ನಿರೂಪಣೆ: ವಿಮಾವನ್ನೇರುವ ಬಗ್ಗೆ ಯೋಚನೆ ಮಾಡಿದರೂ ಆಕೆಗೆ ಉದ್ವೇಗ!

ಫೋಬಿಯಾಗಳಿಗೆ ಚಿಕಿತ್ಸೆಯಿದೆ; ನಿಮ್ಮ ಜೀವನವನ್ನು ಹಾಳು ಮಾಡಲು ಅವುಗಳಿಗೆ ಬಿಡಬೇಡಿ.

ಕೊನೇ ಕ್ಷಣದಲ್ಲಿ ರಾಜಸ್ಥಾನ ಪ್ರವಾಸವನ್ನು ರದ್ದು ಮಾಡಿದ ನಂತರ ಶಾಂತಾ ಹೆಗಡೆ ತನ್ನ ಸಂಬಂಧಿಯ ಜತೆ ಮನೋವೈದ್ಯರನ್ನು ನೋಡಲು ಆಗಮಿಸಿದರು. ಶಾಂತಾ ವಿಮಾನವನ್ನೇರುವುದಕ್ಕಾಗಿ ಏರ್‌ಪೋರ್ಟ್‌ ಬರುವುದೇ ಇಲ್ಲ ಎಂದು ಹಠಹಿಡಿದಿದ್ದರಿಂದ ಪ್ರವಾಸವನ್ನೇ ರದ್ದುಮಾಡಬೇಕಾಗಿ ಬಂದಿತ್ತು!

ವೈದ್ಯರ ಕೋಣೆಯಲ್ಲಿ ಕುಳಿತಾಗ ಆಕೆ ತೀರಾ ಮುಜುಗರಕ್ಕೊಳಗಾದವರಂತೆ ಮತ್ತು ದುಃಖಿತರಂತೆ ಕಾಣುತ್ತಿದ್ದರು. ತನ್ನಿಂದಾಗಿ ಸಂಬಂಧಿಯ ಟ್ರಿಪ್‌ ರದ್ದಾಗಿದೆ ಎಂಬುದು ನನಗೆ ತುಂಬಾ ಬೇಸರ ತಂದಿದೆ ಎಂದು ಆಕೆ ಹೇಳುತ್ತಿದ್ದಳು. ಅಮೆರಿಕದಲ್ಲಿ ನ್ಯೂಯಾರ್ಕ್‌ನ ಅವಳಿ ಕಟ್ಟಡಗಳ ಮೇಲೆ ವಿಮಾನ ಅಪ್ಪಳಿಸಿದ ನಂತರ ಮತ್ತು ಇತರ ವಿಮಾನಗಳ ಅವಘಡಗಳನ್ನು ಕೇಳಿದ ನಂತರದಲ್ಲಿ ಆಕೆಗೆ ವಿಮಾನವನ್ನೇರುವುದಕ್ಕೇ ತೀರಾ ಭಯವಾಗುತ್ತಿದೆ.

ಇತರ ವಿಮಾನ ಪ್ರವಾಸಗಳನ್ನೂ ತಾನು ರದ್ದುಗೊಳಿಸಿರುವುದಾಗಿ ಆಕೆ ಈ ಸಂದರ್ಭದಲ್ಲಿ ಹೇಳಿಕೊಂಡಳು. ಈ ಪೈಕಿ ಕೆಲವು ಪ್ರವಾಸಗಳು ಕುಟುಂಬದ ಸದಸ್ಯರನ್ನು ಭೇಟಿ ಮಾಡುವ ಉದ್ದೇಶದ್ದಾಗಿದ್ದರೆ ಇನ್ನು ಕೆಲವು ಪತಿಯನ್ನು ಭೇಟಿ ಮಾಡುವ ಪ್ರವಾಸವಾಗಿದ್ದವು. ಈ ಪ್ರಯಾಣಗಳನ್ನು ರದ್ದು ಮಾಡಿದ್ದಕ್ಕೆ ಮೂಲ ಕಾರಣವೇ ಹೆದರಿಕೆ. ವಿಮಾನ ಪ್ರಯಾಣದ ಕುರಿತಾದ ಈ ಭಯದ ಬಗ್ಗೆ ಎಂದಿಗೂ ತನ್ನ ಸಂಬಂಧಿಯ ಜತೆ ಮಾತನಾಡಿಲ್ಲ ಎಂದೂ ಆಕೆ ವೈದ್ಯರ ಬಳಿ ಹೇಳಿಕೊಂಡಳು.

ಈ ಸಮಸ್ಯೆಯ ಹೊರತಾಗಿ ಆಕೆ ಸಾಮಾನ್ಯ ಜೀವನವನ್ನು ಸಂತೃಪ್ತಿಯಾಗಿಯೇ ಕಳೆಯುತ್ತಿದ್ದಳು.ಬೇರಿನ್ನಾವುದೇ ಬೇಸರ ಅಥವಾ ಆತಂಕ ಅವರಲ್ಲಿರಲಿಲ್ಲ. ಅವರ ಮಕ್ಕಳೆಲ್ಲಾ ಜೀವನದಲ್ಲಿ ಸೆಟಲ್‌ ಆಗಿದ್ದಾರೆ. ಶಾಂತಾ ಮತ್ತು ಅವರ ಪತಿ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ.

ನಿವೃತ್ತಿಯ ನಂತರ ಹಿಂದೆಂದಿಗಿಂತಲೂ ಹೆಚ್ಚು ಪ್ರವಾಸ ಕೈಗೊಳ್ಳುವ ನಿರ್ಧಾರವನ್ನು ದಂಪತಿ ಮಾಡಿದ್ದರು. ಆದರೆ ಈಗ, ವಿಮಾನದಲ್ಲಿ ಪ್ರಯಾಣಿಸುವ ಕಲ್ಪನೆಯೇ ಉದ್ವೇಗಕ್ಕೆಡೆ ಮಾಡಿಕೊಡುತ್ತಿತ್ತು. ಹೀಗಾದಾಗಲೆಲ್ಲಾ ಆಕೆ ಬೆವರಿನಿಂದ ತೊಯ್ದು ಹೋಗುತ್ತಿದ್ದಳು. ಈ ಹಿಂದೆ, ವಿಮಾನದಲ್ಲಿ ಪ್ರಯಾಣಿಸಿದ್ದಾಗ ಆಕೆಗೆ ತುಂಬಾ ಕಿರುಚಾಡುವಂತಾಗಿತ್ತು. ಎಲ್ಲಕ್ಕಿಂತಲೂ ವಿಮಾನದಲ್ಲಿ ಪ್ರಯಾಣಿಸುವುದೇ ಅತಿಯಾದ ಹೆದರಿಕೆಗೆ ಕಾರಣವಾಗಿದೆ ಎಂದು ಆಕೆ ನಂಬಿದ್ದಳು.
ಶಾಂತಾಗೆ ಏನಾಗಿದೆ ಎಂಬ ಬಗ್ಗೆ ನಿರ್ಧರಿಸಲು ಮನೋವೈದ್ಯರು ಸ್ವಲ್ಪ ಸಮಯ ತೆಗೆದುಕೊಂಡರು. ಅಂತಿಮವಾಗಿ ವಿಮಾನದಲ್ಲಿ ಪ್ರಯಾಣಿಸುವ ಬಗೆಗಿನ ಫೋಬಿಯಾ ಶಾಂತಾಗಿದೆ ಎಂಬುದಾಗಿ ವೈದ್ಯರು ನಿರ್ಧರಿಸಿದರು. ಇದಕ್ಕೆ ಚಿಕಿತ್ಸೆ ಇದೆ ಎಂಬುದಾಗಿಯೂ ವೈದ್ಯರು ಆಕೆಗೆ ಭರವಸೆ ನೀಡಿದರು.
ವಿಮಾನ ಪ್ರಯಾಣದ ಭಯವನ್ನು ನಿಧಾನವಾಗಿ ಹೋಗಲಾಡಿಸುವುದಕ್ಕಾಗಿ ಹಲವು ವಾರಗಳವರೆಗೆ ಶಾಂತಾಳಿಗೆ ಕೌನ್ಸೆಲಿಂಗ್‌ ಮಾಡಲಾಯಿತು. ಕೆಲವು ತಿಂಗಳುಗಳವರೆಗಿನ ಥೆರಪಿಯ ನಂತರದಲ್ಲಿ, ವಿಮಾನದಲ್ಲಿ ಪ್ರಯಾಣಿಸುವ ಬಗ್ಗೆ ಆಕೆಗೆ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಬೆಳೆಯಿತು.

ಶಾಂತಾ ಮತ್ತು ಆಕೆಯ ಪತಿ ದೆಹಲಿಗೆ ಪ್ರಯಾಣಿಸುವ ನಿರ್ಧಾರ ಮಾಡಿದರು ಮತ್ತು ಸ್ವಲ್ಪ ಮಟ್ಟಿನ ಉದ್ವೇಗವನ್ನು ಹೊರತುಪಡಿಸಿದಂತೆ ಶಾಂತಾ ಆರಾಮವಾಗಿ ಪ್ರಯಾಣ ಮಾಡಲು ಸಾಧ್ಯವಾಯಿತು. ಒಮ್ಮೆ ಸಮಸ್ಯೆಯಿಲ್ಲದೇ ವಿಮಾನದಲ್ಲಿ ಪ್ರಯಾಣಿಸಿದ ನಂತರದಲ್ಲಿ ಪ್ರತಿ ಬಾರಿ ಪ್ರಯಾಣಿಸುವಾಗಲೂ ಆಕೆಯ ಉದ್ವೇಗದ ಪ್ರಮಾಣದಲ್ಲಿ ಕಡಿಮೆಯಾಯಿತು.
ಆರು ತಿಂಗಳವರೆಗೆ ಥೆರಪಿ ಮುಗಿಸಿದ ನಂತರ ತನಗೆ ಭಾರತದ ಎಲ್ಲ ಕಡೆಯೂ ಪ್ರಯಾಣಿಸುವುದು ಏನೇನೂ ಕಷ್ಟವಾಗಿಲ್ಲ ಎಂದು ವೈದ್ಯರ ಬಳಿ ಆಕೆ ಹೇಳಿಕೊಂಡಿದ್ದಾಳೆ.

ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ರೂಪಿಸಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಯ ಪ್ರಕರಣವಲ್ಲ. ಬದಲಿಗೆ ಫೋಬಿಯಾದಿಂದ ಬಳಲುತ್ತಿರುವ ಎಲ್ಲರಿಗೂ ಅನ್ವಯಿಸುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org