ವೃದ್ಧರನ್ನು ಕಾಡುವ ಒಂಟಿತನ ಮತ್ತು ಖಿನ್ನತೆ

 ವೃದ್ಧಾಪ್ಯದಲ್ಲಿ ಒಂಟಿತನದ ಅನುಭವ ಹಾಗೂ ಖಿನ್ನತೆ ಸಾಮಾನ್ಯ. ಆದರೆ ಅದು ಸಹಜವಲ್ಲ! ಒಂಟಿತನ, ಖಿನ್ನತೆಗಳು ತರುವ ಮಾನಸಿಕ ಮತ್ತು ದೈಹಿಕ ಹೊರೆ ಯಾತನಾಮಯವಾದದ್ದು. ಅಲ್ಲದೇ ವೃದ್ಧರು ತಮ್ಮ ಸಮಸ್ಯೆಗಳು ವಯೋಸಹಜ ಎಂದು ನಿರ್ಲಕ್ಷಿಸಿ ಬಿಡುವುದರಿಂದ ತೀವ್ರ ಪರಿಣಾಮಗಳನ್ನು ಅನುಭವಿಸುತ್ತಾರೆ.

70ರ ವಯಸ್ಸಿನ ರಾಮಮೂರ್ತಿಯವರ ಸಮಸ್ಯೆಯ ಬಗ್ಗೆ ಅವರ ಮಗ ಹೇಳಿದ್ದಿಷ್ಟು : “ಅಪ್ಪ-ಅಮ್ಮ ಯಾವಾಗಲೂ ಜೊತೆಯಲ್ಲಿರುತ್ತಿದ್ದರು. ಅಮ್ಮ ತೀರಿಕೊಂಡು 2 ವರ್ಷವಾಯಿತು. ಅವಾಗಿನಿಂದ ಅಪ್ಪ ತುಂಬಾ ಒಂಟಿತನ ಫೀಲ್ ಮಾಡುತ್ತಿದ್ದಾರೆ ಎನಿಸುತ್ತಿತ್ತು. ನಾವೆಲ್ಲಾ ಜೊತೆಯಲ್ಲೇ ಇದ್ದರೂ ಅವರು ಬೆರೆಯುವುದು ಕಡಿಮೆಯೇ. ಏನಾದರೂ ಕೇಳೋಣವೆಂದರೆ ‘ವಯಸ್ಸಾದವರೆಲ್ಲಾ ಒಂಟಿಯೇ ಬಿಡಪ್ಪ’ ಎಂದು ಬಿಡುತ್ತಿದ್ದರು. ಅವರಷ್ಟಕ್ಕೇ ಇರುತ್ತಿದ್ದರು ಎನ್ನುವುದನ್ನು ಬಿಟ್ಟರೆ ಇನ್ನೇನು ಅಂತಹ ಸಮಸ್ಯೆ ಇರಲಿಲ್ಲ. ಆದರೆ ಈಗ ಕೆಲವು ತಿಂಗಳಿಂದ ಮಲಗುವುದು ಜಾಸ್ತಿಯಾಗಿದೆ, ಡಾಕ್ಟರ್ ಎಲ್ಲಾ ಸರಿಯಾಗಿದೆ ಅಂದ್ರೂ ಏನಾದರೊಂದು ಫಿಸಿಕಲ್ ಕಂಪ್ಲೇಂಟ್, ಊಟ ಸರಿಯಾಗಿ ಮಾಡೋಲ್ಲ. ಸಣ್ಣದ್ದಕ್ಕೂ ವಿಪರೀತ ಕೋಪ. ಮೊದಲಾದರೆ ಟಿ.ವಿ, ಪೇಪರ್ ನೋಡೋರು. ವಾಕ್ ಹೋಗಿ ಬರೋರು. ಈಗ ವಿಪರೀತ ನಿರಾಸಕ್ತಿ. ಟಿ.ವಿಯ ಸದ್ದೇ ಆಗೋಲ್ಲ ಅಂತಾರೆ. ಮನೆಯಿಂದ ಹೋಗೋದೇ ಇಲ್ಲ. ಅವರೇನೋ ಇದೆಲ್ಲಾ ವಯಸ್ಸಾದಾಗ ಮಾಮೂಲು ಅಂತಾರೆ. ನಮಗೆ ಹಾಗೆನಿಸುತ್ತಿಲ್ಲ”.

ಕಾಡುವ ಒಂಟಿತನ:

ತಾನು ಬಯಸಿದಂತಹ ಸಾಮಾಜಿಕ ಸಂಬಂಧಗಳು, ಕೌಟುಂಬಿಕ ಬಾಂಧವ್ಯ, ಒಡನಾಟ ದೊರೆಯದಿದ್ದಾಗ ಒಂಟಿತನ ಆವರಿಸುವುದು.  ಜನರ ನಡುವಿನಲ್ಲಿದ್ದರೂ ಆತ್ಮೀಯ ಬಂಧವಿರದಿದ್ದಾಗ ಒಂಟಿತನದ ಅನುಭವವಾಗಬಹುದು. ಯಾವ ವಯಸ್ಸಿನಲ್ಲಿ ಬೇಕಾದರೂ ಒಂಟಿತನ ಕಾಡಬಹುದಾದರೂ ವೃದ್ಧರು ಒಂಟಿತನ ಅನುಭವಿಸುವ ಸಾಧ್ಯತೆ ಹೆಚ್ಚು. ಜೀವನದಲ್ಲಾಗುವ ಪ್ರಮುಖ, ಋಣಾತ್ಮಕ ಬದಲಾವಣೆಗಳು ವೃದ್ಧರನ್ನು ಒಂಟಿತನಕ್ಕೆ ದೂಡುವುದು.

ಒಂಟಿತನ ಸಾಮಾಜಿಕ ಬೆಂಬಲ, ಬಾಂಧವ್ಯಗಳಿಂದ ವಿಮುಖವಾಗಿಸುವುದರಿಂದ ಬದುಕಿನ ಒತ್ತಡವನ್ನು ಎದುರಿಸುವ ಮತ್ತು ದೈಹಿಕ/ ಮಾನಸಿಕ ಕಾಯಿಲೆಗಳನ್ನು ಸಂಭಾಳಿಸುವ ಸಾಮಥ್ರ್ಯವನ್ನು ಕುಂಠಿತಗೊಳಿಸುತ್ತದೆ. ಹಾಗೇ ದೀರ್ಘಕಾಲಿಕ ಒಂಟಿತನವೇ ದೈಹಿಕ/ಮಾನಸಿಕ ಕಾಯಿಲೆಗಳಿಗೆ ಕಾರಣವಾಗಲೂಬಹುದು.

ಒಂಟಿತನಕ್ಕೆ ಕಾರಣಗಳೇನು?

ವೃದ್ಧಾಪ್ಯದಲ್ಲಿ ಒಂಟಿತನ ಆವರಿಸಲು ಪ್ರಮುಖ ಕಾರಣಗಳಿವು:

  • ನಿವೃತ್ತಿ: ಸಾಮಾಜಿಕ ಸ್ಥಾನಮಾನ, ಸಹೋದ್ಯೋಗಿಗಳೊಡನೆ ಸಂವಹನ, ದಿನಚರಿಗಳಿಂದ ದೂರಾದಾಗ. ಯಾವುದೇ ಹವ್ಯಾಸಗಳಿಲ್ಲದಿರುವುದು.
  • ಸಂಗಾತಿಯ ಅಗಲುವಿಕೆ: ಜೀವನ ಸಂಗಾತಿಯ ಮರಣ, ವಿಚ್ಚೇದನ.
  • ಸಂಬಂಧಗಳ ದೂರಾಗುವಿಕೆ: ಮಕ್ಕಳೊಡನೆ ಬಾಂಧವ್ಯ, ಸಂಪರ್ಕವಿಲ್ಲದಿರುವುದು. ಸ್ನೇಹಿತರು ದೂರಾಗುವುದು, ಮರಣಹೊಂದುವುದು.
  • ಸ್ಥಳ ಬದಲಾವಣೆ: ಕಾರಣಾಂತರದಿಂದ ತನ್ನ ಸ್ನೇಹಿತರು, ಸಂಬಂಧಿಕರಿರುವ ಸ್ಥಳದಿಂದ ಬೇರೆಡೆ ಹೋಗುವುದು. ಅಪರಿಚಿತ ಸ್ಥಳದಲ್ಲಿ ಇರಬೇಕಾದಾಗ.
  • ಆರ್ಥಿಕ ಅಡಚಣೆ: ಪರಸ್ಥಳಗಳಿಗೆ ಸಂಚರಿಸಲು ಹಣಕಾಸಿನ ತೊಂದರೆ.

•     ದೈಹಿಕ ಅನಾರೋಗ್ಯ: ಅನಾರೋಗ್ಯದಿಂದ ಎಲ್ಲೂ ಹೋಗಲು ಅಸಾಧ್ಯವಾದಾಗ.

ನಿಮ್ಮ ಆತ್ಮೀಯರು ಒಂಟಿತನÀ ಅನುಭವಿಸುತ್ತಿದ್ದಾರೆಯೇ?

 ಒಂಟಿತನದ ಸೂಚನೆಯನ್ನು ಸಂಬಂಧಪಟ್ಟವರು ಗುರತಿಸುವುದು ಮುಖ್ಯ. ಒಂಟಿ ಎಂಬ ಪದಪ್ರಯೊಗ ಮಾಡದಿದ್ದರೂ ‘ಇತ್ತೀಚೆಗೆ ಯಾರೊಡನೆಯೂ ಬೆರೆಯುವ ಮನಸ್ಸಿಲ್ಲ’ ಎನ್ನುವಂತಹ ಮಾತನ್ನಾಡಿದರೂ ಪರಿಗಣಿಸಬೇಕು. ಯಾರನ್ನೂ ಭೇಟಿ ಮಾಡುತ್ತಿಲ್ಲ್ಲ, ಯಾರೂ ಆತ್ಮೀಯರಿಲ್ಲ, ಅಷ್ಟು ಬೆರೆಯುತ್ತಿಲ್ಲ ಎಂದಾಗ, ವರ್ತನೆಯಲ್ಲಿ ಬದಲಾವಣೆUಳಾದಾಗ ಉದಾ: ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು, ಆತ್ಮೀಯರಾಗಲು ಹವಣಿಸುವುದು, ಅಪರಿಚಿತರನ್ನೂ ಅತಿಯಾಗಿ ಮಾತನಾಡಿಸಲೆತ್ನಿಸುವುದು. ಇವುಗಳ ಹಿಂದೆ ಒಂಟಿತನದ ಭಾವವಿದೆಯೇ ತಿಳಿಯುವುದು ಒಳ್ಳೆಯದು.

ಒಂಟಿತನ ಮತ್ತು ಖಿನ್ನತೆ:

ಒಂಟಿತನ ಖಿನ್ನತೆಗೆ ಕಾರಣ ಹಾಗೂ ಖಿನ್ನತೆಯ ಪರಿಣಾಮ ಎರಡೂ ಆಗಿರಬಹುದು. ಸಾಕಷ್ಟು ಸಲ, ರಾಮಮೂರ್ತಿಯವರ ಉದಾಹರಣೆಯಂತೆ ಒಂಟಿತನ, ಖಿನ್ನತೆ ಜೊತೆಯಾಗೇ ಕಾಣಿಸಿಕೊಳ್ಳುವುದಾದರೂ ಹಾಗೇ ಇರಬೇಕೆಂದಿಲ್ಲ. ಖಿನ್ನತೆಯಿಲ್ಲದ ಒಂಟಿತನವೂ ಕಾಡಬಹುದು. ಹಾಗೇ ಒಂಟಿತನವಿಲ್ಲದೇ ಬರೀ ಖಿನ್ನತೆಯೂ ತಲೆದೋರಬಹುದು.

ಒಂಟಿತನ ಮಾತ್ರ ಇದ್ದಾಗ ಬೇಸರ, ದುಃಖವಿರುತ್ತದೆ ಆದರೆ ಖಿನ್ನತೆಯ ಪ್ರಮುಖ ಲಕ್ಷಣಗಳಿರುವುದಿಲ್ಲ. ಆದರೆ ಖಿನ್ನತೆಯೊಂದೇ ಇದ್ದಾಗಲೂ ಬೆರೆಯುವುದರಲ್ಲಿ ನಿರಾಸಕ್ತಿ, ಸಾಮಾಜಿಕ ಪ್ರತ್ಯೇಕತೆ ಇವು ಖಿನ್ನತೆಯ ಲಕ್ಷಣವೂ ಆಗಿರುವುದರಿಂದ ಅದೇ ಒಂಟಿತನದಂತೆ ಕಾಣುವುದು. ಒಟ್ಟಾರೆ ಒಂಟಿತನ, ಖಿನ್ನತೆ ಎರಡೂ ಬೀರುವ ಪರಿಣಾಮ ಅತ್ಯಂತ ಋಣಾತ್ಮಕವಾಗಿದ್ದು ತೊಂದರೆಗೀಡಾದ ವೃದ್ಧರಿಗೆ ಚಿಕಿತ್ಸೆ, ನೆರವು ಒದಗಿಸುವುದು ಅತ್ಯಗತ್ಯ.

ನಿಮ್ಮ ಪರಿಚಯದ ಹಿರಿಯರು ಖಿನ್ನರಾಗಿರಬಹುದೇ?

ವೃದ್ಧರು ತಮ್ಮ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ ಸಹಾಯ ಯಾಚಿಸಲು ಮುಂದಾಗದಿರುವುದರಿಂದ ಮತ್ತು ಬಹಳಷ್ಟು ಮಾನಸಿಕ, ದೈಹಿಕ ಕಾಯಿಲೆಯ ಲಕ್ಷಣಗಳೂ ಖಿನ್ನತೆಯನ್ನೇ ಹೋಲುವುದರಿಂದ ಅವರಲ್ಲಿ ಖಿನ್ನತೆಯನ್ನು ಗುರುತಿಸುವುದು ಕಷ್ಟ.

ಖಿನ್ನತೆಯ ಸಾಮಾನ್ಯ ಲಕ್ಷಣಗಳೇ ವೃದ್ಧಾಪ್ಯದಲ್ಲೂ ಕಂಡುಬಂದರೂ, ಖಿನ್ನತೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಅಂಶಗಳಿವು:

  • ದುಃಖ, ಹತಾಶೆ, ತಾನು ನಿಷ್ಪ್ರಯೋಜಕನೆಂಬ ಭಾವ.
  • ದೈಹಿಕ ತೊಂದರೆಯಿಲ್ಲದಿದ್ದರೂ ಪದೇಪದೇ ಬಾಧಿಸುವ ನೋವು-ಬೇನೆಗಳು.
  • ತಾಳ್ಮೆಯ ಕೊರತೆ, ವಿಪರೀತ ಕೋಪ, ಸಣ್ಣದಕ್ಕೂ ಕಿರಿಕಿರಿ ಮತ್ತು ಚಡಪಡಿಕೆ.
  • ಆತಂಕ, ರೋಗಭ್ರಮೆ. ತನಗೇನೋ ಕಾಯಿಲೆಯಾಗಿದೆ ಎಂದು ಭ್ರಮಿಸುವುದು.
  • ಯಾರೊಂದಿಗೂ ಮಾತನಾಡುವಲ್ಲಿ/ಬೆರೆಯುವಲ್ಲಿ ನಿರಾಸಕ್ತಿ ಮತ್ತು ಸಾಮಾಜಿಕ ವಿಮುಖತೆ
  • ಹವ್ಯಾಸಗಳಲ್ಲಿ ನಿರಾಸಕ್ತಿ ಮತ್ತು ದಿನಚರಿಯಲ್ಲಿ ಬದಲಾವಣೆ.
  • ನಿದ್ರೆಯ ಸಮಸ್ಯೆ: ಅತಿಯಾದ ನಿದ್ರೆ ಹಗಲು ನಿದ್ರೆ ಅಥವಾ ನಿದ್ರಾಹೀನತೆ.
  • ಏಕಾಗ್ರತೆ, ನೆನಪಿನ ತೊಂದರೆ.
  • ನಿಧಾನವಾದ ಚಲನೆ ಮತ್ತು ನಿಧಾನಗತಿಯ ಮಾತು.
  • ವೈಯಕ್ತಿಕ ಕಾಳಜಿಯನ್ನು ಅಲಕ್ಷಿಸುವುದು: ಊಟ, ಸ್ವಚ್ಚತೆ, ಔಷಧದ ಅಲಕ್ಷ್ಯ.
  • ಸಾವಿನ ಬಗ್ಗೆ ಸತತ ಯೋಚನೆ ಮತ್ತು ಆತ್ಮಹತ್ಯೆ ಆಲೋಚನೆಗಳು.

ವೃದ್ಧಾಪ್ಯದಲ್ಲಿ ಖಿನ್ನತೆ: ಚಿಕಿತ್ಸಾ ಮಾರ್ಗಗಳು ಮತ್ತು ಆರೈಕೆ

ಖಿನ್ನತೆಯನ್ನು ನಿರ್ಲಕ್ಷಿಸುವುದರಿಂದ ದೇಹಾರೋಗ್ಯ, ಮಾನಸಿಕ ಸೌಖ್ಯ, ಕೌಟುಂಬಿಕ ವಾತಾವರಣದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಖಿನ್ನತೆ ವಯೋಸಹಜವಲ್ಲ. ವೃದ್ಧಾಪ್ಯದ ಖಿನ್ನತೆಗೆ ಚಿಕಿತ್ಸೆಯಿದೆ ಮತ್ತು ಅದು ಪರಿಣಾಮಕಾರಿಯಾಗಿಯೂ ಹೌದು. ಚಿಕಿತ್ಸೆಗೊಳಗಾದರೆ ಟೀಕೆಗೆ ಒಳಗಾಗಬಹುದೆಂದು ಹೆದರಿ ನರಳದಿರಿ.

ಖಿನ್ನತೆಗೆ ಹಲವು ಚಿಕಿತ್ಸಾ ಮಾರ್ಗಗಳಿವೆ. ವೈದ್ಯಕೀಯ ಚಿಕಿತ್ಸೆ, ಥೆರಪಿ/ಕೌನ್ಸಿಲಿಂಗ್ ಜೊತೆಗೆ ಉತ್ತಮ ಕೌಟುಂಬಿಕ ವಾತಾವರಣ, ಉತ್ತಮ ಜೀವನಶೈಲಿ: ಮಾನಸಿಕ-ದೈಹಿಕ- ಸಾಮಾಜಿಕವಾಗಿ ಸಕ್ರಿಯವಾಗುವುದು ಖಿನ್ನತೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ.

ಆರೋಗ್ಯಕರ ಅಭ್ಯಾಸ:

  • ಸರಿಯಾದ ಸಮಯದಲ್ಲಿ ಸರಿಯಾದ, ಪೌಷ್ಟಿಕ ಆಹಾರ ಸೇವಿಸಿ.
  • ವಯಸ್ಸು, ದೇಹಾರೋಗ್ಯಕ್ಕೆ ಸಮರ್ಪಕವಾದ ವ್ಯಾಯಾಮ ಕ್ರಮವನ್ನು ತಜ್ಞರಿಂದ ಕೇಳಿತಿಳಿದು ಅಳವಡಿಸಿಕೊಳ್ಳಿ.
  • ಉತ್ತಮ ನಿದ್ರೆ, ವಿಶ್ರಾಂತಿ ಪಡೆಯಿರಿ.

ನಿಮ್ಮ ಖಿನ್ನತೆಗಿರುವ ಮೂಲ ಕಾರಣವನ್ನು ಪರಿಶೀಲಿಸಿ, ನಿವಾರಣೆಗೆ ಗಮನ ನೀಡಿ. ಉದಾ: ಬದುಕಿನ ಸನ್ನಿವೇಶಗಳು, ಒಂಟಿತನ-ಸಾಮಾಜಿಕ ಪ್ರತ್ಯೇಕತೆ ನಿಮ್ಮ ಖಿನ್ನತೆಯ ಭಾಗವೇ ನೋಡಿ.

ಒಂಟಿತನದ ಭಾವ ಮತ್ತು ಖಿನ್ನತೆಗೆ ಪರಿಹಾರೋಪಾಯಗಳು: 

  • ಮನಸ್ಸು ಬಿಚ್ಚಿ ಮಾತನಾಡಿ: ಆತ್ಮೀಯ ಸ್ನೇಹಿತರೊಡನೆ ಸಂಪರ್ಕ ಬೆಳೆಸಿ. ಅನಿಸಿದ್ದನ್ನು ಹಿಂಜರಿಕೆಯಿಲ್ಲದೇ ಹಂಚಿಕೊಳ್ಳಿ.
  • ಹೊಸ ಪರಿಚಯ ಮಾಡಿಕೊಳ್ಳಿ, ಹಳೆಯ ಸ್ನೇಹಿತರನ್ನು ಭೇಟಿ ಮಾಡಿ.
  • ಸ್ವಯಂ ಸೇವಕರಾಗಿ, ಸಮುದಾಯದಲ್ಲಿ ತೊಡಗಿ: ಸಹಾಯ ಮಾಡುವುದರಿಂದ, ಸಮುದಾಯದಲ್ಲಿ ತೊಡಗುವುದರಿಂದ ಸಾರ್ಥಕ ಭಾವನೆಯ ಜೊತೆಗೆ ಉತ್ತಮ ಸಾಮಾಜಿಕ ಸಂಬಂಧಗಳೂ ಬೆಳೆಯುವುವು.
  • ಜ್ಞಾನವನ್ನು ಹಂಚಿರಿ: ಯುವಕರು, ಕಿರಿಯರಿಗೆÀ ಜ್ಞಾನವನ್ನು ಹಂಚಿರಿ.
  • ಸಾಕುಪ್ರಾಣಿಗಳನ್ನು ಸಾಕಿಕೊಳ್ಳಿ: ಸಾಕುಪ್ರಾಣಿಯ ಸಾಂಗತ್ಯ, ಪ್ರೀತಿ ಚಿಕಿತ್ಸಾತ್ಮಕ. ಅದರೊಂದಿಗೆ ನಡಿಗೆ, ಆಟದಿಂದ ದೈಹಿಕ ಆರೋಗ್ಯವೂ ವೃದ್ಧಿಸುವುದು.
  • ಫೋನು ಬಳಸಿ: ದೈಹಿಕವಾಗಿ ಭೇಟಿ ಸಾಧ್ಯವಾಗದಿದ್ದರೆ ಆತ್ಮೀಯರನ್ನು ಫೋನಿನಲ್ಲಿ ಸಂಪರ್ಕಿಸಿ.
  • ಡೈರಿ ಬರೆಯಿರಿ: ಅನುಭವ ಬರೆದು ನಿರಾಳವಾಗುವುದರ ಜೊತೆಗೆ ಮುಂದಿನ ದಿನಚರಿ, ಯೋಜನೆಗಳನ್ನೂ ರೂಪಿಸಬಹುದು. ಬರವಣಿಗೆ ಚಿಕಿತ್ಸಾತ್ಮಕ.
  • ತಂತ್ರಜ್ಞಾನ ತಿಳಿದುಕೊಳ್ಳಿ: ಕಂಪ್ಯೂಟರ್, ಇಂಟರ್ನೆಟ್, ಸ್ಮಾರ್ಟ್ ಫೋನ್‍ಗಳನ್ನು ಬಳಸುವುದನ್ನು ಕಲಿಯಿರಿ. ಇದರಿಂದ ನಿಮ್ಮದೇ ಆಸಕ್ತಿಯಿರುವವರನ್ನು ಪರಿಚಯಿಸಿಕೊಳ್ಳಬಹುದು, ಇಷ್ಟದ ಗುಂಪಿನ ಸದಸ್ಯರಾಗಬಹುದು, ಜ್ಞಾನ ಹಂಚಿಕೊಳ್ಳಬಹುದು. ದೂರದ ಸ್ನೇಹಿತರೊಡನೆ ನಿರಂತರ ಸಂಪರ್ಕದಲ್ಲಿರಬಹುದು.
  • ಹೊಸದೇನಾದರು ಕಲಿಯಿರಿ: ಕ್ರಿಯಾತ್ಮಕತೆ, ಕಲ್ಪನೆಗಳಿಗೆ ಹೊಸ ಕಲಿಕೆ ಕೆಲಸ ಕೊಡುತ್ತದೆ.

ಆತ್ಮೀಯರಲ್ಲಿರುವ ಒಂಟಿತನ, ಖಿನ್ನತೆಗೆ ಹೀಗೆ ಮಾಡಬಹುದು:

  • ಉತ್ತಮ ಕೌಟುಂಬಿಕ ವಾತಾವರಣ ಅತಿ ಮುಖ್ಯ.
  • ಸ್ವಲ್ಪ ಕಾಲ ಅವರೊಂದಿಗೆ ಕಳೆಯಿರಿ. ವಾಕಿಂಗ್ ಹೋಗಿ. ಮುಕ್ತವಾಗಿ ಮಾತನಾಡಿ.
  • ದೈಹಿಕ ಅನಾರೋಗ್ಯದಿಂದ ತಾವೇ ಡ್ರೈವ್ ಮಾಡಲು, ಸಂಚರಿಸಲು ಅಸಮರ್ಥರಾಗಿದ್ದು ಸಾಮಾಜಿಕವಾಗಿ ದೂರವಾಗಿದ್ದಲ್ಲಿ ಓಡಾಡಲು ಬದಲಿ ವ್ಯವಸ್ಥೆ ಮಾಡಿಕೊಡಿ.
  • ಆಸಕ್ತಿಯಿರುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದನ್ನು ಪ್ರೋತ್ಸಾಹಿಸಿ. ಪಾಲಿಸಲು ಸಾಧ್ಯವಾಗುವ ದಿನಚರಿ ನೀಡಿ.
  • ಫೋನು ಬಳಸುವುದನ್ನು ಹೇಳಿಕೊಡಿ. ಸಾಮಾಜಿಕ ಜಾಲತಾಣ, ತಂತ್ರಜ್ಞಾನದ ಮಾಹಿತಿ ಕೊಡಿ.
  • ಆತ್ಮೀಯರನ್ನು ಭೇಟಿಯಾಗುವಂತೆ, ಸಾಮಾಜಿಕವಾಗಿ ಬೆರೆಯುವಂತೆ ಪ್ರ್ರೇತ್ಸಾಹಿಸಿ.
  • ಅವರ ಆಹಾರಕ್ರಮದ ಮೇಲೆ ನಿಗಾವಹಿಸಿ. ಪೌಷ್ಠಿಕ ಆಹಾರ ಖಿನ್ನತೆ ನಿವಾರಣೆಗೆ ಸಹಕಾರಿ.
  • ಔಷದೋಪಚಾರದ ಮೇಲೆ ಗಮನವಿರಲಿ

ವಯಸ್ಸಾಗಿದೆಯೆಂದು ಒಂಟಿತನ, ಖಿನ್ನತೆಯಿಂದ ನರಳುವ ಅಗತ್ಯವಿಲ್ಲ. ವೃದ್ಧರಲ್ಲಾದ ಬದಲಾವಣೆಗಳನ್ನು ಗುರುತಿಸಿ ಸೂಕ್ತ ಸ್ಪಂದನೆ ನೀಡಿದರೆ ಆರೋಗ್ಯಕರವಾದ, ನೆಮ್ಮದಿಯ ವೃದ್ಧಾಪ್ಯ ಅನುಭವಿಸಲು ಖಂಡಿತಾ ಸಾಧ್ಯವಿದೆ.                   

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org