ನಿರೂಪಣೆ: ಪಾಲಕರ ವೈವಾಹಿಕ ಸಮಸ್ಯೆಗಳಿಂದುಂಟಾದ ಘರ್ಷಣೆಗಳು ಕುಟುಂಬದಲ್ಲಿನ ಅಶಾಂತಿಗೆ ಕಾರಣವಾಯಿತು

ಚಿಕಿತ್ಸೆ, ಮಾನಸಿಕ ಬೆಂಬಲ, ಪ್ರೀತಿ ಮತ್ತು ಕಾಳಜಿಗಳಿಂದ ಕೂಡಿದ ಆರೈಕೆ ವ್ಯಕ್ತಿಯು ಖಿನ್ನತೆಯಿಂದ ಗುಣಮುಖನಾಗಲು ನೆರವಾಗುತ್ತದೆ.

ಅಭಯ್‌, ಸದಾ ತಮಾಷೆ ಮಾಡುವ ಹಾಗೂ ಖುಷಿಯಿಂದಿರುವ ಸ್ವಭಾವದ ಹುಡುಗ. ಪಿಯುಸಿ ಮುಗಿಸಿ ಈಗ ಇಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದಾನೆ. ಉತ್ತಮ ಅಂಕಗಳಿಸಿ ಉತ್ತಮ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಸೀಟ್ ದಕ್ಕಿಸಿಕೊಂಡ ಸಾಧನೆಗೆ ಅಭಯ್‌ಗೆ ಖುಷಿ ಇದೆ. ಎಲ್ಲವೂ ಚೆನ್ನಾಗಿತ್ತು. ಆದರೆ ಕಾಲೇಜಿಗೆ ಸೇರಿ ಮೂರು ನಾಲ್ಕು ತಿಂಗಳಿನ ನಂತರ ಅಭ್ಯಾಸಗಳ ಒತ್ತಡಗಳಿಂದಾಗಿ ಶೈಕ್ಷಣಿಕ ಸಾಧನೆ ತೋರುವಲ್ಲಿ ಅಭಯ್‌ ಒಮ್ಮಿಂದೊಮ್ಮೆಲೇ ಹಿಂದೆ ಬಿದ್ದಿದ್ದ. ಆತನಿಗೆ ಯಾವುದರ ಮೇಲೂ ಗಮನಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ.  ಕ್ಲಾಸುಗಳಿಗೂ ಚಕ್ಕರ್ ಹೊಡೆಯಲಾರಂಭಿಸಿದ. ಆತ ಆಲಸಿಯಾಗತೊಡಗಿದ್ದಾನೆ ಎಂದು ಭಾವಿಸಿದ ಪೋಷಕರು ಛೀಮಾರಿ ಹಾಕಿ ಆತನನ್ನು ಬಲವಂತವಾಗಿ ಕಾಲೇಜಿಗೆ ಕಳುಹಿಸುತ್ತಿದ್ದರು. ಅಭಯ್ ಕಾಲೇಜಿಗೆ ಹೋಗದೇ ಸಂಜೆಯವರೆಗೆ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಮನೆಗೆ ವಾಪಸಾಗುತ್ತಿದ್ದ. ಎಲ್ಲದರಲ್ಲೂ ಆತನಿಗೆ ಆಸಕ್ತಿ ಕಳೆದುಹೋಗಿತ್ತು. ಆರೋಗ್ಯವನ್ನೂ ಕಡೆಗಣಿಸಲಾರಂಭಿಸಿದ್ದ. ತುಂಬಾ ಹೊತ್ತು ನಿದ್ದೆ ಮಾಡುತ್ತಿದ್ದ. ಯಾರೊಂದಿಗೂ ಮಾತನಾಡದೇ ಕೋಣೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಆತನ ತಾಯಿ ಈ ವರ್ತನೆಗಳನ್ನು ತಿಳಿದುಕೊಳ್ಳುವಷ್ಟು ಸೂಕ್ಷ್ಮಮತಿಯಾಗಿದ್ದಳು. ಹೀಗಾಗಿ ಆಕೆ ಮನೋವೈದ್ಯರ ಸಲಹೆ ಪಡೆದಳು. ಇಡೀ ಪ್ರಕರಣವನ್ನು ಕೇಳಿದ ವೈದ್ಯರು ಅಭಯ್‌ ಸ್ಥಿತಿಯನ್ನು ಖಿನ್ನತೆ ಎಂದು ಪರಿಗಣಿಸಿದರು. ಅಭಯ್‌ಗೆ ಕೆಲವು ಖಿನ್ನತೆ ನಿವಾರಕಗಳನ್ನು ನೀಡಲಾಯಿತು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಮೊದಲಿನಂತೆ ಮಂಕು ಕವಿದವರಂತೆ ಕುಳಿತುಕೊಳ್ಳುತ್ತಿದ್ದ.

ಒಂದು ದಿನ, ತಂದೆಯ ಬಲವಂತವನ್ನು ತಡೆದುಕೊಳ್ಳಲಾಗದೇ ಅಭಯ್‌ ಮನೆ ಬಿಟ್ಟು ತೆರಳಿ, ತನ್ನ ಅತ್ತೆಯ ಜತೆ ಉಳಿದುಕೊಳ್ಳಲು ಆರಂಭಿಸಿದ. ಅವರು ಅಭಯ್‌ ಬಗ್ಗೆ  ತುಂಬಾ ಕಾಳಜಿ ವಹಿಸುತ್ತಿದ್ದರು. ಕೆಲವು ದಿನಗಳ ನಂತರ ಅಭಯ್ ತನ್ನ ಸಮಸ್ಯೆಯನ್ನು ಆಕೆಯ ಜತೆ ಹಂಚಿಕೊಂಡ. ಆತನ ಕಥೆ ಕೇಳಿದ ಆಕೆ, ಪರಿಸ್ಥಿತಿಗೆ ನಿಜವಾದ ಕಾರಣ  ಆತನ ತಂದೆ ತಾಯಿ ಎಂದು ನಿರ್ಧರಿಸಿದರು. ಅವರ ವೈವಾಹಿಕ ಸಮಸ್ಯೆಗಳು ಕುಟುಂಬದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು. ಅಲ್ಲದೇ ತಂದೆಯ ಅತೀ ನಿರೀಕ್ಷೆ, ನಿರಂತರವಾಗಿ ಬಲವಂತ ಮಾಡುವುದು ಮತ್ತು ಟೀಕೆಗಳಿಂದಾಗಿ ಅಭಯ್‌ಗೆ ತಾನು ಅನುಪಯುಕ್ತ ಎಂಬ ಭಾವನೆ ಮೂಡಿತ್ತು. ಈ ಸನ್ನಿವೇಶದಲ್ಲಿ ಅಗತ್ಯವಿದ್ದ ಮಾನಸಿಕ ಮತ್ತು ನೈತಿಕ ಬೆಂಬಲವನ್ನು ಅತ್ತೆ ನೀಡಿದರು.

ಮುಂದಿನ ಆರು ತಿಂಗಳಲ್ಲಿ ಅಭಯ್ ನಿಧಾನವಾಗಿ ಸುಧಾರಿಸಿಕೊಂಡ. ಶಿಕ್ಷಣ ಮುಂದುವರಿಸಲು ನಿರ್ಧರಿಸಿದ.ಪಾಲಕರಿಗೂ ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಬೇಕೆಂಬ ಮನಸಾಯಿತು ಮತ್ತು ದಬ್ಬಾಳಿಕೆ ಮಾಡುವುದನ್ನು ಬಿಟ್ಟು ಹುಡುಗನನ್ನು ಗೌರವಿಸಬೇಕು ಎಂಬುದು ಮನದಟ್ಟಾಯಿತು.

ಈ ಕಥೆಯಲ್ಲಿ, ಅತ್ತೆಯಿಂದ ಲಭ್ಯವಾದ ಮಾನಸಿಕ ಬೆಂಬಲ, ಪ್ರೀತಿ ಮತ್ತು ಆರೈಕೆಯಿಂದ ಅಭಯ್ ತನ್ನ ಖಿನ್ನತೆಯಿಂದ ಸುಧಾರಿಸಿಕೊಂಡ. ಇದು ಥೆರಪಿಯಷ್ಟೇ ಪರಿಣಾಮಕಾರಿಯಾಗಿತ್ತು. 

ಖಿನ್ನತೆಗೆ ನೀಡುವ ಚಿಕಿತ್ಸೆ ಪ್ರಕರಣಕ್ಕೆ ಅನುಗುಣವಾಗಿ ನಿರ್ದಿಷ್ಟವಾಗಿರುತ್ತದೆ. ಹಲವು ಪ್ರಕರಣಗಳಲ್ಲಿ ಔಷಧ ಮತ್ತು ಥೆರಪಿ ಎರಡನ್ನೂ ಶಿಫಾರಸು ಮಾಡಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಯಾವುದೇ ಚಿಕಿತ್ಸೆಯ ಪರಿಣಾಮಕಾರಕತೆಯು ಸಹಾನುಭೂತಿ, ಪ್ರೀತಿ, ಬೆಂಬಲ ಮತ್ತು ಕುಟುಂಬ ಹಾಗೂ ಸ್ನೇಹಿತರು ಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸುವುದರ ಮೇಲೆ ಅವಲಂಬಿಸಿರುತ್ತದೆ.

ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ಹೆಣೆಯಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಯ ಪ್ರಕರಣವಷ್ಟೇ ಅಲ್ಲ. ಬದಲಿಗೆ ಖಿನ್ನತೆಯಿಂದ ಬಳಲುತ್ತಿರುವ ಎಲ್ಲ ವ್ಯಕ್ತಿಗಳನ್ನೂ ಪ್ರತಿನಿಧಿಸುತ್ತದೆ ಎಂಬುದನ್ನು ಅರಿತುಕೊಳ್ಳುವುದು ಅವಶ್ಯವಾಗಿರುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org