ದೂರವಾಣಿ ಕರೆಗೆ ವಾಪಸ್ ಕರೆ ಬಂದಾಗ

ದೂರವಾಣಿ ಕರೆಗೆ ವಾಪಸ್ ಕರೆ ಬಂದಾಗ

1986ರಲ್ಲಿ, ಒಮ್ಮೆ ಹೊರತುಪಡಿಸಿ, ದೂರವಾಣಿಯ ಮೂಲಕ ಮಾತನಾಡುವುದನ್ನು ನಾನು ಎಂದೂ ಆನಂದದಿಂದ ಮಾಡಿಲ್ಲ. ನಾನು ಬೆಳೆಯುತ್ತಿದ್ದಂತೆಲ್ಲಾ ದೂರವಾಣಿ ಕರೆಯನ್ನು ದೂರವಿಡುತ್ತಲೇ ಬಂದೆ. (ನನ್ನ ಮೊದಲ ಬಾಯ್ ಫ್ರೆಂಡ್ ಪರಿಚಯವಾಗುವವರೆಗೆ ಎನ್ನಿ. ಈ ಪ್ರಸಂಗದ ನಂತರ ನಾನು ಶಾಶ್ವತವಾಗಿ ದೂರವಾಣಿ ಮಾತುಕತೆಯಲ್ಲೇ ಕಾಲ ಕಳೆಯಬೇಕಾಯಿತು. ಏಕೆಂದರೆ ನಾವಿಬ್ಬರೂ ಪರಸ್ಪರ ಅಷ್ಟು ದೂರದಲ್ಲಿದ್ದೆವು) ಆದರೆ ಫೋನ್ ಇದ್ದುದರಿಂದಲೇ ನಾನು ಜನರೊಡನೆ ಒಡನಾಟ ಮತ್ತು ಗೆಳೆತನ ಬಯಸುವ ನಿಟ್ಟಿನಲ್ಲಿ ನನ್ನ ಜೀವನದ ಮೊದಲ ಕೆಲವು ಪಾಠಗಳನ್ನೂ ಕಲಿತಿದ್ದೆ. ಈ ಪಾಠಗಳನ್ನು ಕಲಿಯಲು ನಾನು ಯಾವುದೇ ಉಪಕರಣಗಳನ್ನೂ ಬಳಸುವ ಅವಶ್ಯಕತೆ ಇರಲಿಲ್ಲ. ನಾನು ಒಂಬತ್ತು ವರ್ಷದವಳಾಗಿದ್ದಾಗ ನಾವು ಭಾರತವನ್ನು ತೊರೆದೆವು. ನನ್ನ ತಂದೆ ತಾಯಿಗೆ ಫೋನ್ ಎನ್ನುವುದು ಜೀವನಾಡಿಯಾಗಿತ್ತು. ಅವರು ತಮ್ಮ ವೃದ್ಧ ತಂದೆ ತಾಯಿಯರನ್ನು ಭಾರತದಲ್ಲೇ ಬಿಟ್ಟುಬಂದಿದ್ದರು. ಇಡೀ ವರ್ಷ ಅವರೊಡನೆ ಮಾತನಾಡಲು ಇದ್ದ ಒಂದೇ ಮಾರ್ಗ ಎಂದರೆ ಲ್ಯಾಂಡ್ ಲೈನ್ ದೂರವಾಣಿ. ಆಗ ಭಾರತದಲ್ಲಿರುವವರಿಗೆ ಕರೆ ಮಾಡುವುದೆಂದರೆ ದುಬಾರಿಯಾಗಿತ್ತು. ಹಾಗಾಗಿ ವಾರಕ್ಕೊಮ್ಮೆ, ಫೋನ್ ದರಗಳು ಕಡಿಮೆ ಇದ್ದಾಗ ಅವರು ಮನೆಗೆ ಫೋನ್ ಮಾಡುತ್ತಿದ್ದರು. ಕೆಲವೊಮ್ಮೆ ಅವರ ಮಕ್ಕಳೊಡನೆ ಮಾತನಾಡುತ್ತಿದ್ದರು. ನನ್ನ ತಂದೆ ತಾಯಿಯನ್ನು ನೋಡುತ್ತಲೇ ನಾನು ಉಳಿತಾಯ ಮಾಡುವುದನ್ನು ಕಲಿತೆ. ವಾರದಿಂದ ವಾರಕ್ಕೆ ಇಬ್ಬರಿಗೂ ಇಷ್ಟವಾಗುವಂತಹ ಒಂದು ಕೆಲಸ ಮಾಡುತ್ತಿದ್ದೆ. ಸಂಪನ್ಮೂಲಗಳ ಉಳಿತಾಯ , ಸಮಯದ ಉಳಿತಾಯ ಮತ್ತು ಮಾತಿನ ಉಳಿತಾಯ. ನಾನು ಮಾತನಾಡುವಾಗಲೆಲ್ಲಾ ಹೇಳಬೇಕಾದ್ದನ್ನು ಅತಿ ಕಡಿಮೆ ಪದಗಳಲ್ಲಿ ಹೇಳುವುದನ್ನು ಕಲಿತೆ. ಹೀಗೆಯೇ ಅದರಲ್ಲಿ ಪರಿಣತಳೂ ಆದೆ. ನನಗೆ ನೆನಪಿರುವಂತೆ ಅವರು ಯಶಸ್ವಿಯಾಗಿದ್ದು ಅಪರೂಪವೆಂದೇ ಹೇಳಬೇಕು. ತಿಂಗಳ ಕೊನೆಯಲ್ಲಿ ಫೋನ್ ಬಿಲ್ ಮನೆಗೆ ಬಂದಾಗ, ನಾನು ಚಿಕ್ಕ ಮಕ್ಕಳಂತೆ, ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಎಷ್ಟು ಗಂಭೀರವಾಗಿರುತ್ತದೆ ಎಂದು ಪಣ ತೊಡುತ್ತಿದ್ದೆ. ಅವರಿಬ್ಬರ ನಡುವಿನ ಈ ವಾಗ್ವಾದಗಳಲ್ಲಿ ನಾನು ಶಕ್ತಿಯನ್ನು ಕುರಿತ ಪಾಠ ಕಲಿತೆ.  ಸದಾ ಕಠಿಣ ಪರಿಶ್ರಮ ಪಡುತ್ತಿದ್ದ ನನ್ನ ತಂದೆ ಫೋನ್ ಬಿಲ್ ಮುಂದಿಟ್ಟುಕೊಂಡು ಎಲ್ಲ ಕರೆಗಳನ್ನೂ ಪರಿಶೀಲಿಸಿ, ನನ್ನ ತಾಯಿ ಅವರ ಮನೆಯವರಿಗೆ ಎಷ್ಟು ಕರೆ ಮಾಡಿದ್ದಾರೆ ಎಂದು ಗುರುತಿಸಿ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ನನ್ನ ತಂದೆಯವರೂ ಸಹ ಅವರ ಮನೆಯವರಿಗೆ ಅಷ್ಟೇ ಕರೆಗಳನ್ನು ಮಾಡಿದ್ದಾರೆ ಎಂದು ಹೇಳಲು ನನ್ನ ತಾಯಿ ಮುಂದಾಗುತ್ತಿರಲಿಲ್ಲ. ಫೋನ್ ಬಿಲ್ ಮೊತ್ತ ತೀರಾ ಹೆಚ್ಚಾಗಿದ್ದಾಗ , ಅಗತ್ಯವಿದ್ದಾಗ ಮಾತ್ರವೇ ಫೋನ್ ಮಾಡಲು ಮೂವರೂ ನಿರ್ಧರಿಸಿದೆವು. ಡಯಲ್ ಅಪ್ ಅಂತರ್ಜಾಲ ಸಂಪರ್ಕ ಪಡೆದ ಸಂದರ್ಭದಲ್ಲೂ ಇದೇ ಕ್ರಮ ಅನುಸರಿಸಲಾಗಿತ್ತು. ಈಗ ಅಂತರ್ಜಾಲದ ಬಿಲ್ ಮುಖ್ಯವಾಗಿರಲಿಲ್ಲ. ಎಷ್ಟು ಸಮಯದ ಕಾಲ ಬಳಕೆಯಾಗಿತ್ತು ಎನ್ನುವುದು ಮುಖ್ಯವಾಯಿತು, ಏಕೆಂದರೆ ನನ್ನ ತಂದೆ ಫೋನ್ ಕರೆ ಮಾಡಲು ಸದಾ ಉತ್ಸುಕರಾಗಿರುತ್ತಿದ್ದರು.  ಈ ಭಿನ್ನಾಭಿಪ್ರಾಯಗಳನ್ನು ಹೇಗೆ ನಿವಾರಿಸಲಾಯಿತು ನನಗೆ ನೆನಪಿಲ್ಲ. ಬಹುಶಃ ನನ್ನ ತಂದೆಯ ಮುಂಗೋಪ ತಣ್ಣಗಾಗಿರಬೇಕು. ಚಿಕ್ಕವಯಸ್ಸಿನಲ್ಲೇ ಮದುವೆಯಾದ ನನ್ನ ತಾಯಿ ಬಹಳ ವಿಧೇಯ ಪತ್ನಿಯಾಗಿದ್ದರಿಂದ, ಇದು ಅವರದೇ ತಪ್ಪು ಇರಬೇಕು ಎಂದು ಸುಮ್ಮನಾಗಿರಬಹುದು. ಕೆಲ ಸಮಯದ ನಂತರ ನನ್ನ ತಾಯಿ ಆರ್ಥಿಕವಾಗಿ ಸ್ವತಂತ್ರವಾಗಿ ಇರಲಿಲ್ಲವಾದ್ದರಿಂದ ಆಕೆಯ ಪ್ರತಿಷ್ಠೆ ಮತ್ತು ವಿವಾಹ ಜೀವನ ಚೆನ್ನಾಗಿರಲಿ ಎನ್ನುವ ಆಶಯ ಬಹುಶಃ ಅವರನ್ನು ವಿಧೇಯರನ್ನಾಗಿ ಮಾಡಿತ್ತು. ಆಗ ನಾನು, ಕೆಟ್ಟ ಅನುಭವದಿಂದಲಾದರೂ, ಹಣಕಾಸಿನ ವಿಚಾರದಲ್ಲಿ ಸ್ವತಂತ್ರವಾಗಿರಬೇಕು ಎಂಬ ಪಾಠ ಕಲಿತೆ. ಆರ್ಥಿಕವಾಗಿ ಅವಲಂಬಿತಳಾಗುವುದು ಎಂದರೆ ನನಗೆ ಭಯವಾಗುತ್ತಿತ್ತು. ಆದರೆ ಅರ್ಥಿಕವಾಗಿ ಸ್ವತಂತ್ರಳಾಗಿ ಹೇಗಿರುವುದು ಎಂದು ಕಲಿಯಲು ಸುತ್ತಲಿನ ವಾತಾವರಣದಲ್ಲಿ ಅವಕಾಶವೇ ಇರಲಿಲ್ಲ. ಬ್ಯಾಂಕಿನಲ್ಲಿ ಹಣ ಹೊಂದಿರುವುದರಿಂದ ಇದು ಸಾಧ್ಯ ಎನ್ನುವುದು ಸತ್ಯ. ಆರಂಭದ ಕೆಲವು ವರ್ಷಗಳಲ್ಲಿ ನಾವು ವಿಭಿನ್ನ ದೇಶಗಳಿಗೆ ಹೋಗುತ್ತಿದ್ದಾಗ, ನನ್ನ ತಾಯಿ ವಾಹನ ಚಾಲನೆ ಪರವಾನಗಿಗೆ ಅರ್ಜಿ ಸಲ್ಲಿಸಲಿಲ್ಲ. ಭಾರತದಲ್ಲಿದ್ದಾಗ ಕಾರು ಡ್ರೈವ್ ಮಾಡುತ್ತಿದ್ದ ಅವರಿಗೆ ತಾನು ಸ್ವತಂತ್ರಳು ಎನ್ನುವ ಭಾವನೆ ಇತ್ತು, ಏನೋ ಸಾಧಿಸಿದ್ದೇನೆ ಎನ್ನುವ ಹೆಮ್ಮೆಯೂ ಇತ್ತು. ಈ ಹೊಸ ಜಾಗದಲ್ಲಿ ಜೀವನ ವಿಭಿನ್ನವಾಗಿದ್ದರಿಂದ ಆಕೆಗೆ ಕಾರು ಚಲಾಯಿಸಲು ಇಚ್ಚೆಯೇ ಇರಲಿಲ್ಲ. ಈ ಸಂದರ್ಭದಲ್ಲಿ ಫೋನ್ ಎನ್ನುವುದು ಸ್ವದೇಶದಲ್ಲಿದ್ದ ಆಕೆಯ ಆತ್ಮೀಯರೊಡನೆ ಸಂಪರ್ಕದ ಕೊಂಡಿ ಮಾತ್ರವೇ ಆಗಿರದೆ ಅವರ ಜೀವನಾಡಿಯೇ ಆಗಿತ್ತು. ಹೊಸ ನಗರದಲ್ಲಿ ಆಕೆ ಗಳಿಸಿದ್ದ ಹೊಸ ಗೆಳತಿಯರ ಬಗ್ಗೆ, ಸಮುದಾಯದ ಬಗ್ಗೆ ಆಕೆ ಮಾತನಾಡುತ್ತಿದ್ದರು. ನಾನು ಶಾಲೆಯಿಂದ ಮನೆಗೆ ಬರುವ ವೇಳೆಯಲ್ಲಿ ಅವರ ಸಂಭಾಷಣೆ ಮತ್ತು ಅಡುಗೆ ಒಟ್ಟಿಗೇ ನಡೆಯುತ್ತಿದ್ದುದು ನನಗೆ ನೆನಪಿದೆ. ಅಡುಗೆ ಮನೆ ಮೂರು  ಅಂಶಗಳಿಂದ ಜೀವಂತಿಕೆ ಪಡೆದಿರುತ್ತಿತ್ತು. ಒಲೆಯ ಮೇಲೆ ಏನೋ ಒಂದಿರುತ್ತಿತ್ತು, ಏನೋ ಒಂದನ್ನು ಹೆಚ್ಚುತ್ತಿದ್ದರು ಮತ್ತು ಸಿಂಕ್‍ನಲ್ಲಿ ಪಾತ್ರೆಗಳು ಇರುತ್ತಿದ್ದವು. ವೈರ್ ಇಲ್ಲದ ದೂರವಾಣಿಯ ಉಪಕರಣ ಅವರ ಕುತ್ತಿಗೆ ಮತ್ತು ಭುಜದ ನಡುವೆ ಸಿಕ್ಕಿರುತ್ತಿತ್ತು.  ಆ ದಿನ ನಾವು ಏನು ತಿಂದೆವು ಎನ್ನುವುದನ್ನು ಅಮ್ಮ , ಫೋನ್ ಕರೆ ಯಾರಿಂದಲೇ ಬಂದಿರಲಿ, ಅವರೊಡನೆ ಹೇಳುತ್ತಿದ್ದಳು. ನಮ್ಮ ಚೇಷ್ಟೆಗಳ ಬಗ್ಗೆ, ಅಪ್ಪನ ಮೇಲೆ ದೂರು, ಅನಾರೋಗ್ಯ ಹೀಗೆ ಹಲವು ವಿಷಯಗಳು ವಿನಿಮಯವಾಗುತ್ತಿದ್ದವು. ಕೆಲವೊಮ್ಮೆ ಅವರು ಫೋನ್ ಮಾಡುವಾಗ ಜುಗುಪ್ಸೆಯಿಂದ ಅಳುತ್ತಿದ್ದುದನ್ನೂ ನೋಡಿದ್ದೇನೆ. ಕೆಲವೊಮ್ಮೆ ಅವರ ಆತ್ಮೀಯ ಗೆಳತಿಯರೊಡನೆ ಹಾನಿ ಮಾಡದ ಗಾಳಿಸುದ್ದಿಯನ್ನೂ ಮಾತನಾಡುತ್ತಿದ್ದರು. ಇವೆಲ್ಲವನ್ನೂ ನೋಡುತ್ತಾ ನಾನು, ಅತಿಯಾದ ಜಾಗ್ರತೆಯಿಂದಿರುವ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ನಿರಾಸಕ್ತಿ ತೋರುವುದನ್ನು ಕಲಿತೆ.  ಇದೇನೂ ಅಗತ್ಯ ಎನಿಸುವ ಕೌಶಲ ಅಲ್ಲ. ನನ್ನ ಸಂಶೋಧನೆಗೂ ಬಹಳ ಮುನ್ನವೇ ನಾನು ಹೆಂಗಸರು ಅನೇಕ ವಿಧದ ಕೆಲಸಗಳನ್ನು ಒಮ್ಮೆಲೆ ಮಾಡಬಲ್ಲರು, ಗಂಡಸರಿಗೆ ಇದು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡೆ. ಕೆಲವು ಕೆಲಸಗಳನ್ನು ಮಾಡುವಾಗ ಬೇಗನೆ ಮಾಡುವುದರೊಂದಿಗೇ ದಕ್ಷತೆಯಿಂದ ಮಾಡುವುದನ್ನು ನಾನು ಕಲಿತೆ. ಆದರೆ ನನ್ನ ತಾಯಿ ನನಗೆ ಕಲಿಸದೆ ಇದ್ದರೂ ನಾನು ಜೀವನದಲ್ಲಿ ಕಲಿತ ಅತ್ಯಂತ ಮಹತ್ವದ ಪಾಠ ಎಂದರೆ, ಆಕೆ ಸಮುದಾಯ ಪ್ರಜ್ಞೆಯನ್ನು ನನಗೆ ಕಲಿಸಿದ್ದಳು.  ಅವರಿಗಾಗಿಯೇ ಸಾಕಷ್ಟು ಸಮಯವನ್ನು ಹೊಂದಿರುತ್ತಿದ್ದರೂ, ಎಲ್ಲಾದರೂ ಹೊರಹೋಗಬೇಕೆಂದರೆ ಆಕೆಯ ಪತಿಯನ್ನೇ ಅವಲಂಬಿಸಿರುತ್ತಿದ್ದ ನನ್ನ ತಾಯಿ, ಅವರ ಸುತ್ತಲಿನ ಬಹುಪಾಲು ಹೆಂಗಸರು ಹಾಗೆಯೇ ಇರುತ್ತಿದ್ದರೆನ್ನಿ,  ತನ್ನ ಗೆಳತಿಯರೊಂದಿಗೆ ದೂರವಾಣಿಯ ಮೂಲಕವೇ ಸ್ನೇಹ ಬೆಳೆಸಿದ್ದರು. ಅವರದೇ ಆದ ಗುಂಪು ಸಹ ಇತ್ತು. ಅಮ್ಮನ ಗೆಳತಿಯ ತಂದೆ ತೀರಿಹೋದಾಗ ಅವರಿಗೆ ಸಾಂತ್ವನ ಹೇಳಲು, ಆಕೆಯ ತಂದೆ ತೀರಿಹೋದಾಗ ತಾಯಿಗೆ ಸಾಂತ್ವನ ಹೇಳಲು, ಮುಟ್ಟು ನಿಲ್ಲುವ ಸಂದರ್ಭದಲ್ಲಿ ಸ್ವತಃ ಸಾಂತ್ವನ ಪಡೆಯಲು, ಯಾರಿಗಾದರೂ ಅನಾರೋಗ್ಯ ಕಂಡರೆ ಅವರಲ್ಲಿ ಧೈರ್ಯ ತುಂಬುವುದು, ಅವರಿಗೆ ಅಡುಗೆ ಮಾಡಿ ಕಳುಹಿಸಲು ಮುಂದಾಗುವುದು, ಅವರ ಹೆಣ್ಣುಮಕ್ಕಳು ವಯಸ್ಸಿಗೆ ಬಂದರೆ ಅವರೊಡನೆ ಮಾತನಾಡುವುದು, ಅವರ ದಾರಿತಪ್ಪಿದ ಗಂಡು ಮಕ್ಕಳ ಬಗ್ಗೆ ಮಾತನಾಡುವುದು – ಈ ಎಲ್ಲಾ ಸಮುದಾಯದ ಸ್ಪಂದನೆಗಳಿಗೂ ಅಮ್ಮನಿಗೆ ನೆರವಾದದ್ದು ಈ ದೂರವಾಣಿಯೇ. ಆಕೆ ನಡೆದಾಡುವ ಸ್ಥಿತಿಗೆ ಬಂದ ನಂತರವೂ ದೂರವಾಣಿ ಕರೆ ಆಕೆಯ ಜೀವನದ ಅವಿಭಾಜ್ಯ ಅಂಗವಾಗಿತ್ತು.  ಈಗ ಆಕೆಯನ್ನು ನಾನು ಕೇಳುವುದಾದರೆ, ನಾನು ಕೇಳಿರುವುದೂ ನಿಜ, ನನ್ನ ತಾಯಿ ಆ ದೂರವಾಣಿ ಕರೆಗಳು ಅವರನ್ನು ಆರೋಗ್ಯಕರ ಸ್ಥಿತಿಯಲ್ಲಿರಿಸಿತ್ತು ಎಂದು ಹೇಳುತ್ತಾಳೆ. ಹೊಸ ದೇಶದಲ್ಲಿ, ಆಕೆಯ ಪತಿ ವಾರಕ್ಕೊಮ್ಮೆ ಹೊರ ಹೋಗಲು ನಿರ್ಧರಿಸುವವರೆಗೂ ಅಮ್ಮ ಒಂಟಿಯಾಗಿಯೇ ಇರುತ್ತಿದ್ದಳು. ಆಗ ಆಕೆಗೆ ದೂರವಾಣಿ ಕರೆಗಳೇ ಮನೆ, ಸ್ವರ್ಗ ಎಲ್ಲವನ್ನೂ ಒದಗಿಸಿದ್ದವು. ಮನೆಯಲ್ಲೇ ಇದ್ದ ಅಮ್ಮನಿಗೆ ಅದೇ ಸರ್ವಸ್ವವೂ ಆಗಿತ್ತು. ಒಬ್ಬ ಗೆಳತಿಯಾಗಿ ಆಕೆಯನ್ನು ಎಲ್ಲರೂ ಮೆಚ್ಚುತ್ತಿದ್ದರು, ಎಲ್ಲರಿಗೂ ಅಮ್ಮ ಬೇಕಾದವಳಾಗಿದ್ದಳು, ಮಾರ್ಗದರ್ಶಿಯಾಗಿದ್ದರು, ವಿಶ್ವಾಸಾರ್ಹ ವ್ಯಕ್ತಿಯಾಗಿದ್ದರು. ಆಕೆಯ ಈ ಗುಣಗಳನ್ನು ಅವರ ಮನೆಯವರು ಅರಿತಿದ್ದೇ ತಡವಾಗಿ ಎನ್ನಬಹುದು.ಇದು ಅವರೊಬ್ಬರದೇ ಕಥೆ ಅಲ್ಲ, ಅವರ ಪರಿಸ್ಥಿತಿಯಲ್ಲೇ ಬದುಕುವ ಸಾವಿರಾರು ಹೆಂಗಸರ ಪಾಡು ಇದೇ ಆಗಿರುತ್ತದೆ. ಅನೇಕರು ಅಮ್ಮನ ಬಳಗದಲ್ಲೇ ಕಾಣುತ್ತಾರೆ. ದೂರವಾಣಿ ಈ ಹೆಂಗಸರ ಬದುಕಿನಲ್ಲಿ ಎಲ್ಲಿಯೂ ದೊರೆಯದ ಸಾಂತ್ವನವನ್ನು ಒದಗಿಸಿದೆ. ದೂರವಾಣಿ ಅವರ ವಿವೇಕ, ಸಮುದಾಯ ಪ್ರಜ್ಞೆ, ಒಗ್ಗಟ್ಟಿನ ಭಾವನೆ ಮತ್ತು ಸ್ನೇಹ ಎಲ್ಲದಕ್ಕೂ ಕಾರಣವಾಗಿತ್ತು. ನನ್ನ ಸೋದರಿಯೊಬ್ಬಳು ನನಗೆ ದೂರವಾಣಿ ಕರೆ ಮಾಡಿದಾಗ, ನಾನು ಅವಳನ್ನು ಮೊದಲು ಕೇಳುವುದು, ಏನಾದರೂ ಬೇಕಿತ್ತೇ ಎಂದು. ನನ್ನ ಮಟ್ಟಿಗೆ ದೂರವಾಣಿ ಅಥವಾ ಮೊಬೈಲ್ ಕರೆ ಎಂದರೆ ಉಪಯುಕ್ತತೆಗೆ ಸೀಮಿತವಾದದ್ದಷ್ಟೆ. ಕೊರೋನಾ ವೈರಾಣುವಿನ ಸಂದರ್ಭದಲ್ಲಿ ಎಂಟು ದಿನಗಳ ಕಾಲ ಹೊರಹೋಗಲಾರದೆ ಮನೆಯಲ್ಲೇ ಉಳಿದುಕೊಂಡಿದ್ದರಿಂದ ತಾನು ಮಾಡುವ ಕೆಲಸಗಳಲ್ಲಿ ಬಹಳ ದಕ್ಷತೆಯಿಂದ ಮಾಡಿದ್ದೇನೆ ಎಂದು ಅವಳು ಹೇಳಿದಾಗ ನನ್ನ ಹೃದಯ ಹಿಂಡಿದಂತಾಯಿತು. ಆಕೆಗೆ ಬೇಕಾಗಿದ್ದುದು ಮತ್ತೊಬ್ಬ ವ್ಯಕ್ತಿಯ ಸಂಪರ್ಕ ಮತ್ತು ಒಂದೆರಡು ಮಾತು. ನನ್ನ ಮತ್ತೊಬ್ಬ ಗೆಳತಿ ಈ ಒಂದು ವಾರದ ಅವಧಿಯಲ್ಲಿ ತನ್ನ ಜೀವಮಾನದ ಅವಧಿಯಲ್ಲೇ ಮಾಡಿರದಷ್ಟು ದೂರವಾಣಿ, ಮೊಬೈಲ್ ಕರೆಗಳನ್ನು ಮಾಡಿದ್ದೇನೆ ಎಂದು ಹೇಳುತ್ತಿದ್ದಳು. ಏಕೆಂದರೆ ಅನೇಕರಿಗೆ ಅವಳ ಪ್ರೋತ್ಸಾಹ, ನೆರವು ಬೇಕಾಗಿತ್ತು. ಮತ್ತೋರ್ವ ಗೆಳತಿಯಿದ್ದಾಳೆ. ನಾನು ಅವಳೊಡನೆ ಉತ್ತಮ ಆರೋಗ್ಯ ನಿರ್ವಹಣೆಯ ಬಗ್ಗೆ , ವಿಪತ್ತುಗಳ ಬಗ್ಗೆ, ಭಾವಾವೇಶದ ದುಷ್ಪರಿಣಾಮಗಳ ಬಗ್ಗೆ , ಮೊಬೈಲ್ ಕರೆಯ ಮೂಲಕ, ಮೆಸೇಜ್ ಮೂಲಕ ಸಂಭಾಷಣೆ ನಡೆಸುತ್ತಿರುತ್ತೇನೆ. ನಾನು ಅವಳೊಡನೆ ಮೊಬೈಲ್ ಕರೆಯಲ್ಲಿ ಮಾತನಾಡಿದಾಗ, ನಾವಿಬ್ಬರೂ  ಬಹಳ ಸಮಯದಿಂದ ಪರಸ್ಪರ ಮಾತನಾಡಿಲ್ಲ, ಇನ್ನು ಮುಂದೆ ನಾನೇ ಕರೆ ಮಾಡುತ್ತೇನೆ ಎಂದು ಹೇಳಲೇಬೇಕಾಯಿತು. ಅಂತರ್ಜಾಲದ ಬಳಕೆಯಿಂದ ಸುಸ್ತಾಗಿರುವ ಸಂದರ್ಭದಲ್ಲಿ ನಾವು ಜುಗುಪ್ಸೆ ಹುಟ್ಟಿಸುವ, ಖಿನ್ನತೆ ಮೂಡಿಸುವ, ಭೀತಿಯ ಸುದ್ದಿಯನ್ನು ಕೇಳುತ್ತಿರುತ್ತೇವೆ. ಕೆಲವೊಮ್ಮೆ ಆಕ್ರೋಶದಿಂದ ಹೊರಬರುವುದೇ ಸಾಧ್ಯವಾಗುವುದಿಲ್ಲ. ಅನೇಕರು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿರುವ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ( ನಾನು ಅದಕ್ಕೆ ಒಪ್ಪಲಿಲ್ಲವೆನ್ನಿ). ಈ ಸಂದರ್ಭದಲ್ಲಿ ಒಂದು ದೂರವಾಣಿ ಕರೆ ಮನಸ್ಸಿಗೆ ಮುದ ನೀಡುತ್ತದೆ, ಸಾಂತ್ವನ ನೀಡುತ್ತದೆ. ಹಿತವಾದ ಅನುಭವ ನೀಡುತ್ತದೆ. ನಾವು ಸಂಪರ್ಕ ಇಲ್ಲದೆ ಬದುಕಲಾಗುವುದಿಲ್ಲ. ಒಂದು ಮೆಸೇಜ್ ಅಥವಾ ಎಮೋಜಿ , ಒಂದು ಧ್ವನಿ ನೀಡುವಷ್ಟು ಸಾಂತ್ವನ ನೀಡುವುದಿಲ್ಲ. ಒಬ್ಬರ ನೋಟದಲ್ಲಿನ ಮೃದು ಸ್ಪರ್ಶ ನೀಡುವುದಿಲ್ಲ, ಒಬ್ಬರ ನಗೆಯ ಆಹ್ಲಾದ ನೀಡುವುದಿಲ್ಲ. ದೂರವಾಣಿ ಕರೆ ನೀಡಲಾಗದ ಒಂದೇ ಅನುಭವ ಎಂದರೆ ಚುಂಬನದ ಸುಖ. ಆದರೂ ತುಟಿಗಳು ಪರದೆಗೆ ಕೆಲವು ಕ್ಷಣಗಳಾದರೂ ಅಂಟಿಕೊಂಡಿರುವುದನ್ನು ನೋಡಿದರೆ ಆಹ್ಲಾದ ಉಂಟಾಗುತ್ತದೆ.  ಲೇಖಕಿ ಸಂಧ್ಯಾ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸ್ವತಂತ್ರ ಲೇಖಕಿ. ಈಕೆ ಮಾನಸಿಕ ಆರೋಗ್ಯ ಮತ್ತಿತರ ಸಮಸ್ಯೆಗಳನ್ನು ಕುರಿತು ಲೇಖನಗಳನ್ನು ಬರೆಯುವುದೇ ಅಲ್ಲದೆ ತಾವೇ ಅನುಭವಿಸುತ್ತಿರುವ ವ್ಯಕ್ತಿತ್ವ ದೌರ್ಬಲ್ಯ ಸಮಸ್ಯೆ -(ಬಿಪಿಡಿ ) boಡಿಜeಡಿಟiಟಿe ಠಿeಡಿsoಟಿಚಿಟiಣಥಿ ಜisoಡಿಜeಡಿ  ಮತ್ತು (ಬಿಪಿಎಡಿ) biಠಿoಟಚಿಡಿ ಚಿಜಿಜಿeಛಿಣive ಜisoಡಿಜeಡಿ ಕುರಿತು ಬರೆಯುತ್ತಾರೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org