ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ ಮತ್ತು ಉದ್ಯೋಗಿಗಳ ಯೋಗಕ್ಷೇಮ

ದಿನೇ ದಿನೇ ನಮ್ಮ ಜೀವನನಲ್ಲಿ ಒತ್ತಡದ ಪ್ರಮಾಣ ಏರುತ್ತಿದೆ. ಪರಿಣಾಮವಾಗಿ ಆತ್ಮಹತ್ಯೆಯ ಪ್ರಮಾಣವು ಏರಿಕೆಯಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಒಂದು ಪ್ರಮುಖ ಸವಾಲಾಗಿದೆ. ಅದರಲ್ಲಿಯೂ ಉದ್ಯೋಗದ ಸ್ಥಳಗಳಲ್ಲಿ ಆತ್ಮಹತ್ಯೆ ತಡೆಯುವುದು ಅತ್ಯಂತ ಅವಶ್ಯಕ.

ಈ ಲೇಖನದಲ್ಲಿ(ಮೊದಲನೇ ಸರಣಿ) ಶ್ರೀರಂಜಿತಾ ಜೀವೂರ್ಕರ್ ರವರು ಸಂಸ್ಥೆಗಳು ಆತ್ಮಹತ್ಯೆ ತಡೆಯಲು  ಯಾವ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬಹುದು ಮತ್ತು ಉದ್ಯೋಗಿಗಳಿಗೆ ಬೆಂಬಲ ನೀಡುವುದರ ಮೂಲಕ, ಯಾವ ರೀತಿ ಅಪಾಯಗಳನ್ನು ತಡೆಗಟ್ಟಬಹುದು ಎಂಬುದನ್ನು ವಿವರಿಸಿದ್ದಾರೆ.

ನಾವು ಆತ್ಮಹತ್ಯೆಯ ಸುದ್ದಿ ಕೇಳಿದಾಗ, ತಕ್ಷಣ  ಇಂಥದ್ದೇ ಕಾರಣವಿರಬಹುದು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತೇವೆ : ವ್ಯಕ್ತಿಯ ಸಂಬಂಧದಲ್ಲಿ ಸಮಸ್ಯೆಯುಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಅವನಿಗೆ ಆರ್ಥಿಕ ಸಮಸ್ಯೆಯಿತ್ತು, ಕೆಲಸದಲ್ಲಿ ತುಂಬಾ ತೊಂದರೆಯಿತ್ತು, ಇತ್ಯಾದಿ. ಆದರೆ ವಾಸ್ತವದಲ್ಲಿ ಆತ್ಮಹತ್ಯೆಗೆ ನಿರ್ಧಿಷ್ಟವಾದ ಕಾರಣವಿರುವುದಿಲ್ಲ, ಅದು ಹಲವಾರು ಕಾರಣಗಳಿಂದ ಘಟಿಸುತ್ತದೆ.

ವ್ಯಕ್ತಿಯು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳಿಂದ ಒತ್ತಡಕ್ಕೆ ಸಿಲುಕಿ, ಅದಕ್ಕೆ ಪರಿಹಾರ ಸಿಗದೆ  ಆತ್ಮಹತ್ಯೆಯ ಬಗ್ಗೆ ಯೋಚಿಸಬಹುದು. ಕುಟುಂಬದಲ್ಲಿ ಅಥವಾ ಸಂಬಂಧದಲ್ಲಿ ಸಮಸ್ಯೆ, ಆರ್ಥಿಕ ಸಮಸ್ಯೆ, ಮಾನಸಿಕ ಸಮಸ್ಯೆ ಇತ್ಯಾದಿ, ಒಟ್ಟಾರೆ ಹಲವಾರು  ಕಾರಣಗಳ ಪರಿಣಾಮವಾಗಿ ವ್ಯಕ್ತಿಯು ಆತ್ಮಹತ್ಯೆಗೆ ಪ್ರಯತ್ನಿಸಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಆತ್ಯಹತ್ಯೆ ಒಂದು ಗುಟ್ಟಿನ ಸಮಸ್ಯೆ. ವ್ಯಕ್ತಿಯು ತನ್ನ ಉದ್ಯೋಗದ ಸ್ಥಳದಲ್ಲಿ ಇದರ ಬಗ್ಗೆ ಮಾತನಾಡುವುದಿಲ್ಲ. ಹಲವಾರು ಕಾರಣಗಳಿಂದ ಇತರರ ಸಹಾಯ ಪಡೆಯಲು ಹೆದರುತ್ತಾರೆ. ಹಲವಾರು ಸಂಸ್ಥೆಗಳಲ್ಲಿ ಮಾನಸಿಕ ಸಮಸ್ಯೆಯಿರುವ ಉದ್ಯೋಗಿಗೆ ರಜೆ ನೀಡಲಾಗುತ್ತದೆ (ಕೆಲವೊಮ್ಮೆ ವೇತನ ತಡೆ ಹಿಡಿದು) ಮತ್ತು ಸೂಕ್ತ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ.

ಆದರೆ, ನಮಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ!

ಹಲವಾರು ಸಂಸ್ಥೆಗಳು ಉದ್ಯೋಗಿಗಳಿಗಾಗಿ ಆತ್ಮಹತ್ಯೆ ತಡೆಗಟ್ಟುವ  ಕಾರ್ಯಕ್ರಮವನ್ನು ಅಳವಡಿಸುವುದಿಲ್ಲ. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಬೇರೆಯವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉದಾಸೀನ ತೋರಿಸುತ್ತಾರೆ. ಈ ವಿಷಯದಲ್ಲಿ ಸಾಕಷ್ಟು ಮಿಥ್ಯ ಮತ್ತು ತಪ್ಪುಗ್ರಹಿಕೆಗಳುಂಟು. "ಆತ್ಮಹತ್ಯೆ ಮಾಡಿಕೊಂಡಿರುವುದು ಕೇವಲ ಒಬ್ಬ ವ್ಯಕ್ತಿ" ಅಥವಾ "ಈ ಆತ್ಮಹತ್ಯೆಗೂ, ಬೇರೆ ಉದ್ಯೋಗಿಗಳಿಗೂ  ಯಾವುದೇ ಸಂಬಂಧವಿಲ್ಲ" ಅಥವಾ "ನಮ್ಮ ಸಂಸ್ಥೆಯ ಉದ್ಯೋಗಿಗಳು ಇದನ್ನು ನಿಭಾಯಿಸುತ್ತಾರೆ, ಯಾವುದೇ ಸಮಸ್ಯೆ ಬರುವುದಿಲ್ಲ, ನನಗೆ ವಿಶ್ವಾಸವಿದೆ" ಇತ್ಯಾದಿ.

ಆತ್ಮಹತ್ಯೆ ಮಾಡಿಕೊಂಡಿರುವುದು ಕೇವಲ ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ಆತನ ಸಹದ್ಯೋಗಿಗಳ ಮೇಲೆ ಮತ್ತು ಸಂಸ್ಥೆಯ ಮೇಲೆ ಧೀರ್ಘಕಾಲದವರೆಗೂ ಗಂಭೀರವಾದ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡದಿಂದ ಸಮಸ್ಯೆಯುಂಟಾಗಿ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತನ ಸಹದ್ಯೋಗಿಗಳು ತಪ್ಪಾಗಿ ಗ್ರಹಿಸಬಹುದು. ಮುಂದೊಂದು ದಿನ ತಮಗೂ ಇದೇ ರೀತಿ ಸಮಸ್ಯೆಯಾಗುತ್ತದೆ ಎಂದು ಊಹಿಸಬಹುದು. ಇದರಿಂದ ಸಂಸ್ಥೆಯ ಆಡಳಿತದ ಬಗ್ಗೆ ಅಪನಂಬಿಕೆ ಮೂಡಬಹುದು.

ತಜ್ಞರು ಹೇಳುವಂತೆ ಆತ್ಮಹತ್ಯೆ ಒಂದು ವ್ಯಾಪಕವಾದ ವಿದ್ಯಮಾನ. ನಿಮ್ಹಾನ್ಸ್ ಕೇಂದ್ರದ ಎಪಿಡೆಮಾಲಜಿ ಶಾಖೆಯ ಮುಖ್ಯಸ್ಥರಾದ ಡಾ. ಗುರುರಾಜ್ ಗೋಪಾಲಕೃಷ್ಣ ಹೇಳುವ ಪ್ರಕಾರ "ಆತ್ಮಹತ್ಯೆಯೊಂದು ವ್ಯಾಪಕವಾದ ಪ್ರಕ್ರಿಯೆ.ಮೇಲ್ನೋಟಕ್ಕೆ ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಂತೆ ಕಾಣಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸುಮಾರು ಹತ್ತರಿಂದ ಇಪ್ಪತ್ತು ಜನರು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ, ನೂರಾರು ಜನರು ಆತ್ಯಹತ್ಯೆಯ ಬಗ್ಗೆ ಆಲೋಚಿಸುತ್ತಾರೆ ಮತ್ತು ಹಲವಾರು ಜನರು ಆತ್ಮಹತ್ಯೆಯ ಅಪಾಯದಲ್ಲಿರುತ್ತಾರೆ."

ಮೇಲ್ನೋಟಕ್ಕೆ ಸಮಸ್ಯೆ ಸಣ್ಣದೆನಿಸುತ್ತದೆ.

ಆತ್ಮಹತ್ಯೆಗೆ ಹಲವಾರು ಕಾರಣಗಳಿರುತ್ತವೆ. ಸಾಮಾಜಿಕ, ಉದ್ಯೋಗ ಸಂಬಂಧೀ ಮತ್ತು ವ್ಯವಸ್ಥೆಯ ಪರಿಣಾಮವಾಗಿ, ಹೀಗೆ ಹಲವಾರು ಅಂಶಗಳು ಒಂದರ ಮೇಲೆ ಮತ್ತೊಂದು ಪ್ರಭಾವ ಬೀರುತ್ತವೆ. ತುಂಬಾ ದಿನಗಳವರೆಗೂ ಕಾಡುತ್ತಿರುವ ಸಮಸ್ಯೆಗಳು ಒಟ್ಟಾರೆಯಾಗಿ ವ್ಯಕ್ತಿಗೆ ತೀವ್ರ ಯಾತನೆ ಉಂಟುಮಾಡುತ್ತದೆ ಮತ್ತು ಆತ ತನ್ನ ಬದುಕನ್ನು ಕೊನೆಗಾಣಿಸುವ ತೀರ್ಮಾನಕ್ಕೆ ಬರಬಹುದು.

ಸಂಸ್ಥೆಯೊಂದರಲ್ಲಿ ಆತ್ಮಹತ್ಯೆ ತಡೆಗಟ್ಟುವ  ಕಾರ್ಯಕ್ರಮವನ್ನು ಏಕೆ ಅಳವಡಿಸಬೇಕು?

ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವನ್ನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು. ಕಾರಣಗಳನ್ನು ಈ ರೀತಿಯಾಗಿ ವಿವರಿಸಬಹುದು:

  • ಉದ್ಯೋಗಿಗಳ ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡಬಹುದು.
  • ಸಮಸ್ಯೆಯಿರುವ ವ್ಯಕ್ತಿಗೆ ಸೂಕ್ತ ಸಹಾಯ ನೀಡಬಹುದು. ವ್ಯಕ್ತಿಗೆ ತನ್ನ ಕಾಳಜಿ ವಹಿಸುವವರು ಇದ್ದಾರೆ ಎಂಬ ಭಾವನೆ ಬರುತ್ತದೆ. 
  • ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಸಂಸ್ಥೆಯ ಆಸಕ್ತಿಯನ್ನು ತೋರಿಸುತ್ತದೆ ಮತ್ತು ಸಂಸ್ಥೆಯ ನಿರ್ವಹಣೆಯ ಬಗ್ಗೆ ಭರವಸೆ ಮೂಡುತ್ತದೆ.
  • ತಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಲು ಸಂಬಂಧ ಪಟ್ಟ ತಜ್ಞರ ಸಹಾಯ ದೊರಕುತ್ತದೆ.

ಡಾ. ಗುರುರಾಜ್ ಗೋಪಾಲಕೃಷ್ಣರವರು ಹೇಳುವಂತೆ "ನಾವು ಒಂದು ಆತ್ಮಹತ್ಯೆಯ ಬಗ್ಗೆ ಮಾತನಾಡುವಾಗ, ಅದು ಕೇವಲ ಸಮಸ್ಯೆಯ ಮೇಲ್ಪದರವಾಗಿರುತ್ತದೆ. ಈ ರೀತಿಯ ಯಾವ ಘಟನೆಯನ್ನಾದರೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಕೆಲವೊಂದು ಸಂಸ್ಥೆಗಳು ಉದ್ಯೋಗಿಯೊಬ್ಬನ ಆತ್ಮಹತ್ಯೆ ಜರುಗಿದ ನಂತರ, ಆದ ನಷ್ಟವನ್ನು ತುಂಬುವುದರ ಮೂಲಕ ಪ್ರತಿಕ್ರಿಯಿಸುತ್ತವೆ. ಆದರೆ ಇದು ಸರಿಯಾದ ಯೋಜನೆಯಲ್ಲ. ಪ್ರತಿಯೊಂದು ಸಂಸ್ಥೆಯೂ ಪೂರ್ವ ನಿಯೋಜಿತ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು ಮತ್ತು ಈ ಮೂಲಕ ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿರಬೇಕು".

ಆತ್ಮಹತ್ಯೆ ತಡೆಗಟ್ಟುವಲ್ಲಿ ಮುಂಜಾಗ್ರತಾ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ಎರಡು ವಿಧಾನಗಳಿವೆ :

  • ಖಿನ್ನತೆ, ಆತಂಕ, ವ್ಯಸನಗಳಂತಹ ಸಾಮಾನ್ಯ ಮಾನಸಿಕ ಸಮಸ್ಯೆಗಳಿಗೆ  ಸಂಬಂಧಿಸಿದ ಸಮಗ್ರ ಮಾನಸಿಕ ಆರೋಗ್ಯ ಕಾರ್ಯಕ್ರಮದ ಒಂದು ಭಾಗವಾಗಿ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವನ್ನು ಅಳವಡಿಸುವುದು.

  • ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಅಳವಡಿಸುವುದು.

ಗಮನಿಸಿ: ಇಂತಹ ಕಾರ್ಯಕ್ರಮವನ್ನು ಅಳವಡಿಸುವಾಗ ಉದ್ಯೋಗಿಗಳಿಗೆ ಅಗತ್ಯವಿರುವ ನೆರವು ಮತ್ತು ಸೇವೆ ನೀಡಲು ಇರುವ ಸೌಲಭ್ಯಗಳ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಮತ್ತು ಆಡಳಿತ ವರ್ಗದ ಬೆಂಬಲ ಸದಾ ಇರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು .

ಈ ಲೇಖನಗಳ ಸರಣಿಯನ್ನು ವೈಟ್ ಸ್ವಾನ್ ಫೌಂಡೇಶನ್ ವತಿಯಿಂದ ರಚಿಸಲಾಗಿದೆ. ವಿ‍‍ಷಯ ಸಂಗ್ರಹಣೆ : ನಿಮ್ಹಾನ್ಸ್ ಕೇಂದ್ರದ ನುರಿತ ತಜ್ಞರುಗಳಾದ ಡಾ. ಗುರುರಾಜ್ ಗೋಪಾಲಕೃಷ್ಣ ( ಎಪಿಡೆಮಾಲಜಿ ಶಾಖೆಯ ಮುಖ್ಯಸ್ಥರು ), ಡಾ. ಪ್ರಭಾ ಚಂದ್ರ (ಮನೋವೈದ್ಯ ಶಾಸ್ತ್ರ ಪ್ರಾಧ್ಯಾಪಕರು ) , ಡಾ. ಸೀಮಾ ಮಲ್ಹೋತ್ರ ( ಹೆಚ್ಚುವರಿ ಪ್ರಾಧ್ಯಾಪಕರು, ವೈದ್ಯಕೀಯ ಮನೋವಿಜ್ಞಾನ ) , ಡಾ. ಪೂರ್ಣಿಮಾ ಭೋಲಾ ( ಸಹ ಪ್ರಾಧ್ಯಾಪಕರು, ವೈದ್ಯಕೀಯ ಮನೋವಿಜ್ಞಾನ ವಿಭಾಗ) ಮತ್ತು ಡಾ. ಸೆಂಥಿಲ್ ಕುಮಾರ್ ರೆಡ್ಡಿ ( ಸಹ ಪ್ರಾಧ್ಯಾಪಕರು, ಮನೋವೈದ್ಯ ಶಾಸ್ತ್ರ) .

Related Stories

No stories found.