ಹದಿಹರೆಯದವರು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಮಸ್ಯೆ

ಹದಿಹರೆಯದವರು ತಮ್ಮ ಭಾವನಾತ್ಮಕ ಸಮಸ್ಯೆಗಳನ್ನು ನಿರ್ವಹಿಸುವ ಭರದಲ್ಲಿ ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಈಗೀಗ ಹೆಚ್ಚುತ್ತಿವೆ.

16 ವರ್ಷದ ಸಂಗೀತಾ,  ಪ್ರತಿಭಾವಂತ ವಿದ್ಯಾರ್ಥಿನಿ. ಈಕೆ ಇತ್ತೀಚಿನ ದಿನಗಳಲ್ಲಿ ತುಂಬಾ  ಮಂಕಾಗುತ್ತಿದ್ದಾಳೆ ಮತ್ತು ಅಧ್ಯಯನದಲ್ಲಿ  ಕೂಡ ಹಿಂದೆ ಬೀಳತೊಡಗಿದ್ದಾಳೆ. ಸಂಗೀತಾಳ ಶೈಕ್ಷಣಿಕ ಪ್ರಗತಿ ದಿನದಿಂದ ದಿನಕ್ಕೆ ಕುಸಿಯುತ್ತಿರುವುದನ್ನು ಗಮನಿಸಿದ ವಿಜ್ಞಾನ ಪಾಠ ಮಾಡುವ ಆಕೆಯ ಶಿಕ್ಷಕಿ ಇತ್ತೀಚೆಗೆ ಅವಳು ನಿರಾಸಕ್ತಿಯಿಂದ ಇರುವುದನ್ನು ಕಂಡಿದ್ದರು.

ದೆಹಲಿಯ ಬೆವರಿಳಿಸುವ ಸೆಕೆಯಲ್ಲಿಯೂ ಸಂಗೀತ ತುಂಬುತೋಳಿನ ಬಟ್ಟೆಯನ್ನು ಧರಿಸುತ್ತಿರುವುದು ಆಕೆಯನ್ನು ಚಕಿತಗೊಳಿಸಿತು. ತರಗತಿಯು ಮುಗಿದ  ನಂತರ,  ಅವರು ಸಂಗೀತಾಳನ್ನು ತಮ್ಮ ಕೊಠಡಿಗೆ ಕರೆದುಕೊಂಡುಹೋಗಿ ಆಕೆಗಿರುವ  ಸಮಸ್ಯೆ ಏನೆಂದು  ವಿಚಾರಿಸಿದರು.ಅವಳು  ತನ್ನ ಪಾಲಕರ ನಡುವಿರುವ ವೈಮನಸ್ಯದ ಕುರಿತು  ಅಳುತ್ತಲೇ ವಿವರಿಸಿದಳು. ಅವರಿಗೆ ಸಂಗೀತಾಳು ತನ್ನ ಕೈಗಳನ್ನು ಬ್ಲೇಡಿನಿಂದ ಕೊರೆದುಕೊಳ್ಳುತ್ತಿರುವ ವಿಷಯವೂ ತಿಳಿಯಿತು.

ನಿಜ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗಲೆಂದು ಈ ಕಾಲ್ಪನಿಕ ದೃಷ್ಟಾಂತವನ್ನು ಹೆಣೆಯಲಾಗಿದೆ.

ತಮ್ಮ ಅಂಗಾಂಗಗಳನ್ನು ಕೊರೆದುಕೊಳ್ಳುವ, ಸುಟ್ಟುಕೊಳ್ಳುವ ಅಥವಾ ಇನ್ಯಾವುದೇ ರೀತಿಯಲ್ಲಿ ತಮಗೆ ತಾವೇ ಹಾನಿಮಾಡಿಕೊಳ್ಳುವ ಹದಿಹರೆಯದವರ ಬಗ್ಗೆ ನಾವೆಲ್ಲಾ ಓದಿರುತ್ತೇವೆ. ಇದನ್ನು non-suicidal self-in (ನಾನ್-ಸ್ಯೂಸೈಡಲ್ ಸೆಲ್ಫ್ ಇಂಜುರಿ - ಆತ್ಮಹತ್ಯೆಯಲ್ಲದ ಸ್ವಯಂ ಹಾನಿ) ನಡವಳಿಕೆ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಹದಿನಾಲ್ಕರಿಂದ ಹದಿನೈದು ವರ್ಷದ ವಯಸ್ಸಿನವರಲ್ಲಿ  ಕಂಡುಬರುತ್ತದೆ. ಇಂತಹ ನಡವಳಿಕೆಯನ್ನು ಕಂಡುಹಿಡಿಯುವುದು ಬಹಳ ಕಷ್ಟಕರವಾದ್ದರಿಂದ ಆರೈಕೆದಾರರು ಮತ್ತು ತಜ್ಞರಿಗೆ ಇದು ಸವಾಲಾಗಿ ಪರಿಣಮಿಸಿದೆ.

ವ್ಯಕ್ತಿ ಭಾವನಾತ್ಮಕ ಸಮಸ್ಯೆ ಮತ್ತು ಋಣಾತ್ಮಕ ಭಾವಗಳನ್ನು ನಿರ್ವಹಿಸಲಾಗದೆ ಇಂತಹ ನಡವಳಿಕೆ ತೋರಿಸಬಹುದು. ಈ ಪರಿಸ್ಥಿತಿಯಲ್ಲಿ ಅವರು ಕೋಪ ಮತ್ತು ಖಿನ್ನತೆಯಿಂದ ಬಳಲಬಹುದು. ತಮ್ಮ ದೇಹವನ್ನು ಹಾನಿಗೊಳಿಸಿ ಕೊಳ್ಳುವುದರ ಮೂಲಕ  ತಮ್ಮ ಭಾವನೆಗಳನ್ನು ನಿಭಾಯಿಸಲು ಸಹಾಯವಾಗುತ್ತದೆ ಎಂದು ಅವರು ನಂಬಿರುತ್ತಾರೆ. ಇದನ್ನು  ಮತ್ತೆ ಮತ್ತೆ ಮಾಡುವುದರಿಂದ ಅಪಾಯಕಾರಿ ಪರಣಾಮ ಬೀರಬಹುದು.

ಸ್ವಯಂ ಹಾನಿ ಮಾಡಿಕೊಳ್ಳುವ ವ್ಯಕ್ತಿ ಬೇರೆಯವರ ಗಮನವನ್ನು ತಮ್ಮತ್ತ ಸೆಳೆಯಲು ಈ ರೀತಿ ಮಾಡುತ್ತಾರೆ ಎಂಬ ಅಭಿಪ್ರಾಯವಿದೆ. ಆದರೆ ಇದು ಸತ್ಯವಲ್ಲ.

ಈ ಕೆಳಗಿನ ಕಾರಣದಿಂದ ವ್ಯಕ್ತಿಗಳು ಸ್ವಯಂ ಹಾನಿಯಲ್ಲಿ ತೊಡಗಿಕೊಳ್ಳುತ್ತಾರೆ:

  • ಭಾವನಾತ್ಮಕ ಸಮಸ್ಯೆಯನ್ನು ನಿರ್ವಹಿಸುವುದು ಅಸಾಧ್ಯವೆನಿಸಿದಾಗ ಅವರು ದೈಹಿಕ ನೋವಿನ ಮೂಲಕ ಅದನ್ನು ನಿಭಾಯಿಸಲು ಪ್ರಯತ್ನಿಸುತ್ತಾರೆ.

  • ಅವರು ತಮ್ಮ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಬಯಸುತ್ತಾರೆಯೇ ಹೊರತು ತಮ್ಮ ಬಗ್ಗೆ ಅಲ್ಲ.

  • ತಮ್ಮಲ್ಲಿ ಮೂಡಿರುವ ಋಣಾತ್ಮಕ ಭಾವನೆಗಳಿಗೆ ಅವರು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಸ್ವಯಂ ಹಾನಿ ಒಂದು ಸಂಕೀರ್ಣ ಪರಿಸ್ಥಿತಿಯಾಗಿದ್ದು, ಹಲವಾರು ಕಾರಣಗಳಿಂದ ಉಂಟಾಗಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಬೇರೆಬೇರೆಯದೇ ಆದ ಕಾರಣಗಳಿರಬಹುದು. ಅಂತಹ ಸಮಯದಲ್ಲಿ ಉಳಿದವರು ಸೂಕ್ಷ್ಮವಾಗಿ ವರ್ತಿಸುವುದು ಅಗತ್ಯವಾಗಿರುತ್ತದೆ.

ಪರಿಸರ ಮತ್ತು ನಡವಳಿಕೆಯ ಪಾತ್ರ

ತಮ್ಮನ್ನು ತಾವು ಕೊರೆದುಕೊಳ್ಳುವ ಅಥವಾ ಸುಟ್ಟುಕೊಳ್ಳುವ  ಹೆಚ್ಚಿನವರು ಬಾಲ್ಯದಲ್ಲಿ ಪ್ರತಿಕೂಲ ಪರಿಸರವನ್ನು ಹೊಂದಿರುವುದು ತಿಳಿದುಬಂದಿದೆ. ದೈಹಿಕ ಮತ್ತು ಲೈಂಗಿಕ ದೌರ್ಜನ್ಯ, ಗೂಂಡಾಗಿರಿಗೆ ಒಳಗಾಗಿರುವುದು, ವೈವಾಹಿಕ ಸಮಸ್ಯೆ ಅಥವಾ ಮನೆಯಲ್ಲಿ ಕೌಟುಂಬಿಕ ದೌರ್ಜನ್ಯ ಅಥವಾ ಅವರ ಲೈಂಗಿಕ ಸಂಬಂಧಿಸಿದ ಸಮಸ್ಯೆಗಳು ಕೂಡ ಕಾರಣವಾಗಿರಬಹುದು. ಸಮಸ್ಯೆಗೆ ಕಾರಣವು ಯಾವುದೇ ಆಗಿದ್ದರೂ ಆ ವ್ಯಕ್ತಿಗೆ ಪೂರ್ವಗ್ರಹರಹಿತವಾಗಿ ಅವರನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯ ಅಗತ್ಯವಿರುತ್ತದೆ.

ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತವೆ?

ವ್ಯಕ್ತಿ ತಮ್ಮ ಕ್ರಿಯೆಯನ್ನು ಗೌಪ್ಯವಾಗಿ ಇರಿಸುವುದರಿಂದ ಕುಟುಂಬದವರಾಗಲೀ ಅಥವಾ ಸ್ನೇಹಿತರಿಗಾಗಲೀ ಈ ಸಮಸ್ಯೆಯನ್ನು ಗುರುತಿಸುವುದು ಸುಲುಭವಾಗುವುದಿಲ್ಲ.  ಆದರೆ ಕೆಲವು ಆರಂಭಿಕ ನಡವಳಿಕೆಗಳು ಸ್ವಯಂ ಹಾನಿಯ ಸಂಭವನೀಯತೆಯನ್ನು ಸೂಚಿಸುತ್ತವೆ.

ಯಾವುದೇ ವ್ಯಕ್ತಿಯು ಪದೇ ಪದೇ ಬ್ಯಾಂಡೇಜು ಹಾಕಿಕೊಳ್ಳುತ್ತಿದ್ದರೆ ನೀವು ಅವರ ಬಳಿ ಅದಕ್ಕೆ ಕಾರಣವನ್ನು ಕೇಳುತ್ತೀರಿ. ಆ ಕಾರಣ ನಂಬಲು ಅಸಾಧ್ಯವೆನಿಸಿದರೆ ಇದು ಸ್ವಯಂ ಹಾನಿ ಎಂದು ಸೂಚಿಸುತ್ತದೆ.

ಕೆಲವೊಮ್ಮೆ ಅವರು ತುಂಬುತೋಳಿನ ಬಟ್ಟೆ ಧರಿಸಿ ಸ್ವಯಂ ಹಾನಿಗೆ ಹೆಚ್ಚಾಗಿ ಗುರಿಯಾಗಿರುವ ಕೈಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಬಹುದು. ಕೆಲವರು ಕಂಡುಹಿಡಿಯಲು ಕಷ್ಟವಾದ ತಮ್ಮ ತೊಡೆಯ ಮೇಲ್ಭಾಗಕ್ಕೆ ಹಾನಿಯನ್ನು ಮಾಡಿಕೊಳ್ಳಬಹುದು. ತಮ್ಮನ್ನು ತಾವು ಬಹಳ ಹೊತ್ತು ಕೋಣೆಗೆ ಸೀಮಿತಗೊಳಿಸಿಕೊಳ್ಳುವ ಹಾಗೂ ಮೇಲಿಂದ ಮೇಲೆ ಶಾಲೆಗೆ ಗೈರಾಗುವ ಮಕ್ಕಳು ಕೂಡ ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಿರಬಹುದು.

ಸೂಚನೆ: ಮೇಲೆ  ಕಾಣಿಸಿದ ನಡವಳಿಕೆಗಳು ಕಡ್ಡಾಯವಾಗಿ ಸ್ವಯಂ ಹಾನಿಯನ್ನು ಸೂಚಿಸುವುದಿಲ್ಲ. ಇವು ಸ್ವಯಂ ಹಾನಿ ನಡವಳಿಕೆಯನ್ನು ಗುರುತಿಸುವುದು ಎಷ್ಟು ಕಷ್ಟ ಎಂಬುದನ್ನು ತಿಳಿಸುತ್ತವೆ.

ಸ್ವಯಂ ಹಾನಿ ನಡವಳಿಕೆಗೆ ಚಿಕಿತ್ಸೆಯೇನು?

ಸ್ವಯಂ ಹಾನಿ ನಡವಳಿಕೆಗೆ ಒಂದೇ ರೀತಿಯ ಚಿಕಿತ್ಸಾ ವಿಧಾನ ಇರುವುದಿಲ್ಲ. ಇದು ವ್ಯಕ್ತಿಯು ಸ್ವತಃ ಹಾನಿ ಮಾಡಿಕೊಳ್ಳಲು ಕಾರಣವಾದ ನಿರ್ದಿಷ್ಟ ಅಂಶಗಳನ್ನು ಅವಲಂಭಿಸಿರುತ್ತದೆ. ಒಂದು ವೇಳೆ ಸ್ವಯಂ ಹಾನಿ ನಡವಳಿಕೆಗೆ ಆತಂಕ ಅಥವಾ ಖಿನ್ನತೆಯು ಕಾರಣವಾಗಿದ್ದರೆ ಅವುಗಳಿಗೂ ಚಿಕಿತ್ಸೆ ನೀಡಬೇಕಾಗುತ್ತದೆ.

ಮುಖ್ಯವಾಗಿ ವ್ಯಕ್ತಿಗೆ ತನ್ನ ಭಾವನಾತ್ಮಕ ಸಮಸ್ಯೆಗಳನ್ನು ಆರೋಗ್ಯಕರ ರೀತಿಯಲ್ಲಿ ಪರಿಹರಿಸಿಕೊಳ್ಳಲು ಸಹಾಯ ನೀಡಬೇಕಾಗುತ್ತದೆ. ಕಾಗ್ನೆಟಿವ್ ಬಿಹೇವಿಯರಲ್ ಥೆರಪಿ (cognitive behavior therapy) ಮತ್ತು ಮೈಂಡ್ ಫುಲ್ನೆಸ್ (mindfullness) ಥೆರಪಿ ಅನಾರೋಗ್ಯಕರ ಯೋಚನೆಗಳನ್ನು ಗುರುತಿಸಿ ಅವುಗಳನ್ನು ಧನಾತ್ಮಕ ಆರೋಗ್ಯಕರ ವಿಚಾರಗಳಾಗಿ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೌಟುಂಬಿಕ ಸಮಸ್ಯೆಯು ಈ ನಡವಳಿಕೆಗೆ ಕಾರಣವಾಗಿದ್ದರೆ ಕೌಟುಂಬಿಕ ಥೆರಪಿ (family therapy) ಸಮಸ್ಯೆಯನ್ನು ಬಗೆಹರಿಸಬಲ್ಲದು.

ನೀವು ಹೇಗೆ ಸಹಾಯ ಮಾಡಬಹುದು? 

ಈ  ನಡವಳಿಕೆಯು ಸೂಕ್ಷ್ಮ ವಿಚಾರವಾಗಿರುವುದರಿಂದ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ಸಮಸ್ಯೆಯ ಬಗ್ಗೆ ಮಾಹಿತಿ ಇಲ್ಲದೆ ಮತ್ತು ಜನರಲ್ಲಿರುವ ತಪ್ಪು ತಿಳುವಳಿಕೆಗಳೇ ಈ ಸಮಸ್ಯೆಯ ನಿವಾರಣೆಯಲ್ಲಿರುವ ಪ್ರಮುಖ ತೊಡಕಾಗಿದೆ. ಆದ್ದರಿಂದ ಸ್ವಯಂ ಹಾನಿಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಪಡೆದುಕೊಂಡು ಸಂದರ್ಭವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. 

ವ್ಯಕ್ತಿಯೊಂದಿಗೆ ಮಾತನಾಡಿ ಅವರ ಸಮಸ್ಯೆಯ ಬಗ್ಗೆ ಸಮಾಧಾನದಿಂದ ಆಲಿಸಬೇಕು. ಅವರ ಬಗ್ಗೆ ತೀರ್ಮಾನಕ್ಕೆ ಬಾರದೆ ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಒಂದುವೇಳೆ ನಿಮಗೆ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದಿದ್ದರೆ ತಜ್ಞರನ್ನು ಸಂಪರ್ಕಿಸಿ.

ನಿಮ್ಹಾನ್ಸಿನ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿರುವ ಡಾ, ಪೂರ್ಣಿಮಾ ಬೋಲಾರವರು ನೀಡಿದ ಮಾಹಿತಿಗಳನ್ನು ಆಧರಿಸಿ ಲೇಖನವನ್ನು ಸಿದ್ಧಪಡಿಸಲಾಗಿದೆ.

Related Stories

No stories found.