ಖಿನ್ನತೆ

Published on
Q

ಖಿನ್ನತೆ ಎಂದರೇನು?

A

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರು ದೀರ್ಘಕಾಲದಿಂದ ದುಃಖದಲ್ಲಿ ಅಥವಾ ಸುಸ್ತಾದಂತೆ ಇರುವರೆ? ಇವರು ಒಂಟಿಯಾಗಿರುವುದು, ನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದು, ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು ಅಥವಾ ಆಗಾಗ ಕೆಲಸಕ್ಕೆ ಹೋಗದಿರುವುದನ್ನು ನೀವು ಗಮನಿಸಿರಬಹುದು. ಈ ಎಲ್ಲ ಲಕ್ಷಣಗಳು ವ್ಯಕ್ತಿಗೆ ಖಿನ್ನತೆ ಇರಬಹುದೆಂಬ ಸೂಚನೆಯಾಗಿದೆ.

ಕೆಲವು ಬೇಸರದ ಘಟನೆಗಳು ನಡೆದಾಗ ದುಃಖವಾಗುವುದು ಸಹಜ. ಆದರೆ, ಈ ಭಾವನೆ ತುಂಬಾ ದಿನಗಳವರೆಗೆ ಇದ್ದರೆ (ಎರಡು ವಾರಗಳಿಗಿಂತ ಹೆಚ್ಚು) ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡು ದೈನಂದಿನ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಇದು ಕ್ಲಿನಿಕಲ್‌ ಖಿನ್ನತೆಯ (ಡಿಪ್ರೆಷನ್) ಚಿಹ್ನೆಯಾಗಿರುತ್ತದೆ. ಇದಕ್ಕೆ ಚಿಕಿತ್ಸೆ ಅಗತ್ಯ.

ಖಿನ್ನತೆಯು ವ್ಯಕ್ತಿಯ ಯೋಚನೆ, ಭಾವನೆ, ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.

ಗಮನಿಸಿ: ಖಿನ್ನತೆ ಎಂದರೆ ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಎಂದಲ್ಲ. ಇದು ಡಯಾಬಿಟೀಸ್‌ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಖಾಯಿಲೆ. ಖಿನ್ನತೆ ಯಾರಿಗಾದರೂ, ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು.

Q

ಖಿನ್ನತೆಯ ಗುಣಲಕ್ಷಣಗಳೇನು?

A

​"ಕೆಲ ದಿನಗಳಿಂದ ನನಗೆ ಹಸಿವಾಗುತ್ತಿಲ್ಲ. ಇಡೀ ದಿನ ನಿದ್ದೆ ಮಾಡಬೇಕೆನಿಸುತ್ತದೆ, ಆದರೆ ರಾತ್ರಿ ನಿದ್ದೆ ಬರುತ್ತಿಲ್ಲ. ಮನಸ್ಸಿನಲ್ಲಿ ಏನೇನೋ ವಿಚಾರಗಳು ಮೂಡುತ್ತವೆ. ನನಗೆ ಕೆಲಸ ಮಾಡಲು ಅಥವಾ ಇತರರ ಜೊತೆ ಮಾತನಾಡಲು ಇಷ್ಟವಿಲ್ಲ. ದಿನವಿಡೀ ನಾನು ನನ್ನ ರೂಮಿನಲ್ಲೇ ಇರುತ್ತೇನೆ. ನಾನು ಮಾಡಿದ್ದೆಲ್ಲಾ ತಪ್ಪು, ನಾನು ಕೆಲಸಕ್ಕೆ ಬಾರದವನು ಎನಿಸುತ್ತದೆ. ಯಾರೂ ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ.." 

ಇಂತಹ ಯೋಚನೆ ಮತ್ತು ಭಾವನೆಗಳಿರುವ ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿರಬಹುದು. ಆದರೆ, ಖಿನ್ನತೆಯ ಗುಣಲಕ್ಷಣಗಳು ಮತ್ತು ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮತ್ತು ಎಲ್ಲ ಲಕ್ಷಣಗಳೂ ಒಂದೇ ವ್ಯಕ್ತಿಯಲ್ಲಿ ಕಾಣದಿರಬಹುದು.  ಖಿನ್ನತೆಯು ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರಬಹುದು.

ಗಮನಿಸಿ: ಖಿನ್ನತೆಯ ಲಕ್ಷಣಗಳನ್ನು ಇಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಖಿನ್ನತೆಯ ಲಕ್ಷಣಗಳು ಕಾಣಿಸಿಕೊಂಡಾಗ ಮಾನಸಿಕ ಆರೋಗ್ಯ ವೃತ್ತಿಪರರನ್ನು ಭೇಟಿ ಮಾಡಿ ಸಮಸ್ಯೆಯನ್ನು ಪತ್ತೆ ಹಚ್ಚಿದರೆ, ಸೂಕ್ತ ಚಿಕಿತ್ಸೆ ಪಡೆಯಬಹುದು. 

ಖಿನ್ನತೆಯ ಕೆಲವು ಲಕ್ಷಣಗಳು ಹೀಗಿವೆ:

  • ಹೆಚ್ಚಿನ ಸಮಯದಲ್ಲಿ ದುಃಖ ಅಥವಾ ಬೇಸರದಲ್ಲಿರುವುದು.
  • ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟ ಪಡುವುದು ಮತ್ತು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು. ದಿನವಿಡೀ ಸುಸ್ತಾದಂತೆ ಅನಿಸುವುದು. ಮುಂಚೆ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳಲ್ಲಿ ಈಗ ನಿರಾಸಕ್ತಿಯ ಭಾವ.
  • ಏಕಾಗ್ರತೆಯ ಕೊರತೆ, ಯೋಚಿಸಲು ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು (ಉದಾ: ಹವ್ಯಾಸ, ಅಧ್ಯಯನದ ಮೇಲೆ ಗಮನ ನೀಡಲು ಕಷ್ಟ, ಇತ್ಯಾದಿ).
  • ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಡಿಮೆಯಾಗುವುದು.
  • ತನ್ನ ಬಗ್ಗೆ, ಜೀವನದ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಋಣಾತ್ಮಕ ಭಾವನೆ.
  • ಹಸಿವಾಗದಿರುವುದು ಅಥವಾ ಅತಿಯಾಗಿ ತಿನ್ನುವುದು.
  • ಹಿಂದಿನ ಸೋಲುಗಳಿಗೆ ತನ್ನನ್ನೇ ದೂಷಿಸಿಕೊಳ್ಳುವುದು, ಅಪರಾಧಿ ಭಾವ; ತಾನು ಅನುಪಯುಕ್ತ ಎಂಬ ಭಾವನೆ.
  • ಓದು, ಕೆಲಸ, ಮತ್ತು ಇತರ ಕಾರ್ಯಗಳಲ್ಲಿ ನಿರಾಸಕ್ತಿ.
  • ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ನಿದ್ರೆ ಮಾಡಲು ಸಾಧ್ಯವೇ ಆಗದಿರುವುದು.
  • ಲೈಂಗಿಕ ವಿಚಾರ/ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು
  • ತಲೆ ನೋವು, ಕತ್ತು ನೋವು, ಸೆಳೆತ ಹೀಗೆ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು
  • ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಬಗ್ಗೆ ಯೋಚಿಸುವುದು

ನಿಮಗೆ ಪರಿಚಯವಿರುವ ವ್ಯಕ್ತಿಗಳಲ್ಲಿ ಈ ಲಕ್ಷಣಗಳು ಕಂಡರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅವರನ್ನು ಪ್ರೋತ್ಸಾಹಿಸಿ.

Q

ಖಿನ್ನತೆಗೆ ಕಾರಣವೇನು?

A

ವಂಶವಾಹಿಗಳು, ಜೀವನದಲ್ಲಿನ ಒತ್ತಡ, ಅಹಿತಕರ ಘಟನೆಗಳು ಹೀಗೆ ಹಲವು ಕಾರಣಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು.

  • ಮನೋವೈದ್ಯಕೀಯ ಖಾಯಿಲೆಗಳು: ಅಬ್ಸೆಸಿವ್‌ ಕಂಪಲ್ಸಿವ್ ಡಿಸಾರ್ಡರ್‌ (OCD), ಸೋಷಿಯಲ್‌ ಫೋಬಿಯಾ ಮತ್ತು ಸ್ಕಿಜೋಫ್ರೇನಿಯಾದಂತಹ ಮಾನಸಿಕ ಖಾಯಿಲೆಗಳೊಂದಿಗೆ ಖಿನ್ನತೆ ಕೂಡ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ತಜ್ಞರು ವಿಸ್ತಾರವಾಗಿ ಸಮಸ್ಯೆಯನ್ನು ಪರಿಶೀಲಿಸುವ ಅಗತ್ಯವಿರುತ್ತದೆ. 

  • ಜೀವನದ ಒತ್ತಡಗಳು: ಕೆಲಸ, ಕೌಟುಂಬಿಕ ಅಥವಾ ವೈವಾಹಿಕ ಸಮಸ್ಯೆಗಳು, ಹಣಕಾಸಿನ ವಿಚಾರಗಳು ಒತ್ತಡ ತರುವ ಸಾಮಾನ್ಯ ವಿಷಯಗಳಾಗಿವೆ. 

  • ದೈಹಿಕ ಆರೋಗ್ಯ ಸಮಸ್ಯೆಗಳು: ಥೈರಾಯ್ಡ್‌, ಮಧುಮೇಹ ಮುಂತಾದ ದೀರ್ಘಕಾಲದ ಖಾಯಿಲೆಗಳನ್ನು ನಿಭಾಯಿಸುವಾಗ ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು. ಹಾಗಾಗಿ ಈ ಹಿಂದೆ ಪತ್ತೆಯಾಗದ ಅನಾರೋಗ್ಯದ ಬಗ್ಗೆ ಕೂಡ ಮನೋವೈದ್ಯರು ಪರೀಕ್ಷೆ ಮಾಡಬಹುದು. ಗಂಭೀರವಾದ ಹೃದಯ ಸಮಸ್ಯೆ, ಕ್ಯಾನ್ಸರ್ ಅಥವಾ ಎಚ್‌.ಐ.ವಿ. ಏಡ್ಸ್ ಖಾಯಿಲೆಗಳಿಂದ ಬಳಲುತ್ತಿರುವವರು ಅವುಗಳನ್ನು ಒಪ್ಪಿಕೊಂಡು ಎದುರಿಸಲಾಗದೆ  ಖಿನ್ನತೆಗೆ ಒಳಗಾಗಬಹುದು.

  • ವ್ಯಕ್ತಿತ್ವ: ವ್ಯಕ್ತಿತ್ವ ಅಥವಾ ದೇಹದ ಬಗ್ಗೆ ಚಿಂತೆ (ಅತಿಯಾಗಿ ದಪ್ಪಗಿರುವುದು, ತೆಳ್ಳಗಿರುವುದು, ಉದ್ದವಿರುವುದು, ಕುಳ್ಳಿರುವುದು ಇತ್ಯಾದಿ), ಎಲ್ಲದರಲ್ಲಿಯೂ ಪರಿಪೂರ್ಣತೆಯನ್ನು ಅಪೇಕ್ಷಿಸುವುದು, ಶಾಲೆ, ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಒತ್ತಡ, ಅನಾರೋಗ್ಯಕರ ಸ್ಪರ್ಧೆ ಮುಂತಾದ ಕಾರಣಗಳಿಂದ ಖಿನ್ನತೆ ಬರಬಹುದು. ಈ ಎಲ್ಲಾ ಕಾರಣಗಳು ಅಥವಾ ಇವುಗಳಲ್ಲಿ ಕೆಲವು ಕಾರಣಗಳು ಒಗ್ಗೂಡಿ ಖಿನ್ನತೆಗೆ ದಾರಿಮಾಡಿಕೊಡುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ.

  • ಮದ್ಯಪಾನ ಅಥವಾ ಡ್ರಗ್‌ ಚಟ: ಮಾದಕ ವಸ್ತುಗಳು ನಮ್ಮನ್ನು ಕುಗ್ಗಿಸುತ್ತದೆ. ಈ ರೀತಿಯ ಚಟ ನಮ್ಮನ್ನು ಕುಟುಂಬ ಮತ್ತು ಸ್ನೇಹಿತರಿಂದ ದೂರ ಇಡುತ್ತದೆ. ದೀರ್ಘಕಾಲ ಮಾದಕ ವಸ್ತುಗಳ ಸೇವನೆ ಅಥವಾ ಆ ವಸ್ತುಗಳನ್ನು ಸೇವಿಸಲಾಗದ ಚಡಪಡಿಕೆಯಿಂದ ನಡವಳಿಕೆಯಲ್ಲಿ ತೊಂದರೆ ಮತ್ತು ಖಿನ್ನತೆ ಉಂಟಾಗಬಹುದು.

ಎಲ್ಲಾ ವಯಸ್ಸಿನವರಲ್ಲಿಯೂ ವಿವಿಧ ಕಾರಣಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು. ಮಕ್ಕಳು, ಮಹಿಳೆಯರು ಮತ್ತು ಹಿರಿಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯ ಬಗ್ಗೆ ಇಲ್ಲಿ ತಿಳಿಯಿರಿ:

Q

ಖಿನ್ನತೆಯನ್ನು ಪತ್ತೆ ಮಾಡವುದು ಹೇಗೆ?

A

ಪ್ರತಿ ಖಾಯಿಲೆಗೂ ನಿರ್ದಿಷ್ಟ ತಪಾಸಣಾ ವಿಧಾನಗಳಿರುತ್ತವೆ. ಚಿಕಿತ್ಸೆಯನ್ನು ಆರಂಭಿಸುವ ಮೊದಲು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ, ಸೂಕ್ತ ಪರೀಕ್ಷೆಗಳಿಂದ ಸಮಸ್ಯೆಯನ್ನು ಪತ್ತೆ ಮಾಡುವುದು ಅಗತ್ಯ. ಸಮಸ್ಯೆಯನ್ನು ಸರಿಯಾಗಿ ಪತ್ತೆ ಮಾಡದಿದ್ದರೆ ತೊಂದರೆ ಹೆಚ್ಚಾಗುವುದು.

ವೈದ್ಯಕೀಯ ಇತಿಹಾಸ: ನಿಮ್ಮಲ್ಲಿ ಕಾಣುತ್ತಿರುವ ಲಕ್ಷಣಗಳು ಬೇರೆ ಯಾವುದೋ ಖಾಯಿಲೆಯ ಪರಿಣಾಮವಾಗಿರಬಹುದು. ಹಾಗಾಗಿ ನಿಮ್ಮ ವೈದ್ಯಕೀಯ ಇತಿಹಾಸವನ್ನು ತಜ್ಞರು ಪರಿಶೀಲಿಸಿ ಇದು ಖಿನ್ನತೆಯೋ ಅಲ್ಲವೋ ಎಂದು ಖಚಿತ ಪಡಿಸಿಕೊಳ್ಳುತ್ತಾರೆ.

ಮನೋವೈಜ್ಞಾನಿಕ ಮೌಲ್ಯಮಾಪನ: ವ್ಯಕ್ತಿಯಲ್ಲಿ ಕಾಣಿಸುತ್ತಿರುವ ಲಕ್ಷಣಗಳು, ಆಲೋಚನೆಗಳು, ನಡವಳಿಕೆ ಎಲ್ಲದರ ಬಗ್ಗೆ ತಿಳಿಯಲು ವೈದ್ಯರು ಪ್ರಶ್ನಾವಳಿಯನ್ನು ಬಳಸಬಹುದು. ಲಕ್ಷಣಗಳು ಎಷ್ಟು ದಿನಗಳಿಂದ ಇದೆ, ಹೇಗೆ ಮತ್ತು ಯಾವಾಗ ಶುರುವಾಯಿತು, ಅವುಗಳ ತೀವ್ರತೆ ಎಷ್ಟು ಮತ್ತು ವ್ಯಕ್ತಿಯ ಯೋಚನೆ ಹಾಗು ವರ್ತನೆಯ ಮೇಲೆ ಈ ಲಕ್ಷಣಗಳ ಪರಿಣಾಮ ಏನು ಎಂಬುದನ್ನು ತಜ್ಞರು ಪರೀಕ್ಷಿಸುತ್ತಾರೆ.

ಎರಡು ವಾರಗಳ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಖಿನ್ನತೆಯ ಲಕ್ಷಣಗಳು ವ್ಯಕ್ತಿಯಲ್ಲಿ ಇದ್ದು, ಇದರಿಂದ ವ್ಯಕ್ತಿಯ ನಿತ್ಯದ ಚಟುವಟಿಕೆಗೆ ತೊಂದರೆಯಾಗುತ್ತಿದ್ದರೆ ಆಗ ಮಾತ್ರ ಅದು ಖಿನ್ನತೆ ಎಂದು ವೈದ್ಯರು ಧೃಡಪಡಿಸುತ್ತಾರೆ.

Q

ಖಿನ್ನತೆಗೆ ಚಿಕಿತ್ಸೆ

A

ಜಗತ್ತಿನಲ್ಲಿ ಮನುಷ್ಯನನ್ನು ಅತ್ಯಂತ ಹೆಚ್ಚು ನಿಷ್ಕ್ರಿಯಗೊಳಿಸುವ ಖಾಯಿಲೆಗಳಲ್ಲಿ ಖಿನ್ನತೆ ಕೂಡ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ದಾಖಲಿಸಿದೆ. ಆದರೆ ಖಿನ್ನತೆಯಿಂದ ಬಳಲುತ್ತಿರುವವರು ಅದರಿಂದ ಗುಣಮುಖರಾಗಿ ಸಹಜ ಜೀವನ ನಡೆಸಬಹುದು.

ಖಿನ್ನತೆಯು ಹೆಚ್ಚಾಗಿ ಮನಸ್ಸಿನಲ್ಲೇ ಅಡಗಿರುತ್ತದೆ. ಜನರು ಈ ಬಗ್ಗೆ ಮುಕ್ತವಾಗಿ ಮಾತನಾಡಲು ಹೆದರುತ್ತಾರೆ. ಸಾಮಾಜದಲ್ಲಿ ಅಪಹಾಸ್ಯಕ್ಕೀಡಾಗಬಹುದು, ದುರ್ಬಲ ಎನಿಸಿಕೊಳ್ಳಬಹುದು ಎಂಬ ಭಯದಿಂದ ನಗೆ ಬೀರಿ ದುಃಖವನ್ನು ಮುಚ್ಚಿಡುತ್ತಾರೆ. ಸಮಾಜದಲ್ಲಿ ಬೇರೂರಿರುವ ಕಳಂಕದಿಂದ ಜನರು ಮನೋವೈದ್ಯರ ಸಹಾಯ ಕೇಳಲು ಹಿಂಜರಿಯುತ್ತಾರೆ.  ಖಾಯಿಲೆಯ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ, ಖಿನ್ನತೆಯ ಲಕ್ಷಣಗಳನ್ನು ಗುರುತಿಸಲಾಗದೇ ಧೀರ್ಘ ಕಾಲ ತಾವೂ ಬಳಲುತ್ತಾರೆ ಮತ್ತು ಕುಟುಂಬದವರು ಸಹ ಯಾತನೆ ಪಡುತ್ತಾರೆ.

ಸ್ವಲ್ಪ ಮಟ್ಟದ ಖಿನ್ನತೆಗೆ ಆಪ್ತಸಮಾಲೋಚನೆ ಅಥವಾ ಇತರ ಥೆರಪಿಗಳು ಸಾಕಾಗುತ್ತವೆ. ತೀವ್ರವಾದ ಖಿನ್ನತೆಗೆ ಮಾತ್ರ ಥೆರಪಿಯೊಂದಿಗೆ ಔಷಧಗಳ ಅಗತ್ಯವಿರುತ್ತದೆ.

ಖಿನ್ನತೆಯ ಚಿಕಿತ್ಸೆಯಲ್ಲಿ ಹಲವು ವಿಧಾನಗಳಿವೆ. ಖಿನ್ನತೆಯ ತೀವ್ರತೆ, ವ್ಯಕ್ತಿಯ ಆರೋಗ್ಯದ ಸ್ಥಿತಿ ಮತ್ತು ಚೇತರಿಸಿಕೊಳ್ಳಲು ಅವರಲ್ಲಿರುವ ಚೈತನ್ಯದ ಆಧಾರದ ಮೇಲೆ ವೈದ್ಯರು ಚಿಕಿತ್ಸೆಯ ನಿರ್ಧಾರ ಮಾಡುತ್ತಾರೆ.

  • ಖಿನ್ನತೆಯ ಚಿಕಿತ್ಸೆಯಲ್ಲಿ ವಿವಿಧ ಮನೋವೈಜ್ಞಾನಿಕ ಥೆರಪಿಗಳು ಪರಿಣಾಮಕಾರಿ ಎಂದು ಗುರುತಿಸಲಾಗಿದೆ. ಸಕಾರಾತ್ಮಕ ಚಿಂತನೆಗಳು ಮತ್ತು ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ರಿಲಾಕ್ಸೇಶನ್‌ ವಿಧಾನಗಳನ್ನು ಕಲಿಸಲಾಗುತ್ತದೆ. ಕಾಗ್ನಿಟಿವ್‌ ಬಿಹೇವಿಯರಲ್‌ ಥೆರಪಿ, ಸಪೋರ್ಟಿವ್‌ ಥೆರಪಿ, ಮೈಂಡ್‌ಫುಲ್‌ನೆಸ್‌ ಬೇಸ್ಡ್‌ ಕಾಗ್ನಿಟಿವ್‌ ಥೆರಪಿ ಮತ್ತು ಇತರ ವಿಧಾನಗಳನ್ನು ಬಳಸುತ್ತಾರೆ.
  • ತೀವ್ರವಾದ ಖಿನ್ನತೆಗೆ ವೈದ್ಯರು ಔಷಧಿಗಳನ್ನು (antidepressants) ಶಿಫಾರಸು ಮಾಡುತ್ತಾರೆ.
  •  ಮಧುಮೇಹ, ಥೈರಾಯ್ಡ್‌ ಅಥವಾ ಇತರ ಖಾಯಿಲೆಗಳೊಂದಿಗೆ ಬಂದಿರುವ ಖಿನ್ನತೆಯಾದರೆ, ಸಮಸ್ಯೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

 

Q

ಖಿನ್ನತೆಗೆ ಚಿಕಿತ್ಸಾ ವಿಧಗಳು

A

ಸೈಕೋಥೆರಪಿಯ ಹಲವು ವಿಧಗಳಲ್ಲಿ ಕಾಗ್ನಿಟಿವ್‌ ಬಿಹೇವಿಯರಲ್‌ ಥೆರಪಿ (ಸಿಬಿಟಿ) ಮತ್ತು ಇಂಟರ್‌ಪರ್ಸನಲ್‌ ಥೆರಪಿಯು ಖಿನ್ನತೆ ಗುಣಪಡಿಸಲು ಪರಿಣಾಮಕಾರಿಯಾಗಿದೆ. ಸಾಮಾನ್ಯವಾಗಿ ಈ ಎರಡು ಥೆರಪಿಗಳು ಸುಮಾರು 10-20 ವಾರಗಳ ಅವಧಿ ಇರುತ್ತದೆ. ಈ ಚಿಕಿತ್ಸೆಗಳಿಂದ ಕಡಿಮೆ ಪ್ರಮಾಣದ ಖಿನ್ನತೆಯನ್ನು ಯಶಸ್ವಿಯಾಗಿ ಗುಣಪಡಿಸಬಹುದು. ತೀವ್ರ ಖಿನ್ನತೆ ಗುಣಪಡಿಸಲು ಈ ಎರಡೂ ವಿಧಾನಗಳಿರುವ ಚಿಕಿತ್ಸೆ ನೀಡಿದರೆ ನಿರೀಕ್ಷಿತ ಪರಿಣಾಮ ಪಡೆಯಬಹುದು.

ಕಾಗ್ನಿಟಿವ್‌ ಬಿಹೇವಿಯರಲ್‌ ಥೆರಪಿ (ಸಿಬಿಟಿ) ಪರಿಣಾಮಕಾರಿಯಾಗಿದ್ದು ಸಾಕ್ಷ್ಯಾಧಾರಗಳನ್ನು ಒಳಗೊಂಡ ಥೆರಪಿಯಾಗಿರುತ್ತದೆ. ಇದು ಋಣಾತ್ಮಕ ಚಿಂತನೆ ಮತ್ತು ವರ್ತನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ನಿಯಂತ್ರಿಸಬೇಕು ಮತ್ತು ನಿಲ್ಲಿಸಬೇಕು ಎಂಬುದನ್ನು ಕಲಿಸುತ್ತದೆ. ಋಣಾತ್ಮಕ ಯೋಚನೆಗಳನ್ನು (ಉದಾಹರಣೆಗೆ: "ನಾನು ಮಾಡಿದ್ದೆಲ್ಲಾ ತಪ್ಪು") ಧನಾತ್ಮಕ ಚಿಂತನೆಯಾಗಿ (ಉದಾಹರಣೆಗೆ: "ನಾನು ಇದನ್ನು ಸರಿಯಾಗಿ ಮಾಡಬಹುದು") ಬದಲಿಸಬಹುದು. ವ್ಯಕ್ತಿಯ ವರ್ತನೆಯಲ್ಲಿ ಸಣ್ಣ ಸಣ್ಣ ಬದಲಾವಣೆ ತರುವುದರಿಂದ (ಮನೆಯಿಂದ ಹೊರನಡೆದು ವಾಕ್ ಮಾಡುವುದು) ಅವರ ಮನೋಸ್ಥಿತಿ ಕೂಡ ಬದಲಾಗುತ್ತದೆ.

ಇಂಟರ್‌ಪರ್ಸನಲ್‌ ಥೆರಪಿ (ಐಪಿಟಿ) ವೈಯಕ್ತಿಕ ಸಂಬಂಧಗಳನ್ನು ಸುಧಾರಿಸಲು ಸಹಾಯಕಾರಿ. ಇತರರ ಜೊತೆಗೆ ಬೆರೆಯುವ ರೀತಿ, ಒಂಟಿಯಾಗಿರಲು ಬಯಸುವ ಯೋಚನೆಗಳು, ಸಂಬಂಧ ಬೆಳೆಸಲು ಮತ್ತು ಇತರರನ್ನು ಅರ್ಥಮಾಡಿಕೊಳ್ಳಲು ಆಗುವ ಗೊಂದಲ ಇದೆಲ್ಲದರ ಬಗ್ಗೆ ಗಮನ ನೀಡಿ ಸರಿ ಪಡಿಸಿಕೊಳ್ಳಲು ವೈದ್ಯರು ಸಹಾಯ ಮಾಡುತ್ತಾರೆ.

ಕುಟುಂಬಕ್ಕೆ ಮನೋವೈಜ್ಞಾನಿಕ ಶಿಕ್ಷಣ ನೀಡುವುದರಿಂದ ಒತ್ತಡ, ಗೊಂದಲ ಮತ್ತು ಆತಂಕದ ಪರಿಸ್ಥಿತಿಗಳು ಕಡಿಮೆಯಾಗಿ ಸನ್ನಿವೇಶವನ್ನು ನಿಭಾಯಿಸಲು ಸಹಾಯಕವಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ಸಪೋರ್ಟ್ ಗ್ರೂಪ್ಗಳು ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಮತ್ತು ಕುಟುಂಬಗಳಿಗೆ ಸಹಾಯ ಮತ್ತು ಬೆಂಬಲ ನೀಡುತ್ತವೆ. ಇಲ್ಲಿ ಜನ ತಮ್ಮ ಅನುಭವ, ಭಾವನೆಗಳನ್ನು ಹಂಚಿಕೊಳ್ಳಬಹುದು, ಸೂಕ್ತ ತಜ್ಞರ ಬಗ್ಗೆ ಮಾಹಿತಿ /ಶಿಫಾರಸುಗಳನ್ನು ಪಡೆಯಬಹುದು, ಸಮುದಾಯ ಸಂಪನ್ಮೂಲಗಳ ಬಗ್ಗೆ, ಫಲಕಾರಿ ಚಿಕಿತ್ಸೆ ಅಥವಾ ಥೆರಪಿಗಳ ಬಗ್ಗೆ ತಿಳಿಯಬಹುದು.

ಎಲೆಕ್ಟ್ರೋಕನ್ವಲ್ಸಿವ್‌ ಥೆರಪಿ (ಇಸಿಟಿ): ತೀವ್ರ ಖಿನ್ನತೆ, ಸೈಕೋಸಿಸ್, ಸ್ಕಿಜ಼ೋಫ್ರೇನಿಯಾ ಅಥವಾ ಬೈಪೋಲಾರ್ ಡಿಸಾರ್ಡರ್ ಅಂತಹ ಗಂಭೀರ ಖಾಯಿಲೆಗಳ ಜೊತೆ ಕಾಣಿಸಿಕೊಳ್ಳುವ ತೀವ್ರ ಖಿನ್ನತೆ ಇದ್ದಾಗ ಈ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗಿದೆ. 

ಔಷಧಿ ಅಥವಾ ಸೈಕೋಥೆರಪಿಗೆ ಸ್ಪಂದಿಸದಿದ್ದಾಗ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ವ್ಯಕ್ತಿ ಇಲ್ಲದಿದ್ದಾಗ ಇ.ಸಿ.ಟಿ ನೀಡಲಾಗುತ್ತದೆ. ಇ.ಸಿ.ಟಿ ಚಿಕಿತ್ಸೆಯಿಂದ ಮರೆವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ತೊಂದರೆ ಮತ್ತು ಪ್ರಯೋಜನಗಳ ಕುರಿತು ಎಚ್ಚರಿಕೆಯಿಂದ ಯೋಚನೆ ಮಾಡಿ ನಿರ್ಧರಿಸಬೇಕು.

Q

ಖಿನ್ನತೆಯಿಂದ ಬಳಲುತ್ತಿರುವವರ ಆರೈಕೆ

A

ಖಿನ್ನತೆಯಿಂದ ಬಳಲುತ್ತಿರುವವರಿಗೆ ನೀವು ಯಾವಾಗಲೂ ಸಹಾಯ ಮಾಡಬಹುದು. ಅವರನ್ನು ಒಪ್ಪಿಸಿ ಚಿಕಿತ್ಸೆ ಕೊಡಿಸುವುದು ಕಷ್ಟವಾದರೂ, ನಿಮ್ಮ ಪರಿಚಯದವರಲ್ಲಿ ಈ ಮೇಲಿನ ಲಕ್ಷಣಗಳು ಕಂಡುಬಂದರೆ, ಮಾನಸಿಕ ಆರೊಗ್ಯ ತಜ್ಞರನ್ನು ಭೇಟಿ ಮಾಡುವಂತೆ ಪ್ರೋತ್ಸಾಹಿಸಿ.

ಆರೈಕೆದಾರರಾಗಿ ನೀವು ಹೀಗೆ ಸಹಾಯ ಮಾಡಬಹುದು:

  • ಖಿನ್ನತೆಯಿಂದಾಗುವ ತೊಂದರೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಿ.
  • ವ್ಯಕ್ತಿಯ ಜೊತೆ ಮಾತನಾಡಿ ಮತ್ತು ಸಹನೆಯಿಂದ ಅವರ ಮಾತನ್ನು ಕೇಳಿಸಿಕೊಳ್ಳಿ.
  • ಮನಬಿಚ್ಚಿ ಭಾವನೆಗಳನ್ನು ಹಂಚಿಕೊಳ್ಳಲು ವ್ಯಕ್ತಿಯನ್ನು ಪ್ರೋತ್ಸಾಹಿಸಿ.
  • ಅವರಿಗೆ ಇಷ್ಟವಾದ ಚಟುವಟಿಕೆ ಮಾಡಲು ನೆರವು ನೀಡಿ. ಸದಾ ಕ್ರಿಯಾಶೀಲವಾಗಿರುವುದು ಖಿನ್ನತೆಗೆ ಅತ್ಯುತ್ತಮ ಪರಿಹಾರ.
  • ಅವರ ಮಾತಿನಲ್ಲಿ ಆತ್ಮಹತ್ಯೆಯ ಸೂಚನೆ ಇರಬಹುದು, ಎಚ್ಚರವಹಿಸಿ. ಹಾಗಿದ್ದರೆ ತಕ್ಷಣವೇ ಮನೋರೋಗ ತಜ್ಞರ ಬಳಿ ಕರೆದುಕೊಂಡು ಹೋಗಿ.

Q

ಖಿನ್ನತೆಯನ್ನು ನಿಭಾಯಿಸುವುದು

A

ಖಿನ್ನತೆಯು ಒಂದು ಖಾಯಿಲೆ. ಇದರಿಂದ ಗುಣಮುಖರಾಗಲು ನಿಮಗೆ ಸಹಾಯ ಬೇಕು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನಬಿಚ್ಚಿ ಮಾತನಾಡಿ. ಇದರಿಂದ ಹೊರಬರಲು ಮೊದಲ ಹೆಜ್ಜೆಯಾಗಿ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಚಿಕಿತ್ಸೆ ಅಥವಾ ಥೆರಪಿಯ ಜೊತೆಗೆ ನಿಮ್ಮ ಕಾಳಜಿ ವಹಿಸಿಕೊಳ್ಳುವುದು ಕೂಡ ಮುಖ್ಯ. ಸುಲಭ ಅಲ್ಲದಿದ್ದರೂ, ನಿಮ್ಮ ದೈನಂದಿನ ಚ್ಟುವಟಿಕೆಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಋಣಾತ್ಮಕ ಮನೋಭಾವವನ್ನು ಬಿಟ್ಟುಬಿಡಿ:  ಅಪರಾಧಿ ಭಾವ, ಕೀಳರಿಮೆ ಮುಂತಾದ ನಕಾರಾತ್ಮಕ ಯೋಚನೆಗಳು ಯಾವಾಗ ಕಾಣಿಸಿಕೊಳ್ಳುತ್ತವೆ ಎಂದು ಗಮನಿಸಿ. ಈ ರೀತಿಯ ಋಣಾತ್ಮಕ ಚಿಂತನೆಗಳು ಬರುವ ವಿಧಾನ ಮತ್ತು ಕಾರಣಗಳನ್ನು ಅರಿತು, ಬರೆದು, ಅವುಗಳನ್ನು ಸಕಾರಾತ್ಮಕ ಭಾವನೆಗಳಾಗಿ ಪರಿವರ್ತಿಸಲು ಪ್ರಯತ್ನಿಸಿ. 

ಸದಾ ಕ್ರಿಯಾಶೀಲರಾಗಿರಿ: ದೈನಂದಿನ ಕೆಲಸಗಳು ಮತ್ತು ಚಟುವಟಿಕೆಗಳೂ ಸಹ ಚಿಕಿತ್ಸೆಯಷ್ಟೇ ಪರಿಣಾಮಕಾರಿ.  ಸಾಧ್ಯವಾದಷ್ಟೂ ನಿತ್ಯದ ಎಲ್ಲ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಿ. ಮಾಡಲು ಸಾಧ್ಯವೆನಿಸುವ ಸಣ್ಣ ಗುರಿಗಳನ್ನು ರೂಪಿಸಿ. ಕೆಲವು ವ್ಯಾಯಾಮಗಳನ್ನು ಮಾಡಿ. ವ್ಯಾಯಾಮವು ದೇಹ ಮತ್ತು ಮನಸ್ಸಿನ ವಿಕಸನಕ್ಕೆ ನೆರವಾಗುತ್ತದೆ.

ನಿಮ್ಮ ಭಯಗಳನ್ನು ಧೈರ್ಯದಿಂದ ಎದುರಿಸಿ: ಸಾಮಾನ್ಯವಾಗಿ, ವ್ಯಕ್ತಿಯು ದುಃಖದಲ್ಲಿದ್ದರೆ ಇತರರ ಜೊತೆ ಮಾತು ನಿಲ್ಲಿಸುತ್ತಾರೆ ಅಥವಾ ಪ್ರವಾಸ, ಗಾರ್ಡನಿಂಗ್‌, ಅಡುಗೆ ಮಾಡುವುದು ಇತ್ಯಾದಿ ಕೆಲಸಗಳನ್ನು ನಿಲ್ಲಿಸಿಬಿಡುತ್ತಾರೆ. ನಿಮ್ಮ ಭಯಗಳನ್ನು ಧೈರ್ಯವಾಗಿ ಎದುರಿಸಿ, ಇಂತಹ ಕೆಲಸಗಳಲ್ಲಿ ನಿಧಾನವಾಗಿ ಆಸಕ್ತಿ ಬೆಳೆಸಿಕೊಳ್ಳಿ.

ನಿಮ್ಮ ಚಟುವಟಿಕೆಗಳು ಮತ್ತು ದೈನಂದಿನ ಕಾರ್ಯಗಳನ್ನು ಕ್ರಮಬದ್ಧವಾಗಿ ಯೋಜಿಕೊಳ್ಳಿ: ಖಿನ್ನತೆಯು ನಿದ್ರೆಯ ಮೇಲೆ ಪ್ರಭಾವ ಬೀರುವುದರಿಂದ ಪ್ರತಿ ರಾತ್ರಿಯೂ ಒಂದೇ ಸಮಯಕ್ಕೆ ಮಲಗಿ, ಬೆಳಿಗ್ಗೆ ನಿರ್ದಿಷ್ಟ ಸಮಯಕ್ಕೆ ಏಳಲು ಪ್ರಯತ್ನಿಸಿ. ಸಾಧ್ಯವಾದಷ್ಟೂ ನಿಮ್ಮ ದಿನಚರಿಗೆ ಬಧ್ದರಾಗಿ.

ಕುಟುಂಬ ಸದಸ್ಯರ ಬೆಂಬಲ ಪಡೆಯಿರಿ: ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಸಹಾಯ ಪಡೆಯಿರಿ. ಥೆರಪಿ ಅಥವಾ ಔಷಧಗಳನ್ನು ನಿರಂತರವಾಗಿ ತೆಗೆದುಕೊಳ್ಳಿ. ನೀವು ಬೇಗ ಗುಣಮುಖರಾಗಲು ಇದು ಅಗತ್ಯ. ಖಿನ್ನತೆಯಿಂದ ಹೊರಬರಲು ಆರೋಗ್ಯಕರ ವಾತಾವರಣ ಮತ್ತು ಆತ್ಮಸ್ಥೈರ್ಯ ಮುಖ್ಯ.

Q

ಆರೈಕೆದಾರರಿಗೆ ಸಲಹೆ

A

ಖಿನ್ನತೆಯಿಂದ ಬಳಲುತ್ತಿರುವವರ ಆರೈಕೆ ಮಾಡುವುದು ಪ್ರಯಾಸದ ಕೆಲಸ ಎಂದು ನಿಮಗೆ ಅನಿಸಬಹುದು. ಅವರ ಆರೈಕೆ ಮಾಡುವ ಭರದಲ್ಲಿ ನೀವು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಹುದು.

ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡಿ, ವೃತ್ತಿಪರರ ನೆರವು ಪಡೆಯಿರಿ. ನಿಮ್ಮ ಪರಿಸ್ಥಿತಿ ಮತ್ತು ನೀವು ಅನುಭವಿಸುತ್ತಿರುವ ಕಷ್ಟ ಅರ್ಥಮಾಡಿಕೊಳ್ಳಲು ನಿಮ್ಮಂತೆಯೇ ಸಮಸ್ಯೆ ಎದುರಿಸುತ್ತಿರುವ ಇತರ ಆರೈಕೆದಾರರೊಂದಿಗೆ ಮಾತನಾಡಿ.

ನಿಮ್ಮ ಆರೋಗ್ಯದ ಹಿತಕ್ಕಾಗಿ ಸಲಹೆ-

  • ಖಾಯಿಲೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಇದರಿಂದ ನಿಮ್ಮ ಚಿಂತೆ ಕಡಿಮೆ ಆಗಿ ಸೂಕ್ತ ಅರಿವಿನಿಂದ ಆರೈಕೆ ಮಾಡಲು ಸಾಧ್ಯ 
  • ಪೌಷ್ಟಿಕ ಆಹಾರ ಸೇವಿಸಿ, ಸಾಕಷ್ಟು ನಿದ್ದೆ ಮಾಡಿ, ನಿಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ.
  • ವ್ಯಾಯಾಮ, ಆಸಕ್ತಿ ಇರುವ ಚಟುವಟಿಕೆ ಅಥವಾ ಹವ್ಯಾಸ ರೂಢಿಸಿಕೊಳ್ಳಿ.
  • ಸ್ನೇಹಿತರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಅಡ್ಡಿ ಆತಂಕಗಳನ್ನು ಮೀರಿ ಮುಂದುವರಿಯಲು ಸಾಧ್ಯ
  • ನಿಮ್ಮ ಮಿತಿಗಳ ಬಗ್ಗೆ ಅರಿತುಕೊಳ್ಳಿ. ಆರೈಕೆ ಮಾಡಲು ಎಷ್ಟು ಸಮಯವನ್ನು ನೀವು ಕೊಡಬಹುದು ಎಂದು ವಾಸ್ತವಿಕವಾಗಿ ಯೋಚಿಸಿ. ಇದರ ಬಗ್ಗೆ ವ್ಯಕ್ತಿಗೆ, ಕುಟುಂಬದ ಸದಸ್ಯರಿಗೆ ಮತ್ತು ವೈದ್ಯರಿಗೆ ವಿವರಿಸಿ. ನಿಮ್ಮಿಂದ ಎಷ್ಟು ನಿರೀಕ್ಷಿಸಬಹುದು ಎಂದು ಅವರಿಗೆ ತಿಳಿಯುತ್ತದೆ.
  • ನಿಮಗಿನ್ನು ಸಹಿಸಲು ಅಸಾಧ್ಯ ಎನಿಸಿದಾಗ ಸ್ವಲ್ಪ ಬಿಡುವು ಮತ್ತು ವಿಶ್ರಾಂತಿ ಪಡೆಯಿರಿ.

Q

ನಿಮಗಿದು ಗೊತ್ತೇ?

A

  • ಜನಸಂಖ್ಯೆಯ ಶೇ.5ರಷ್ಟು ವಯಸ್ಕರಲ್ಲಿ ಜೀವನದ ಯಾವುದಾದರೂ ಒಂದು ಹಂತದಲ್ಲಿ ಖಿನ್ನತೆ ಬರಬಹುದು.
  • 2020ರ ವೇಳೆಗೆ ಖಿನ್ನತೆಯು ಎರಡನೇ ಅತಿ ದೊಡ್ಡ ಮಾನಸಿಕ ಖಾಯಿಲೆಯಾಗಲಿದೆ.
  • ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದ ಖಿನ್ನತೆ ಭಾರತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜು ಮಾಡಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org