ್ಯಕ. ಕನಿಷ್ಟ ವಿದ್ಯಾರ್ಹತೆಯೆಂದರೆ ಅಧಿಕೃತ ವಿಶ್ವವಿದ್ಯಾಲಯ / ಕಾಲೇಜುಗಳಿಂದ ಪಡೆದಿರುವ ಸ್ನಾತಕೋತ್ತರ ಪದವಿ. ಬಹಳಷ್ಟು ಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ ಅರ್ಹ ಚಿಕಿತ್ಸಕರು ಶಿಕ್ಷಣ ಪಡೆದು ಹೊರಬಂದಿದ್ದಾರೆ. ಚಿಕಿತ್ಸಕರಿಗೆ ಇರಬೇಕಾದ ಸೂಕ್ತ ವಿದ್ಯಾರ್ಹತೆಯ ಬಗ್ಗೆ ನಿಮಗೆ ಖಚಿತ ತಿಳುವಳಿಕೆ ಇಲ್ಲದಿದ್ದಲ್ಲಿ, ಪಟ್ಟಿ ಮಾಡಿರುವ ಪೋಸ್ಟ್-ಗ್ರಾಜ್ಯುಯೇಟ್ ಪ್ರೋಗ್ರಾಂಗಳ ಬಗ್ಗೆ ತಿಳಿದುಕೊಳ್ಳಿ. ಆನ್ ಲೈನ್ ಮೂಲಕ ಪದವಿ ಪಡೆದಿರುವ ಸಮಾಲೋಚಕರ ಬಗ್ಗೆ ಜಾಗರೂಕರಾಗಿರಿ. ಅವರಿಗೆ ಯಾವುದೇ ರೀತಿಯ ಪ್ರಾಯೋಗಿಕ ಅನುಭವ ಇರುವುದಿಲ್ಲ. ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಅವರಿಗೆ ರೋಗಿಯನ್ನು ಪರೀಕ್ಷಿಸುವ ನೈತಿಕತೆ ಇರುವುದಿಲ್ಲ. ಭಾರತದ ಹಲವು ಖಾಸಗಿ ಸಂಸ್ಥೆಗಳು ಕೌನ್ಸೆಲಿಂಗ್ ಸರ್ಟಿಫಿಕೇಟ್ಸ್ ಅಥವಾ ಡಿಪ್ಲೊಮಾ ಪದವಿಯನ್ನು ನೀಡುತ್ತವೆ. ಆದರೆ ಇವು ಪದವಿಗೆ ಸಮನಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ; ಅಂತಹ ಡಿಪ್ಲೊಮಾ ಪಡೆದಿರುವವರು ರೋಗಿಗೆ ಸಮರ್ಪಕ ಚಿಕಿತ್ಸೆ ನೀಡಲು ಅರ್ಹರಾಗಿರುವುದಿಲ್ಲ. ಕ್ರಮಬದ್ಧ ತರಬೇತಿ ಹೊಂದಿರದ ಸೈಕಿಯಾಟ್ರಿಸ್ಟ್’ಗಳು ಸಹ ಚಿಕಿತ್ಸೆನೀಡಲು ಅರ್ಹರಲ್ಲ. ಮತ್ತು ಅವರು ತಮ್ಮನ್ನು ಸೈಕೋತೆರಪಿಸ್ಟ್/ಕೌನ್ಸೆಲರ್ ಎಂದು ಕರೆದುಕೊಳ್ಳುವಂತಿಲ್ಲ.

ನೈತಿಕ ಮೌಲ್ಯಗಳು

ಥೆರಪಿಸ್ಟ್  ಕೆಲಸದಲ್ಲಿ ನೈತಿಕತೆ ಅತಿ ಮುಖ್ಯ. ಅಂತೆಯೇ ಗೌಪ್ಯತೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು  ಅನಿವಾರ್ಯ ಸಂದರ್ಭಗಳಲ್ಲಿ (ಉದಾಹರಣೆಗೆ, ಒಬ್ಬ ವ್ಯಕ್ತಿ ಆತ್ಮಹತ್ಯೆಯ ಆಲೋಚನೆ ಹೊಂದಿದ್ದರೆ, ಇತರರಿಗೆ ಹಾನಿ ಮಾಡಬಹುದಾದ ಸಾಧ್ಯತೆಗಳಿದ್ದರೆ, ನ್ಯಾಯಾಲಯದಿಂದ ಆಜ್ಞೆಯಾಗಿದ್ದರೆ, ಇತ್ಯಾದಿ) ಗೌಪ್ಯತೆಯನ್ನು ಮುರಿಯಬೇಕಾಗುತ್ತದೆ. ಒಬ್ಬ ಉತ್ತಮ ಚಿಕಿತ್ಸಕ ನಿಮ್ಮೊಂದಿಗಿನ ಸಂಭಾಷಣೆಯನ್ನು ನಿಮ್ಮ ಕುಟುಂಬದ ಸದಸ್ಯರಿಗಾಗಲಿ, ಸ್ನೇಹಿತರಿಗಾಗಲೀ ಅಥವಾ ತನ್ನ ಆಪ್ತವಲಯದಲ್ಲಾಗಲೀ (ಮೇಲೆ ತಿಳಿಸಲಾಗಿರುವ ಸಂದರ್ಭಗಳನ್ನು ಹೊರತುಪಡಿಸಿ) ಯಾರಿಗೂ ತಿಳಿಸುವುದಿಲ್ಲ. ಉತ್ತಮ ಚಿಕಿತ್ಸಕರು ಯಾವುದೇ ಪೂರ್ವನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ, ತೀರ್ಪನ್ನು ಪ್ರಕಟಿಸುವುದಿಲ್ಲ ಮತ್ತು ಗ್ರಾಹಕ / ರೋಗಿಯಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾರೆ. ನಿಮ್ಮ ಹಕ್ಕುಗಳಬಗ್ಗೆ ಹಾಗು ಚಿಕಿತ್ಸಕರಿಂದ ನಿರೀಕ್ಷಿಸಬಹುದಾದ ಚಿಕಿತ್ಸೆಯಬಗ್ಗೆ ತಿಳಿದುಕೊಳ್ಳಲು ಅಧಿಕೃತ ಅಂತರಾಷ್ಟ್ರೀಯ ಸಂಸ್ಥೆಗಳಾದ ಎ ಪಿ ಎ (ಅಮೆರಿಕನ್ ಸೈಕೋಲೋಜಿಕಲ್ ಅಸೋಸಿಯೇಷನ್) ಅಥವಾ ಬಿ ಎ ಸಿ ಪಿ (ಬ್ರಿಟಿಷ್ ಅಸೋಸಿಯೇಷನ್ ಫಾರ್ ಕೌನ್ಸೆಲಿಂಗ್ ಅ್ಯಾಂಡ್ ಸೈಕೋಥೆರಪಿ) ಅನ್ನು ಸಂಪರ್ಕಿಸಬಹುದು.

ಚಿಕಿತ್ಸೆ  ಸ್ನೇಹವಲ್ಲ

ಚಿಕಿತ್ಸೆ ಪಡೆಯುವುದು ಎಂದರೆ, ಸ್ನೇಹ ಬೆಳೆಸುವುದಲ್ಲ. ಥೆರಪಿಸ್ಟ್  ನಿಮ್ಮ ಸಮಸ್ಯೆಗಳನ್ನು ಹೊರಲು ಇರುವ ಹೆಗಲಲ್ಲ ಮತ್ತು ಎಲ್ಲವನ್ನೂ ಕೇಳಿಸಿಕೊಳ್ಳುವ ಕಿವಿಯಲ್ಲ. ಸಲಹೆಯನ್ನು ಪಡೆಯುವುದು ಮತ್ತು ಅಭಿಪ್ರಾಯಗಳನ್ನುಹೇರುವುದು ಇದರ ಕೆಲಸವಲ್ಲ. ಚಿಕಿತ್ಸೆಯು ಎಲ್ಲಾ ಸಮಯದಲ್ಲೂ ನಿಮಗೆ ಒಳ್ಳೆಯ ಅನುಭವ ನೀಡುವುದಿಲ್ಲ. ಏಕೆಂದರೆ ಇದು ಸತ್ಯಕ್ಕೆ ಕನ್ನಡಿಯನ್ನು ಹಿಡಿದಿರುತ್ತದೆ. ನಿಮ್ಮ ಮಿತ್ರರಿಂದ ಇದನ್ನು ಮಾಡಲು ಸಾಧ್ಯವಿಲ್ಲ. ಚಿಕಿತ್ಸಕರು ಸ್ನೇಹಿತರಾಗಿರದೇ, ಎಲ್ಲಾ ಸಮಸ್ಯೆಗಳನ್ನು ಸಂಕೀರ್ಣವಾದ “ಸೈಕೋಲೋಜಿಕಲ್ ಥಿಯರಿ”ಗಳನ್ನು ಗಮನದಲ್ಲಿಟ್ಟುಕೊಂಡು, ಅನಿಸಿಕೆ - ಭಾವನೆಗಳನ್ನು ಗುರುತಿಸಿ, ಆಳವಾಗಿ ಅವಲೋಕಿಸಿ, ಸಹಾನುಭೂತಿಯಿಂದ ಚಿಕಿತ್ಸೆನೀಡುತ್ತಾರೆ. ಇದರಿಂದ ನಿಮಗೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಮಾನಸಿಕ ತಳಮಳಗಳನ್ನು ಹಂಚಿಕೊಳ್ಳಲು ಸೂಕ್ತ-ಸುರಕ್ಷಿತ ಅವಕಾಶವನ್ನು ಕಲ್ಪಿಸಿದಂತಾಗುತ್ತದೆ. ಗ್ರಾಹಕ/ರೋಗಿ ಕ್ರಿಯಾಶೀಲನಾದರೆ, ಚಿಕಿತ್ಸೆ ಉತ್ತಮವಾಗಿದೆ ಎಂದರ್ಥ.

ಥೆರಪಿಸ್ಟ್  ಊರುಗೋಲನ್ನು ನೀಡಬಲ್ಲರು,ಆದರೆ ನಡೆಯಬೇಕಾದವನು ರೋಗಿಯೇ ಎಂಬುದನ್ನು ನೆನಪಿನಲ್ಲಿಡಬೇಕು.

ರಿಯಾ ಗಾಂಧಿ, ಸ್ಕಾಟ್ಲೆಂಡಿನ ಎಡಿನ್’ಬರ್ಗ್ ಯುನಿವರ್ಸಿಟಿಯಲ್ಲಿ ತರಬೇತಿ ಪಡೆದ ಮನೋಚಿಕಿತ್ಸಕರಾಗಿದ್ದಾರೆ. ಮುಂಬಯಿಯಲ್ಲಿ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದು, ವ್ಯಕ್ತಿ ಕೇಂದ್ರಿತ ಸಂವಾದದ ಮೂಲಕ ಚಿಕಿತ್ಸೆ ನೀಡುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org