ನಿರೂಪಣೆ: ಬೌದ್ಧಿಕ ಅಸಾಮರ್ಥ್ಯವನ್ನು ಆರಂಭದ ಬೆಳವಣಿಗೆ ಹಂತದಲ್ಲಿ ಗುರುತಿಸಬಹುದು

ಬುದ್ಧಿಮಾಂದ್ಯತೆಯನ್ನು ಸೂಚಿಸುವ ಚಿಹ್ನೆಗಳನ್ನು ಆರಂಭದ ಬೆಳವಣಿಗೆ ಹಂತದಲ್ಲಿ ಪಾಲಕರು ಗಮನಿಸಿ ಸಾಕಷ್ಟು ಮೊದಲೇ ಚಿಕಿತ್ಸೆಯನ್ನು ಒದಗಿಸಬೇಕು.

ಶಾಲೆಯ ಶಿಕ್ಷಕರ ಸಲಹೆಯ ಮೇರೆಗೆ 9 ವರ್ಷ ವಯಸ್ಸಿನ ರಾಜೇಶ್‌ ನನ್ನು ಮನೋವೈದ್ಯರ ಬಳಿ ಕರೆತರಲಾಗಿತ್ತು. ಈತ ಕಲಿಕೆಯಲ್ಲಿ ತುಂಬಾ ಹಿಂದುಳಿದಿದ್ದ. ರಾಜೇಶನ ತಾಯಿ ಹೆರಿಗೆ ವೇಳೆ ತುಂಬಾ ಕಷ್ಟ ಅನುಭವಿಸಿದ್ದರು. ಅಲ್ಲದೇ ಜನಿಸಿದ ನಂತರ ಶಿಶು ತಡವಾಗಿ ಅತ್ತಿತ್ತು. ಎರಡು ವರ್ಷವಾದಾಗ ರಾಜೇಶ್‌ ನಡೆಯಲು ಆರಂಭಿಸಿದ್ದ. ಮೂರು ವರ್ಷವಾದ ನಂತರ ಒಂದಷ್ಟು ಶಬ್ದಗಳನ್ನು ಉಚ್ಛರಿಸಲು ಆರಂಭಿಸಿದ್ದ. ಬೆಳವಣಿಗೆಯ ಈ ಹಂತಗಳನ್ನು ತಲುಪುವಲ್ಲಿ  ವಿಳಂಬವಾಗಿದ್ದಕ್ಕೆ ರಾಜೇಶನ ಪಾಲಕರು ಚಿಂತೆಗೆ ಒಳಗಾಗಿದ್ದರು.  

ಸ್ಥಳೀಯ ವೈದ್ಯರಲ್ಲಿ ರಾಜೇಶನನ್ನು ಕರೆದುಕೊಂಡು ಹೋಗಿ ತೋರಿಸಿದ್ದರಾದರೂ, ನಿಧಾನವಾಗಿ ಸುಧಾರಿಸಿಕೊಳ್ಳುತ್ತಾನೆ ಎಂದು ಅವರು ಭರವಸೆ ನೀಡಿದ್ದರು. ಆಗಷ್ಟೇ ಮಲ ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಬಂದಿದ್ದರಿಂದ ಆರನೇ ವಯಸ್ಸಿಗೆ ರಾಜೇಶನನ್ನು ಸಮೀಪದ ಸರ್ಕಾರಿ ಶಾಲೆಗೆ ದಾಖಲಿಸಲಾಗಿತ್ತು. ಆತನ ಸಹಪಾಠಿಗಳಂತೆ ಶೈಕ್ಷಣಿಕ ಕೌಶಲ್ಯಗಳನ್ನು ಗ್ರಹಿಸಲು ರಾಜೇಶನಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಶಿಕ್ಷಕರು ಗುರುತಿಸಿದರು.

ಈ ಕುರಿತು ಪಾಲಕರಿಗೆ ಹೇಳಿದರು. ಹೀಗಾಗಿ ಅವರು ದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿನ ಮಕ್ಕಳ ಮನೋವೈದ್ಯರನ್ನು ಭೇಟಿ ಮಾಡಿದ್ದರು. ಮಗುವಿನ ಮಿದುಳು ಸ್ಕ್ಯಾನ್‌ ಮಾಡಿ, ಸಮಸ್ಯೆಯನ್ನು ಕಂಡುಹಿಡಿದು ನಂತರ ಔಷಧಗಳನ್ನು ನೀಡಿದರೆ ಮಗು ತನ್ನ ಸಹಪಾಠಿಗಳ ಸಮಾನವಾಗಿ ಬೆಳೆಯಬಲ್ಲ ಎಂಬ ನಿರೀಕ್ಷೆಯನ್ನಿಟ್ಟುಕೊಂಡು ರಾಜೇಶನ ಪಾಲಕರು ವೈದ್ಯರ ಬಳಿ ಬಂದಿದ್ದರು.

ರಾಜೇಶಗೆ ಬೌದ್ಧಿಕ ಅಂಗವೈಕಲ್ಯ ಇದೆ ಎಂಬುದಾಗಿ ಪರೀಕ್ಷೆಗಳಿಂದ ತಿಳಿದು ಬಂತು. ಮಗುವಿನ ಪರಿಸ್ಥಿತಿಯನ್ನು ವಿವರಿಸಿ, ಸಾಧ್ಯವಾದಷ್ಟೂ ಶೈಕ್ಷಣಿಕ ಕೌಶಲ್ಯಗಳನ್ನು ಕಲಿತುಕೊಳ್ಳಲು ಅನುಕೂಲವಾಗುವಂತೆ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕೆಂದು ಶಾಲಾ ಶಿಕ್ಷಕರಿಗೆ ಪತ್ರವೊಂದನ್ನು ನೀಡಲಾಯಿತು.

ಮಾಡೆಲಿಂಗ್‌, ಶೇಪಿಂಗ್‌, ಚೈನಿಂಗ್‌ ಮತ್ತು ಮನೆಯಲ್ಲೇ ಮಾಡಬಹುದಾದ ಕೆಲವು ಕ್ರಮಗಳ ಬಗ್ಗೆ ಪಾಲಕರಿಗೆ ತರಬೇತಿ ನೀಡಿದರು. ಈ ಸಮಸ್ಯೆಯಿರುವ ಮಕ್ಕಳ ಜೊತೆ ಕಾರ್ಯ ನಿರ್ವಹಿಸುವ ಸಂಸ್ಥೆಯನ್ನು ಸಂಪರ್ಕಿಸುವಂತೆ ಅವರಿಗೆ ಸಲಹೆ ನೀಡಿದರು.

ಸಣ್ಣ ಪ್ರಮಾಣದಲ್ಲಿನ ಬೌದ್ಧಿಕ ಅಸಾಮರ್ಥ್ಯವನ್ನು ಸಾಮಾನ್ಯವಾಗಿ ಶಾಲಾ ದಿನಗಳಲ್ಲಿ ಗುರುತಿಸಬಹುದು. ಪಾಲಕರಿಗೆ ಅಂಗವೈಕಲ್ಯದ ರೀತಿ ಹಾಗೂ ಅದನ್ನು ನಿರ್ವಹಿಸುವ ಬಗೆ ತಿಳಿದಿರುವುದಿಲ್ಲ. ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ ಕಾಣಿಸಿಕೊಳ್ಳಬಹುದಾದ ಚಿಹ್ನೆಗಳ ಬಗ್ಗೆ ಪಾಲಕರು ಗಮನ ಹರಿಸಬೇಕು. ಆರಂಭದಲ್ಲೇ ಚಿಕಿತ್ಸೆ ನೀಡುವುದರಿಂದ ಮಗು ಬೇಗ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ರೂಪಿಸಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಯ ಪ್ರಕರಣವನ್ನಾಧರಿಸಿಲ್ಲ. ಬದಲಿಗೆ  ಸಣ್ಣ ಪ್ರಮಾಣದಲ್ಲಿನ ಬೌದ್ಧಿಕ ಅಸಾಮರ್ಥ್ಯದಿಂದ ಬಳಲುತ್ತಿರುವ ವ್ಯಕ್ತಿಗಳೆಲ್ಲರಿಗೂ ಅನ್ವಯಿಸುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org