ನಿಮ್ಮ ನಿರೀಕ್ಷೆಗಳ ಭಾರವನ್ನು ನಿಮ್ಮ ಮಗು ಹೊರುತ್ತಿದೆಯೇ?

ಇತ್ತೀಚಿಗೆ ನನ್ನ ಬಳಿ ಒಬ್ಬ ಮಹಿಳೆ ಬಂದು, ತನ್ನ ಮದುವೆ ಮುರಿದುಬೀಳುತ್ತಿದೆ ಎಂದಳು. ಇದರಿಂದ ಅವಳ ಭವಿಷ್ಯ ಏನಾಗುವುದೋ ಮತ್ತು ಹೇಗೆ ಇದನ್ನೆಲ್ಲಾ ನಿಭಾಯಿಸುವಳೋ ಎಂಬ ಆತಂಕ ಅವಳನ್ನು ಕಾಡುತ್ತಿದೆ ಎಂದುಕೊಂಡೆ. ಆದರೆ ಆಕೆಯ ಚಿಂತೆ ಬೇರೆಯೇ ಇತ್ತು. ತನ್ನ ತಂದೆ ತಾಯಿಯ ನಿರೀಕ್ಷೆಯನ್ನು ತನ್ನಿಂದ ಪೂರೈಸಲಾಗಲಿಲ್ಲ. ಈ ಹಿಂದೆಯೂ ಅವಳಿಂದ ನಿರಾಶರಾಗಿದ್ದ ಅವರು, ಪುನಃ ಅವಳಿಂದ ನೋವು ಅನುಭವಿಸುವರು. ಈ ವಿಷಯವನ್ನು ಹೇಗೆ ಸ್ವೀಕರಿಸುವರೋ, ಸಮಾಜವನ್ನು ಹೇಗೆ ಎದುರಿಸುವರೋ ಎಂಬುದೇ ಆಕೆಗೆ ಚಿಂತೆಯಾಗಿತ್ತು.

ಮಕ್ಕಳ ಭವಿಷ್ಯ ಹೀಗೇ ಇರಬೇಕು ಎಂದು ಅವರ ಜೀವನದ ಪ್ರತಿಯೊಂದು ಮೈಲಿಗಲ್ಲನ್ನೂ ತಾವೇ ನಿರ್ಧರಿಸುವ ಪೋಷಕರನ್ನು ನಾನು ನೋಡಿದ್ದೇನೆ. ಅವರು ಹೇಳಿದಂತೆ ನಡೆದರೆ ಮಾತ್ರ ಮಕ್ಕಳು ಜೀವನದಲ್ಲಿ ಯಶಸ್ಸು ಕಾಣುವರು ಎಂಬ ಭಾವನೆ ಅವರಲ್ಲಿರುತ್ತದೆ. ಅದನ್ನು ಪಾಲಿಸುವುದಷ್ಟೇ ಮಕ್ಕಳ ಕೆಲಸ. ಪಾಪ ಮಕ್ಕಳಿಗೆ ಬೇರೆ ದಾರಿಯೇ ಇಲ್ಲ.

ಆದರೆ ಮಕ್ಕಳು ತಮ್ಮ ಜೀವನದ ಉದ್ದೇಶವನ್ನು ತಾವೇ ಕಂಡುಹಿಡಿದು, ಆ ಗುರಿಯತ್ತ ಉತ್ಸಾಹ ಮತ್ತು ಆಸಕ್ತಿಯಿಂದ ಮುನ್ನಡೆಯಬೇಕು. ಈ ಮಾರ್ಗದಲ್ಲಿ ಮಕ್ಕಳಿಗೆ ಸಹಕಾರ ನೀಡುವುದಷ್ಟೇ ಪೋಷಕರ ಜವಾಬ್ದಾರಿ. ಅವರಿಗೆ ಬೆಳೆಯಲು ಬೇಕಿರುವ ಬೇರು ಮತ್ತು ಹಾರಲು ಬೇಕಿರುವ ರೆಕ್ಕೆ ನೀಡಿ ಪೋಷಕರು ಮಕ್ಕಳನ್ನು ಬೆಂಬಲಿಸಬೇಕು.

“ತಾನು ಇಚ್ಛಿಸಿದ ಯಾವ ಗುರಿಯನ್ನಾದರೂ ಸಾಧಿಸಲು ಸಾಧ್ಯ ಎಂಬ ಭಾವನೆ ನಿಮ್ಮ ಮಗುವಿನಲ್ಲಿ ನೀವು ಬೆಳೆಸಿದ್ದೀರಾ? ಹಾಗಾದರೆ ಪೋಷಕರಾಗಿ ನೀವು ಗೆದ್ದಿದ್ದೀರಿ ಮತ್ತು ನಿಮ್ಮ ಮಕ್ಕಳಿಗೆ ಜೀವನದ ಅತಿ ದೊಡ್ಡ ವರ ನೀಡಿದ್ದೀರಿ” ಎಂದು ಅಮೇರಿಕಾದ ಖ್ಯಾತ ಟ.ವಿ. ನಿರೂಪಕ ಬ್ರಯನ್ ಟ್ರೇಸಿ ಹೇಳುತ್ತಾರೆ.

ಮಕ್ಕಳು ಈ ಭೂಮಿಗೆ ಬಂದಿರುವುದು ತಮ್ಮಜೀವನ ನಡೆಸುವುದಕ್ಕೆ ಹೊರತು ನಿಮ್ಮ ಆಸೆಗಳನ್ನು ಈಡೇರಿಸುವುದಕ್ಕಲ್ಲ. ನೀವು ಮಾಡುತ್ತಿರುವುದು ಸರಿ ಎಂದು ಖಚಿತ ಪಡಿಸುವುದು ಅವರ ಕೆಲಸವಲ್ಲ. ನಿಮ್ಮ ಮನೆತನದ ವ್ಯಾಪಾರ ನಡೆಸಲು, ನೀವು ಸಾಧಿಸದಿರುವ ಗುರಿಯನ್ನು ಸಾಧಿಸಲು, ನಿಮ್ಮ ವೃದ್ಧಾಪ್ಯದಲ್ಲಿ ವಿಮೆ ಕಟ್ಟಲು ಅಥವಾ ನಿಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರು ಸಂಪಾದಿಸಲು ಮಾತ್ರ ಮಕ್ಕಳು ಹುಟ್ಟಿಲ್ಲ.

ನಿಮ್ಮ ಕನಸನ್ನೇ ಅವರೂ ಕಾಣಬೇಕು, ಅವರೂ ನಿಮ್ಮಂತೆಯೇ ಯೋಚಿಸಬೇಕು, ನೀವಂದುಕೊಂಡ ವ್ಯಕ್ತಿ ಅವರಾಗಬೇಕು ಎಂದು ಆಸೆ ಪಡುವುದು ಸರಿಯಲ್ಲ. ಮನೆತನದ ಹೆಸರು ಮತ್ತು ಶ್ರೇಯಸ್ಸನ್ನು ಉಳಿಸುವ ಪಾರಿತೋಷಕಗಳಂತೆ ಮಕ್ಕಳನ್ನು ಕಾಣಬೇಡಿ. ಅವರು ತಮ್ಮ ದಾರಿಯನ್ನು ತಾವೇ ಹುಡುಕುತ್ತಾ, ಪ್ರತಿಯೊಂದು ಮೈಲಿಗಲ್ಲನ್ನು ದಾಟಿ ಗುರಿ ತಲುಪಿದಾಗ ಅವರ ಬಗ್ಗೆ ಪೋಷಕರಾಗಿ ನಾವು ಹೆಮ್ಮೆ ಪಡಬೇಕು.

ನಮ್ಮ ಮಗು ಇದೇ ಮಾಡಬೇಕು, ಇಂತಹ ವ್ಯಕ್ತಿಯೇ ಆಗಬೇಕು ಎಂಬ ನಿರೀಕ್ಷೆಗಳು ನಿಮ್ಮಲ್ಲಿದ್ದರೆ ಅದನ್ನು ಕೂಡಲೇ ತೊರೆಯಬೇಕು. ಇಂತಹ ನಿರೀಕ್ಷೆಗಳು ಅಸಂಬದ್ಧ ಮತ್ತು ಇದರಿಂದ ಮಕ್ಕಳಿಗೆ ಉಸಿರು ಕಟ್ಟಿದಂತಾಗುತ್ತದೆ. ನನ್ನ ಬಳಿ ಬಂದ ಮಹಿಳೆ ಕೂಡ ಈಗ ಇದನ್ನೇ ಅನುಭವಿಸುತ್ತಿದ್ದಾಳೆ.

ಮಕ್ಕಳ ಪಾಲನೆಯ ರೀತಿ ಚೀನಾ ಮತ್ತು ಅಮೇರಿಕಾ ನಡುವೆ ಎಲ್ಲಿ ಉತ್ತಮವಾಗಿದೆ ಎಂಬ ವಿವಾದ ಮಾಧ್ಯಮಗಳಲ್ಲಿತ್ತು. ಚೀನಾದಲ್ಲಿ ಮಕ್ಕಳನ್ನು ಬಹಳ ಶಿಸ್ತಿನಿಂದ, ಪೋಷಕರು ನಿರ್ಧರಿಸುವ ರೀತಿಯಲ್ಲಿ ಬೆಳೆಸಲಾಗುತ್ತದೆ. ಉದಾಹರಣೆಗೆ ಚೀನಾದ ಮಕ್ಕಳು ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳುವಂತಿಲ್ಲ, ಡೇಟ್‍ಗಳಿಗೆ ಹೋಗುವಂತಿಲ್ಲ, ಶಾಲೆಯ ನಾಟಕಗಳಲ್ಲಿ ಭಾಗವಹಿಸುವಂತಿಲ್ಲ, ಶಾಲೆಯ ನಾಟಕದಲ್ಲಿ ತಾನಿಲ್ಲವೆಂದು ದೂರುವಂತಿಲ್ಲ, ಟಿ.ವಿ. ನೋಡುವಂತಿಲ್ಲ, ವೀಡಿಯೋ ಗೇಮ್ ಆಡುವಂತಿಲ್ಲ, ತನಗಿಷ್ಟವಿರುವ ಹವ್ಯಾಸ ಆರಿಸುವಂತಿಲ್ಲ, ಏ ಗ್ರೇಡ್‍ಗಿಂತ ಕಡಿಮೆ ಗಳಿಸುವಂತಿಲ್ಲ, ಜಿಮ್ ಮತ್ತು ಡ್ರಾಮಾ ಹೊರತಾಗಿ ಬೇರೆ ಯಾವ ವಿಷಯದಲ್ಲೂ ಒಂದನೇ ಸ್ಥಾನ ಬಿಟ್ಟುಕೊಡುವಂತಿಲ್ಲ, ಪಿಯಾನೋ ಅಥವಾ ವಯೋಲಿನ್ ಬಿಟ್ಟು ಬೇರೆ ವಾದ್ಯ ನುಡಿಸುವಂತಿಲ್ಲ.

ಮತ್ತೊಂದು ಕಡೆ ಅಮೆರಿಕಾದಲ್ಲಿ, ಮಕ್ಕಳ ಆಯ್ಕೆ, ಆಸಕ್ತಿ, ಆಸೆ, ಬೇಡಿಕೆ, ಕನಸು, ಭಾವನೆಗಳು ಮತ್ತು ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಶೈಕ್ಷಣಿಕ ಫಲಿತಾಂಶಗಳಲ್ಲಿ ಚೀನಾ ಮಕ್ಕಳದೇ ಮೇಲುಗೈ. ಹಾಗಾಗಿ ಚೀನಾ ಪಾಲಿಸುವ ರೀತಿ ಸರಿ ಎಂದು ನಾವು ತಿಳಿಯಬಹುದು. ಆದರೆ ಚೀನಾ ದೇಶವು ಮಕ್ಕಳನ್ನು ಕೇವಲ ಕೆಲಸ ಮಾಡುವ ಯಂತ್ರಗಳಂತೆ ತಯಾರು ಮಾಡುತ್ತಿದೆ ಅಷ್ಟೆ ಹೊರತು ಕೆಲಸ ಮಾಡಿಸುವ ನಾಯಕರಂತಲ್ಲ. ಭಾರತೀಯರ ಪದ್ಧತಿ ಕೂಡ ಇದೇ ಆಗಿದೆ.

ಪ್ರಖ್ಯಾತ ಸಂಗೀತ ನಿರ್ದೇಶಕರ ಬಗ್ಗೆ ಗೂಗಲ್ ಮಾಡಿದರೆ ಅಬ್ಬಬ್ಬಾ ಅಂದರೂ ಇಪ್ಪತ್ತು ಚೀನಾ ನಿರ್ದೇಶಕರ ಹೆಸರುಗಳು ಸಿಗಬಹುದು. ಆದರೆ ಸಾವಿರಾರು ಸಂಖ್ಯೆಯಲ್ಲಿ ಅಮೇರಿಕಾದ ಸಂಗೀತ ನಿರ್ದೇಶಕರ ಹೆಸರುಗಳು ಸಿಗುತ್ತದೆ. ನಮ್ಮ ಮಕ್ಕಳು ಬರೀ ಬೇರೆಯವರ ರಚನೆಯನ್ನು ಪ್ರದರ್ಶಿಸುವ ಪ್ರದರ್ಶಕರಾಗಬೇಕೆ (ಹಿಂಬಾಲಕರು, ಕೆಲಸಗಾರರು, ಅನುಕರಣೆ ಮಾಡುವವರು) ಅಥವಾ ತಾವೇ ಹೊಸದನ್ನು ರಚಿಸುವ ನಾಯಕರಾಗಬೇಕೆ (ನಿರ್ದೇಶಕರು, ಸಂಶೋಧಕರು, ಸೃಷ್ಟಿಕರ್ತರು, ಕ್ರಿಯಾಶೀಲರು) ಎಂಬುದನ್ನು ಪೋಷಕರು ಯೋಚಿಸಬೇಕು.

ಇಂಡಸ್ಟ್ರಿಯಲ್ ಯುಗದಲ್ಲಿ ಶಿಸ್ತು, ನಿಪುಣತೆ ಮತ್ತು ಕೆಲಸ ನಿರ್ವಹಣೆಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ಆದರೆ ಇವತ್ತಿನ ಜ್ಞಾನ ಪ್ರಚೋದಿತ ಯುಗದಲ್ಲಿ ಕ್ರಿಯಾಶೀಲತೆ, ವಿಭಿನ್ನ ಯೋಚನೆ, ಕೆಲಸ ಮಾಡುತ್ತಾ ಕಲಿಯುವುದು, ಸಮಸ್ಯೆ ಪರಿಹರಿಸುವುದು, ಗುಂಪಿನಲ್ಲಿ ಎಲ್ಲರೊಂದಿಗೆ ಸಮಾನವಾಗಿ ಬೆರೆಯುವುದು, ಅಭಿಪ್ರಾಯ ಮಂಡಿಸುವುದು, ಏನನ್ನಾದರೂ ಮಾಡಬಲ್ಲೆ ಎಂಬ ನಿಲುವು, ಸ್ವಪ್ರೇರಣೆ, ಸೋಲುಗಳಿಂದ ಪಾಠ ಕಲಿಯುವ ಮನೋಭಾವ, ಇಂತಹ ಕೌಶಲ್ಯಗಳ ಅಗತ್ಯವಿದೆ. ನಮ್ಮಲ್ಲಿರುವ ಪರೀಕ್ಷಾ ಪದ್ಧತಿ ಈ ಯಾವುದನ್ನೂ ಪರೀಕ್ಷಿಸುವುದಿಲ್ಲ. ನಮ್ಮ ಶಿಕ್ಷಣದ ವ್ಯವಸ್ಥೆ ಇವ್ಯಾವುದನ್ನೂ ಕಲಿಸುವುದೂ ಇಲ್ಲ.

ಪರೀಕ್ಷೆಯಲ್ಲಿ ನಮ್ಮ ಮಗು 100% ಅಂಕ ಗಳಿಸಬೇಕು ಎಂಬ ನಮ್ಮ ನಿರೀಕ್ಷೆ ಒಂದು ವೇಳೆ ನಿಜವಾದರೂ, ಜೀವನ ಮತ್ತು ಕೆಲಸದಲ್ಲಿ ನಮ್ಮ ಮಕ್ಕಳು ಯಶಸ್ವಿಯಾಗದೇ ಇರಬಹುದು. ಹಾಗಾಗಿ ನಮ್ಮ ಮಕ್ಕಳು ಪರೀಕ್ಷೆಯಲ್ಲಿ ಗೆಲ್ಲಬೇಕೋ ಅಥವಾ ನಿಜ ಜೀವನದಲ್ಲಿ ಗೆಲ್ಲಬೇಕೋ ಎಂಬ ನಿರ್ಧಾರವನ್ನು ಪೋಷಕರು ಮಾಡಬೇಕು. ಪರೀಕ್ಷೆಯಲ್ಲಿ ಗೆದ್ದವರು ಜೀವನದಲ್ಲೂ ಗೆಲ್ಲುತ್ತಾರೆ ಎಂಬ ತಪ್ಪು ಕಲ್ಪನೆ ಕೆಲವು ಪೋಷಕರಿಗಿದೆ. ಪರೀಕ್ಷೆಯ ಗೆಲುವು ಕೆಲವು ಅವಕಾಶದ ಬಾಗಿಲುಗಳನ್ನು ತೆರೆಯಬಹುದಷ್ಟೇ. ಆದರೆ ಜೀವನದಲ್ಲಿ ಗೆಲ್ಲುವುದು ಬೇರೆಯದೇ ಒಂದು ಆಟ. ಅದಕ್ಕೂ ಪರೀಕ್ಷೆಯ ಗೆಲುವಿಗೂ ಸಂಬಂಧವಿಲ್ಲ.

ಹಾಗಾದರೆ ಪೋಷಕರು ಮಕ್ಕಳಿಂದ ಏನನ್ನೂ ನಿರೀಕ್ಷಿಸಬಾರದೇ? ಹಾಗಲ್ಲ. ಮಕ್ಕಳು ಸದಾ ಪೋಷಕರ ನಿರೀಕ್ಷೆಗಳನ್ನು ಪೂರೈಸಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ, ಸುಲಭದ ದಾರಿಗಳಿಂದ ಹೊರಬಂದು ಹೊಸ ಕೆಲಸಗಳನ್ನು ಮಾಡುತ್ತಾರೆ, ಸವಾಲುಗಳನ್ನು ಎದುರಿಸುತ್ತಾರೆ. ಹೀಗೆ ಅವರ ಏಳಿಗೆ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ನಿರೀಕ್ಷೆಗಳು ಅಗತ್ಯ. ಆದರೆ ನಮ್ಮ ನಿರೀಕ್ಷೆಗಳು ಮಕ್ಕಳ ಅಂಕಗಳ ಬಗ್ಗೆ, ಪರೀಕ್ಷೆಯ ಬಗ್ಗೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಸಮಾಜದ ಕಟ್ಟುಪಾಡುಗಳನ್ನು ಪಾಲಿಸುವುದರ ಬಗ್ಗೆ ಇರಬಾರದು ಅಷ್ಟೆ.

ನಮ್ಮ ಮಕ್ಕಳು ಯಾವುದೇ ಕ್ಷೇತ್ರ ಆರಿಸಿದರೂ ಅದರಲ್ಲಿ ಶ್ರದ್ಧೆ ಇರಬೇಕು, ಸಾಧ್ಯವಾದಷ್ಟು ಕಲಿಯುವ ಪ್ರಯತ್ನ ಮಾಡಬೇಕು, ಜೀವನ ಮೌಲ್ಯಗಳನ್ನು ನಂಬಿ ಅದನ್ನು ಪಾಲಿಸಬೇಕು, ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಬೇಕು, ಸಮಾಜದಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಬೆರೆಯಬೇಕು, ಆತ್ಮವಿಶ್ವಾಸ ಹೊಂದಿರಬೇಕು, ನಮ್ಮದಲ್ಲದ ಮತ್ತು ತಮ್ಮದೇ ಆದ ಆಸೆ ಆಕಾಂಕ್ಷೆಗಳನ್ನು ಹೊಂದಿರಬೇಕು; ಮಕ್ಕಳಿಂದ ಇಂತಹ ನಿರೀಕ್ಷೆಗಳನ್ನಿಟ್ಟುಕೊಂಡರೆ, ಅವರ ಏಳಿಗೆಗೆ ನಮ್ಮ ಬೆಂಬಲ ಪೂರಕವಾಗಿರುತ್ತದೆ.

ಹಾಗಾದರೆ ನಮ್ಮ ಮಕ್ಕಳಿಗೆ ನಾವು ಏನು ಕೊಡಲು ಸಾಧ್ಯ? ನಮ್ಮಲ್ಲಿರುವ ಅನುಭವ ಮತ್ತು ನಾವು ನಾವಾಗಿಯೇ ಇರುವುದು ಮುಖ್ಯ ಎಂಬ ನಂಬಿಕೆ. ಮತ್ತು ಬಹುಮುಖ್ಯವಾಗಿ ನಿರಾಕರಣೆಯ ಭಯವಿಲ್ಲದ ಸುರಕ್ಷಿತ, ನೈಜ ವಾತಾವರಣವನ್ನು ನಾವು ಮಕ್ಕಳಿಗೆ ನೀಡಬೇಕು.

ನಾವು ಮಕ್ಕಳಿಂದ ಏನನ್ನು ನಿರೀಕ್ಷಿಸಬೇಕು? ಶಾರೊನ್ ಗುಡ್‍ಮ್ಯಾನ್ ಹೇಳುತ್ತಾರೆ “ನಮ್ಮ ಮಕ್ಕಳು ತಮ್ಮನ್ನು ತಾವು ಕಂಡುಕೊಳ್ಳುವಂತೆ ಮಾರ್ಗದರ್ಶನ ನೀಡುವುದು ಪೋಷಕರಿಗೆ ಒಂದು ಸಾಹಸ ಕಾರ್ಯಕ್ಕಿಂತ ಕಡಿಮೆ ಏನಲ್ಲ” ಎಂದು. ಈ ಸಾಹಸಮಯ ಅನುಭವವನ್ನು ಪೋಷಕರು ನಿರೀಕ್ಷಿಸಬಹುದು.     

ಮೌಲಿಕ ಶರ್ಮಾ ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿ, ಪ್ರಸ್ತುತ ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ (reach clinic) ಸೇವೆ ಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಬರೆಯಿರಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org