ನಿಮ್ಮ ಸಹದ್ಯೋಗಿಯ  ಜೀವವನ್ನು ಉಳಿಸಬಹುದು

ನಿಮ್ಮ ಸಹದ್ಯೋಗಿಯ ಜೀವವನ್ನು ಉಳಿಸಬಹುದು

ಉದ್ಯೋಗಿಯೊಬ್ಬನ ಸಮಸ್ಯೆಗೆ ಸಹದ್ಯೋಗಿಯಾಗಿ ನೀವು ಕೂಡ ಕಷ್ಟ ಕಾಲದಲ್ಲಿ ನೆರವು ನೀಡಬಹುದು.
Published on

‘ಉದ್ಯೋಗದ ಸ್ಥಳದಲ್ಲಿ ಆತ್ಮಹತ್ಯೆ ತಡೆಗಟ್ಟುವುದು’- ಶ್ರೀರಂಜಿತಾ ಜೀವೂರ್ಕರ್ ರವರ ನಾಲ್ಕು ಲೇಖನಗಳ ಈ ಸರಣಿಯಲ್ಲಿ ಸಹದ್ಯೋಗಿಯಾಗಿ ನೀವು,  ನಿಮ್ಮ ಸ್ನೇಹಿತರ ಯಾತನೆಯನ್ನು ಗುರುತಿಸಿ, ಅವರಿಗೆ ಯಾವ ರೀತಿ  ಸಹಾಯ ಮಾಡಬಹುದು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ನಾವು, ನಮ್ಮ ಮಾನವ ಸಂಪನ್ಮೂಲ ವ್ಯಕ್ತಿಗಳಿಗಿಂತ ಅಥವಾ ನಮ್ಮ ಮೇಲಧಿಕಾರಿಗಳಿಗಿಂತ ಹೆಚ್ಚಾಗಿ ಸಹೋದ್ಯೋಗಿಗಳೊಂದಿಗೆ ಕಾಲ ಕಳೆಯುತ್ತೇವೆ. ಅವರ ಭಾವನೆಗಳು, ಮನೆ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಹು ಬೇಗ ನಮ್ಮ ಗಮನಕ್ಕೆ ಬರುತ್ತವೆ. ಒಂದು ವೇಳೆ ಸಮಸ್ಯೆ ಕಂಡುಬಂದಲ್ಲಿ ಸ್ವಲ್ಪ ಅನುಭೂತಿಯಿಂದ ನಮ್ಮ ಸಹುದ್ಯೋಗಿಗಳಿಗೆ ಭಾವನಾತ್ಮಕ ರೀತಿಯಲ್ಲಿ ನೆರವಾಗಬಹುದು.

ಗೇಟ್ ಕೀಪರ್ ಎಂದರೆ ಯಾರು?

ಆತ್ಮಹತ್ಯೆ ತಡೆಗಟ್ಟಬಹುದು ಎಂಬ ವಿಶ್ವಾಸವಿಟ್ಟು,  ಈ ಕೆಲಸಕ್ಕಾಗಿ  ತಮ್ಮ ಸಮಯ ಮತ್ತು ಸಾಮರ್ಥ್ಯವನ್ನು ಮೀಸಲಾಗಿಟ್ಟ ವ್ಯಕ್ತಿಯನ್ನು ಗೇಟ್ ಕೀಪರ್ ಎಂದು ಕರೆಯಬಹುದು.  ಆತ ಯಾರೇ ಆಗಿರಬಹುದು, ಒಬ್ಬ ಶಿಕ್ಷಕ, ಹಾಸ್ಟೆಲ್ ವಾರ್ಡನ್, ಪೋಷಕ, ನೆರೆಮನೆಯವರು, ವಾಚ್ಮನ್, ಬಸ್ ಕಂಡಕ್ಟರ್,  ಅಂಗಡಿ ಮಾಲೀಕ ಅಥವಾ ಒಂದು ಸಮುದಾಯದ ನಾಯಕ, ಯಾರು ಬೇಕಾದರೂ ಆಗಬಹುದು.   

ನೀವು ಒಬ್ಬ  ಗೇಟ್ ಕೀಪರ್ ಆಗಿದ್ದರೆ ,  ಆತ್ಮಹತ್ಯೆ ಅಪಾಯದಂಚಿನಲ್ಲಿರುವ ವ್ಯಕ್ತಿಯನ್ನು ಗುರುತಿಸಿ, ಆತನ ಚಲನವಲನಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಸಮಯ ಬಂದಾಗ  ಅವಶ್ಯವಿರುವ ಭಾವನಾತ್ಮಕ ಬೆಂಬಲ ನೀಡಿ ನಂತರ  ಚಿಕಿತ್ಸೆ ಪಡೆಯಲು ಸೂಕ್ತ  ಮಾನಸಿಕ ಆರೋಗ್ಯ ತಜ್ಞರ ಬಳಿ ಕರೆದೊಯ್ಯಬೇಕು.  

ನಿಮ್ಮ ಆತ್ಮೀಯರೊಬ್ಬರು ಅಥವಾ ಸಹದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಎಂದು ನಿಮಗೆ ಅನುಮಾನ ಬಂದರೆ, ಆತನನ್ನು ಸಹಜವಾಗಿ ಮಾತನಾಡಿಸುವ ಮೂಲಕ  ಚರ್ಚೆ ಆರಂಭಿಸಬಹುದು- “ನಿಮಗೆ ಯಾವಾಗಲಾದರೂ ಜೀವನದ ಬಗ್ಗೆ ಜಿಗುಪ್ಸೆ ಮೂಡಿದೆಯೇ ? ಬದುಕಿರುವುದರಲ್ಲಿ ಯಾವ ಅರ್ಥವೂ ಇಲ್ಲಾ ಎಂದು ಅನ್ನಿಸುತ್ತಿದ್ದೆಯೇ ?” ಈ ರೀತಿ ಪ್ರಶ್ನಿಸುವುದರ ಮೂಲಕ  ಆತನ ಮನಸ್ಥಿತಿಯನ್ನು ಅರಿಯಲು ಪ್ರಯತ್ನಿಸಬಹುದು. ಇದರಿಂದ ಸಮಸ್ಯೆಯಲ್ಲಿರುವ ವ್ಯಕ್ತಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಹಾಯವಾಗುತ್ತದೆ.

ಸಾಮಾನ್ಯವಾಗಿ ಜನರಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯವಿದೆ. ಪ್ರಶ್ನಿಸುವುದರಿಂದ ವ್ಯಕ್ತಿಯು ತನ್ನ ಆತ್ಮಹತ್ಯೆಯ ಆಲೋಚನೆಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ ಎಂಬ ತಪ್ಪು ಗ್ರಹಿಕೆಯಿದೆ. ಆದರೆ ಇದು ಸತ್ಯವಲ್ಲ.ಯಾವುದೇ ಪೂರ್ವಾಗ್ರಹ ಪೀಡನೆಯಿಲ್ಲದೇ ಮತ್ತು ತೀರ್ಮಾನಕರ ಹೇಳಿಕೆಯನ್ನು ನೀಡದೇ, ವ್ಯಕ್ತಿಯನ್ನು ಪರೋಕ್ಷವಾಗಿ ಪ್ರಶ್ನಿಸುವುದರ ಮೂಲಕ ಮಾತಿಗೆ ಎಳೆಯುವುದರಿಂದ ಆತ ತನ್ನ ಆತ್ಮಹತ್ಯೆ ಆಲೋಚನೆಗಳ ಬಗ್ಗೆ ಹಂಚಿಕೊಳ್ಳಲು ಸುಲಭವಾಗುತ್ತದೆ.

ಸಹದ್ಯೋಗಿಯೊಬ್ಬ ಸಮಸ್ಯೆಯಿಂದ  ಬಳಲುತ್ತಿರುವುದನ್ನು ಪತ್ತೆ ಹಚ್ಚುವುದು:

ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವ ವ್ಯಕ್ತಿಯ ನಡವಳಿಕೆಯಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕುಸಿದ ಮನಸ್ಥಿತಿ, ಸಣ್ಣ ವಿಷಯಗಳಿಗೂ ಬಹು ಬೇಗ ಭಾವುಕನಾಗುವುದು, ಇತ್ಯಾದಿ.

ಈ ಕೆಳಗಿನ ಲಕ್ಷಣಗಳು ವ್ಯಕ್ತಿಯ ನಡವಳಿಕೆಯ ಬಗ್ಗೆ ಎಚ್ಚರದಿಂದಿರಲು ಸಹಾಯ ಮಾಡಬಹುದು.  

  • ಸಾವಿನ ಬಗ್ಗೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡುವುದು,  ಬದುಕಲು ಇಷ್ಟವಿಲ್ಲ ಅಥವಾ ಬದುಕಿಗೆ ಯಾವ ಅರ್ಥವೂ ಇಲ್ಲಾ ಎನ್ನುವುದು
  • ಕೊಲೆ, ಸಾವು ಅಥವಾ ಆತ್ಮಹತ್ಯೆಯ ವಿವರಗಳನ್ನು ತಿಳಿದುಕೊಳ್ಳಲು ಅತೀವ ಆಸಕ್ತಿ ತೋರಿಸುವುದು
  • ನಾನು ನಿಷ್ಪ್ರಯೋಜಕ ಅಥವಾ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಭಾರವಾಗಿದ್ದೇನೆ ಎಂದು ಮಾತನಾಡುವುದು
  • ಆತ್ಮಹತ್ಯೆಯ ಬೇರೆ ಬೇರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಮತ್ತು ಅದರ ಸಾಧಕ ಭಾದಕಗಳ ಕುರಿತು ವಿಶ್ಲೇಷಣೆ ಮಾಡುವುದು
  • ಬಹುಕಾಲದವರೆಗೂ ಖಿನ್ನತೆಯಲ್ಲಿರುವುದು ಅಥವಾ ವಿಲಕ್ಷಣವಾಗಿ ಮೌನವಾಗಿರುವುದು
  • ಚಂಚಲ ಮನಸ್ಸು
  • ಆಲ್ಕೋಹಾಲ್ ಅಥವಾ ಮಾದಕ ವಸ್ತುಗಳ ಮೇಲೆ ಅವಲಂಬಿತವಾಗುವುದು
  • ಕೆಲಸ, ವೈಯಕ್ತಿಕ ಶುಚಿತ್ವ ಅಥವಾ ಜವಾಬ್ದಾರಿಗಳ ಮೇಲೆ ನಿರಾಸಕ್ತಿ ಹೊಂದಿರುವುದು
  • ಸಾವಿಗೆ ಸಂಬಂಧಿಸಿದ ವ್ಯವಹಾರಿಕ ವಿಷಯಗಳ ಮೇಲೆ ಆಸಕ್ತಿ ತೋರಿಸುವುದು. ಉದಾಹರಣೆಗೆ ಜೀವ ವಿಮಾ ಪಾಲಿಸಿಯ ಲಾಭಗಳು, ವಿಲ್ ಪತ್ರ ಬರೆಯುವುದು ಅಥವಾ ತಮ್ಮಅಂತ್ಯಕ್ರಿಯೆಯ ಬಗ್ಗೆ ಆಸಕ್ತಿ ತೋರಿಸುವುದು

ಈ ಸಂದರ್ಭಗಳಲ್ಲಿ ಅವರಿಗೆ ನಿಮ್ಮ ಸಹಾಯದ ಅವಶ್ಯಕತೆಯಿರುತ್ತದೆ.

ಉದ್ಯೋಗಿಯೊಬ್ಬನ ಸಮಸ್ಯೆಯನ್ನು ಪತ್ತೆ ಮಾಡುವಲ್ಲಿ ಮಾನವ ಸಂಪನ್ಮೂಲ ವ್ಯಕ್ತಿ ಅಥವಾ ಮ್ಯಾನೇಜರ್ ರವರ ಪಾತ್ರ:

  • ಪ್ರತಿನಿತ್ಯ  ಕೆಲಸಕ್ಕೆ ನಿಯಮಿತವಾಗಿ ಬರುತ್ತಿದ್ದ ಮತ್ತು ತನ್ನ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದ ವ್ಯಕ್ತಿಯು ಇದ್ದಕ್ಕಿದ್ದಂತೆ ಗೈರುಹಾಜರಾದಾಗ,  ಆಫೀಸಿನ ಸಮಯವನ್ನು ಮತ್ತು  ಕೆಲಸವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಇತ್ಯಾದಿ.

  • ಉದ್ಯೋಗದಲ್ಲಿ ಹಿಂಬಡ್ತಿಯಾದಾಗ ಅಥವಾ ತಮ್ಮ ಸ್ಥಾನದ  ಬದಲಾವಣೆಯಾದಾಗ ವ್ಯಕ್ತಿಗೆ ನಿಭಾಯಿಸಲು ಸಾಧ್ಯವಾಗದೇ ಇರುವುದು

 ಉದ್ಯೋಗದಲ್ಲಿ ಬದಲಾವಣೆಯಾದ ಮಾತ್ರಕ್ಕೆ ವ್ಯಕ್ತಿಯು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾನೆ ಎಂದು ಅರ್ಥವಲ್ಲ, ಆದರೆ ಇಂತಹ ಸನ್ನಿವೇಶಗಳನ್ನು ನಿಭಾಯಿಸಲು ಆತನಿಗೆ ಮಾನಸಿಕ ಬೆಂಬಲದ ಅಗತ್ಯತೆ ಇರುತ್ತದೆ ಎಂಬುದನ್ನು ಗಮನಿಸಬೇಕು

 ಚರ್ಚೆಯನ್ನು ಹೇಗೆ ಆರಂಭಿಸುವುದು?

ತುಂಬಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವವರನ್ನು ಕಂಡಾಗ ನಮಗೆ ಸಹಾಯ ಮಾಡುವ ಮನಸ್ಥಿತಿ ಇರುತ್ತದೆ, ಆದರೆ ಕೆಲವೊಂದು ಗೊಂದಲಗಳು ಅಡ್ಡಿ ಮಾಡುತ್ತವೆ. ವ್ಯಕ್ತಿಯು ನಮ್ಮೊಂದಿಗೆ ಮಾತನಾಡಲು ಬಯಸುತ್ತಾನೋ, ಇಲ್ಲವೋ ? ಅಥವಾ ನಾವು ಮಾಡುವ ಸಹಾಯದಿಂದ ಆತ ತನ್ನ ಮೊದಲಿನ ಸ್ಥಿತಿಗೆ ಹಿಂದಿರುಗುತ್ತಾನೆಯೇ ? ಇತ್ಯಾದಿ ಪ್ರಶ್ನೆಗಳು ಕಾಡುತ್ತವೆ.  

ಸಹದ್ಯೋಗಿಯೊಬ್ಬನಿಗೆ  ಅಥವಾ ಸ್ನೇಹಿತನೊಬ್ಬನಿಗೆ ಸಹಾಯ ಮಾಡುವ ಮುಂಚೆ ಈ ಕೆಲವು ಅಂಶಗಳ ಬಗ್ಗೆ ತಿಳಿದಿರಬೇಕು .

  • ವ್ಯಕ್ತಿಗೆ  ಸಹಾಯದ ಅವಶ್ಯಕತೆಯಿದೆಯೇ?  ಎಂದು ಕೇಳಿದಾಗ  ಆತ ಕೋಪದಿಂದ ಪ್ರತಿಕ್ರಿಯಿಸಿದರೆ ?
  • ಒಂದು ವೇಳೆ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಬಹುದು, ಆ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು?
  • ವ್ಯಕ್ತಿಯ ಸಮಸ್ಯೆಯನ್ನು ಕೇಳಿದ ನಂತರ ನಾವು ಸ್ಥೈರ್ಯ ಕಳೆದುಕೊಂಡರೆ  ಏನು ಮಾಡಬೇಕು ?
  • ವಿಷಯವನ್ನು ಹೇಗೆ ಗೌಪ್ಯವಾಗಿರಿಸುವುದು? ಮತ್ತು ಅದೇ ಸಮಯದಲ್ಲಿ ವ್ಯಕ್ತಿಗೆ ಯಾವ ರೀತಿ ಸಹಾಯ ಮಾಡಬಹುದು?  
  • ವ್ಯಕ್ತಿಯ ಸಮಸ್ಯೆ ಸಂಸ್ಥೆಯ ಗಮನಕ್ಕೆ ಬಂದ ನಂತರ, ಆತನನ್ನು ನೋಡುವ ದೃಷ್ಟಿಕೋನ ಬದಲಾಗುವುದೇ?
  • ವ್ಯಕ್ತಿಯು ತನ್ನನ್ನು ತಾನು ಶಿಕ್ಷಿಸುವ ಮನಸ್ಥಿತಿಯಲ್ಲಿರುವನೇ? ಸಂಸ್ಥೆಯು ಯಾವ ರೀತಿ ನೆರವನ್ನು ನೀಡಬಹುದು.
  • ಇಂಥಹ ಸೂಕ್ಷ್ಮ ವಿಷಯಗಳಲ್ಲಿ ಸಹುದ್ಯೋಗಿಗಳು ಭಾಗಿಯಾಗಬಾರದು, ಇದನ್ನು ಮಾನವ ಸಂಪನ್ಮೂಲ ವ್ಯಕ್ತಿಗಳು ನಿಭಾಯಿಸುತ್ತಾರೆ ಎಂದು ಸಂಸ್ಥೆಯು ಪರಿಗಣಿಸಿದರೆ ಏನು ಮಾಡಬೇಕು ?

ಈ ಎಲ್ಲಾ ಪ್ರಶ್ನೆಗಳಿಗೆ ತಯಾರಿ ನೆಡೆಸಿದ್ದರೆ, ಸನ್ನಿವೇಶವನ್ನು  ಉತ್ತಮವಾಗಿ ನಿಭಾಯಿಸಲು ಸಹಾಯವಾಗುತ್ತದೆ.  

ಗೇಟ್ ಕೀಪರ್ ಆದ ವ್ಯಕ್ತಿಯು ಏನನ್ನು ಮಾಡಬೇಕು ಅಥವಾ ಏನನ್ನು ಮಾಡಬಾರದು ?

  • ಯಾವುದೇ ರೀತಿಯ ತೀರ್ಮಾನಕರ ಹೇಳಿಕೆಯನ್ನು ನೀಡದೇ, ತಾಳ್ಮೆಯಿಂದ ವ್ಯಕ್ತಿಯ ಸಮಸ್ಯೆಯನ್ನು ಕೇಳಿದರೆ ಸಾಕು.
  • ಅವರ ಸಮಸ್ಯೆಗಳನ್ನು ಕಡೆಗಣಿಸದಿರಿ. ಪ್ರತಿಯೊಬ್ಬರ ತಾಳ್ಮೆಯ ಮಟ್ಟ ವಿಭಿನ್ನವಾಗಿರುತ್ತದೆ ಮತ್ತು ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ನಿಭಾಯಿಸುತ್ತಾರೆ.   
  • “ನಿನ್ನಿಂದ ನಿಭಾಯಿಸಲು ಸಾಧ್ಯವಾಗುತ್ತದೆ”, “ಧೈರ್ಯವಾಗಿರು”, “ಆತ್ಮಹತ್ಯೆ ಪರಿಹಾರವಲ್ಲ”, ಅಥವಾ “ಎಲ್ಲರಿಗೂ ಸಮಸ್ಯೆಯಿರುತ್ತದೆ” ಅಥವಾ “ನೀವು ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದೀರಿ”, ಇಂತಹ  ವಾಕ್ಯಗಳನ್ನು ಉಪಯೋಗಿಸಬೇಡಿ.
  • ತೀರ್ಮಾನಕರವಾದ ಅಥವಾ ಟೀಕಿಸುವಂತಹ ಹೇಳಿಕೆಯನ್ನು ನೀಡದಿರಿ. ಉದಾಹರಣೆಗೆ “ಆತ್ಮಹತ್ಯೆ ಒಂದು ಅಪರಾಧ”, ಅಥವಾ “ಹೇಡಿಯಂತೆ ವರ್ತಿಸದಿರು”, ಇತ್ಯಾದಿ. 
  • ವ್ಯಕ್ತಿಗೆ ಅಪರಾಧ ಪ್ರಜ್ಞೆ ಮೂಡಿಸುವಂತಹ ಅಥವ ತಮ್ಮ ಆಲೋಚನೆಗಳ ಬಗ್ಗೆ ನಾಚಿಕೆ ಮೂಡುವಂತಹ ಯಾವುದೇ ಮಾತುಗಳನ್ನು ಆಡದಿರಿ. ಉದಾಹರಣೆಗೆ “ ನಿಮ್ಮ ಮನೆಯವರ / ಪೋಷಕರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಿದ್ದೀರಾ?”  
  • ತಮ್ಮ ಬದುಕಿನಲ್ಲಿ, ಈ ಹಿಂದೆ ಎದುರಾದ  ಸಮಸ್ಯೆಯನ್ನು ಧೈರ್ಯದಿಂದ  ಹೇಗೆ ನಿಭಾಯಿಸಿದರು?  ಎಂಬ ವಿಷಯವನ್ನು  ನೆನಪಿಗೆ ತನ್ನಿ.
  • ವ್ಯಕ್ತಿಯ ಯಾತನೆಯನ್ನು ಗುರುತಿಸಿ. ಬದುಕಿನ ಮೌಲ್ಯಗಳ ಬಗ್ಗೆ ನೆನಪಿಸಿ ಮತ್ತು ಒಂದು ಪಟ್ಟಿ ಮಾಡಿಕೊಳ್ಳಲು ಸಲಹೆ ನೀಡಿ. ಇದು ವ್ಯಕ್ತಿಯು ಸ್ಥೈರ್ಯ ಕಳೆದುಕೊಳ್ಳುವ ಸಂದರ್ಭಗಳಲ್ಲಿ ಸಹಾಯವಾಗುತ್ತದೆ.
  • ವ್ಯಕ್ತಿಯ ಸಾಮರ್ಥ್ಯವನ್ನು ಗಮನಿಸಿ ಮತ್ತು ಸಮಸ್ಯೆಗೆ ತಮ್ಮಲ್ಲಿಯೇ ಅಥವಾ ತಮ್ಮ ಸುತ್ತಮುತ್ತಲ ಪರಿಸರದಲ್ಲಿಯೇ ಪರಿಹಾರ ಕಂಡುಕೊಳ್ಳಲು ಇರುವ ಸಾಧ್ಯತೆಗಳನ್ನು ಗುರುತಿಸಿ. 
  • ವ್ಯಕ್ತಿಯು ಯಾವುದೇ ಸಮಯದಲ್ಲಿ ಯಾತನೆಗೊಳಗಾದರೂ ನಿಮಗೆ ತಕ್ಷಣ ಕರೆ ಮಾಡಲು ಹೇಳಿ. ಈ ಮೂಲಕ ಅವರಿಗೆ ನಿಮ್ಮ ಸಹಾಯ ಯಾವಾಗಲೂ ಇರುತ್ತದೆ ಎಂಬ ಭರವಸೆ ನೀಡಿ.   

ಉದ್ಯೋಗದ ಸ್ಥಳದಲ್ಲಿ ಹೊಣೆಗಾರಿಕೆ

ಅವಶ್ಯಕತೆಯಿದ್ದಾಗ, ಮಾನವ ಸಂಪನ್ಮೂಲ ವ್ಯಕ್ತಿಯ ಅಥವಾ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಲು ಉದ್ಯೋಗಿಗಳಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಮಾಡಿಕೊಡುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.  ಸರಿಯಾದ ತರಬೇತಿ ದೊರೆತರೆ ಯಾರು ಬೇಕಾದರೂ ಗೇಟ್ ಕೀಪರ್ ಆಗಬಹುದು. ಉದ್ಯೋಗಿಗಳ ಯೋಗಕ್ಷೇಮದ ಹಿನ್ನಲೆಯಲ್ಲಿ , ಸಾಧ್ಯವಾದಷ್ಟು ಹೆಚ್ಚು ಗೇಟ್ ಕೀಪರ್ ಗಳನ್ನು ನೇಮಿಸುವುದು ಸೂಕ್ತ.  

ಸಂಸ್ಥೆಯಲ್ಲಿ ಗೇಟ್ ಕೀಪರ್ ಗಳನ್ನು ನೇಮಿಸುವುದು

ಚೆನ್ನೈನ Sneha (ಸ್ನೇಹ) ಸಂಸ್ಥೆ ಮತ್ತು ಬೆಂಗಳೂರಿನ  Nimhans Centre for Wellbeing (ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್‌ಬೀಯಿಂಗ್) ಗೇಟ್ ಕೀಪರ್ ತರಬೇತಿಯನ್ನು ನೀಡುತ್ತವೆ. ಈ ತರಬೇತಿಯಲ್ಲಿ ಆತ್ಮಹತ್ಯೆಗೆ ಕಾರಣವಾದ ಅಪಾಯಕಾರಿ ಅಂಶಗಳ ಬಗ್ಗೆ, ಅಪಾಯದ ಮಟ್ಟವನ್ನು ನಿರ್ಣಯಿಸುವ ರೀತಿಯ ಬಗ್ಗೆ, ವೃತ್ತಿಪರರೊಂದಿಗೆ ಸಮಸ್ಯೆಯ ಲಕ್ಷಣಗಳನ್ನು ಚರ್ಚಿಸುವ ವಿಧಾನ ಮತ್ತು ಭಾವನಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡಿಕೊಳ್ಳುವ ವಿಧಾನ, ಇತ್ಯಾದಿ ಬಗ್ಗೆ ತರಬೇತಿ ನೀಡುತ್ತಾರೆ.  

ವೈಟ್ ಸ್ವಾನ್ ಫೌಂಡೇ‍ಷನ್ ಸಂಸ್ಥೆವತಿಯಿಂದ  ನಿಮ್ಹಾನ್ಸ್ ಕೇಂದ್ರದ ಹಲವಾರು ತಜ್ಞರಿಂದ ಮಾಹಿತಿ ಸಂಗ್ರಹಿಸಿ ಈ ಲೇಖನಗಳನ್ನು  (ನಾಲ್ಕು ಸರಣಿಗಳು)  ರಚಿಸಲಾಗಿದೆ.  

ಮಾಹಿತಿ ಸಂಗ್ರಹಣೆ : ಡಾ. ಪ್ರಭಾ ಚಂದ್ರ,  ಅಧ್ಯಾಪಕರು, ಮನೋವೈದ್ಯ ಶಾಸ್ತ್ರ ವಿಭಾಗ  ನಿಮ್ಹಾನ್ಸ್ ಕೆಂದ್ರ ;

ಡಾ. ಗುರುರಾಜ್ ಗೋಪಾಲಕೃಷ್ಣ , ಮುಖ್ಯಸ್ಥರು, ಎಪಿಡೆಮಾಲಜಿ ವಿಭಾಗ   ನಿಮ್ಹಾನ್ಸ್ ಕೇಂದ್ರ ; ಡಾ. ಸೀಮಾ ಮಲ್ಹೋತ್ರಾ, ಹೆಚ್ಚುವರಿ ಪ್ರಾಧ್ಯಾಪಕರು, ವೈದ್ಯಕೀಯ ಮನ ಶಾಸ್ತ್ರ ವಿಭಾಗ, ನಿಮ್ಹಾನ್ಸ್ ಕೇಂದ್ರ; ಡಾ. ಪೂರ್ಣಿಮಾ ಭೋಲಾ, ಸಹ ಪ್ರಾಧ್ಯಾಪಕರು, ವೈದ್ಯಕೀಯ ಮನಶಾಸ್ತ್ರ, ನಿಮ್ಹಾನ್ಸ್ ಕೇಂದ್ರ; ಡಾ. ಸೆಂಥಿಲ್ ಕುಮಾರ್ ರೆಡ್ಡಿ, ಸಹ ಪ್ರಾಧ್ಯಾಪಕರು, ಮನೋ ವೈದ್ಯ ಶಾಸ್ತ್ರ ವಿಭಾಗ, ನಿಮ್ಹಾನ್ಸ್ ಕೆಂದ್ರ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org