ಅನಿರೀಕ್ಷಿತ ಶಾಕ್‌ಗಳನ್ನು ಅಲಕ್ಷಿಸದಿರಿ…

ಬಹುತೇಕ ಜನರು ತೀವ್ರ ಆಘಾತ, ಭಯ, ಉಸಿರಾಟದ ತೊಂದರೆ, ತೀವ್ರ ಎದೆ ಬಡಿತ, ಅತಿಯಾದ ಬೆವರುವಿಕೆ, ಹೊಟ್ಟೆಯಲ್ಲಿ ತಳಮಳ ಮೊದಲಾದ ಕಾರಣಗಳನ್ನು ಹೊತ್ತು, “ಹೃದಯಾಘಾತವಾಗಿದೆ” ಎಂದೋ; ಅಥವಾ “ವಿಚಿತ್ರವಾಗಿ ಆಡುತ್ತಿದ್ದಾರೆ” ಎಂದೋ ಆಸ್ಪತ್ರಗೆ ಕರೆತರಲ್ಪಡುತ್ತಾರೆ. ಈ ಲಕ್ಷಣಗಳು ಹೆಚ್ಚೆಂದರೆ 10 ನಿಮಿಷಗಳವರೆಗೆ ಇರುತ್ತವೆ.  

ಈ ಮೇಲಿನ ಲಕ್ಷಣಗಳು ಕಂಡು ಬಂದಲ್ಲಿ, ಮೊದಲನೆಯದಾಗಿ ಮತ್ತು ಮುಖ್ಯವಾಗಿ ಹೃದಯಾಘಾತದ ಸಾಧ್ಯತೆಗಳನ್ನು ಪರಿಗಣಿಸಬೇಕು; ಮತ್ತು ಅದಕ್ಕೆ ಪೂರಕವಾದ ಪರೀಕ್ಷೆಗಳನ್ನು ನಡೆಸಬೇಕು. ಹಾಗೂ ಇಂತಹ ಸಂದರ್ಭಗಳಲ್ಲಿ ನೀಡಬೇಕಾದ ತುರ್ತು ಚಿಕಿತ್ಸಾವಿಧಾನಗಳನ್ನು ಅನುಸರಿಸಬೇಕು. ಈ ಲಕ್ಷಣಗಳ ಪರಿಶೀಲನೆ ಮತ್ತು ಚಿಕಿತ್ಸೆಗೆ ಮನಶ್ಶಾಸ್ತ್ರಜ್ಞರ ಬಳಿ ಹೋಗುವಂತೆ ಸೂಚಿಸುವುದಕ್ಕೆ ಮೊದಲು, ವೈದ್ಯರು ಇತರ ಎಲ್ಲ ರೀತಿಯ ದೈಹಿಕ - ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿರಬೇಕು.

1999ರಲ್ಲಿ ನಾನು ಮೊದಲ ಬಾರಿಗೆ ಅಮಿತ್ ಅವರನ್ನು ಭೇಟಿಯಾದಾಗ, ಅವರು ಅದಾಗಲೆ ಒಂದಿಬ್ಬರು ಕಾರ್ಡಿಯಾಲಜಿಸ್ಟ್ ಹಾಗೂ ಸೈಕಿಯಾಟ್ರಿಸ್ಟ್ ಗಳನ್ನು ಸಂಪರ್ಕಿಸಿದ್ದರು. ಆಗ ಅವರ ವಯಸ್ಸು 29. ಐದು ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆ ವಯಸ್ಸಿಗೇ ಅವರು ಹಲವು ಬಾರಿ ತೀವ್ರ ಹೃದಯಾಘಾತ ಅನುಭವಿಸಿದ್ದರು. ಇದ್ದಕ್ಕಿದ್ದಂತೆ ಅವರ ಹೃದಯ ಜೋರಾಗಿ ಗುದ್ದಿದಂತೆ ಸದ್ದು ಮಾಡುತ್ತಿತ್ತು. ಪಂಜರದೊಳಗಿನ ಹಕ್ಕಿ ರೆಕ್ಕೆಯನ್ನು ಪಟಪಟ ಸದ್ದು ಮಾಡುತ್ತ ಹೊಟ್ಟೆಗೆ ಹೊಡೆದುಕೊಳ್ಳುತ್ತಿದೆಯೇನೋ ಅನ್ನುವಂತೆ ಭಾಸವಾಗುತ್ತಿತ್ತು. ಆಗೆಲ್ಲ ಅವರು ಅತಿಯಾಗಿ ಬೆವರುತ್ತಿದ್ದರು ಮತ್ತು ಬಾಯಿ ವಿಪರೀತ ಒಣಗುತ್ತಿತ್ತು. ಇಂತಹ ಆಘಾತವು ತಿಂಗಳಿಗೆ ಮೂರು-ನಾಲ್ಕು ಬಾರಿ ಸಂಭವಿಸುತ್ತಿತ್ತು. ಅದರ ನೋವು ಸುಮಾರು ಹತ್ತು ನಿಮಿಷಗಳವರೆಗೂ ಇರುತ್ತಿತ್ತು. ಆದರೆ, ಅನಂತರದಲ್ಲಿ ಆಘಾತದ ಯಾವುದೇ ರೀತಿಯ ಚಿಹ್ನೆ ಇರುತ್ತಿರಲಿಲ್ಲ. ವೈದ್ಯರ ಔಷಧಗಳು ನೆರವಿಗೇನೋ ಬರುತ್ತಿದ್ದವು. ಆದರೆ ಅವರು ಶಾಶ್ವತ ಪರಿಹಾರವನ್ನು ಬಯಸಿದ್ದರು. ಅವರಿಗೆ ಸೂಕ್ತ ಸೈಕಾಲಜಿಸ್ಟ್ ಬಳಿ ಹೋಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಆ ಸಲಹೆಯನ್ನು  ಗಂಭೀರವಾಗಿ ಪರಿಗಣಿಸಿರಲಿಲ್ಲ.

ಅವರು ಅನುಭವಿಸುತ್ತಿದ್ದ ಸಮಸ್ಯೆಯ ಗುಣಲಕ್ಷಣಗಳು ಮತ್ತು ಅವುಗಳ ಮೌಲ್ಯಮಾಪನ, ಮಾನಸಿಕ ಸಮಸ್ಯೆಯ ಸಾಧ್ಯತೆಗಳನ್ನು ತಳ್ಳಿಹಾಕಿದ್ದವು. ಏಕೆಂದರೆ, ಫಿಸಿಶಿಯನ್’ಗಳು ಕೇವಲ ದೈಹಿಕ ಲಕ್ಷಣಗಳ ಆಧಾರದ ಮೇಲೆ ಈ ಆಘಾತಗಳಿಗೆ ಕಾರಣ ಕಂಡುಕೊಂಡಿದ್ದರೆ ಹೊರತು, ಇವೇ ಲಕ್ಷಣಗಳನ್ನು ಹೊಂದಿರಬಹುದಾಗಿದ್ದ ಮಾನಸಿಕ ಸಮಸ್ಯೆಗಳನ್ನು ಗುರುತಿಸಿರಲಿಲ್ಲ.

24ರ ಹರೆಯದ ಸಾಶಾ, ತೀವ್ರ ಹೊಟ್ಟೆ ನಡುಕ, ತಳಮಳ, ಅತಿಯಾದ ಎದೆಬಡಿತ, ಏದುಸಿರು ಮತ್ತು ತೀವ್ರ ಬೆವರಿನ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಸಮಸ್ಯೆಗಳು ಅವರಿಗೆ ಕೇವಲ ಅವರು ವಿಮಾನದಲ್ಲಿ ಸಂಚರಿಸುವ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅವರು ಆಗಿಂದಾಗ್ಗೆ ಕೆಲಸದ ನಿಮಿತ್ತ ಹೊರದೇಶಗಳಿಗೆ ಪ್ರಯಾಣ ಬೆಳೆಸಬೇಕಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅವಶ್ಯಕತೆಯಿತ್ತು.

ವಿದೇಶದಲ್ಲಿದ್ದ ಮೋನಿಕಾಳನ್ನು ಅವಳ ಪೋಷಕರು 7 ವರ್ಷದವಳಿದ್ದಾಗ ಭಾರತದ ಒಂದು ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದರು. ಅವಳಿಗೆ ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟವಾಗತೊಡಗಿತು. ಪೋಷಕರಿಂದ ದೂರವಿರುವುದು, ಬೋರ್ಡಿಂಗ್ ಸ್ಕೂಲಿನ ನಿಯಮಗಳು, ಅಪರೂಪಕ್ಕೆ ನೀಡಲಾಗುತ್ತಿದ್ದರೂ ಕೆಲವು ಶಿಕ್ಷೆಗಳ ಕುರಿತಾದ ಭಯ ಅವಳನ್ನು ಆತಂಕಿತಳಾಗಿಸುತ್ತಿದ್ದವು. ಅದರಿಂದ ಅವಳು ಆಗಾಗ ಉದ್ವೇಗಕ್ಕೆ ಒಳಗಾಗುತ್ತಿದ್ದಳು. ಬಾಲ್ಯದ ದಿನಗಳ ಈ ಅನುಭವ ಈಗ ಮತ್ತೆ ಮರುಕಳಿಸುತ್ತಿದೆ ಎಂದು ಮೋನಿಕಾ ಸಲಹೆ ಪಡೆಯಲು ಬಂದಿದ್ದರು. ಈಗ ಅವರು 6 ವರ್ಷದ ಮಗಳ ತಾಯಿ. ತಮ್ಮ ಉದ್ವೇಗ, ಅನಿರೀಕ್ಷಿತ ವರ್ತನೆ, ಅನಿಯಂತ್ರಿತ ಕೋಪ ಮೊದಲಾದವು ತಮ್ಮ ಮಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕಗೊಂಡಿದ್ದರು. ತಾವು ಎದುರಿಸುತ್ತಿರುವ ಆಘಾತವು ತಮ್ಮನ್ನು ಉತ್ತಮ ತಾಯಿಯಾಗುವಲ್ಲಿ ವಿಫಲಗೊಳಿಸುತ್ತಿವೆ ಎಂದು ಅವರು ಬೇಸರಗೊಂಡಿದ್ದರು.

30ರ ಹರಯದ ರಾಯ್ ಅವರನ್ನು ಒಬ್ಬ ಫಿಸಿಷಿಯನ್ ನನ್ನ ಬಳಿಗೆ ಕಳುಹಿಸಿದ್ದರು. ಏಳು ವರ್ಷಗಳ ಹಿಂದೆ, ಅವರು ತೀವ್ರ ಎದೆನೋವು ಹಾಗು ಎಡ ಭುಜದ ನೋವಿನ ಕಾರಣದಿಂದ ಒಂದು ಆಸ್ಪತ್ರೆಗೆ ದಾಖಲಾಗಿದ್ದರು. ವಿವಿಧ ರೀತಿಯ ಪರೀಕ್ಷೆ ಹಾಗು ಚಿಕಿತ್ಸೆಯ ನಂತರ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದರು. ನಂತರ ಅವರು ಅಮೆರಿಕೆಗೆ ತೆರಳಿದ್ದರು. ಅಲ್ಲಿ ಅವರು ಆ ದೇಶದಲ್ಲಿನ ಜೀವನಶೈಲಿಗೆ (ಸಮಯದ ಪರಿಪಾಲನೆ, ಅಲ್ಲಿನ ಪರಿಸರ -ಶುಚಿತ್ವ) ಹೊಂದಿಕೊಂಡಿದ್ದುದರಿಂದ ಅವರಲ್ಲಿ ಉದ್ವೇಗ ಕಡಿಮೆಯಾಗಿತ್ತು ಹಾಗು ಆರೋಗ್ಯದಿಂದ್ದರು. ಆ ದೇಶದಲ್ಲಿದ್ದ 5 ವರ್ಷಗಳ ಕಾಲವೂ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಭಾರತಕ್ಕೆ ಮರಳಿದಾಗ ಮಾತ್ರ ಸಮಸ್ಯೆಗಳೂ ಮರಳಿದವು. ಚಿಕಿತ್ಸೆಗಾಗಿ ಅವರು ಒಬ್ಬ ಫಿಸಿಷಿಯನ್’ರನ್ನು ಸಂಪರ್ಕಿಸಿದರು.

20ವರ್ಷದ ಫಿರೋಜಾ, ಸದಾಕಾಲ ಉದ್ವೇಗದಲ್ಲಿರುತ್ತಿದ್ದಳು. ಕಾಲೇಜಿನಲ್ಲಿ ಅವಳ ಸಹಪಾಠೀಗಳು ಒಂದಲ್ಲ ಒಂದು ಕಾರಣಕ್ಕೆ ಅವಳನ್ನು ಛೇಡಿಸುತ್ತಲೇ ಇರುತ್ತಿದ್ದರು. ಅವಳು ಅಚ್ಚುಕಟ್ಟಾಗಿ ಬರೆಯುವ ನೋಟ್ಸ್ ಬಗ್ಗೆ; ಅವಳ ಶುಭ್ರ ಬಟ್ಟೆಯ ಬಗ್ಗೆ; ಅವಳ ಸಮಯ ಪರಿಪಾಲನೆ, ಶಿಸ್ತು, ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಳ್ಳುವುದೇ ಮೊದಲಾದ ವರ್ತನೆಗಳ ಬಗ್ಗೆ ಎಲ್ಲ ಅವರು ಟೀಕೆ ಮಾಡುತ್ತಿದ್ದರು. ಮತ್ತು ಅವಳಿ OCD ಇದೆ ಎಂದು ರೇಗಿಸುತ್ತಿದ್ದರು. ಅದರ ಕುರಿತು ಓದಿ ತಿಳಿದುಕೊಂಡಿದ್ದ ಫಿರೋಜಾ, ತನಗೆ ನಿಜವಾಗಿಯೂ ಆ ಸಮಸ್ಯೆ ಇದೆಯೇನೋ ಎಂದು ಆತಂಕಿತಳಾಗಿದ್ದಳು.

25ರ ಹರಯದ ಕ್ಲೇರ್, ಒಂದು ತಿಂಗಳಿಂದ ತೀವ್ರತರ ಉದ್ವೇಗಕ್ಕೆ ಒಳಗಾಗಿದ್ದಳು. ಅವಳನ್ನು ಫ್ಯಾಮಿಲಿ ಡಾಕ್ಟರ್ ಬಳಿಗೆ ಕರೆದೊಯ್ಯಲಾಯಿತು. ದಿನಕ್ಕೆ ಐದಾರು ಬಾರಿ ನಿಷ್ಕಾರಣ ಭೀತಿ ಆವರಿಸಿ ಆಘಾತಕ್ಕೆ ಒಳಗಾಗುತ್ತೇನೆಂದು ಕ್ಲೇರ್ ತಿಳಿಸಿದಳು. ಅವಳು ತಿಳಿಸಿದ ಪ್ರಕಾರ, ಈ ಉದ್ವೇಗ ಒಂದು ಗಂಟೆಯವರೆಗೆ ಇರುತ್ತಿತ್ತು. ತನ್ನ ವೈವಾಹಿಕ ಜೀವನ, ಪತಿಯೊಡಗಿನ ಸಂಬಂಧ ಉತ್ತಮವಾಗಿದೆ ಎನಿಸಿದರೂ ಅತ್ತೆ-ಮಾವನವರ ವರ್ತನೆ ಹಾಗೂ ಅವರು ತಮ್ಮ ಮಗನನ್ನು ನನ್ನ ವಿರುದ್ಧ ತಿರುಗಿಬೀಳುವಂತೆ ಮಾಡುತ್ತಿದ್ದಾರೆ ಎಂಬ ಭಾವನೆ ಅವಳಲ್ಲಿ “ವಿಚ್ಛೇಧನ”ದ ಭಯ ಉಂಟುಮಾಡುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ಪರಿಸ್ಥಿತಿ ಹದಗೆಟ್ಟಿದೆ ಎನಿಸುತ್ತಿತ್ತು.

26ವರ್ಷದ ಅಲಿಶಾ ಸದಾ ಅಂತರ್ಮುಖಿಯಾಗಿರುತ್ತಿದ್ದಳು. ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ಎಲ್ಲರೊಡನೆ ಬೆರೆಯಲಾಗದೆ ಕಸಿವಿಸಿ ಅನುಭವಿಸುತ್ತಿದ್ದಳು. ಹೆಚ್ಚು ಜನರು ಇರುವ ಕಡೆ ಹೋಗುವುದಕ್ಕೇ ಅವಳು ಇಷ್ಟಪಡುತ್ತಿರಲಿಲ್ಲ. ಯಾರೊಡನೆಯೂ ಹೊಂದಿಕೊಳ್ಳುತ್ತಿರಲಿಲ್ಲ. ತನ್ನ ಪತಿಯ ಸ್ನೇಹಿತರು. ಅವರ ವ್ಯವಹಾರಕ್ಕೆ ಸಂಬಂಧಿಸಿದ ಮಿತ್ರರೊಡನೆಯೂ ಸರಿಯಾಗಿ ಮಾತನಾಡಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ವ್ಯವಹಾರ ನಿಮಿತ್ತ ಮೇಲಿಂದ ಮೇಲೆ ಸ್ನೇಹಕೂಟಗಳಿಗೆ ಹೋಗುವುದು ಅನುವಾರ್ಯವಾಗಿತ್ತು. ಕನಿಷ್ಠ ವಾರಕ್ಕೆ ಮೂರು ಬಾರಿಯಾದರೂ ಅವಳು ಪಾರ್ಟಿಗಳನ್ನು ಅಟೆಂಡ್ ಮಾಡಬೇಕಾಗುತ್ತಿತ್ತು. ಆದರೆ ಪಾರ್ಟಿ ನಡೆಯುತ್ತಿರುವ ಸ್ಥಳವನ್ನು ಪ್ರವೇಶಿಸುವಾಗಲೇ ಅವಳು ಒಂದು ಬಗೆಯ ಅವ್ಯಕ್ತ ಭೀತಿಗೆ ಒಳಗಾಗುತ್ತಿದ್ದಳು. ಅಲ್ಲಿರುವವರೆಲ್ಲರೂ ತನ್ನನ್ನೆ ನೋಡುತ್ತಿದ್ದಾರೆ ಅನ್ನಿಸಿ ಮುಜುಗರಕ್ಕೊಳಗಾಗುತ್ತಿದ್ದಳು. ಇದರಿಂದ ಅವಳಿಗೆ ಉಸಿರುಗಟ್ಟಿದಂತಾಗುತ್ತಿತ್ತು. ಭಯದಿಂದ ಹೊರಬರಲು ಕಷ್ಟಪಡುತ್ತಿದ್ದಳು ಮತ್ತು ಆ ಸಂದರ್ಭದಲ್ಲಿ ತೀವ್ರ ತಲೆನೋವು ಅವಳನ್ನು ಭಾಧಿಸತೊಡಗುತ್ತಿತ್ತು. ಆದ್ದರಿಂದ ಅವಳು ಯಾವುದೇ ಸಮಾರಂಭಕ್ಕೆ ತೆರಳುವ ಮುನ್ನ ಸ್ವಲ್ಪ ಡ್ರಿಂಕ್ಸ್ ತೆಗೆದುಕೊಳ್ಳಲು ಆರಂಭಿಸಿದ್ದಳು.

ಮೇಲೆ ಹೇಳಲಾದ ಪ್ರಕರಣಗಳಲ್ಲಿ  ಕೇವಲ ಅಮಿತ್ ಅವರನ್ನು ಮಾತ್ರ ತೀವ್ರ ಸಮಸ್ಯೆಗೊಳಗಾದವರೆಂದು ಗುರುತಿಸಲಾಯಿತು. ಇತರರಲ್ಲಿ ಕಂಡುಬಂದ ಗುಣಲಕ್ಷಣಗಳನ್ನು ಪಟ್ಟಿ ಮಾಡಿ, ಅವರನ್ನು ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಗುರುತಿಸಲಾಯಿತು. ಉದಾಹರಣೆಗೆ : ರಾಯ್ ಅವರಿಗೆ ಓ ಸಿ ಡಿ ಸ್ಪೆಕ್ಟ್ರಮ್ ಅಸ್ವಸ್ಥತೆ ಇತ್ತು. ಸಾಶಾ, ಏವಿಯೋಫೋಬಿಕ್’ಗೆ ಒಳಗಾಗಿದ್ದಳು. ಫಿರೋಜಾಳ ಸಮಸ್ಯೆ ಪರೀಕ್ಷೆಗೊಳಪಡಿಸುವಂತದ್ದಾಗಿರಲಿಲ್ಲ; ಅವಳು ಕೇವಲ ಮಾನಸಿಕ ಖಿನ್ನತೆಗೊಳಗಾಗಿದ್ದಳು. ಅಲೀಶಾಗೆ ಸಾಮಾಜಿಕ ಕೀಳರಿಮೆಯಿತ್ತು.

ಅನಿರೀಕ್ಷಿತವಾಗಿ ಬಂದೆರಗುವ ಭಯ ಹಾಗೂ ವಿನಾಕಾರಣ ಉದ್ವೇಗಗಳು ವ್ಯಕ್ತಿಯ ಮನೋದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಯಾತನೆಗೆ ದೂಡುತ್ತವೆ. ಇದರಿಂದ ಆ ವ್ಯಕ್ತಿ ಇತರರಂತೆ ಸಹಜವಾಗಿ ಬದುಕಲು ಸಾಧ್ಯವಾಗದೆ ಹೋಗುತ್ತದೆ.

  • ಒಮ್ಮೆ ಅಮಿತ್ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ, ಮಾರ್ಗಮಧ್ಯದಲ್ಲಿ ತೀವ್ರ ಆಘಾತಕ್ಕೆ ಒಳಗಾಗಿ ಕಾರನ್ನು ನಡುರಸ್ತೆಯಲ್ಲೇ ನಿಲ್ಲಿಸಿಬಿಟ್ಟಿದ್ದರು. ಸಂಚಾರಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರನ್ನು ಬದಿಗೆ ನಿಲ್ಲಿಸಿ,  ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.
  • ಏರ್ ಪೋರ್ಟ್ ನ ಸೆಕ್ಯೂರಿಟಿ ಚೆಕ್’ಗೆ ವರೆಗೂ ಹೋಗಿದ್ದ ಸಾಶಾ, ತನ್ನ ಸಮಸ್ಯೆಗಳು ಕಾಡತೊಡಗಿದ್ದರಿಂದ ಮುಂದುವರೆಯುವ ಧೈರ್ಯ ಮಾಡದೆ ಹಿಂದಿರುಗಿಬಿಟ್ಟಿದ್ದಳು. ಇದರಿಂದಾಗಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದ ಸದವಕಾಶವನ್ನೇ ಕಳೆದುಕೊಂಡಳು.
  • ಮೋನಿಕಾ ತನ್ನ ಉದ್ವೇಗ ಹಾಗೂ ಕೋಪದಿಂದಾಗಿ ಸ್ನೇಹಿತರನ್ನು ಕಳೆದುಕೊಳ್ಳಬೇಕಾಯಿತು. ಆಗಾಗ ತನ್ನ ಮಗಳಿಗೆ ಹೊಡೆದುಬಿಡುತ್ತಿದ್ದುದೂ ಉಂಟು.
  • ರಾಯ್ ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದ ಒತ್ತಡಕ್ಕೆ ಒಳಗಾಗಿದ್ದರು. ಹಾಗೂ ಆ್ಯಂಟಿಹೈಪರ್ ಟೆನ್ಸಿವ್ ಔಷಧಗಳನ್ನು ಸೇವಿಸಲಾರಂಭಿಸಿದರು.
  • ಫಿರೋಜಾಳಿಗೆ ಯಾವುದೇ ರೀತಿಯ ಮಾನಸಿಕ ಸಮಸ್ಯೆಯಿರಲಿಲ್ಲ. ಕೇವಲ ಅನವಶ್ಯಕ ಭಯ ಅವಳನ್ನು ಸದಾ ದುಃಖದಲ್ಲಿರುವಂತೆ ಮತ್ತು ಉದ್ವಿಗ್ನಳಾಗಿರುವಂತೆ ಮಾಡಿತ್ತು.
  • ಕ್ಲೇರ್ ತನ್ನನ್ನುತಾನು ಋಣಾತ್ಮಕವಾಗಿ ಬಿಂಬಿಸಿಕೊಳ್ಳುತ್ತಾ ಖಿನ್ನತೆಗೆ ಒಳಗಾಗಿ ಭಯಭೀತಳಾಗಿದ್ದಳು.
  • ಅಲಿಶಾ ಪಾರ್ಟಿಗಳಲ್ಲಿ ಭಾಗವಹಿಸಬೇಕೆಂಬ, ಎಲ್ಲರೊಡನೆ ಬೆರೆಯಬೇಕೆಂಬ ಉದ್ದೇಶದಿಂದ ಭಯನಿವಾರಣೆಗಾಗಿ ಸ್ವಲ್ಪ ಕುಡಿಯುತ್ತಿದ್ದಳು. ನಂತರದಲ್ಲಿ ಅದೇ ಒಂದು ರೂಢಿಯಾಗಿ, ಅತಿಯಾದ ಮದ್ಯಪಾನ ಅವಳ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿಬಿಟ್ಟಿತು.

ಮೊದಲ ಬಾರಿಗೆ ಇಂತಹ ಅನಿರೀಕ್ಷಿತ ಆಘಾತಗಳನ್ನು ಎದುರಿಸಿದವರು ಅದನ್ನು ತಮ್ಮ ಸ್ನೇಹಿತರಲ್ಲಿ ಅಥವಾ ಕುಟುಂಬದವರೊಡನೆ ಹೇಳಿಕೊಳ್ಳುತ್ತಾರೆ.

ಅಚ್ಚರಿಪಡುವಷ್ಟು ಸಂಖ್ಯೆಯ ಜನರು ಈ ಹಿಂದೆ ತಮಗೆ ನೀಡಲಾಗಿದ್ದ ಆ್ಯಂಕ್ಸಿಯಾಲಿಟಿಕ್ ಮಾತ್ರೆಗಳನ್ನೇ ತೆಗೆದುಕೊಳ್ಳುತ್ತಾರೆ; ಅಥವಾ ಸಂಬಂಧಪಟ್ಟವರಿಗೆ ಕೊಡುತ್ತಾರೆ. ಆ ಸಮಯದಲ್ಲಿ ಅದು ಪರಿಣಾಮ ಬೀರುತ್ತದೆ ಕೂಡಾ. ಆದ್ದರಿಂದ, ಆ ವ್ಯಕ್ತಿಗಳು ಮುಂದೆಯೂ ಅದರ ಮೇಲೆ ಅವಲಂಬಿತರಾಗುತ್ತಾರೆ. ಅಗತ್ಯ ಬಿದ್ದಾಗೆಲ್ಲ ಅದೇ ಮಾತ್ರೆ ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳುತ್ತಾರೆ.

ಹೀಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾ ಹೈ-ಡೋಸ್ ಇರುವಂತಹ ಆ್ಯಂಕ್ಸಿಯಾಲಿಟಿಕ್ ಔಷಧಗಳನ್ನು ತೆಗೆದುಕೊಳ್ಳುವವರನ್ನು ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನೋಡಿದ್ದೇನೆ. ಅವರು ಮಾನಸಿಕ ತಜ್ಞರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವವರೆಗೂ ಅವರ ವಾಸ್ತವ ಸಮಸ್ಯೆ ಏನೆಂದು ಗುರುತಿಸಲಾಗುವುದಿಲ್ಲ. ಅವರು ಯಾವುದೇರೀತಿಯ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಗಳನ್ನು ಪಡೆದುಕೊಳ್ಳಲು ಹೆಣಗಾಡುತ್ತಾ ಇರುತ್ತಾರೆ ಮತ್ತು ಭಯದಿಂದಲೇ ಜೀವಿಸುತ್ತಿರುತ್ತಾರೆ.

ಸೂಕ್ತ ಸಮಯದಲ್ಲಿ ಅಗತ್ಯ ಔಷಧಗಳು ದೊರೆಯದೆ ಹೋದಾಗ ತಲೆನೋವು, ವಾಕರಿಕೆ, ದೃಷ್ಟಿ ಮಂಜಾಗುವುದು, ಸ್ನಾಯುಗಳ ಸೆಳೆತ, ಟ್ರೆಮೋರ್ಸ್ ಹಾಗೂ ತೀವ್ರ ಉದ್ವೇಗ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದಕ್ಕೆ ಕಾರಣವೇನೆಂದು ಆ ವ್ಯಕ್ತಿಗೆ ತಿಳಿಯುವುದಿಲ್ಲ.

ಆದ್ದರಿಂದ, ದೀರ್ಘಕಾಲ ನಿಮ್ಮನ್ನು ಈ ಮೇಲಿನ ಯಾವುದಾದರೂ ಸಮಸ್ಯೆ ಬಾಧಿಸುತ್ತಿದ್ದರೆ, ಹೆಳಿಕೊಳ್ಳಲಾಗದ ನೋವು ಅಥವಾ ಭಯ ಅನುಭವಿಸುತ್ತಿದ್ದರೆ, ಕೂಡಲೆ ಮಾನಸಿಕ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ. ಸೈಕಿಯಾಟ್ರಿಸ್ಟ್ ಅಥವಾ ಸೈಕಾಲಜಿಸ್ಟ್’ಗಳು ನಿಮ್ಮ ಸಮಸ್ಯೆಗೆ ತಕ್ಕಂತೆ ಸೂಕ್ತ ಚಿಕಿತ್ಸೆ ನೀಡುವರು.

ಅನಿರೀಕ್ಷಿತ ಆಘಾತಗಳನ್ನು (ಪ್ಯಾನಿಕ್ ಅಟ್ಯಾಕ್) ಸ್ವಚಿಕಿತ್ಸೆಯಿಂದ ಪರಿಹರಿಸಲು ಸಾಧ್ಯವಿಲ್ಲ. ಇದು, ಜ್ವರವನ್ನು ಸಾಮಾನ್ಯ ಅನಾರೋಗ್ಯವೆಂದು ಭಾವಿಸಿದಂತೆಯೇ ಸರಿ. ಈ ಜ್ವರ ಮುಂದೆ ಫ್ಲೂ, ಮಲೇರಿಯಾ, ಡೆಂಗ್ಯೂ – ಯಾವುದಕ್ಕೆ ಬೇಕಾದರೂ ತಿರುಗಬಹುದು. ಹೇಗೆ ಜ್ವರವು ಯಾವುದಾದರೂ ಕಾಯಿಲೆಯ ಲಕ್ಷಣವೂ ಆಗಿರಬಲ್ಲದೋ; ಹಾಗೇ ಪ್ಯಾನಿಕ್ ಅಟ್ಯಾಕ್ ಯಾವುದಾದರೂ ಮನೋ-ದೈಹಿಕ ಸಮಸ್ಯೆಯ ಸೂಚನೆಯೂ ಆಗಿರಬಹುದು. ಆದ್ದರಿಂದ, ಸೂಕ್ತ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಪಡೆಯುವುದು ಅಗತ್ಯ.

ಡಾ.ಶ್ಯಾಮಲಾ ವತ್ಸ, ಬೆಂಗಳೂರು ಮೂಲದ ಸೈಕಿಯಾಟ್ರಿಸ್ಟ್. 20 ವರ್ಷಕ್ಕಿಂತಲೂ ಅಧಿಕ ಕಾಲದಿಂದ ಈ ಕ್ಷೇತ್ರದಲ್ಲಿದ್ದಾರೆ. ಏನಾದರೂ ಪ್ರಶ್ನೆಗಳಿದ್ದರೆ, ಅವರನ್ನು ದಯವಿಟ್ಟು ಈ ವಿಳಾಸದಲ್ಲಿ ಸಂಪರ್ಕಿಸಿ : columns@whiteswanfoundation.org

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org