ಹದಿಹರೆಯದ ಮಗಳ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಮಗಳ ಮನಸ್ಥಿತಿಯನ್ನು ತಿಳಿದುಕೊಂಡರೆ ಅವಳ ಮಾನಸಿಕ ಆರೋಗ್ಯವನ್ನು ಕಾಪಾಡಬಹುದು

ಯೌವನದ ದಿನಗಳೆಂದರೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅದೊಂದು ಬದಲಾವಣೆಗಳ ಹಂತ. ಈ ಅವಧಿಯಲ್ಲಿ ದೇಹ, ಭಾವನೆಗಳು, ವರ್ತನೆ, ನಡವಳಿಕೆ, ಮೌಲ್ಯಗಳು, ಆಸಕ್ತಿಗಳು, ಬೌದ್ಧಿಕತೆ, ಸಂಬಂಧಗಳು – ಇವೆಲ್ಲದರಲ್ಲೂ ಬದಲಾವಣೆ ಉಂಟಾಗುತ್ತದೆ. ಈ ಎಲ್ಲ ಬದಲಾವಣೆಗಳ ನಡುವೆಯೇ ನಿಮ್ಮ ಮಗಳು ತನ್ನನ್ನು ನಿರೂಪಿಸಿಕೊಳ್ಳಲು ಹೆಣಗುತ್ತಾಳೆ. ತಾಯ್ತಂದೆಯರು ಮತ್ತು ಕುಟುಂಬದ ಸದಸ್ಯರೊಂದಿಗೆ ತನ್ನ ಸಂಬಂಧ, ಶಿಕ್ಷಕರೊಂದಿಗಿನ ಒಡನಾಟ, ಪೋಷಕರು ಮತ್ತು ಶಿಕ್ಷಕರು ಹೇರುವ ವಿದ್ಯಾಭ್ಯಾಸದ ಒತ್ತಡಗಳು, ಮಾಧ್ಯಮ ಇವೆಲ್ಲವೂ ಅವಳ ಮಾನಸಿಕತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.

ಹೀಗೆ ಹದಿಹರೆಯದ ದಿನಗಳಲ್ಲಿ ಹೆಣ್ಣುಮಕ್ಕಳ ಮನಸ್ಥಿತಿಯ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳನ್ನಿಲ್ಲಿ ಕೊಡಲಾಗಿದೆ:

  • ಆತ್ಮವಿಶ್ವಾಸ: ಯೌವನದ ಹುಡುಗಿಯ ಆತ್ಮವಿಶ್ವಾಸವು ಬಹುತೇಕವಾಗಿ ಅವಳ ರೂಪವನ್ನು ಅವಲಂಬಿಸಿರುತ್ತದೆ. ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ವಿಷಯದಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ತಾವು ಹೇಗೆ ಕಾಣುತ್ತೇವೆ, ಇತರರು ನಮ್ಮನ್ನು ಹೇಗೆ ನೋಡುತ್ತಾರೆ ಅನ್ನುವುದರ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ದೇಹದ ಬೆಳವಣಿಗೆ, ಹಾರ್ಮೋನ್ ಏರುಪೇರು, ಆಪ್ತವಲಯದ ಒಡನಾಟ, ಪೋಷಕರು ಮತ್ತಿತರ ಆಪ್ತ ವಲಯದ ಒಡನಾಟಗಳು ಹರೆಯದ ಹೆಣ್ಣುಮಕ್ಕಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ. ರೂಪ ಮತ್ತು ದೇಹದ ತೂಕಕ್ಕೆ ಸಂಬಂಧಿಸಿ ಉಂಟಾದ ಕೀಳರಿಮೆಯನ್ನು ಸಕಾಲದಲ್ಲಿ ಗುರುತಿಸಿ ಸರಿಪಡಿಸದೆ ಹೋದರೆ, ಅದು ತೀವ್ರ ತರವಾದ ಭಾವನಾತ್ಮಕ ಯಾತನೆಗೆ ತಳ್ಳುತ್ತದೆ.
  • ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಉದ್ಯೋಗದ ಕುರಿತು ಕಳವಳ: ಹರೆಯದ ಹುಡುಗಿಯ ಗುರುತಿಗೆ ಮಹತ್ವದ ಗರಿ ಎಂದರೆ, ಆಕೆಯ ಶೈಕ್ಷಣಿಕ ಕಾರ್ಯಕ್ಷಮತೆ. ಆದರೆ ಪೋಷಕರಿಂದಾಗಲೀ ಶಿಕ್ಷಕರಿಂದಾಗಲೀ ಖುದ್ದು ತನ್ನಿಂದಲೇ ಆಗಲೀ ಮಿತಿಮೀರಿದ ಶೈಕ್ಷಣಿಕ ಒತ್ತಡ ಹೇರಿಕೆಯಾದರೆ, ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದಾಗಿ ಅವಳ ವಿದ್ಯಾಭ್ಯಾಸವೂ ಕುಂಟ ತೊಡಗುತ್ತದೆ. ಒತ್ತಡ ಮತ್ತು ನಿರೀಕ್ಷೆಗಳ ಭಾರಕ್ಕೆ ಹುಡುಗಿ ಕುಗ್ಗಿಹೋಗುತ್ತಾಳೆ. ಇದು ಆಕೆಯಲ್ಲಿ ಉದ್ವೇಗವನ್ನು ಉಂಟುಮಾಡುವ ಅಪಾಯವಿರುತ್ತದೆ. ಆಕೆಯು ಶಿಕ್ಷಣದಲ್ಲಿ ಹಿಂದುಳಿದದ್ದೇ ಆದರೆ, ಅದು ಆಕೆಯಲ್ಲಿ ಉದ್ಯೋಗದ ಚಿಂತೆಗೆ ಕಾರಣವಾಗುತ್ತದೆ.
  • ಇತರ ಪುರುಷರೊಂದಿಗಿನ ಆಕೆಯ ಒಡನಾಟ: ತಮ್ಮ ಲೈಂಗಿಕ ಗುರುತಿನ ಬಗ್ಗೆ ಗೊಂದಲಗಳು ಮೂಡಿದರೆ, ಅದು ಕೀಳರಿಮೆಯಾಗಿ ಮತ್ತಷ್ಟು ಭಾರವನ್ನು ಹೇರುತ್ತದೆ. ಒಮ್ಮೆ ಒಬ್ಬಳು ಹುಡುಗಿ ತನಗೆ ಆತ್ಮಹತ್ಯೆಯ ಯೋಚನೆಗಳು ಮೂಡುತ್ತಿವೆ ಎಂದು ಆಪ್ತ ಸಮಾಲೋಚಕರನ್ನು ಭೇಟಿ ಮಾಡಿದಳು. ಆಕೆ ತನ್ನ ಲಿಂಗ ಹಾಗೂ ಲೈಂಗಿಕ ಗುರುತಿನ ಬಗ್ಗೆ ಗೊಂದಲಗೊಂಡಿದ್ದು, ಅದನ್ನು ಇಂಟರ್ನೆಟ್’ನಲ್ಲಿ ಓದಿ ತಿಳಿದುಕೊಂಡಿದ್ದಳು. ಅದನ್ನು ಆಕೆ ತನ್ನ ಪೋಷಕರ ಬಳಿ ಹೇಳಿಕೊಳ್ಳುವ ಧೈರ್ಯವನ್ನೂ ಮಾಡಿದ್ದಳು. ಆದರೆ ಆಕೆಯ ತಂದೆ ಅದನ್ನು ಒಪ್ಪದೆ, ಆಕೆ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾಳೆ ಎಂದು ಭಾವಿಸಿದ್ದರು. ಇದು ಆಕೆಯಲ್ಲಿ ಪದೇಪದೇ ಆತ್ಮಹತ್ಯೆಯ ಯೋಚನೆ ಮೂಡಿಸುತ್ತಿತ್ತು. ಆದ್ದರಿಂದ, ಹದಿಹರೆಯದವರಲ್ಲಿ ಉಂಟಾಗುವ ಭಾವನೆಗಳನ್ನು ಒಪ್ಪಿಕೊಂಡು ಅವರು ನಿರಾಳವಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
  •  ಸ್ವಾತಂತ್ರ್ಯ ಮತ್ತು ಗುರುತಿಸುವಿಕೆ : ತಮ್ಮ ಸ್ವಾತಂತ್ರ್ಯವನ್ನು ಅನುಭವಿಸುವುದರ ಜೊತೆಯಲ್ಲೇ ಹರೆಯದ ಹುಡುಗಿಯರು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳುವ ಅವಕಾಶವನ್ನೂ ಬಯಸುತ್ತಾರೆ. ಪೋಷಕರು ತಮ್ಮ ಮೌಲ್ಯಗಳನ್ನು, ಆಲೋಚನೆಗಳನ್ನು ಹಾಗೂ ಅಭಿಪ್ರಾಯಗಳನ್ನು ಮಗಳ ಮೇಲೆ ಹೇರಲು ಹೋದರೆ, ಆ ಹದಿಹರೆಯದ ಹುಡುಗಿಯು ಅಂತರ ಕಾಯ್ದುಕೊಳ್ಳಲು ತೊಡಗಿ ತನ್ನಿಂದ ತಾನೇ ದೂರವಾಗುವ ಸಾಧ್ಯತೆಗಳು ಇರುತ್ತವೆ. ಇಂಥ ಸಂದರ್ಭದಲ್ಲಿ ಪೋಷಕರು ಮಕ್ಕಳ ಅವಕಾಶವನ್ನು ಗೌರವಿಸುವುದು ಅತ್ಯಗತ್ಯ.  
  •  ಪರಸ್ಪರ ಸಂಬಂಧಗಳಲ್ಲಿ ಬದಲಾವಣೆ : ಯೌವನದ ಹುಡುಗಿಯರು ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ. ಅದರಲ್ಲೂ ತಮ್ಮನ್ನು ಮೆಚ್ಚುವವರ ಜೊತೆಗಿನ ಒಡನಾಟಕ್ಕೆ ವಿಶೇಷ ಕಾಳಜಿ ತೋರುತ್ತಾರೆ. ಇದರಿಂದ ಅವರು ತಮ್ಮ ಪ್ರಾಮುಖ್ಯತೆಯ ಖುಷಿಯನ್ನು ಅನುಭವಿಸುತ್ತಾರೆ. ಇದಕ್ಕೆ ರಾಣಿಜೇನಿನ ಬದುಕನ್ನು ನಿದರ್ಶನವಾಗಿ ನೋಡಬಹುದು. ಬಹುತೇಕ ಪೋಷಕರು ಗಮನಹರಿಸದೆ ಹೋಗುತ್ತಾರೆ. ಉದಾಹರಣೆಗೆ, ಹುಡುಗಿಯೊಬ್ಬಳು ಕೋಣೆಯನ್ನು ಪ್ರವೇಶಿಸುವಾಗ ಅಲ್ಲಿರುವ ಹುಡುಗಿಯರು ಅವಳ ಕುರಿತಾಗಿಯೇ ಮಾತನಾಡುತ್ತಿರುತ್ತಾರೆ. ಪಾರ್ಟಿಗಳಿಗೆ ಆಹ್ವಾನಿಸಲ್ಪಡುವ, ಗುಟ್ಟುಗಳನ್ನು ಹಂಚಿಕೊಳ್ಳುವ ಆಧಾರದ ಮೇಲೆಲ್ಲ ಆಕೆಯ ಜನಪ್ರಿಯತೆ ನಿರ್ಧಾರವಾಗುತ್ತದೆ. ರಾಣಿಜೇನು ಇತರ ಜೇನುಗಳಿಂದ ಸುತ್ತುವರೆಯಲ್ಪಟ್ಟಿರುವಂತೆ, ಹುಡುಗಿಯು ಗೆಳೆಯರ ನಡುವೆ ಜನಪ್ರಿಯಳೂ ಆಗಿರುತ್ತಾಳೆ. ವಾಸ್ತವದಲ್ಲಿ ಆ ಹುಡುಗಿಯು ದುರ್ಬಲಳಾಗಿದ್ದು, ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇತರ ಹುಡುಗಿಯರ ಸಹಕಾರ ಬಯಸುವವಳಾಗಿರುತ್ತಾಳೆ.
  • ಸಂಸ್ಕೃತಿಯ ಹೆಸರಲ್ಲಿ ನಿರ್ಬಂಧಗಳು ಮತ್ತು ನಿರೀಕ್ಷೆಗಳು : ಕೆಲವೊಮ್ಮೆ ಹರೆಯದ ಹುಡುಗಿಯರ ಮೇಲೆ ಸಾಂಸ್ಕೃತಿಕ ಸಂಗತಿಗಳೂ ಒತ್ತಡ ಹೇರುತ್ತವೆ. ಆಕೆಯ ಮೇಲೆ ಪರಿಣಾಮ ಬೀರಿ ಒತ್ತಡ ಹಾಗೂ ಉದ್ವೇಗಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ, ಹುಡುಗಿಯು ಮೈನೆರೆದಾಗ ಪರಂಪರೆಯಂತೆ ಆಕೆಯ ಮೇಲೆ ಕೆಲವು ಷರತ್ತುಗಳನ್ನು ಹಾಕಲಾಗುತ್ತದೆ. ಆಕೆಯ ಕುರಿತು ವಿಪರೀತ ಕಾಳಜಿ ತೋರುವುದು – ಆ ಮೂಲಕ ಸ್ವಾತಂತ್ರ್ಯ ಮೊಟಕುಗೊಳಿಸುವುದು, ಉಡುಗೆ ತೊಡುಗೆಗಳಿಗೆ ನಿಯಮ ಹೇರುವುದು, ನಡೆನುಡಿಗಳಿಗೆ ನಿರ್ಬಂಧ ವಿಧಿಸುವುದು – ಇವೆಲ್ಲವೂ ಹುಡುಗಿಯ ಮೇಲೆ ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ, ಈ ವರ್ತನೆಯಿಂದಾಗಿ ಹುಡುಗ – ಹುಡುಗಿಯರ ನಡುವಿನ ಅಂತರವೂ ಹೆಚ್ಚುತ್ತಾ ಹೋಗುತ್ತದೆ. ಇಂಥ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ತಮ್ಮ ಪೋಷಕರ ಜೊತೆ ಮನಬಿಚ್ಚಿ ಮಾತಾಡಬೇಕು. ತಮ್ಮ ಬೇಕು ಬೇಡಗಳನ್ನು ಹೇಳಿಕೊಳ್ಳಬೇಕು. ಇದು ಸಾಕಷ್ಟು ಸವಾಲಿನ ಕೆಲಸವೇ ಆಗಿದ್ದರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಅಗತ್ಯವಾಗಿರುವುದರಿಂದ ಹೆಣ್ಣುಮಕ್ಕಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.

ಈ ಲೇಖನವನ್ನು ಬೆಂಗಳೂರು ಮೂಲದ ರೀಚ್ ಕ್ಲಿನಿಕ್’ನ ಮೌಲಿಕಾ ಶರ್ಮಾ ಹೇಳಿದ ಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org