ವಿದ್ಯಾಭ್ಯಾಸಕ್ಕಾಗಿ ಬೇರೆ ನಗರಕ್ಕೆ ಹೋಗುತ್ತಿದ್ದೀರಾ ?

ಮಕ್ಕಳು ಬೆಳೆದು ದೊಡ್ಡವರಾದ ಮೇಲೆ, ಓದಲು ಅಥವಾ ಕೆಲಸಕ್ಕಾಗಿ ತಮ್ಮ ಪೋಷಕರನ್ನು ಬಿಟ್ಟು ಬೇರೆ ಊರಿಗೆ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಇದು ಸಾಮಾನ್ಯ ವಿಷಯ. ಕೆಲವರಿಗೆ ಇದು ಕುತೂಹಲಕಾರಿ ಮತ್ತು ಹೊಸ ಅನುಭವ, ಮತ್ತೆ ಕೆಲವರಿಗೆ ಇದೊಂದು ಸವಾಲು.

ಬೇರೆ ಊರಿಗೆ ಹೋದಾಗ, ಹೊಸ ಜಾಗ, ಹೊಸ ಸ್ನೇಹಿತರು, ಅಗತ್ಯ ವಸ್ತುಗಳನ್ನು ಹೊಂದಿಸುವುದು ಮತ್ತು ಆ ವಾತಾವರಣಕ್ಕೆ ಹೊಂದಿಕೊಳ್ಳುವುದು, ಇತ್ಯಾದಿ ವಿಷಯವನ್ನು ಒಳಗೊಂಡಿರುತ್ತದೆ. ರೆಸಿಡೆನ್ಷಿಯಲ್ ಕಾಲೇಜಿಗೆ ಸೇರುವ ಯುವಕರು, ಅಲ್ಲಿನ ವ್ಯವಸ್ಥೆಗೆ, ಹೊಸ ನಿಯಮಗಳಿಗೆ ಹೊಂದಿಕೊಳ್ಳಬೇಕು.  ಕೆಲವರಿಗೆ ಪೇಯಿಂಗ್ ಗೆಸ್ಟ್ (ಪಿ ಜಿ), ಅಥವಾ ಬಾಡಿಗೆ ಮನೆಯಲ್ಲಿ ಇರಲು ಇಷ್ಟ ಪಡುತ್ತಾರೆ. ಇವರಿಗೆ ಬೇಕಾಗುವ ವ್ಯಚ್ಛ, ಮತ್ತಿತರ ಖರ್ಚುಗಳ ಒತ್ತಡ ಇರಬಹುದು.

ಈ ಹಿಂದೆ ಪೋಷಕರಿಂದ ದೂರ ಎಂದೂ ಇರದಿದ್ದಾಗ, ಈ ರೀತಿ ಅನುಭವ ಆಗಬಹುದು:

 • ಸ್ಥಳ ಬದಲಾವಣೆಯಿಂದ ಒಂದು ರೀತಿಯ ಆತಂಕ/ಚಿಂತೆ.
 • ಭಾಷೆ ತಿಳಿಯದೇ ಇರಬಹುದು.
 • ಹೊಸಬರನ್ನು ಭೇಟಿ ಮಾಡಲು ಸಂಕೋಚ.
 • ಮನೆಯ ನೆನಪು.
 • ಒಂಟಿತನ, ಹೊಸ ಗೆಳೆಯರು ಸಿಗದೆ ಇರಬಹುದು.
 • ಓದಿನ ಕಡೆ ಗಮನ ಕೊಡಲು ಸಾಧ್ಯವಾಗದೇ ಇರುವುದು ಅಥವಾ ಸರಿಯಾಗಿ ನಿದ್ರೆ ಬರದಿರುವುದು. 

ಇಂತಹ ಸನ್ನಿವೇಶವನ್ನು ನಿಭಾಯಿಸಲು ಕೆಲವು ಸಲಹೆಗಳು :

 • ಹೊಸ ಊರಿನಲ್ಲಿ ನೀವು ಹಾಸ್ಟೆಲಿನಲ್ಲಿ ಇರುತ್ತೀರಾ ಅಥವಾ ಸ್ವತಂತ್ರವಾಗಿ ಇರುತ್ತೀರಾ ಎಂದು ಮೊದಲೇ ನಿರ್ಧರಿಸಿ.
 • ಈಗಾಗಲೇ ಅಲ್ಲಿ ವಾಸಿಸುತ್ತಿರುವ ಸ್ನೇಹಿತರನ್ನು ವಿಚಾರಿಸಿ, ಅವರೊಂದಿಗೆ ಇರಲು ಸಾಧ್ಯವೇ ಎಂದು ಕೇಳಿ.
 • ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಅನುಭವಗಳನ್ನು ಕೇಳಿ.
 • ಏನಾದರೂ ಮಾಹಿತಿ ಬೇಕಿದ್ದರೆ, ಕಾಲೇಜಿನ ವಿದ್ಯಾರ್ಥಿ ಸಹಾಯ ವಿಭಾಗವನ್ನು ಸಂಪರ್ಕಿಸಿ.
 • ಪಾರ್ಟ್ ಟೈಮ್ ಕೆಲಸ ಮಾಡಲು ಅಥವಾ ಸೋ‍ಷಿಯಲ್ ಗ್ರೂಪ್ ಗಳಿಗೆ ಸೇರಲು ಪ್ರಯತ್ನಿಸಿ. ಇದರಿಂದ ಹೊಸಬರನ್ನು ಭೇಟಿ ಮಾಡಲು ಸಹಾಯವಾಗುತ್ತದೆ.

ಹೊಸ ಊರಿನಲ್ಲಿ ತಾತ್ಕಾಲಿಕವಾಗಿ ಬೇಸರ, ಆತಂಕ, ಚಿಂತೆ ಉಂಟಾಗುವುದು ಸಹಜ. ಆದರೆ ಈ ಪರಿಸ್ಥಿತಿಯನ್ನು ನಿಭಾಯಿಸಬಹುದು. ಈ ಆಲೋಚನೆಗಳು ನಿರಂತರವಾಗಿದ್ದು, ನಿಮ್ಮ ದಿನನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತಿದ್ದರೆ ತಜ್ಞರ ಸಹಾಯ ಪಡೆಯಿರಿ. ಒಂದು ವೇಳೆ ನಿಮ್ಮ ಕಾಲೇಜಿನಲ್ಲಿ ಆಪ್ತಸಲಹೆಗಾರರಿದ್ದರೆ, ಅವರನ್ನು ಸಂಪರ್ಕಿಸಿ.

Related Stories

No stories found.