ಮನೆಯಿಂದಲೇ ಕೆಲಸ ಮಾಡುವಾಗ ಮಾನಸಿಕ ಆರೋಗ್ಯವನ್ನು ನಿರ್ವಹಿಸುವುದು ಹೇಗೆ ?

ಮನೆಯಿಂದಲೇ ಕೆಲಸ ಮಾಡುವಾಗ ಮಾನಸಿಕ ಆರೋಗ್ಯವನ್ನು ನಿರ್ವಹಿಸುವುದು ಹೇಗೆ ?

ಮನೆಯಿಂದಲೇ ಕೆಲಸ ಮಾಡುವಾಗ ಮಾನಸಿಕ ಆರೋಗ್ಯವನ್ನು ನಿರ್ವಹಿಸುವುದು ಹೇಗೆ ?

ಕೋವಿಡ್-19 ಪಿಡುಗು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಬಹುತೇಕ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ನೀಡಿವೆ. ಕಚೇರಿಯ ಕೆಲಸವನ್ನು ಮನೆಯಲ್ಲೇ ಕುಳಿತು ಮಾಡುವ ಸಂದರ್ಭದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ.

ಈ ಸನ್ನಿವೇಶದಲ್ಲಿ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಳಜಿ ವಹಿಸುವಾಗ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಭಯ, ಆಘಾತ ಮತ್ತು ಗೊಂದಲ ಇದ್ದರೆ ತಪ್ಪೇನಿಲ್ಲ ಈ ಸನ್ನಿವೇಶದಲ್ಲಿ ಭಯಪಡುವುದು, ಆಘಾತಕ್ಕೆ ಒಳಗಾಗುವುದು, ಕೋಪ ಮಾಡಿಕೊಳ್ಳುವುದು, ಜುಗುಪ್ಸೆ ಪಡುವುದು ಮತ್ತು ಗೊಂದಲದಲ್ಲಿರುವುದು ಇವೆಲ್ಲವೂ ಸಹಜ. ಇದಕ್ಕೆ ಕಾರಣಗಳೇನೆಂದರೆ :

• ಪ್ರಸ್ತುತ ಸಂದರ್ಭಕ್ಕೆ ಹೇಗೆ ಹೊಂದಿಕೊಳ್ಳುವುದು ಎಂದು ಸ್ಪಷ್ಟವಾಗಿ ತಿಳಿಯಲಾರದೆ ಮುಂದೇನು ಎಂದು ನಿರೀಕ್ಷಿಸಲು ಸಾಧ್ಯವಾಗದಿರುವುದು.

• ಪ್ರಸ್ತುತ ಸನ್ನಿವೇಶ ಎಷ್ಟು ದಿನ ಮುಂದುವರೆಯುತ್ತದೆ ಎನ್ನುವ ಅನಿಶ್ಚಿತತೆ, ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎನ್ನುವ ಗೊಂದಲ.

• ಮನೆಯಲ್ಲೇ ಕುಳಿತು ಕೆಲಸ ಮಾಡುವ ಸವಾಲಿಗೆ ಹೊಂದಿಕೊಳ್ಳುವುದು- ಇದರಲ್ಲಿ ಅಂತರ್ಜಾಲ ಸಂಪರ್ಕದ ಸಮಸ್ಯೆಗಳು, ಕಚೇರಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, ವೈಯಕ್ತಿಕ ಮತ್ತು ತಂಡ ತಲುಪಬೇಕಾದ ಗುರಿ ಹಾಗು ಧ್ಯೇಯ ಮರುಪರಿಶೀಲನೆ.

• ಹಲವು ರೀತಿಯ ಜವಾಬ್ದಾರಿಗಳನ್ನು ಒಟ್ಟಿಗೆ ನಿಭಾಯಿಸುವುದು, ಮನೆ ಕೆಲಸ, ಹಿರಿಯರ ಪಾಲನೆ, ಮಕ್ಕಳನ್ನು ನೋಡಿಕೊಳ್ಳುವುದು ಇವೆಲ್ಲದರ ನಡುವೆ ಕೆಲಸದ ಮೇಲೆ ಗಮನ ಇಡುವುದು.

ಮನೆಯಿಂದಲೇ ಕೆಲಸ ಮಾಡುವಾಗ

ಹೊಂದಾಣಿಕೆ ಹೇಗೆ ಈ ಹಿಂದೆ ನೀವು ಯಾವಾಗಲಾದರೂ ಮನೆಯಿಂದಲೇ ಕೆಲಸ ನಿರ್ವಹಿಸಿದ್ದರೆ ಅಥವಾ ಕಳೆದ ಹಲವು ದಿನಗಳಿಂದ ನೀವು ಮಾಡುತ್ತಿದ್ದರೆ ಸರಿ, ಇಲ್ಲವಾದರೆ ಮನೆಯಿಂದಲೇ ಕಚೇರಿಯ ಕೆಲಸ ಮಾಡುವ ಸವಾಲನ್ನು ಎದುರಿಸುವುದು ಕಷ್ಟವಾಗುತ್ತದೆ. ಕಾರ್ಯ ಕ್ಷೇತ್ರದ ಆಯ್ಕೆಗಳಿಗಾಗಿ ಜಾಗತಿಕ ಚಿಕಿತ್ಸಾ ಮೂಲ ಸೌಕರ್ಯಗಳು (Global Clinical Infrastructure at Workplace Options), ಈ ಸಂಸ್ಥೆಯ ನಿರ್ದೇಶಕಿ ಮೌಲಿಕ ಶರ್ಮ ಈ ಸಂದರ್ಭದಲ್ಲಿ ಅನುಸರಿಸಲು ಕೆಲವು ಅಮೂಲ್ಯ ಸಲಹೆಗಳನ್ನು ಒದಗಿಸುತ್ತಾರೆ. 

ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವಾಗ ನಿಗದಿತ ವೇಳಾಪಟ್ಟಿಯ ಮಾದರಿಯನ್ನು ಅನುಸರಿಸಿ. ನೀವು ಹೀಗೆ ಮಾಡಬಹುದು:

• ನಿರ್ದಿಷ್ಟ ಜಾಗವೊಂದನ್ನು ನಿಗದಿಪಡಿಸಿಕೊಳ್ಳಿ ನಿಮ್ಮ ಆರಾಮ ಕುರ್ಚಿ ಅಥವಾ ಹಾಸಿಗೆಯ ಮೇಲೆ ಕುಳಿತು ಕೆಲಸ ಮಾಡಬೇಡಿ. ಟೇಬಲ್ ಅಥವಾ ಡೆಸ್ಕ್ ಬಳಸಿ, ನೀವು ಕೆಲಸ ಮಾಡುವ ಜಾಗಕ್ಕೆ ಗಾಳಿ ಬೆಳಕು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳಿ.

• ಕೆಲಸ ಆರಂಭಿಸುವ ಮುನ್ನ ನೀವು ಕಚೇರಿಗೆ ಹೋಗುವಾಗ ಧರಿಸುತ್ತಿದ್ದ ಉಡುಪನ್ನೇ ಧರಿಸಿ.

• ನಿಮ್ಮ ಕೆಲಸದ ವೇಳೆ, ನಡುವಿನ ಬ್ರೇಕ್ ಸಮಯ ಕಚೇರಿಯಲ್ಲಿ ಮಾಡುತ್ತಿದ್ದಂತೆಯೇ ಇಲ್ಲಿಯೂ ಅನುಸರಿಸಿ.

• ನೀವು ಕೆಲಸ ಮಾಡುವ ಜಾಗ ಮತ್ತು ನಿಮ್ಮ ಮನೆಯೊಳಗಿನ ಜೀವನ ಎರಡರ ನಡುವೆ ಲಕ್ಷ್ಮಣರೇಖೆ ಇರಲಿ. ಆಗ ನೀವು ದಿನವಿಡೀ ಕೆಲಸ ಮಾಡುವುದನ್ನು ತಪ್ಪಿಸಿ ಮನೆಯ ವಾತಾವರಣವನ್ನೂ ಅನುಭವಿಸಬಹುದು.

• ನಿಮ್ಮ ಮೀಟಿಂಗ್ ಸಮಯವನ್ನು ಗಮನಿಸುತ್ತಿರಿ. ಮನೆಯಿಂದ ಕೆಲಸ ಮಾಡುವಾಗ ಇದು ತಪ್ಪಿಹೋಗಬಹುದು. ನಿಮಗೆ ಅಗತ್ಯವಿದ್ದರೆ ನಿಮ್ಮ ಮೊಬೈಲ್ ಮೂಲಕವೇ ಮೀಟಿಂಗ್ ಕುರಿತು ಸಮಯ ತಿಳಿಸುವಂತೆ ಮಾಡಿಕೊಳ್ಳಿ.

• ನಿಮ್ಮ ವೃತ್ತಿಪರ ಹಾಗೂ ಸಂಸ್ಥೆ ನಿಗದಿಪಡಿಸಿದ ಗುರಿಯ ಬಗ್ಗೆ ಗಮನವಿಡಿ.

• ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಿ. ಪ್ರತಿದಿನವೂ ಅವರನ್ನು ಸಂಪರ್ಕಿಸಿ ಅವರೊಡನೆ ಮಾತನಾಡುತ್ತಿರಿ

ನಿಮ್ಮ ಕುಟುಂಬದವರೊಡನೆ ಒಪ್ಪಂದಗಳನ್ನು ಮಾಡಿಕೊಳ್ಳಿ

• ನಿಮ್ಮ ಕುಟುಂಬದಲ್ಲಿ ಒಬ್ಬರಿಗಿಂತಲೂ ಹೆಚ್ಚು ಜನರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದರೆ, ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಕೆಲಸದ ಜಾಗವನ್ನು ಕೊಟ್ಟು ಅವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ. ಇದು ಓದುವ ಮಕ್ಕಳಿಗೂ ಅನ್ವಯಿಸುತ್ತದೆ. ಕಲೆ, ಪುಸ್ತಕ ಓದು ಇತರ ಹವ್ಯಾಸಗಳಲ್ಲಿ ತೊಡಗಿರುವವರಿಗೂ ಇದು ಅನ್ವಯಿಸುತ್ತದೆ.

• ನೀವು ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವಾಗ ನಿಮ್ಮ ಮನೆಯ ಸದಸ್ಯರು ನಿಮ್ಮೊಡನೆ ಹೇಗೆ ಸಹಕರಿಸಬೇಕು ಎನ್ನುವುದನ್ನು  ಕುರಿತು ಒಪ್ಪಂದ ಮಾಡಿಕೊಳ್ಳಿ. ಈ ಕೆಲವು ಪ್ರಶ್ನೆಗಳನ್ನು ಕುರಿತು ನೀವು ಚರ್ಚೆ ಮಾಡಬಹುದು : ನಿಮ್ಮ ಕಚೇರಿ ಕೆಲಸದ ಅವಧಿ ಎಷ್ಟು ? ನಿಮ್ಮ ಕುಟುಂಬದ ಸದಸ್ಯರು ಹೇಗೆ ನೆರವಾಗಬಹುದು ? ನೀವು ಕುಟುಂಬದ ಸದಸ್ಯರೊಡನೆ ಬೆರೆತು ಮಾತನಾಡುವ ಅವಧಿ ಎಷ್ಟು ? ನಿಮ್ಮ ಕೆಲಸಕ್ಕೆ ತೊಂದರೆಯಾಗದಂತೆ ಟಿ ವಿ ಮುಂತಾದ ಸದ್ದನ್ನು ನಿಯಂತ್ರಿಸುವುದು ಹೇಗೆ? 

• ಮನೆಗೆಲಸದವರಿಗೆ ರಜೆ ನೀಡಿರುವುದರಿಂದ ನೀವು ಮನೆಯ ಇತರ ಕೆಲಸಗಳಿಗೆ ಹೇಗೆ ನೆರವಾಗಬಲ್ಲಿರಿ ? ಅಗತ್ಯವಿದ್ದಲ್ಲಿ ಒಂದು ವೇಳಾಪಟ್ಟಿಯನ್ನು ತಯಾರುಮಾಡಿ, ನಿಮ್ಮ ಕಚೇರಿ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ.

• ನಿಮ್ಮ ಕುಟುಂಬದವರೊಡನೆ ಬೆರೆತು ಸಮಯ ಕಳೆಯಲು ವೇಳಾಪಟ್ಟಿಯನ್ನು ರೂಪಿಸಿ.  

ನಾವೆಲ್ಲರೂ ಅನಿಶ್ಚಿತತೆಯನ್ನು ಎದುರಿಸುತ್ತಿದ್ದರೂ, ಇತರರಿಗೆ ಹೋಲಿಸಿದರೆ ನಮ್ಮಲ್ಲಿ ಕೆಲವರಾದರೂ ಈ ಪರಿಸ್ಥಿತಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುವುದನ್ನು ನೆನಪಿಡಿ. ನಿಮಗೆ ಅತಿಯಾದ ಹೊರೆಯಾಗುತ್ತಿದೆ ಎಂಬ ಭಾವನೆ ಇದ್ದಲ್ಲಿ ಅಥವಾ ಅಂತಹ ಲಕ್ಷಣಗಳು ಕಂಡುಬಂದಲ್ಲಿ, ನಿಮ್ಮ ಕಚೇರಿಯ ಸಿಬ್ಬಂದಿ ಸಹಾಯಕ ಯೋಜನೆ (ಇಎಪಿ)ಯ ಪ್ರತಿನಿಧಿಯನ್ನು ಕೂಡಲೇ ಸಂಪರ್ಕಿಇಸಿ. ನಿಮ್ಮ ಸಂಸ್ಥೆಯಲ್ಲಿ ಇಎಪಿ ಪ್ರತಿನಿಧಿ ಇಲ್ಲದೆ ಹೋದಲ್ಲಿ ನೀವು ಒಂದು ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ನಿಮ್ಮ ಮನೆಯ ಹತ್ತಿರ ಇರುವ ಮಾನಸಿಕ ಆರೋಗ್ಯ ಸಲಹೆಗಾರರನ್ನು ಸಂಪರ್ಕಿಸಬಹುದು..  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org