ಹದಿಹರೆಯದವರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ

ವ್ಯಕ್ತಿಯ ಮಾನಸಿಕ ಆರೋಗ್ಯದ ಬೆಳವಣಿಗೆಯಲ್ಲಿ ಹದಿಹರೆಯದ ಅವಧಿಯ ಪಾತ್ರದ ಬಗ್ಗೆ ತಿಳಿಯಿರಿ

ಹದಿಹರೆಯದ ಅವಧಿಯು ಏರಿಳಿತದಿಂದ ಕೂಡಿರುತ್ತದೆ. ವ್ಯಕ್ತಿಯು ಬಾಲ್ಯದ ಸುರಕ್ಷಿತ ಹಿಡಿತದಿಂದ ಪ್ರೌಢಿಮೆಯ ಕಡೆಗೆ ಹೆಜ್ಜೆಯಿಡುತ್ತಾನೆ. ಈ ಹಂತದಲ್ಲಿ ವ್ಯಕ್ತಿಯು ತನ್ನ ನೂತನ ಭಾವನೆಗಳು, ದೈಹಿಕ ಬದಲಾವಣೆಗಳು ಮತ್ತು ಪಾಲಕರು, ಸ್ನೇಹಿತರು ಸೇರಿದಂತೆ ಉಳಿದ ಪ್ರಮುಖ ಸಂಬಂಧಗಳಲ್ಲಿ ಉಂಟಾಗುವ ಬದಲಾವಣೆಗಳ ಆಧಾರದ ಮೇಲೆ ತನ್ನದೇ ಆದ ಒಂದು ಹೊಸ ಗುರುತನ್ನು ಹುಡುಕಿಕೊಳ್ಳುತ್ತಾನೆ.

ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡಗಳ ಜೊತೆಗೆ ಉಂಟಾಗುವ ಪ್ರಮುಖ ಬದಲಾವಣೆಗಳ ಕಾರಣದಿಂದ ಇದು ಹದಿಹರೆಯದವರಿಗೆ ಪ್ರಮುಖ ಅವಧಿ. ಅಲ್ಲದೇ ಪಾಲಕರೂ ಕೂಡ ತಮ್ಮ ಹದಿಹರೆಯದ ಮಕ್ಕಳೆಡೆಗೆ ಗಮನ ನೀಡಿ ಅವರ ಮನೋವಿಕಾಸನದ ಬಗ್ಗೆ ಕಾಳಜಿ ವಹಿಸಬೇಕು.

ಹದಿಹರೆಯದವರ ವ್ಯಕ್ತಿತ್ವವು ಈ ಹಂತದಲ್ಲಿಯೇ ರೂಪುಗೊಳ್ಳುತ್ತದೆ. ಅವರ ಮೆದುಳಿನ ಭಾಗಗಳು ವೃದ್ಧಿಯಾಗುವ ಸಮಯದಲ್ಲಿ ಅವರಲ್ಲಿ ನಿರ್ಧಾರ ತೆಗೆದುಕೊಳ್ಳುವ, ಸಮಯ ನಿರ್ವಹಣೆ ಮಾಡುವ, ಗುರಿಗಳನ್ನು ಯೋಜಿಸಿಕೊಳ್ಳುವ ಮತ್ತು ಸಮಸ್ಯೆಯ ಪರಿಹಾಕ್ಕೆ ಸಂಬಂಧಪಟ್ಟಂತೆ ಗೊಂದಲ ಉಂಟಾಗುವುದು ಸಹಜ.

“ಹದಿಹರೆಯದಲ್ಲಿ ಕಂಡುಬರುವ ಸಾಮಾನ್ಯ ಸಂಗತಿ ಎಂದರೆ ವ್ಯಸನಕ್ಕೆ ಒಳಗಾಗುವುದು, ಲೈಂಗಿಕತೆಗೆ ಸಂಬಂಧಿಸಿದ ವಿಷಯ, ನಿದ್ರೆಯ ಸಮಸ್ಯೆ, ಅನಾರೋಗ್ಯಕರ ಆಹಾರ ಸೇವನೆ ಮತ್ತು ತಂತ್ರಜ್ಞಾನದ ವ್ಯಸನ. ಒಂದು ವೇಳೆ ಈ ಅಭ್ಯಾಸಗಳು ಸಮಸ್ಯೆಯಾಗಿ ಮಾರ್ಪಟ್ಟರೆ ಅವರ ಸಾಮಾಜಿಕ ಮತ್ತು ವೃತ್ತಿಪರ ಜೀವನದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದಕ್ಕೆ ಅವರು ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯುವುದು ಉತ್ತಮ,” ಎನ್ನುತ್ತಾರೆ ಬೆಂಗಳೂರಿನಲ್ಲಿ ಮಕ್ಕಳು ಮತ್ತು ಹದಿಹರೆಯದವರಿಗೆ ಸೈಕೋಥೆರಪಿ ಚಿಕಿತ್ಸೆ ನೀಡುವ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ ಪ್ರಿಯಾ ಕಾಯಸ್ಥ ಆನಂದ್.

ಡಾ ಕಾಯಸ್ಥ ಅವರ ಪ್ರಕಾರ ಹದಿಹರೆಯದವರ ಮಾನಸಿಕ ಯೋಗಕ್ಷೇಮಕ್ಕೆ ಸ್ವ-ಪ್ರೋತ್ಸಾಹ ಮತ್ತು ಸ್ವ-ಶಿಸ್ತನ ಅಗತ್ಯವಿರುತ್ತದೆ. ಇವುಗಳನ್ನು ಆಂತರಿಕ ಸಂತೃಪ್ತಿ ಮತ್ತು ಸಮಾಧಾನದಿಂದ ಮಾತ್ರ ರೂಢಿಸಿಕೊಳ್ಳಲು ಸಾಧ್ಯ.

ಹದಿಹರೆಯದವರ ಅಗತ್ಯಗಳು:

  • ಬೆಳೆಯುತ್ತಿರುವ ವ್ಯಕ್ತಿತ್ವವನ್ನು ಗುರುತಿಸಿ ಗೌರವದಿಂದ ನಡೆಸಿಕೊಳ್ಳಬೇಕು.

  • ಅವರ ಯೋಚನೆ ಮತ್ತು ಭಾವನೆಗಳಿಗೆ ಮಾನ್ಯತೆ ನೀಡಬೇಕು.

  • ಪರಾನುಭೂತಿಯಿಂದ ಅವರನ್ನು ಅರ್ಥ ಮಾಡಿಕೊಳ್ಳಬೇಕು.

  • ಹಿರಿಯರು ಮಾರ್ಗದರ್ಶನ ನೀಡಬೇಕು

  • ಅವರ ಭಾವನೆಗಳಿಗೆ ಆದ್ಯತೆ ನೀಡಬೇಕು

ಈ ಹಂತವನ್ನು ನಿಭಾಯಿಸಲು ಪಾಲಕರು ಹೇಗೆ ಸಹಾಯ ಮಾಡಬಹುದು?

  • ಪಾಲಕರ ವ್ಯಕ್ತಿತ್ವವು ಹದಿಹರೆಯದವರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆದರ್ಶಪ್ರಾಯರಾಗಿರುವುದು ಅಗತ್ಯ, ಅಂದರೆ ಭಾವನೆಗಳನ್ನು ವಿಮರ್ಶಿಸಿ ಸ್ಪಷ್ಟವಾಗಿ ಮಾತನಾಡಬೇಕು.

  • ಹದಿಹರೆಯದವರೊಂದಿಗೆ ಮುಕ್ತವಾಗಿ ಮಾತನಾಡಬೇಕು ಮತ್ತು ಅವರಿಗೆ ಬೆಂಬಲ ನೀಡಬೇಕು

  • ಸ್ವ-ನಿಯಂತ್ರಣ ಪಾಲಿಸುವಂತೆ ಪ್ರೋತ್ಸಾಹಿಸಬೇಕು

  • ಹದಿಹರೆಯದವರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರ ಒಪ್ಪಿಗೆಯನ್ನು ಪಡೆಯಬೇಕು

  • ವಿರಾಮದ ಚಟುವಟಿಕೆಗಳ ಮೂಲಕ ಕುಟುಂಬದವರು ಒಟ್ಟಾಗಿ ಸಮಯ ಕಳೆಯುವುದು.

  • ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಮಾರ್ಗದರ್ಶನ ನೀಡಿ ಮಕ್ಕಳು ತಮ್ಮ ಬಗ್ಗೆ ಯೋಚಿಸಲು ಪ್ರೇರಿಪಿಸುವುದು.

  • ಹೋಲಿಕೆಗಳನ್ನು ಮಾಡದಿರುವುದು

ಹದಿಹರೆಯದವರು ಈ ಅವಧಿಯನ್ನು ಹೀಗೆ ನಿಭಾಯಿಸಬಹುದು:

  • ಸ್ವ-ಪ್ರೋತ್ಸಾಹ ಮತ್ತ ಸ್ವ-ಶಿಸ್ತನ್ನು ರೂಢಿಸಿಕೊಳ್ಳಬೇಕು

  • ವಿಶ್ವಾಸಪಾತ್ರ ವಯಸ್ಕರಲ್ಲಿ ಭಾವನೆಗಳನ್ನು ಹಂಚಿಕೊಳ್ಳಿ 

  • ನಿದ್ರೆಯ ಕ್ರಮದ ಬಗ್ಗೆ ಕಾಳಜಿ ವಹಿಸಿ, ಪೌಷ್ಟಿಕ ಆಹಾರ ಸೇವಿಸಿ

  • ನಿಯಮಿತ ವೇಳಾ ಪಟ್ಟಿಯನ್ನು ಅನುಸರಿಸಿ

  • ಐದು ವರ್ಷಗಳ ನಂತರ ನಿಮ್ಮನ್ನು ಯಾವ ಸ್ಥಾನದಲ್ಲಿ ನೋಡಲು ಬಯಸುತ್ತೀರಿ ಎಂಬ ಬಗ್ಗೆ ಯೋಚಿಸಿ ಜೀವನದ ಗುರಿಗಳನ್ನು ನಿರ್ಮಿಸಿಕೊಳ್ಳಿ

ಪ್ರತಿಯೊಬ್ಬ ಹದಿಹರೆಯದ ವ್ಯಕ್ತಿ ವಿಭಿನ್ನವಾಗಿದ್ದು, ಅವರ ಮನೋವಿಕಾಸನ ವಿವಿಧ ಹಂತಗಳಲ್ಲಿ ಬೆಳೆಯುತ್ತದೆ. ಪಾಕರು, ಶಿಕ್ಷಕರು ಮತ್ತು ಸ್ವತಃ ಹದಿಹರೆಯದವರು ಕೇವಲ ಫಲಿತಾಂಶದ ಬಗ್ಗೆ ಯೋಚಿಸದೇ ಜೀವನದ ಈ ಪ್ರಮುಖ ಹಂತದಲ್ಲಿ ಉಂಟಾಗುವ ಪ್ರಕ್ರಿಯೆಗಳ ಬಗ್ಗೆ ಗಮನ ನೀಡಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org