ಬಾಲ್ಯ

ಆಟಿಸಂ: ವಾಸ್ತವ ಮತ್ತು ಮಿಥ್ಯ

ವೈಟ್ ಸ್ವಾನ್ ಫೌಂಡೇಶನ್

ತಪ್ಪು ಕಲ್ಪನೆ: ಆಟಿಸಂ ಒಂದು ಮಾನಸಿಕ ಖಾಯಿಲೆ.

ವಾಸ್ತವ: ಆಟಿಸಂ ಒಂದು ನರರೋಗವಾಗಿದ್ದು ಅದು ಮೆದುಳಿನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದು ಮಾನಸಿಕ ಖಾಯಿಲೆಯಲ್ಲ.

ತಪ್ಪು ಕಲ್ಪನೆ: ಗಂಡುಮಕ್ಕಳಲ್ಲಿ ಮಾತ್ರ ಆಟಿಸಂ ಕಾಣಿಸಿಕೊಳ್ಳುತ್ತದೆ.

ವಾಸ್ತವ: ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಲ್ಲೂ ಆಟಿಸಂ ಕಾಣಿಸಿಕೊಳ್ಳಬಹುದು. ಆದಾಗ್ಯೂ ಹೆಣ್ಣು ಮಕ್ಕಳಿಗೆ ಹೋಲಿಸಿದರೆ ಗಂಡು ಮಕ್ಕಳಲ್ಲಿ ಹೆಚ್ಚು ಪರಿಣಾಮ ಬೀರಿದಂತೆ ತೋರುತ್ತದೆ.

ತಪ್ಪು ಕಲ್ಪನೆ: ಆಟಿಸಂ ಗುಣಪಡಿಸಲು ಸಾಧ್ಯವಿಲ್ಲ, ಯಾವುದೇ ಬಗೆಯ ಚಿಕಿತ್ಸೆಯಿಲ್ಲ.

ವಾಸ್ತವ:  ನಾನಾ ಬಗೆಯ ಚಿಕಿತ್ಸೆಗಳಿವೆ ಮತ್ತು ಕಲಿಯುವ (ಇಂಟರ್ವೆಂಷನ್) ಮಾರ್ಗದರ್ಶನಗಳು ಲಭ್ಯವಿವೆ. ಇವು ಆಟಿಸಂ ಹೊಂದಿದ ಮಕ್ಕಳ ಅಭಿವೃದ್ಧಿಗೆ ಸಹಕಾರಿ. ಹೆಚ್ಚಿನ ಮಕ್ಕಳು ಬೆಳೆದಂತೆ ಸ್ವತಂತ್ರ ಯುವಕರಾಗುತ್ತಾರೆ ಮತ್ತು ಸಾಮಾನ್ಯ ಬದುಕನ್ನು ಮುನ್ನಡೆಸುತ್ತಾರೆ. ಆಟಿಸಂ ಹೊಂದಿರುವ ಮಕ್ಕಳು ಹೆಚ್ಚಿನ ಐಕ್ಯು (IQ) ಹೊಂದಿರುತ್ತಾರೆ ಮತ್ತು ಈ ಉತ್ಸಾಹವನ್ನು ಬಳಸಿಕೊಂಡು ಅವರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರವೀಣರಾಗುತ್ತಾರೆ.

ತಪ್ಪು ಕಲ್ಪನೆ: ಆಟಿಸಂ ಹೊಂದಿದ ಮಕ್ಕಳು ಎಂದಿಗೂ ಮಾತನಾಡಲು ಕಲಿಯುವುದಿಲ್ಲ.

ವಾಸ್ತವ: ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ ತರಬೇತಿ ನೀಡುವುದರಿಂದ ಮಕ್ಕಳು ಮಾತನಾಡಲು ಹಾಗೂ ಎಲ್ಲರೊಡನೆ ಸಂಭಾಷಿಸಲು ಕಲಿಯಬಹುದು.

ತಪ್ಪು ಕಲ್ಪನೆ: ಆಟಿಸಂ ಗುಣಲಕ್ಷಣ ಎಲ್ಲ ಮಕ್ಕಳಲ್ಲೂ ಒಂದೇ ಆಗಿರುತ್ತದೆ.

ವಾಸ್ತವ: ಆಟಿಸಂ ಒಂದು ತರಂಗಾಂತರ ತೊಂದರೆ ಎಂದು ಗುರುತಿಸಿಕೊಂಡಿದೆ. ಇದರ ಗುಣಲಕ್ಷಣಗಳು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನ ಬಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರತಿ ಮಗು ಎದುರಿಸುವ ತೊಂದರೆ ಇತರರಿಗಿಂತ ಭಿನ್ನವಾಗಿರುತ್ತದೆ.

ತಪ್ಪು ಕಲ್ಪನೆ: ವೈದ್ಯರು ಆಟಿಸಂ ಕುರಿತು ಎಲ್ಲವನ್ನೂ ತಿಳಿದಿರುತ್ತಾರೆ.

ವಾಸ್ತವ: ಕೇವಲ ಬೆರಳೆಣಿಕೆಯಷ್ಟು ವೈದ್ಯರಿಗೆ ಮಾತ್ರ ಆಟಿಸಂ ಕುರಿತು ಗೊತ್ತು. ಸಾಕಷ್ಟು ವೈದ್ಯರಿಗೆ ಆಟಿಸಂ ಕುರಿತು ಸೂಕ್ತ ಜ್ಞಾನವಿಲ್ಲ ಅಥವಾ ಅವರು ಆಟಿಸಂ ತಜ್ಞರಲ್ಲ. ಹೀಗಾಗಿ ಪಾಲಕರು ಮಗುವಿನ ಚಿಕಿತ್ಸೆಗೆ ಮೊದಲು ಸಂಬಂಧಿತ ಖಾಯಿಲೆಯ ಚಿಕಿತ್ಸೆಯಲ್ಲಿ ವೈದ್ಯರು ತಜ್ಞರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org