ಹದಿಹರೆಯದವರ ಮೆದುಳು ಮತ್ತು ಆಲೋಚನಾ ಕ್ರಮ

ಹದಿಹರೆಯದವರ ಮೆದುಳು ಯೋಚಿಸುವ ಬಗೆ ಮತ್ತು ನಡವಳಿಕೆಯ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ .

ನಾನು ಹೀಗೇಕೆ ಯೋಚಿಸುತ್ತಿದ್ದೇನೆ? ನನಗೇಕೆ ನನ್ನಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ? ಇತರರು ಏಕೆ ನನ್ನನ್ನು ಗಮನಿಸುತ್ತಿಲ್ಲ? ನಮ್ಮ ಹಿರಿಯರೇಕೆ ಈ ರೀತಿಯಾಗಿ ವರ್ತಿಸುತ್ತಿದ್ದಾರೆ? ನನ್ನನ್ನು ನಾನು ಏಕೆ ನಿಯಂತ್ರಿಸಿಕೊಳ್ಳಲಾಗುತ್ತಿಲ್ಲ? ಇವೆಲ್ಲ ನನಗೆ ಮಾತ್ರ ಆಗುತ್ತಿದೆಯೇ? ಅಥವಾ ಇತರರಿಗೂ ಆಗುತ್ತಿದೆಯೇ? ಯಾರನ್ನು ಕೇಳಲಿ? ಏನು ಮಾಡಲಿ? ನನಗೆ ಯಾರನ್ನೂ ನಂಬಲಾಗುತ್ತಿಲ್ಲ…..

ಹದಿ ವಯಸ್ಸಿನ ನಿಮ್ಮನ್ನು ಈ ಪ್ರಶ್ನೆಗಳು ಕಾಡುತ್ತಿವೆಯೇ? ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವಂತಾಗಲು ಇಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ :

ಏನು ನಡೆಯುತ್ತಿದೆಯೆಂದೇ ನನಗೆ ಅರ್ಥವಾಗುತ್ತಿಲ್ಲ, ನನ್ನಲ್ಲೇಕೆ ಗೊಂದಲಗಳು ಮೂಡುತ್ತಿವೆ ?

ಇದು ನಿಮಗೆ ಮಾತ್ರ ಅಲ್ಲ, ಹದಿಹರೆಯದ ಪ್ರತಿಯೊಬ್ಬರಿಗೂ ಈ ರೀತಿಯ ಗೊಂದಲ ಮತ್ತು ನಿರಾಶಾಭಾವನೆಗಳು ಕಾಡುತ್ತವೆ. ಈವಯಸ್ಸಿನಲ್ಲಿ ನಿರ್ದಿಷ್ಟ ಹಾರ್ಮೋನುಗಳು ವಿಕಸನಗೊಳ್ಳುವುದರಿಂದ ಹೀಗಾಗುತ್ತದೆ. ನಿಮ್ಮ ಪರಿಸ್ಥಿತಿಯನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಬಹುದು.

ಮೆದುಳಿನ ಬೆಳವಣಿಗೆಯು ಪ್ರಮುಖವಾಗಿ 6ನೇವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಸಾಮಾನ್ಯವಾಗಿದೆ. ಮೆದುಳು ಶಾರೀರಿಕ ಬೆಳವಣಿಗೆಯ ಜೊತೆಜೊತೆಗೆ 20ನೇ ವಯಸ್ಸಿನವರೆಗೂ ಬೆಳವಣಿಗೆಯಾಗುತ್ತ ಇರುತ್ತದೆ. ತಾರ್ಕಿಕವಾಗಿ ಯೋಚಿಸುವ, ಕಾರಣಗಳನ್ನು ಕಂಡುಕೊಳ್ಳುವ, ನಿರ್ಧರಿಸುವ, ಚಿಂತನೆಗಳನ್ನು ನಡೆಸುವ ಮತ್ತು ಕಾರ್ಯಗತಗೊಳಿಸುವ ಮೆದುಳಿನ ವಿವಿಧ ಭಾಗಗಳ ಬೆಳವಣಿಗೆಯಲ್ಲಿ ಪ್ರೌಢಾವಸ್ಥೆಯ ಈ ಹಂತವು ನಿರ್ಣಾಯಕವಾದದ್ದು.

ಪ್ರೌಢಾವಸ್ಥೆಯಲ್ಲಿ ಮೆದುಳಿನಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ

ಹಾರ್ಮೋನ್ ಬದಲಾವಣೆ :

ಹದಿಹರೆಯದವರ ಕೆಲವು ನಡವಳಿಕೆಗಳಿಗೆ ಹಾರ್ಮೋನುಗಳೇ ಮುಖ್ಯ ಕಾರಣವಾಗಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಾಗ ಹಿರಿಯರು ಕೂಡಾ ಹೀಗೆ ಮಾತನಾಡಿಕೊಳ್ಳುವುದನ್ನು ನೀವು ಕೇಳಿರಬಹುದು. ಈಗಾಗಲೇ ನಿಮಗೆ ತಿಳಿದಿರುವಂತೆ, ಮೈನೆರೆದಾಗ ಅಥವಾ ಪ್ರೌಢಾವಸ್ಥೆಯನ್ನು ತಲುಪಿದಾಗ ಸೆಕ್ಸ್ ಹಾರ್ಮೋನುಗಳು ಹೆಚ್ಚು ಪ್ರಮಾಣದಲ್ಲಿ ಸ್ರವಿಸುತ್ತವೆ. ಇದರಿಂದಾಗಿ ನೀವು ಪೂರ್ವಾಪರ ತಿಳಿದುಕೊಳ್ಳದೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗುತ್ತದೆ. ಅದೇನೇ ಇರಲಿ, ನಡವಳಿಕೆ ಬದಲಾವಣೆಯಲ್ಲಿ ಹಾರ್ಮೋನಿಗಿಂತ ಹೆಚ್ಚಿನದಾಗಿ ಇನ್ನೂ ಅನೇಕ ಸಂಗತಿಗಳು ಪಾತ್ರ ವಹಿಸುತ್ತವೆ.

ಮೆದುಳಿನ ಬೆಳವಣಿಗೆಯು ಹೆಚ್ಚಿನದಾಗಿ ನಿದ್ರಾವಸ್ಥೆಯಲ್ಲಿಯೇ ಆಗುತ್ತದೆ. ಈ ಸಂದರ್ಭದಲ್ಲಿ ಹೊಸ ಸಂವೇದನೆಗಳು ರಚನೆಗೊಳ್ಳುತ್ತವೆ ಮತ್ತು ನೆನಪುಗಳು ಬಲಗೊಳ್ಳುತ್ತವೆ. ಪಿಚ್ಯೂಟರಿ ಗ್ರಂಥಿಗಳಿಂದ ಬೆಳವಣಿಗೆಯ ಹಾರ್ಮೋನುಗಳು ಬಿಡುಗಡೆಯಾಗುತ್ತವೆ ಮತ್ತು ಆದ್ದರಿಂದ ಹೊಸ ಬೆಳವಣಿಗೆಗಳಿಗಾಗಿ ಉತ್ತಮನಿದ್ರೆಯು ಮುಖ್ಯವಾಗಿದೆ. ಆದರೆ ಪ್ರೌಢಾವಸ್ಥೆಯ ಈ ಹಂತದಲ್ಲಿ ನಿದ್ರಾಚಕ್ರವು ಸಮರ್ಪಕವಾಗಿರುವುದಿಲ್ಲ.

ನಮ್ಮ ನಿದ್ರೆಯು ಎರಡು ರೀತಿಯ ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತದೆ : ಅವು ಕಾರ್ಟಿಸೋಲ್ ಮತ್ತು ಮೆಲಾಟೊನಿನ್ ಹಾರ್ಮೋನುಗಳು. ಕಾರ್ಟಿಸೋಲ್ ನಮ್ಮನ್ನು ನಿದ್ರೆಯಿಂದ ಎಚ್ಚರಗೊಳಿಸಲು ನೆರವಾಗುತ್ತದೆ ಮತ್ತು ಮೆಲಾಟೊನಿನ್ ನಿದ್ರೆ ಬರುವಂತೆಮಾಡುತ್ತದೆ. ನಿದ್ರೆಗೆ ಸಂಬಂಧಿಸಿದ ಅಧ್ಯಯನಗಳು ಹೇಳುವ ಪ್ರಕಾರ, ವಯಸ್ಕರಲ್ಲಿ ಮೆಲಾಟೊನಿನ್ ಸರಿಸುಮಾರು ರಾತ್ರಿ 10ಗಂಟೆಗೆ ಬಿಡುಗಡೆಯಾಗುತ್ತದೆ ಮತ್ತು ಹದಿಹರೆಯದವರಲ್ಲಿ, ಅವರ ಕೆಲಸಕಾರ್ಯಗಳ ಒತ್ತಡದಿಂದಾಗಿ ಅದು ಸ್ವಲ್ಪ ನಿಧಾನವಾಗಿರುತ್ತದೆ. ಈ ಪ್ರಕ್ರಿಯೆಯು ವಂಶ ಪಾರಂಪರಿಕವಾಗಿರಬಹುದು. ಆದರೆ ಜೈವಿಕವಾಗಿ ಇದು ನಿಧಾನವಾಗಿ ಬಿಡುಗಡೆಯಾಗುವ ಮೆಲಾಟೊನ್ನಿನಿಂದಾಗಿ ಸಂಭವಿಸುತ್ತದೆ. ನೀವೇನಾದರೂ ಶಾಲೆಗೆ ಅಥವಾ ಕಾಲೇಜಿಗೆ ಬೆಳಗ್ಗೆ ಬೇಗನೇ ಹೋಗಬೇಕಾದ ಅನಿವಾರ್ಯತೆಯಿದ್ದರೆ, ನಿಮ್ಮ ಅಲ್ಪನಿದ್ರೆಯಿಂದಾಗಿ ಕಿರಿಕಿರಿಯುಂಟಾಗಬಹುದು ಮತ್ತು ನಿರಾಸಕ್ತಿ ಕಾಣಿಸಿಕೊಳ್ಳಬಹುದು.

ನಿಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಡಿಮೆ ಎಂದರೂ 6 ಗಂಟೆಗಳ ಕಾಲ ನೆಮ್ಮದಿಯ ನಿದ್ರೆಯ ಅಗತ್ಯವಿದೆ. ನಿಮ್ಮ ಅಧ್ಯಯನಕ್ಕೆ ಹಾಗೂ ಮನೋರಂಜನೆಗೆ ಸಮಯವನ್ನು ಮೀಸಲಿಡುವಂತೆಯೇ, ನಿಮ್ಮ ನಿದ್ರೆಗೂ ಸಾಕಷ್ಟು ಸಮಯ ಮೀಸಲಿಡಬೇಕು ಮತ್ತು ನಿರ್ದಿಷ್ಟ ವೇಳಾಪಟ್ಟಿಯನ್ನು ರೂಢಿಸಿಕೊಳ್ಳಬೇಕು. ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಸಮರ್ಪಕವಾಗಿ ನಿರ್ವಹಿಸಲು ಪೋಷಕರ ಅಥವಾ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಬೇಕು.

ಪ್ರಿಫ್ರಂಟಲ್ ಪಟಲವನ್ನು ಅಭಿವೃದ್ಧಿ ಪಡಿಸುವುದು :

ಪ್ರಿಫ್ರಂಟಲ್ ಪಟಲವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೆದುಳಿನ ಪ್ರಮುಖ ಭಾಗವಾಗಿದೆ. ಈ ಪಟಲವು ನಿರ್ದಿಷ್ಟವಾದ ಕ್ರಿಯೆಗಳನ್ನು, ನಿರ್ಧಾರಗಳನ್ನು, ಕಾರಣಗಳನ್ನು, ನಡವಳಿಕೆಗಳನ್ನು ನಿರ್ದೇಶಿಸುತ್ತದೆ. ವಯಸ್ಕರಲ್ಲಿ ಈ ಭಾಗವು ಸಂಪೂರ್ಣ ಬೆಳವಣಿಗೆ ಹೊಂದಿರುತ್ತದೆ ಮತ್ತು ಮೆದುಳಿನ ಇತರ ಭಾಗದೊಂದಿಗೆ ಸಂಪರ್ಕ ಹೊಂದಿರುತ್ತದೆ. ಆದ್ದರಿಂದ ವಯಸ್ಕರ ಮೆದುಳು ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ, ಆಲೋಚಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ, ಹದಿಹರೆಯದವರಲ್ಲಿ ಈ ಭಾಗವು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಈ ಕಾರಣದಿಂದ ಇವರಲ್ಲಿ ಹಿಂದಿನ ತಪ್ಪುಗಳು ಬಹುತೇಕ ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ.

ರಚನಾತ್ಮಕವಾದ ಬೆಳವಣಿಗೆಯ ಹಂತದಲ್ಲಿ ಮೆದುಳು ಕ್ರಿಯಾಶಿಲವಾಗಿರುವುದಿಲ್ಲ. ವಯಸ್ಕರ ಮೆದುಳಿನಲ್ಲಿ ಆಗುವಂತೆ ಮಾಹಿತಿಗಳು ಚುರುಕಾಗಿ ರವಾನೆಯಾಗುವುದಿಲ್ಲ. ಇದಕ್ಕೆ ಕಾರಣ, ನ್ಯೂರಾನ್ ಜೀವಕೋಶಗಳು. ನ್ಯೂರಾನ್ ಜೀವಕೋಶಗಳು ಮಾಹಿತಿಗಳನ್ನು ಮೆದುಳಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಸರಿಸುತ್ತವೆ. ಈ ಜೀವಕೋಶಗಳು ಮೈಲಿನ್ ಶೀತ್ ಎಂಬ ನಿರೋಧಕ ವಸ್ತುವಿನಿಂದ ಸಂರಕ್ಷಿಸಲ್ಪಟ್ಟಿರುತ್ತದೆ ಮತ್ತು ಮೈಲಿನ್ ಶೀತ್ ಮಾಹಿತಿಗಳನ್ನು ನೂರುಪಟ್ಟು ಹೆಚ್ಚು ವೇಗವಾಗಿ ಪ್ರಸರಿಸುತ್ತದೆ. ನೀವು ಗುರುತಿಸಿರುವಂತೆ ನ್ಯೂರಾನ್ ಜೀವಕೋಶಗಳು ನಿಮ್ಮಮೆದುಳಿನಲ್ಲಿ ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಹಾಗಾಗಿ ಮಾಹಿತಿಗಳ ಪ್ರಸರಣವು ಮಂದ ಗತಿಯಲ್ಲಿರುತ್ತದೆ.

ನ್ಯೂರಾನ್ ಮೈಲಿನೇಷನ್ ಪ್ರಕ್ರಿಯೆಯು, ಹದಿಹರೆಯದವರ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಅನುಭವಿಸಲು ಕಾರಣವಾಗಿರುವ ಮೆದುಳಿನ ಹಿಂಭಾಗದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಹದಿಹರೆಯದವರು “ಹೆಚ್ಚು ಅನುಭವಿಸುತ್ತಾರೆ ಮತ್ತು ಕಡಿಮೆ ಯೋಚಿಸುತ್ತಾರೆ.” ಇದು ನಿಮ್ಮಂತ ಹದಿಹರೆಯದವರನ್ನು ತೀವ್ರ ಭಾವುಕರಾಗುವಂತೆ ಮತ್ತು ವಿಚಲಿತರಾಗುವಂತೆ ಮಾಡುತ್ತದೆ. ಭಾವನೆಗಳು ತೀವ್ರವಾದಾಗ ನೀವು ಉದ್ವೇಗಕ್ಕೊಳಗಾಗುತ್ತೀರಿ ಮತ್ತು ಭಾವಪರವಶವಾಗಿ ಪ್ರಚೋದನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

ಈ ಸಮಸ್ಯೆಯಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂಚಿತವಾಗಿ ಅದರ ಸಾಧಕ-ಭಾದಕಗಳನ್ನು ತುಲನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನೀವು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಬೇಕು. ನೀವು ಸಮಾಲೋಚಿಸಲಿರುವ ಅಥವಾ ಸಲಹೆ ಪಡೆದುಕೊಳ್ಳಲು ಬಯಸುವ ವ್ಯಕ್ತಿಯು ನಿಮ್ಮಂತೆಯೇ ಹದಿವಯಸ್ಸಿನವನಾಗಿದ್ದು, ನಿಮ್ಮ ಪರಿಸ್ಥಿತಿಯನ್ನೇ ಅವನೂ ಎದುರಿಸುತ್ತಿರಬಾರದು. ಮತ್ತೊಬ್ಬರ ಸಲಹೆ ಪಡೆಯುವ ಮೊದಲು ಈ ವಿಷಯವನ್ನು ಖಚಿತಪಡಿಸಿಕೊಳ್ಳಿ. ನೀವು ಸಲಹೆ ಪಡೆಯಲಿರುವ ವ್ಯಕ್ತಿ ನಿಮ್ಮ ಪೋಷಕರು, ಹಿರಿಯರು, ಶಿಕ್ಷಕರು ಅಥವಾ ಅನುಭವಿಗಳಾಗಿರಲಿ.

ಸಿನಾಪ್ಟಿಕ್ ಪ್ರೋನಿಂಗ್ :

ಸಿನಾಪ್ಟಿಕ್ ಪ್ರೋನಿಂಗ್ ಕೇವಲ ನಿಮ್ಮ ಮೆದುಳಿನ ಬದಲಾವಣೆಗೆ ಒಳಪಡುವಂತಹ ಸಂಪರ್ಕಗಳ ಗುಣಮಟ್ಟವನ್ನಷ್ಟೇ ಅಲ್ಲದೆ, ಸಂಪರ್ಕಗಳ ಪ್ರಮಾಣವೂ ಆಗಿದೆ. ಪ್ರೌಢಾವಸ್ಥೆಯಲ್ಲಿ ನೀವು ಶಾರೀರಿಕವಾಗಿ ಬೆಳೆದಂತೆಲ್ಲಾ, ಸಂಪರ್ಕಗಳ ಸಂಖ್ಯೆಯು ಕಡಿತಗೊಳ್ಳುತ್ತದೆ. ನೀವು 5 ವರ್ಷದವರಾಗಿದ್ದಾಗ ಮೆದುಳಿನ ಒಂದುಭಾಗದಿಂದ ಇನ್ನೊಂದಕ್ಕೆ ಇರುವ ಸಂಪರ್ಕಗಳಸಂಖ್ಯೆ 15ರಷ್ಟಿದ್ದರೆ, ಅದು ಹದಿಹರೆಯದಲ್ಲಿ 2ಕ್ಕೆ ಇಳಿದಿರುತ್ತದೆ. ಈ ಎರಡು ಸಂಪರ್ಕಗಳು ಹೆಚ್ಚು ಬಳಸಲ್ಪಡುತ್ತವೆ ಮತ್ತು ಉಳಿದವು ಬಳಕೆಯಾಗದೆ ನಿಷ್ಕ್ರಿಯವಾಗಿರುತ್ತದೆ. ಈ ಎರಡು ಸಂಪರ್ಕಗಳು, ಹಿಂದಿನ 15 ಸಂಪರ್ಕಗಳಿಗಿಂತ ಬಲಶಾಲಿಯಾಗಿರುತ್ತವೆ. ಇದರಿಂದ ಮೆದಳು ವ್ಯವಸ್ಥಿತವಾಗಿ ಮತ್ತು ಸಂಘಟಿತವಾಗಿ ಮಾಹಿತಿ ಪ್ರಸರಣ ಕಾರ್ಯವನ್ನು ನಿರ್ವಹಿಸಲು ಸಹಾಯವಾಗುತ್ತದೆ.

ಅಮೈಗ್ದಲಾ ಮತ್ತು ಲಿಂಬಿಕ್ ಸಿಸ್ಟಮ್ :

ಕಾನೂನಿನಪ್ರಕಾರ ಮದ್ಯಪಾನಕ್ಕೆ 21ರ ಕನಿಷ್ಟವಯೋಮಿತಿಯನ್ನು ಏಕೆ ವಿಧಿಸಲಾಗಿದೆ ? ಓದಿ ತಿಳಿದುಕೊಳ್ಳಿ.

ಲಿಂಬಿಕ್ ಸಿಸ್ಟಮ್ ಮತ್ತು ಅಮೈಗ್ದಲಾ ನಮ್ಮಲ್ಲಿನ ಭಾವನೆಗಳ ಅಭಿವ್ಯಕ್ತಿಗೆ ಕಾರಣವಾಗಿದೆ. ಮೆದುಳಿನ ಈ ಭಾಗಗಳು, ಪ್ರಿಫ್ರಂಟಲ್ ಕಾರ್ಟೆಕ್ಸ್ ಗಿಂತ ಮುಂಚಿತವಾಗಿ ಬೆಳವಣಿಗೆಗೊಳ್ಳುತ್ತವೆ. ಪ್ರಿಫ್ರಂಟಲ್ ಕಾರ್ಟೆಕ್ಸ್, ಭಾವನೆಗಳನ್ನು ಗುರುತಿಸುವ ಮೆದುಳಿನ ಪ್ರಮುಖ ಭಾಗವಾಗಿದೆ. ಆದ್ದರಿಂದ ನಿಮಗೆ ಭಾವನೆಗಳನ್ನು ಗುರುತಿಸುವುದು ಮತ್ತು ನಿರ್ವಹಿಸುವುದು ಕಷ್ಟವೆನಿಸಬಹುದು. ಆದ್ದರಿಂದ ನೀವು ಗೊಂದಲಗಳಿಂದ ಮುಕ್ತರಾಗಲು ಮದ್ಯಪಾನ, ಡ್ರಗ್ಸ್ ಬಳಕೆ ಮತ್ತು ಅಸುರಕ್ಷಿತವಾದ ರೇಸಿಂಗ್ ಮುಂತಾದ ಮಾರ್ಗಗಳನ್ನು ಹಿಡಿಯುವಂತಾಗುತ್ತದೆ. ನಿಮ್ಮ ಮೆದುಳಿನ ಬೆಳವಣಿಗೆ ಸಂಪೂರ್ಣವಾದ ನಂತರವಷ್ಟೆ ನೀವು ನಿಮ್ಮ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುವುದು.

ಮದ್ಯಪಾನಕ್ಕೆ ಶಾಸನಾತ್ಮಕವಾಗಿ ಕನಿಷ್ಟ 21 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿರುವುದು ಇದೇ ಕಾರಣಕ್ಕೆ. ಏಕೆಂದರೆ, ಈ ವಯಸ್ಸಿನವರೆಗೂ ಮೆದುಳು ಬೆಳವಣಿಗೆಯಾಗುತ್ತಲೇ ಇರುತ್ತದೆ; ಮತ್ತು ಇಂತಹ ಮಾದಕ ವಸ್ತುಗಳು ಬೆಳವಣಿಗೆಯ ಪ್ರಕ್ರಿಯೆಯನ್ನು ಕುಂಠಿತಗೊಳಿಸುತ್ತದೆ. ಈ ವಯಸ್ಸಿನಲ್ಲಿ ಅತಿಯಾದ ಮದ್ಯಸೇವನೆಯು ನಿಮ್ಮನ್ನು ಮದ್ಯ ವ್ಯಸನಿಗಳಾಗುವಂತೆ ಮಾಡಿಬಿಡುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org