ಒಡಹುಟ್ಟಿದವರ ನಡುವಿನ ಪ್ರತಿಸ್ಪರ್ಧೆ

ತಮ್ಮ ಮಕ್ಕಳು ಪರಸ್ಪರ ಜಗಳವಾಡುವುದನ್ನು ಅಥವಾ ಒಬ್ಬರಿಗೊಬ್ಬರು ಪೈಪೋಟಿ ನಡೆಸುವುದನ್ನು ಪೋಷಕರು ಗಮನಿಸಿರಬಹುದು. ಕೆಲವೊಮ್ಮೆ ಒಡಹುಟ್ಟಿದ ಮಕ್ಕಳಿಗೆ ಪರಸ್ಪರ ಸ್ನೇಹದಿಂದಿರಲು ಅಥವಾ ಸೌಹಾರ್ದತೆ ಬೆಳೆಸಿಕೊಳ್ಳಲು ಅಸಾಧ್ಯವಾಗಿಬಿಡುತ್ತದೆ. ಮಕ್ಕಳ ನಡುವಿನ ನಿರಂತರ ಪೈಪೋಟಿ ಅವರ ನಡುವಿನ ಸಂಬಂಧವಷ್ಟೇ ಅಲ್ಲ, ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ.

ಸಹೋದರವೈರತ್ವ ಎಂದರೇನು?

ಒಡಹುಟ್ಟಿದವರ ನಡುವಿನ ಪೈಪೋಟಿ ಅಥವಾ ಅಸೂಯೆಯ ಮನೋಭಾವವನ್ನು ಒಡಹುಟ್ಟಿದವರ ಪ್ರತಿಸ್ಪರ್ಧೆ ಅಥವಾ ಸಹೋದರ ವೈರತ್ವ (ಸಿಬ್ಲಿಂಗ್ ರೈವಲರಿ) ಎಂದು ಹೇಳಲಾಗುತ್ತದೆ. ಇವು ಒಬ್ಬರು ಮಾತ್ರ ಮತ್ತೊಬ್ಬರ ಮೇಲೆ ಹೊಂದಿರುವಂಥದಾಗಿರಬಹುದು; ಅಥವಾ ಪರಸ್ಪರವೂ ಆಗಿರಬಹುದು. ಈ ಪ್ರತಿಸ್ಪರ್ಧೆಯು ಹೊಟ್ಟೆಕಿಚ್ಚು, ಅಸಮಾಧಾನ, ಅಸೂಯೆ ಮುಂತಾದ ಭಾವನೆಗಳನ್ನು ಹೊಂದಿರುತ್ತದೆ. ಮತ್ತು ಇದರಿಂದ ಪರಸ್ಪರ ವ್ಯಾಜ್ಯ ಬೆಳೆದು ಜಗಳಾಡುವವರೆಗೂ ಹೋಗಬಹುದು. ಬಹುತೇಕ, ಪೋಷಕರ ಗಮನವನ್ನು ತಮ್ಮತ್ತ ಸೆಳೆಯುವುದಕ್ಕಾಗಿ ನಡೆಸುವ ಪೈಪೋಟಿಯಾಗಿ ಆರಂಭವಾಗುವ ಈ ಪ್ರತಿಸ್ಪರ್ಧೆಯು ಕೆಲವೊಮ್ಮೆ ದ್ವೇಷದಲ್ಲಿ ಮುಕ್ತಾಯಗೊಳ್ಳುವುದೂ ಇದೆ.

ಮಗುವಿಗೆ ತನ್ನ ಪೋಷಕರಿಂದ ತನಗೆ ಸಿಗುತ್ತಿರುವ ಪ್ರೀತಿ, ವಾತ್ಸಲ್ಯಗಳನ್ನು ಇನ್ನೊಂದು ಮಗುವಿನ ಜೊತೆ ಹಂಚಿಕೊಳ್ಳಬಾರದೆಂಬ ಭಾವನೆ ಯಾವಾಗ ಉಂಟಾಗುತ್ತದೆಯೋ, ಆಗ ಈ ಪ್ರತಿಸ್ಪರ್ಧೆಯ ಮನೋಭಾವ ಮೂಡುತ್ತದೆ. ಈ ಮನೋಭಾವವು ಮುಂದುವರೆದು, ಮಕ್ಕಳ ಪ್ರೌಢಾವಸ್ಥೆಯಲ್ಲಿ… ಅಂದರೆ ತನ್ನನ್ನು ತಾನು ಗುರುತಿಸಿಕೊಳ್ಳುವ ಸಂದರ್ಭದಲ್ಲಿ ತೀವ್ರವಾಗುತ್ತದೆ ಮತ್ತು ಜಟಿಲಗೊಳ್ಳುತ್ತದೆ.

ನಿರಂತರ ಪೈಪೋಟಿಗೂ ಮತ್ತು ಸಾಂದರ್ಭಿಕ ಜಗಳಕ್ಕೂ ಇರುವ ವ್ಯತ್ಯಾಸವೇನು?

ಜೊತೆಜೊತೆಯಾಗಿ ಆಟವಾಡುವ ಮಕ್ಕಳಲ್ಲಿ ಜಗಳಗಳು ನಡೆಯುವುದು ಸಾಮಾನ್ಯ ಸಂಗತಿ. ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಮನೆಗಳಲ್ಲಿ ಸಹೋದರರು ಒಟ್ಟಾಗಿ ಹೆಚ್ಚಿನ ಸಮಯ ಕಳೆಯುತ್ತಾರೆ, ಆಟಿಕೆಗಳನ್ನು ಹಂಚಿಕೊಳ್ಳುತ್ತಾರೆ, ಒಟ್ಟಾಗಿ ಟಿ ವಿ ವೀಕ್ಷಿಸುತ್ತಾರೆ ಮತ್ತು ಪೋಷಕರ ಪ್ರೀತಿ - ವಾತ್ಸಲ್ಯವನ್ನು ಹಂಚಿಕೊಳ್ಳುತ್ತಾರೆ. ಸಹೋದರರ ನಡುವೆ ಸಣ್ಣಪುಟ್ಟ ಜಗಳಗಳು, ವಾದವಿವಾದಗಳು ಕಂಡುಬರುವುದು ಸಹಜ. ಇದರಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವೇನೂ ಇಲ್ಲ. ಆದರೆ ನಿರಂತರವಾಗಿ ತಲೆದೋರುವ ಜಗಳಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಹೀಗೆ ಒಡಹುಟ್ಟಿದವರು ಮೇಲಿಂದ ಮೇಲೆ ಜಗಳಾಡುವುದರಿಂದ ಸ್ವತಃ ಮಕ್ಕಳ ಮೇಲೆ ಮಾತ್ರವಲ್ಲ, ಕೌಟುಂಬಿಕ ಪರಿಸರದ ಮೇಲೂ ಪರಿಣಾಮ ಬೀರುತ್ತದೆ. ಇದು ತೀವ್ರಗೊಂಡರೆ ಕುಟುಂಬದಲ್ಲಿ ಬಿರುಕು ಮೂಡುವ ಸಾಧ್ಯತೆಯೂ ಇರುತ್ತದೆ.

ಮಾನಸಿ ಏಳು ವರ್ಷದವಳಿದ್ದಾಗ ಅವಳ ಸಹೋದರಿಯ ಜನನವಾಗಿತ್ತು. ಅವಳು ತನಗೊಬ್ಬ ಸಹೋದರ/ಸಹೋದರಿ ದೊರೆಯುತ್ತಾಳೆಂದು ಮತ್ತು ತನ್ನಜೊತೆ ಆಟವಾಡಲು ಒಂದು ಪುಟ್ಟ ಮಗು ಸಿಗುತ್ತದೆಂದು ಉತ್ಸಾಹದಿಂದ್ದಳು. ಮಗು ಜನಿಸಿದ ನಂತರ ಮುಗ್ಧ ಸ್ವಭಾವದ, ಒಳ್ಳೆಯ ಹುಡುಗಿ ಎಂದು ಕರೆಸಿಕೊಳ್ಳುತ್ತಿದ್ದ ಮಾನಸಿ, ತನ್ನ ತಾಳ್ಮೆಯನ್ನು ಕಳೆದುಕೊಳ್ಳಲಾರಂಭಿಸಿದಳು. ಮಾತುಮಾತಿಗೂ ಸಿಡಿಮಿಡಿಗೊಳ್ಳುತ್ತಿದ್ದಳು. ಅವಳು ತನ್ನ ತಂಗಿಯನ್ನು ನೋಡಲು ನಿರಾಕರಿಸುತ್ತಿದ್ದಳು. ಅವಳ ಕಲಿಕೆಯ ಬಗ್ಗೆ ಮತ್ತು ನಡತೆಯ ಬಗ್ಗೆ ಶಾಲೆಯಿಂದ ದೂರುಗಳು ಕೇಳಿಬರುತ್ತಿದ್ದವು. ಎಲ್ಲರೊಂದಿಗೆ ಬೆರೆಯುತ್ತಿದ್ದ, ವಿಧೇಯ ವಿದ್ಯಾರ್ಥಿನಿಯಾಗಿದ್ದ ಮಾನಸಿ, ತನ್ನ ತಂಗಿಯ ಜನನದ ನಂತರ, ಶಾಲೆಯಲ್ಲಿನ ಇತರ ಮಕ್ಕಳೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಳು. ಅವಳು ತನ್ನ ಪೋಷಕರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಳು. ತನಗೊಬ್ಬ ಸಹೋದರಿ ಜನಿಸಿದ ನಂತರ ಅವಳ ನಡವಳಿಕೆಯಲ್ಲಿ ಉಂಟಾದ ಬದಲಾವಣೆಗಳನ್ನು ಮಾನಸಿಯ ಪೋಷಕರು ಸರಿಯಾಗಿ ಗುರುತಿಸಲಿಲ್ಲ.

ಸಹೋದರ ವೈರತ್ವದ ಲಕ್ಷಣಗಳೇನು ?

ಸಾಮಾನ್ಯವಾಗಿ ಕಂಡು ಬರುವ ಸಹೋದರ ವೈರತ್ವದ ಗುಣಲಕ್ಷಣಗಳೆಂದರೆ - ತನ್ನ ಸಹೋದರ/ಸಹೋದರಿಯೊಂದಿಗೆ, ಪೋಷಕರೊಂದಿಗೆ ಹಾಗೂ ಮಿತ್ರರೊಂದಿಗೆ ನಡವಳಿಕೆಯಲ್ಲಿ ಬದಲಾವಣೆ. ಇದು ಮಗುವಿನ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತದೆ. ಉದಾಹರಣೆಗೆ: ಮಗು ತಾನು ಈ ಹಿಂದೆ ಗಳಿಸುತ್ತಿದ್ದುದಕ್ಕಿಂತ ಕಡಿಮೆ ಅಂಕಗಳನ್ನು ಪಡೆಯುವುದು ಅಥವಾ ಹೋಂವರ್ಕ್ ಸರಿಯಾಗಿ ಮಾಡದೇ ಇರುವುದು. ಅವರು ತಮ್ಮ ಸಹಪಾಠಿಗಳೊಂದಿಗೆ ಜಗಳವಾಡಲು ಪ್ರಾರಂಭಿಸಬಹುದು ಮತ್ತು ಅವರಲ್ಲಿ ಕೆಲವು ಗಮನಾರ್ಹಬದಲಾವಣೆಗಳು ಕಾಣಿಸಿಕೊಳ್ಳಲೂಬಹುದು. ಅವರು ಇತರರ ಗಮನ ಸೆಳೆಯಲು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲು ಪ್ರಾರಂಭಿಸಬಹುದು ಅಥವಾ ಕೆಲವೊಮ್ಮೆ ಚಿಂದಿ ಬಟ್ಟೆ ಧರಿಸುವ ಮೂಲಕ ತನ್ನ ಕೀಳರಿಮೆಯನ್ನು ತೋರ್ಪಡಿಸಬಹುದು.

ಸಹೋದರ ವೈರತ್ವದಿಂದ ಉಂಟಾಗುವ ಪರಿಣಾಮಗಳೇನು?

ಪೋಷಕರು ತಮ್ಮ ಮಕ್ಕಳನ್ನು ಸಮಾನವಾಗಿ ಕಂಡರೂ, ಯಾವುದೇ ರೀತಿಯ ಬೇಧಭಾವವನ್ನು ತೋರ್ಪಡಿಸದಿದ್ದರೂ, ಮಕ್ಕಳು ಒಬ್ಬರನ್ನೊಬ್ಬರು ಪರಸ್ಪರ ಶತ್ರುಗಳಂತೆ ಕಾಣುವ ಸಾಧ್ಯತೆ ಇರುತ್ತದೆ.

ಮನುಷ್ಯರು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು, ಸೌಕರ್ಯಗಳನ್ನು ಬಳಸಿಕೊಳ್ಳಲು ಪರಸ್ಪರ ಕಿತ್ತಾಡಿಕೊಳ್ಳುವಂತಹ ಮನೋಭಾವವನ್ನು ಹೊಂದಿರುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಅಂತೆಯೇ, ತಮ್ಮ ಸೌಕರ್ಯಗಳನ್ನು ಉಳಿಸಿಕೊಳ್ಳಲು ಯಾವುದೇ ರೀತಿಯ ಸ್ಪರ್ಧೆ ನಡೆಸುವ ಅವಶ್ಯಕತೆ ಇರದಿದ್ದರೂ, ತಮ್ಮ ಪ್ರವೃತ್ತಿಯಿಂದಾಗಿ ಮಕ್ಕಳು ಪರಸ್ಪರ ಜಗಳ ಆಡುತ್ತಿರುತ್ತಾರೆ.

ಪೋಷಕರ ಕರ್ತವ್ಯಗಳೇನು?

ಪೋಷಕರು ತಮ್ಮಮಕ್ಕಳ ಅಗತ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಅವರಿಗೆ ಮನದಟ್ಟಾಗುವಂತೆ ತಿಳಿ ಹೇಳಬೇಕು. ಸಹೋದರ ವೈರತ್ವಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳನ್ನು ಗಮನಿಸಿ ಸೂಕ್ತವಾಗಿ ಪ್ರತಿಕ್ರಿಯಿಸುವುದು ಅತಿಮುಖ್ಯ.

ಸಹೋದರ ವೈರತ್ವವನ್ನು ನಿರ್ವಹಿಸಲು ಇಲ್ಲಿ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ವಿವರಿಸಲಾಗಿದೆ :

  • ತಮ್ಮ ಮೊದಲನೆಯ ಮಗುವನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು : ತನಗೆ ಒಬ್ಬ ತಮ್ಮ ಅಥವಾ ತಂಗಿ ಬರುವವಳಿದ್ದಾಳೆಂಬ ವಿಷಯ ಮೊದಲನೆ ಮಗುವಿಗೆ ತಿಳಿದಿರಬೇಕು. ಪ್ರಾರಂಭದಲ್ಲಿ ಮೊದಲನೆ ಮಗು ಉತ್ಸಾಹದಿಂದಿರುತ್ತದೆ. ಆದರೆ 2-3 ದಿನಗಳ ನಂತರ ಆ ಉತ್ಸಾಹ ಕಡಿಮೆಯಾಗಬಹುದು ಮತ್ತು ತನಗೆ ಪೋಷಕರಿಂದ ಸಿಗಬಹುದಾದ ಪ್ರೀತಿ-ವಾತ್ಸಲ್ಯಗಳು ಕಡಿಮೆಯಾಗುತ್ತಿದೆ ಎಂಬ ಭಾವನೆ ಮೂಡಬಹುದು. ಇನ್ನೊಂದು ಮಗುವಿನ ಜನನದ ನಂತರ ಪರಿಸ್ಥಿತಿ ಬದಲಾಗಬಹುದೆಂಬ ಅಂಶವನ್ನು ನೀವು ಮೊದಲನೆ ಮಗುವಿಗೆ ತಿಳಿಸಿರಬೇಕು ಮತ್ತು ಸಾಧ್ಯವಾದಷ್ಟು ಸಮಯವನ್ನು ಅವರೊಂದಿಗೆ ಕಳೆಯುತ್ತೀರೆಂಬ ವಿಶ್ವಾಸ ಮೂಡಿಸಬೇಕು.

  • ಲಿಂಗತಾರತಮ್ಯವನ್ನು ತೋರ್ಪಡಿಸಬಾರದು : ಸಹೋದರರು ಭಿನ್ನಲಿಂಗಿಗಳಾಗಿದ್ದಲ್ಲಿ, ನೀವು ಯಾವುದೇ ರೀತಿಯ ಭೇದಭಾವವನ್ನು ತೋರ್ಪಡಿಸದೇ, ನಿಮ್ಮ ನಡವಳಿಕೆಯಿಂದ ಇಬ್ಬರಿಗೂ ಯಾವುದೇ ರೀತಿಯ ಕೀಳರಿಮೆ ಉಂಟಾಗದಂತೆ ಜಾಗೃತರಾಗಿರಬೇಕು. ನಿಮ್ಮ ನಿರ್ಧಾರಗಳಿಂದ ಇಬ್ಬರಲ್ಲಿ ಯಾರೊಬ್ಬರಿಗೂ ನೋವಾಗಬಾರದು. ಸಾಮಾನ್ಯವಾಗಿ ಸಮಾಜದಲ್ಲಿ ಪೋಷಕರು ಗಂಡು ಮಕ್ಕಳಿದ್ದರೆ ಯಾವುದೇ ರೀತಿಯ ಹೆಚ್ಚಿನ ಜವಾಬ್ದಾರಿಗಳಿರುವುದಿಲ್ಲವೆಂದು ಯೋಚಿಸುತ್ತಾರೆ ಮತ್ತು ಅವರನ್ನು ಸ್ವತಂತ್ರವಾಗಿ ಬೆಳೆಸುತ್ತಾರೆ. ಆದರೆ ಇದರಿಂದ ಹೆಣ್ಣು ಮಗಳಿಗೆ ಅಸಮಾಧಾನವುಂಟಾಗುತ್ತದೆ ಮತ್ತು ತನ್ನ ಮೇಲೆ ಪೋಷಕರಿಗೆ ವಿಶ್ವಾಸವಿಲ್ಲ ಎಂಬಭಾವನೆ ಅವಳಲ್ಲಿ ಮೂಡುತ್ತದೆ.

  • ತಮ್ಮ ಭಿನ್ನಾಭಿಪ್ರಾಯಗಳನ್ನು ತಾವೇ ಸರಿಪಡಿಸಿಕೊಳ್ಳಲಿ : ಮಕ್ಕಳ ಜಗಳದಲ್ಲಿ ನೀವೂ ಯಾವಾಗಲೂ ಮಧ್ಯ ಪ್ರವೇಶಿಸಬೇಡಿ. ಅವರ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಂಡರೆ ಅದು ಉತ್ತಮ ಬೆಳವಣಿಗೆ. ಒಂದು ಮಗು ಇನ್ನೊಂದು ಮಗುವಿಗಿಂತ ಬಲಶಾಲಿಯಾಗಿದ್ದರೆ, ದೊಡ್ಡವನಾಗಿದ್ದರೆ, ಆ ಮಗುವೇ ಗೆಲ್ಲುತ್ತದೆ. ಇದರಿಂದ ವೈರತ್ವ ಹೆಚ್ಚಾಗುತ್ತದೆ. ಇಂತಹ ನಡವಳಿಕೆಗಳು ನಿರಂತರವಾಗಿ ಕಂಡುಬಂದರೆ ಮಾತ್ರ ಪೋಷಕರು ಮಧ್ಯ ಪ್ರವೇಶಿಸಬೇಕು; ಮತ್ತು ಪರಸ್ಪರ ಜಗಳವಾಡದೆ ಯಾವ ರೀತಿಯಾಗಿ ಸಮಾಧಾನದಿಂದ, ಅನ್ಯೋನ್ಯವಾಗಿರಬೇಕೆಂದು ತಿಳಿ ಹೇಳಬೇಕು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org