ಯೋಗ ಮತ್ತು ವ್ಯಾಯಾಮಗಳ ಹೋಲಿಕೆ

ವ್ಯಾಯಾಮದ ಉಪಯೋಗ ಎಲ್ಲರಿಗೂ ಗೊತ್ತಿದೆ. ಇದರ ಜತೆ ಯೋಗವನ್ನೂ ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಶಾಂತಿ, ನೆಮ್ಮದಿ ಹಾಗೂ ಸಂತೋಷ ನಮ್ಮದಾಗುತ್ತದೆ.

ದೈಹಿಕ ಸಾಮರ್ಥ್ಯದ ಮಹತ್ವದ ಕುರಿತು ಜಾಗೃತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಮ್ ಸದಸ್ಯತ್ವ ಪಡೆಯುವುದು, ಓಡುವುದು, ಸೈಕ್ಲಿಂಗ್‌ನಲ್ಲಿ  ಭಾಗವಹಿಸುವವರು ಹೆಚ್ಚಾಗುತ್ತಿದ್ದಾರೆ.  ಯೋಗ ಕೂಡ ಸಾಕಷ್ಟು ಜನಪ್ರಿಯವಾಗುತ್ತಿದ್ದು, ಆದರೆ ಇದೊಂದು ದೈಹಿಕ ಸಾಮರ್ಥ್ಯಕ್ಕಾಗಿ ನಡೆಸುವ ಕಸರತ್ತು ಎನ್ನುವ ತಪ್ಪು ಗೃಹಿಕೆಗೆ ಒಳಗಾಗುತ್ತಿದೆ. ಆದರೆ ಯೋಗದಲ್ಲಿರುವ  ಆಸನಗಳು ಅಭ್ಯಾಸದ ಸಹಾಯಕ ಭಾಗವಷ್ಟೇ. ದೈಹಿಕ ಕಸರತ್ತು ಹಾಗೂ ಯೋಗಾಸನಗಳೆರಡರಲ್ಲಿ ಸಿಗುವ ಫಲ ಬೇರೆಯೇ ಆಗಿದೆ.

ಯೋಗವು ಸಾಮಾನ್ಯವಾಗಿ ಸ್ಥಿರ ಭಂಗಿಗಳು ಮತ್ತು ಸ್ನಾಯುಗಳ ಸಡಿಲಿಕೆಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಪತಂಜಲಿ ಆಸನವು 'ಒಂದು ಸ್ಥಿರ ಹಾಗೂ ಆರಾಮದಾಯಕ ಹಂತವನ್ನು’ ಪ್ರತಿಪಾದಿಸುತ್ತದೆ. ಇದರ ಚಲನೆ ನಿಧಾನ ಮತ್ತು  ನಿಯಂತ್ರಿತವಾಗಿ ಇರುತ್ತದೆ. ಉಸಿರಾಟ ಕೂಡ ಸಮತೋಲಿತವಾಗಿರುತ್ತದೆ. ಇನ್ನು ಸಾಮಾನ್ಯ ವ್ಯಾಯಾಮದ ಸಂದರ್ಭ ಚಲನೆಗೆ ಹೆಚ್ಚು ಒತ್ತುಕೊಡಬೇಕು ಮತ್ತು ಸ್ನಾಯುಗಳ ಮೇಲೆ ಸದಾ ಒತ್ತಡ ಬೀಳುತ್ತಿರುತ್ತದೆ.

ವ್ಯಾಯಾಮ ಸಾಮಾನ್ಯವಾಗಿ ಪುನರಾವರ್ತಿತ ಚಲನೆಗೆ ಒತ್ತು ಕೊಡುತ್ತದೆ. ಇಲ್ಲಿ ನಿರಾಳ ಉಸಿರಾಟಕ್ಕೆ ಆಸ್ಪದ ಇರುವುದಿಲ್ಲ. ಅಲ್ಲದೇ ನಾವು ಈ ಸಂದರ್ಭ ಸಾಮಾನ್ಯ ಉಸಿರಾಟ ಪದ್ಧತಿಯನ್ನು ನಿಯಂತ್ರಿಸುವ ಕಾರ್ಯ ಮಾಡುತ್ತೇವೆ. ಇದೇ ಯೋಗ ಹಾಗೂ ವ್ಯಾಯಾಮದ ನಡುವೆ ಇರುವ ಅಂತರ.

ಸ್ನಾಯು ವ್ಯವಸ್ಥೆ

ಯೋಗ: ಮೂಳೆಯ ಮೇಲ್ಪದರದ ಸ್ನಾಯುಗಳು ಕೂಡ ಬೆಳವಣಿಗೆ ಸಾಧಿಸಲು ಸಹಕರಿಸುತ್ತದೆ. ಇದು ನಮ್ಯತೆಯನ್ನು ವೃದ್ಧಿಸುತ್ತದೆ. ಯೋಗವು ಚೈತನ್ಯ ವೃದ್ಧಿಸುವ ಚಟುವಟಿಕೆ ಕೂಡ ಅಗಿದೆ.

ವ್ಯಾಯಾಮ: ಇದು ಸಾಮಾನ್ಯವಾಗಿ ವ್ಯಕ್ತಿಯ ಸ್ನಾಯುಗಳ ಸಮೂಹದತ್ತ ಹೆಚ್ಚು ಗಮನ ಹರಿಸುತ್ತದೆ. ಇದರ ಫಲವಾಗಿ, ಸ್ನಾಯುಗಳು ಕಡಿಮೆಯಾಗಿ, ಚಲನಶೀಲತೆ ತಗ್ಗುತ್ತದೆ. ನಾವು ವ್ಯಾಯಾಮ ಮಾಡಿದಾಗ ಸಾಕಷ್ಟು ಪ್ರಮಾಣದ ಶಕ್ತಿ ಬರುತ್ತದೆ.

ಹೃದಯ

ಯೋಗ: ಯೋಗದಲ್ಲಿ ಒಮ್ಮೆ ಆಸನವನ್ನು ಮಾಡಿದರೆ ಶರೀರವು ಹಗುರಾಗುತ್ತದೆ. ಅಲ್ಲದೇ ರಕ್ತದ ಅವಶ್ಯಕತೆಯೂ ಕಡಿಮೆಯಾಗುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮ: ವ್ಯಾಯಾಮದಲ್ಲಿ ಈ ಪರಿಣಾಮ ವಿರುದ್ಧವಾಗಿರುತ್ತದೆ. ಸಾಮಾನ್ಯವಾಗಿ ವ್ಯಾಯಾಮಗಳು ಸ್ನಾಯುಗಳ ಮೇಲೆ ಒತ್ತಡ ಹೇರುತ್ತವೆ. ಇದು ರಕ್ತದ ಚಲನೆಯನ್ನು ಹಾಗೂ ಒತ್ತಡವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವೇ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇನ್ನಷ್ಟು ವೇಗವಾಗಿ ರಕ್ತವನ್ನು ಪಂಪ್ ಮಾಡುವ ಅನಿವಾರ್ಯತೆಯನ್ನು ಎದುರಿಸುತ್ತದೆ.

ಉಸಿರಾಟದ ವ್ಯವಸ್ಥೆ

ಯೋಗ: ಯೋಗದಲ್ಲಿ ಶರೀರವು ಆರಾಮದ ಸ್ಥಿತಿಯಲ್ಲಿ ಇರುತ್ತದೆ. ಇದರ ಪರಿಣಾಮ ಉಸಿರಾಟದ ವ್ಯವಸ್ಥೆ ನಿರಾಳವಾಗಿರುತ್ತದೆ.

ವ್ಯಾಯಾಮ: ನಿಯಮಿತ ವ್ಯಾಯಾಮದಲ್ಲಿ ಚಲನೆಗಳು ನಿರಂತರವಾಗಿರುತ್ತವೆ. ಇದರಿಂದ ಆಮ್ಲಜನಕದ ಅಗತ್ಯ ಹೆಚ್ಚಾಗಿರುತ್ತದೆ. ಇದರಿಂದ ಉಸಿರಾಟದ ವೇಗವೂ ಹೆಚ್ಚಾಗುತ್ತದೆ. ಕಾರಣ, ಶ್ವಾಸಕೋಶದ ಕೆಲಸ ಕಠಿಣವಾಗುತ್ತದೆ.

ನಿರೋಧಕ ವ್ಯವಸ್ಥೆ

ಯೋಗ: ಯೋಗವು ವ್ಯಕ್ತಿಯ ಪ್ರತಿರಕ್ಷಣಾ ಜೀವಕೋಶಗಳ ಕಾರ್ಯನಿರ್ವಹಣೆಯ ಧಕ್ಷತೆ ವೃದ್ಧಿಸುತ್ತದೆ ಮತ್ತು ನಿರೋಧಕ ವ್ಯವಸ್ಥೆಯ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ವ್ಯಾಯಾಮ: ಸಾಮಾನ್ಯವಾಗಿ ವ್ಯಾಯಾಮದಲ್ಲಿಯೂ ಈ ಕಾರ್ಯ ಆಗುತ್ತದೆ. ಸಾಮಾನ್ಯವಾಗಿ ಇದು ಪರಿಸರ, ತೀವ್ರತೆ ಹಾಗೂ ವ್ಯಾಯಾಮದ ಕಾಲಾವಧಿಯನ್ನು ಆಧರಿಸಿ ಇರುತ್ತದೆ.

ಒತ್ತಡದ ಮಟ್ಟ

ಯೋಗ: ಯೋಗವು ಮನುಷ್ಯದ ಶರೀರದ ಒತ್ತಡ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಶರೀರದ ಒತ್ತಡವನ್ನು ಕಾಯ್ದಿರಿಸುವ ಕೊಬ್ಬನ್ನು ಉತ್ಪಾದಿಸುವ ಹಾರ್ಮೋನ್‌ಗಳನ್ನು ಒದಗಿಸುವ ಕಾರ್ಯವನ್ನು ಕಾರ್ಟಿಸೋಲ್ ಮಾಡುತ್ತದೆ.

ವ್ಯಾಯಾಮ: ವ್ಯಾಯಾಮವು ಶರೀರದಲ್ಲಿ ಕೊಬ್ಬಿನಂಶದ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ. ಇದರಿಂದಾಗಿ ಶರೀರವು ವ್ಯಾಯಾಮವನ್ನು ಒಂದು ಒತ್ತಡವಾಗಿ ಸ್ವೀಕರಿಸುತ್ತದೆ.

ಯೋಗವು ಉತ್ತಮ ಉಸಿರಾಟ ಪ್ರಕ್ರಿಯೆಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ನಿಯಮಿತ ವ್ಯಾಯಾಮ ಪ್ರಕ್ರಿಯೆಯಲ್ಲಿ ಇರುವುದಿಲ್ಲ. ಹಿತವಾದ ಪರಿಣಾಮ ನರಮಂಡಲದ ಮೇಲೆ ಆಗುವುದರಿಂದ ಶರೀರವು ಯೋಗದ ನಂತರ ಆರಾಮದ ಅನುಭವವನ್ನು ಪಡೆಯುತ್ತದೆ. ವ್ಯಾಯಾಮ ಮಾಡುವುದರಿಂದ ಲಿಟ್ರಿಕ್ ಆಮ್ಲದ ಉತ್ಪಾದನೆ ಹೆಚ್ಚಾಗಿ ಅದು ಬಳಲಿಕೆ ಹಾಗೂ ದಣಿವು ಉಂಟು ಮಾಡುತ್ತದೆ. ಯೋಗದ ಇನ್ನೊಂದು ಲಾಭವೇನೆಂದರೆ ವ್ಯಾಯಾಮ ಮಾಡಿದಾಗ ಉಂಟಾಗುವ ನೋವಿನ ಸಹನೆಯನ್ನು ತಗ್ಗಿಸುತ್ತದೆ. ಅಲ್ಲದೇ ಜೈವಿಕ ಲಯ ಹೆಚ್ಚಿಸಿ ಮಾನಸಿಕ ನಿಯಂತ್ರಣ ಸಾಧಿಸಲು ಅನುವು ಮಾಡಿಕೊಟ್ಟು ನಡವಳಿಕೆಯನ್ನು ಸುಧಾರಿಸುತ್ತದೆ. ಒಟ್ಟಾರೆ, ಯೋಗವು ವ್ಯಾಯಾಮದಿಂದ ಸಿಗುವ ಎಲ್ಲಾ ಅನುಕೂಲತೆಗಳನ್ನು ನೀಡುವ ಜತೆಗೆ ಇನ್ನೂ ಹೆಚ್ಚಿನದಾಗಿ ಶಾಂತಿ, ನೆಮ್ಮದಿ ಹಾಗೂ ಸಂತೋಶವನ್ನು ನೀಡುತ್ತದೆ.

ಈ ಮಾಹಿತಿಯನ್ನು ನೀಡಿದವರು:

ಡಾ. ರಾಮಜಯಂ ಜಿ., ಪಿಎಚ್‍ಡಿ. ಪಂಡಿತರು, ಯೋಗ ಹಾಗೂ ಮನೋವೈದ್ಯಶಾಸ್ತ್ರಜ್ಞರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಇನ್‍ಸ್ಟಿಟ್ಯೂಟ್ (ನಿಮ್ಹಾನ್ಸ್), ಬೆಂಗಳೂರು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org