ಹದಿಹರೆಯ ವಯಸ್ಸು - ಪೋಷಕರಿಗೆ ಕಿವಿಮಾತು

ನನ್ನ ಮಗಳಿಗೆ ಆಗಲೇ 17 ವರ್ಷ. ಎಷ್ಟು ಬೇಗ ಬಾಲ್ಯದ ದಿನಗಳು ಕಳೆದು ಹೋದವು ಎಂದು ಅಚ್ಚರಿಯಾಗುತ್ತದೆ. ಅವಳು ವಯಸ್ಕಳಾಗುವಾಗ ಮುಂಚೆಯೇ ಹದಿಹರೆಯದವರ ಮನಸ್ಸನ್ನು ಅರಿಯುವ ಅಧ್ಯಯನದಲ್ಲಿ  ನಾನು  ತೊಡಗಿದ್ದೆ.  ಕೆಲವು ಪೋಷಕರು ಹದಿಹರೆಯದ ವಯಸ್ಸು ಸಮಸ್ಯೆಯಿಂದ ತುಂಬಿದ ವಯಸ್ಸು ಎಂದು ಏಕೆ ಭಾವಿಸುತ್ತಾರೆ? ಈ ವಿಷಯದ ಬಗ್ಗೆ ಚರ್ಚಿಸೋಣ.  

ಹದಿಹರೆಯ ವಯಸ್ಸು ಒಂದು ವಿಸ್ಮಯ ತುಂಬಿದ ಹಂತ.  ಈ ಹಂತದಲ್ಲಿ ಮಗು ಮತ್ತು ಪೋಷಕರಿಬ್ಬರೂ ಬೆಳೆಯುತ್ತಾರೆ. ಈ ಹಂತವನ್ನು ಸರಿಯಾಗಿ ನಿರ್ವಹಿಸಿದರೆ, ವಯಸ್ಕರಾಗಿ ಮಕ್ಕಳು ಸಾಕಾರಾತ್ಮವಾಗಿ ಬದುಕಿನಲ್ಲಿ ಸಾಗುತ್ತಾರೆ. ಶಾರೀರಿಕ ಬದಲಾವಣೆಯೊಂದಿಗೆ ಅವರ ಆಲೋಚನೆ ಹಾಗೂ ಅವರ ವ್ಯಕ್ತಿತ್ವದಲ್ಲಿ ಬದಲಾವಣೆ ಯಾಗುತ್ತದೆ ಎಂದು ಪೋಷಕರಾದ ನಾವು ಅರಿಯಬೇಕು.
ಶರೀರಿದಲ್ಲಿ ಉಂಟಾಗುವ ಬದಲಾವಣೆಗಳು ಸ್ಪಷ್ಟವಾಗಿ ಕಾಣುತ್ತವೆ. ಹಾಗೆಯೇ ಹದಿಹರೆಯದಲ್ಲಿ ಮೆದುಳಿನ ಬೆಳವಣಿಗೆ ತ್ವರಿತಗಾಗಿ ನಡೆಯುತ್ತದೆ.  ಈ ಸಮಯದಲ್ಲಿ ಭಾವನೆ, ಆಲೋಚನೆ, ಅರಿವು,ಸಂವೇದನೆ ಎಂಬ ಅಂಶಗಳನ್ನು ಕಂಟ್ರೋಲ್ ಮಾಡುವ ಮೆದುಳಿನ ಭಾಗ ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಆದರೆ ಮೆದುಳಿನ ಇತರೆ ಭಾಗಗಳಲ್ಲಿ ಹೆಚ್ಚಿನ ಹಠಾತ್ ಬದಲಾವಣೆ ಕಾಣುತ್ತದೆ.
ಹದಿಹರೆಯದ ಪ್ರಾರಂಭ ಹಂತದಲ್ಲಿ ಅವರು ಮನೆ ಮತ್ತು ಶಾಲೆಯಲ್ಲಿ ತಮ್ಮ ನಿರ್ಧಾರದ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಅವರು ದೊಡ್ಡವರ ಹತೋಟಿಯನ್ನು , ಸಮಾಜದ ನಿಯಮಗಳನ್ನು ಪ್ರಶ್ನಿಸಲಾರಂಭಿಸುತ್ತಾರೆ. ಯಾವ ಆಟ ಆಡಬೇಕು, ಯಾರ ಗುಂಪನ್ನು ಸೇರಬೇಕು, ತಂದೆ ತಾಯಿ ಹೇಳಿದ ಮಾತನ್ನು ಪ್ರಶ್ನಿಸಿ ಅದಕ್ಕೆ ವಿರುದ್ಧವಾಗಿ ಹೇಳುವುದು ಅಥವಾ ವರ್ತಿಸುವುದು ಸಹಜ.

ಹದಿಹರೆಯದ ಮಧ್ಯ ಭಾಗದಲ್ಲಿ ಅವರು ಹೆಚ್ಚು ತಾತ್ವಿಕ ವಿಷಯಗಳ ಬಗ್ಗೆ,  ಭವಿಷ್ಯದ ಬಗ್ಗೆ ಗಮನಹರಿಸುತ್ತಾರೆ. ಹೆಚ್ಚು ಪ್ರಶ್ನೆ ಮಾಡುತ್ತಾರೆ ಮತ್ತು ವಿಶ್ಲೇಷಿಸುತ್ತಾರೆ.  ತಮ್ಮದೇ ಬೇಕು ಬೇಡಗಳು, ನೈತಿಕ ಮಿತಿಗಳನ್ನು ರೂಪಿಸುತ್ತಾರೆ, ಹೊಸ ಹೊಸ ಸಾಧ್ಯತೆಗಳ ಬಗ್ಗೆ ಆಲೋಚಿಸುತ್ತಾರೆ. ತಮ್ಮತನದ ಕುರಿತು ಯೋಚಿಸಿ ಅದನ್ನು ರೂಪಿಸಲು ಆರಂಭಿಸುತ್ತಾರೆ. ದೀರ್ಘಕಾಲಿಕ ಯೋಜನೆಗಳು ಮತ್ತು ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ.

ಕೊನೆ ಹಂತದಲ್ಲಿರುವ  ಹದಿಹರೆಯದವರು ನ್ಯಾಯ ಮತ್ತು ರಾಜಕೀಯ ವಿಷಯಗಳ ಬಗ್ಗೆ ಹೆಚ್ಚು ಆಲೋಚಿಸುತ್ತಾರೆ. ತಮ್ಮ ಬಗ್ಗೆ ಕಡಿಮೆ ಯೋಚಿಸಲು ಆರಂಭಿಸುತ್ತಾರೆ. ಆದರ್ಶವಾದಿ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾರೆ. ಬಹಳ ಚರ್ಚೆ ಮಾಡುತ್ತಾರೆ. ವಿರುದ್ಧವಾದ ಅಭಿಪ್ರಾಯಗಳನ್ನು ಸಹಿಸುವುದಿಲ್ಲ. ತಮ್ಮ ವೃತ್ತಿ ನಿರ್ಧಾರ ಮತ್ತು ತಮ್ಮ ಬದುಕನ್ನು ರೂಪಿಸುವುದರ ಬಗ್ಗೆ ಯೋಚಿಸುತ್ತಾರೆ.

ಆತ್ಮ ವಿಮರ್ಶೆ ಮಾಡುತ್ತಾರೆ ಮತ್ತು  ತಮ್ಮ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಇದರಿಂದಾಗಿ ಅವರು ಸ್ವಾರ್ಥಿಗಳಂತೆ ಅಥವಾ ತಮ್ಮೊಳಗೆ ತಲ್ಲೀನರಾಗುವುದು ಕಂಡುಬರುತ್ತದೆ. ಅವರು ಸಮಸ್ಯೆಯನ್ನು ವಿವಿಧ ಆಯಾಮಗಳಿಂದ ನೋಡಲಾರಂಭಿಸುತ್ತಾರೆ. ಎಲ್ಲ ವಿಷಯವನ್ನು ಸತ್ಯ ಎಂದು ಒಪ್ಪುವುದಿಲ್ಲ. ತಮ್ಮ ಪೋಷಕರ ಮೌಲ್ಯಗಳನ್ನು ಮತ್ತು ಅಧಿಕಾರವನ್ನು ಪ್ರಶ್ನಿಸುತ್ತಾರೆ. ಆಗಲೇ ಪೋಷಕರಿಗೆ ಮಕ್ಕಳು ತಮ್ಮ ಮಾತು ಕೇಳುತ್ತಿಲ್ಲ ಎಂಬ ಭಾವನೆ ಬರುತ್ತದೆ.

ನಾನು ಯಾರು ಎಂಬ ದೊಡ್ಡ ಪ್ರಶ್ನೆ ಅವರಲ್ಲಿ ಬಂದಾಗ ಹದಿಹರೆಯದವರು  ಐಡೆಂಟಿಟಿಗಾಗಿ ಹುಡುಕುತ್ತಾರೆ ಎಂದರ್ಥ. ಇದು ಈ ಹಂತದ ದೊಡ್ಡ ಭಾಗ. ಇಲ್ಲಿ ಯಾವುದೇ ಗೊಂದಲವಿಲ್ಲದೆ ಸ್ಪಷ್ಟವಾಗಿ  ತನ್ನ ಐಡೆಂಟಿಟಿಯನ್ನು  ಅರಿಯುವುದು  ಮುಖ್ಯ ಗುರಿಯಾಗಿರುತ್ತದೆ. ಈ ಸಮಯದಲ್ಲಿ ತಂದೆ ತಾಯಿ ಮಕ್ಕಳು ತಮ್ಮಿಂದ ಕಲಿಯುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಸ್ನೇಹಿತರು, ಶಾಲೆ, ನೆರೆಹೊರೆಯವರು, ಸಮುದಾಯ, ಮಾಧ್ಯಮಗಳಿಂದ ಕೂಡ ಕಲಿತು ಪ್ರಭಾವಿತರಾಗುತ್ತಾರೆ.

ಈ ಹಂತವು ಸುಗಮವಾಗಿ ಪೂರೈಕೆಯಾಗಬೇಕೆಂದರೆ ಅವರು ಎರಡು ಹಂತಗಳನ್ನು ದಾಟಬೇಕು. ಮೊದಲನೆಯದು, ವಿಷಯಗಳ ಬಗ್ಗೆ ಪ್ರಶ್ನಿಸುವುದು ಮತ್ತು ತಮಗೆ ಹೊಂದಿಕೊಳ್ಳದ ಬಾಲ್ಯದ ನಂಬಿಕೆಗಳಿಂದ ಹೊರಬರಬೇಕು. ನಂತರ ತಾವು ಅರಿತು ಒಪ್ಪಿಕೊಳ್ಳುವ ಸಿದ್ದಾಂತಗಳನ್ನು ಕಂಡುಕೊಳ್ಳಬೇಕು. ಎರಡನೆಯದೆಂದರೆ, ತಾವು ಆರಿಸಿರುವ ನಂಬಿಕೆಗಳಿಗೆ ಬದ್ಧರಾಗಬೇಕು.

ಈ ಅವಧಿಯಲ್ಲಿ ತಮ್ಮನ್ನು ಭಿನ್ನ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಅನೇಕ ವಿಷಯಗಳ ಬಗ್ಗೆ ವಿಚಾರಣೆ ಮಾಡುತ್ತಾರೆ.  ಇದರೊಂದಿಗೆ ತಮ್ಮದೇ ಆದ ಸ್ವಂತ ಐಡೆಂಟಿಟೀ ಹುಡುಕುತ್ತಾರೆ. ಇಲ್ಲಿ ದಿಢೀರ್ ಬದಲಾವಣೆ ಮತ್ತು ಅನಿಶ್ಚಿತತೆ, ತನ್ನ ಹಿಂದಿನ  ಅನುಭವಗಳು, ಇಂದಿನ ಸವಾಲುಗಳು ಮತ್ತು ಸಮಾಜದ ನಿರೀಕ್ಷೆ, ಎಲ್ಲದರ ಬಗ್ಗೆ ಯೋಚಿಸುತ್ತಾರೆ.

ಹದಿಹರೆಯದವರು ಆತ್ಮವಿಶ್ವಾಸ ಹೊಂದಲು ಮತ್ತು ತಾವು ಆರಿಸಿದ ಐಡೆಂಟಿಟಿಯನ್ನು ಇತರರು ಗುರುತಿಸಬೇಕು ಮತ್ತು ಒಪ್ಪಬೇಕು ಎಂದು ಭಾವಿಸುತ್ತಾರೆ.  ಆದ್ದರಿಂದಲೇ ಈ ಹಂತದಲ್ಲಿ  ಆದರ್ಶಗಳ ತೀವ್ರ ಹುಡುಕಾಟದಲ್ಲಿ ತೊಡಗುತ್ತಾರೆ.  ತಮ್ಮ ಒಡನಾಡಿಗಳಲ್ಲಿ ಹುಡುಕುತ್ತಾರೆ. ಅಥವಾ ರೋಲ್ ಮಾಡೆಲ್ ಹುಡುಕುತ್ತಾರೆ ಮತ್ತು ಅವರಿಂದ ಪ್ರಭಾವಿತರಾಗುತ್ತಾರೆ. ಹಾಗೆಯೇ ಸಾಂಪ್ರದಾಯಿಕ ಹತೋಟಿಯ ವಿರುದ್ಧ ಸೆಟೆದು ನಿಲ್ಲುತ್ತಾರೆ..

ತಮಗೂ ಪೋಷಕರಿಗೂ ತನಗೂ ವ್ಯತ್ಯಾಸವಿದೆ ಎಂಬ ಅರಿವು ಮಗುವಿಗೆ ತಾನು ಬೆಳೆದಂತೆಲ್ಲ ತಿಳಿಯುತ್ತಾ ಹೋಗುತ್ತದೆ . ಹದಿಹರೆಯದವರಾಗಿ ಪೋಷಕ ಮೂಲಕ ಗುರುತಿಸುವುದನ್ನು ಇಷ್ಟಪಡುವುದಿಲ್ಲ. ತಮ್ಮ ಪೋಷಕರ ಜೊತೆಗೆ ಕಾಣುವುದನ್ನೂ ಇಷ್ಟಪಡದಿರಬಹುದು. ಪೋಷಕರು ಏನೇ ಹೇಳಿದರೂ/ಮಾಡಿದರೂ ಮುಜುಗರ ಪಡಬಹುದು.  ಈ ರೀತಿಯ ವರ್ತನೆ (ತಿರಸ್ಕಾರ ಕೂಡ ಆಗಿರಬಹುದು) ಪೋಷಕರಿಗೆ ಕೆಲವೊಮ್ಮೆ ನೋವುಂಟು ಮಾಡಬಹುದು. ಆದರೆ ಇದು ಎಲ್ಲ ಹದಿವಯಸ್ಕರು ಮತ್ತು ಪೋಷಕರ ನಡುವೆ ನಡೆಯುವ ಸಹಜ ಪ್ರಕ್ರಿಯೆ ಎಂದು ನಾವು ತಿಳಿಯಬೇಕು.

ತಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಯುವಕರಾಗಿ ಸಾಧನೆ ಮಾಡಲು ನಾವು ಅವರಿಗೆ ಬೆಂಬಲ ನೀಡಬೇಕು. ತಮ್ಮ ಬೆಳವಣಿಗೆ ಸಮಯದಲ್ಲಿ  ಹದಿಹರೆಯದವರು ಎದುರಿಸುವ ಅತಿ ಮುಖ್ಯ ಸವಾಲು ಐಡೆಂಟಿಟಿ ಕ್ರೈಸಿಸ್.  ಇದು ತನ್ನ ಬಗ್ಗೆ ಶಂಕೆ, ತನಗಾಗಿ ಸಮಯ ಬೇಕೆನಿಸುವುದು, ಹುಸಿಧೈರ್ಯ, ನಾನು ಎಲ್ಲ ಸಾಧಿಸಬಹುದು ಎಂಬ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಒರಟುತನ, ಅಹಂಕಾರ ಮತ್ತು ಹಕ್ಕುಸಾಧಿಸುವ ಗುಣಗಳೊಂದಿಗೆ ಕಾಣುತ್ತದೆ.

ಪೋಷಕರಾದ ನಾವು ಈ ಸಹಜವಾದ ಪ್ರಕ್ರಿಯೆಗಳ ಬಗ್ಗೆ ಹೆಚ್ಚು ತಿಳಿದಾಗ, ಇದರ ಮೇಲೆ ಕ್ರಮೇಣವಾಗಿ ನಿಯಂತ್ರಣ ಹೊಂದಲು ಸಹಾಯ ಮಾಡುತ್ತೇವೆ. ನಾವೇ ಏನೇ ಮಾಡಿದರೂ ಅವರಿಗೆ ಮುಜುಗರವಾಗುತ್ತದೆ, ನಮಗಿಂತ ಸ್ನೇಹಿತರು ಹೆಚ್ಚು;  ಯಾವಾಗಲೂ ಇಡೀ ದಿನ ಅವರ ಸೇವೆ ಮಾಡಲು ನಾವಿರಬೇಕು ಆದರೆ ಬೇರೆ ವಿಷಯದಲ್ಲಿ ತಲೆದೂರಬಾರದು, ಗಂಡು ಮಕ್ಕಳು ಹೆಣ್ಣು ಮಕ್ಕಳ ಬಗ್ಗೆ ಆಸಕ್ತಿ ತೋರಿಸುವುದು (ಹಾಗೆಯೇ ಹೆಣ್ಣು ಮಕ್ಕಳು ಗಂಡು ಹುಡುಗರ ಬಗ್ಗೆ ಆಸಕ್ತಿ), ನಾವು ಹೇಳುವ ಪ್ರತಿಯೊಂದು ವಿಚಾರ ಅವರು ತಳ್ಳಿಹಾಕುವುದು, ಇವೆಲ್ಲವನ್ನು ನಾವು ಅಂಗೀಕರಿಸಬೇಕು.  

ನಮ್ಮ ಅಧಿಕಾರವನ್ನು ಪ್ರಶ್ನೆಮಾಡುತ್ತಿದ್ದಾರೆಂದು ಭಾವಿಸುವ ಬದಲು, ಇದು ‘ಸಾಮಾನ್ಯ’ , ‘ಸಹಜ’ ಎಂದು ಅರಿತು, ಒಪ್ಪಿ, ಆ ಹರಿವಿನ ಜೊತೆ ಸಾಗಿದರೆ  ನಮಗೇ ನೆಮ್ಮದಿ!

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org