ವೃದ್ಧ ಪೋಷಕರ ಮರೆಗುಳಿತನ ಒಂದು ಆತಂಕದ ವಿಷಯವೇ?

ವೃದ್ಧಾಪ್ಯದ ಕಾರಣದಿಂದ ಅಥವಾ ಡಿಮೆನ್ಷಿಯಾದಿಂದ ಇಳಿವಯಸ್ಸಿನಲ್ಲಿ ಮರೆವು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ನಿಜವಾದ ಕಾರಣವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ವಯಸ್ಸಾಗುತ್ತಾ ಹೋದಂತೆ ನಮ್ಮ ಶರೀರವು ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗುತ್ತಾ ಹೋಗುತ್ತವೆ. ಮತ್ತು, ಈ ಬದಲಾವಣೆಗೆ ನಮ್ಮ ಮೆದುಳೂ ಹೊರತಾಗಿಲ್ಲ. ಅಂತೆಯೇ, ವಯಸ್ಸಾದಂತೆಲ್ಲಾ ಮರೆವು ಹೆಚ್ಚಾಗುತ್ತಾ ಹೋಗುತ್ತದೆ. ನಾವೇನು ಮಾಡುತ್ತಿದ್ದೇವೆ ಅನ್ನುವ ಅರಿವೇ ಇರುವುದಿಲ್ಲ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಕಂಡುಬರುವ ಮರೆವಿಗೂ, ಅಲ್ಝೈಮರ್ ಅಥವಾ ಡಿಮೆನ್ಷಿಯಾ ಮುಂತಾದ ಕಾಯಿಲೆಯಿಂದ ಉಂಟಾಗುವ ಮರೆವಿಗೂ ವ್ಯತ್ಯಾಸವಿದೆ.

ವಯಸ್ಸಾಗುತ್ತಾ ಹೋದಂತೆ, ವ್ಯಕ್ತಿಯಲ್ಲಿ ಕಂಡುಬರುವ ಮರೆವು ಅವನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ ಮತ್ತು ಅವನ ಜೀವನಶೈಲಿಯ ಮೇಲೆ ಪರಿಣಾಮಬೀರುತ್ತದೆ. ಉದಾಹರಣೆಗೆ, ವಯೋವೃದ್ಧರೊಬ್ಬರು ತನ್ನ ಕನ್ನಡಕವನ್ನು ಅಥವಾ ಬೀಗದ ಕೈಯನ್ನು ಇರಿಸಿದ ಸ್ಥಳವನ್ನು ಮರೆಯುವುದು; ಅಥವಾ ಜನರ ಹೆಸರನ್ನೇ ಮರೆತುಬಿಡುವುದು… ಮುಂತಾದವು. ಜ್ಞಾಪಕ ಶಕ್ತಿಯಲ್ಲಿ ಕಂಡುಬರುವ ಇಂತಹ ಬದಲಾವಣೆಗಳು ಅವರ ದೈನಂದಿನ ಚಟುವಟಿಕೆಗಳ ನಿರ್ವಹಣೆಯ ಮೇಲೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರ ಮೇಲೆ ಅಥವಾ ಸಾಮಾಜಿಕ ಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.

ಡಿಮೆನ್ಷಿಯಾದಿಂದ ಉಂಟಾಗುವ ಮರೆವು

ಜ್ಞಾಪಕ ಶಕ್ತಿಯ ಕೊರತೆಗೆ ವಯಸ್ಸೊಂದೇ ಕಾರಣವಲ್ಲ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಲ್ಲಿ ಡಿಮೆನ್ಷಿಯಾದ ಗುಣಲಕ್ಷಣಗಳು ಕಂಡುಬಂದರೆ, ಅದರಿಂದ ಮರೆವಷ್ಟೇ ಅಲ್ಲದೆ; ಕಲಿಕೆಯ ಮೇಲೆ, ಮಾತನಾಡುವ ಭಾಷೆಯ ಮೇಲೆ, ನಮ್ಮ ಯೋಚನೆಗಳ ಮೇಲೆ, ಗ್ರಹಿಕೆ ಮತ್ತು ನಿರ್ಧಾರದ ಮೇಲೂ ಪರಿಣಾಮಗಳಾಗುತ್ತವೆ. ನಿಮ್ಮ ಪೋಷಕರಲ್ಲಿ ಈ ಕೆಳಗಿನ ಯಾವುದೇ ಗುಣಲಕ್ಷಣಗಳು ಕಂಡು ಬಂದರೆ ಪರಿಣಿತರ ನೆರವು ಪಡೆದುಕೊಳ್ಳಬೇಕು.

 • ಕೆಲವು ವಸ್ತುಗಳನ್ನು, ಕೆಲವೊಬ್ಬರ ಹೆಸರನ್ನು, ಘಟನೆಗಳನ್ನು ಮರೆಯುವ ಲಕ್ಷಣಗಳು ಹೆಚ್ಚಾಗಿ ಕಂಡುಬಂದರೆ,
 • ಕೆಲವು ಗಂಟೆಗಳ ಮುಂಚೆಯಷ್ಟೇ ನಡೆದಿರುವ ಘಟನೆಗಳನ್ನೂ ನೆನಪಿಟ್ಟುಕೊಳ್ಳಲು ವಿಫಲರಾದರೆ; ಉದಾಹರಣೆಗೆ : ಬೆಳಗ್ಗೆ ಉಪಹಾರಕ್ಕೆ ಯಾವ ತಿಂಡಿ ಸೇವಿಸಿದ್ದೆ ಎಂಬುದನ್ನೇ ಮರೆತು ಬಿಡುವುದು.
 • ಪರಿಚಿತರ, ತೀರಾ ಹತ್ತಿರದವರ ಹೆಸರನ್ನೂ ಗುರುತಿಸದಿರುವುದು; ಅಥವಾ ಪ್ರಮುಖ ಘಟನೆಗಳನ್ನು ಸಂಪೂರ್ಣವಾಗಿ ಜ್ಞಾಪಿಸಿಕೊಳ್ಳಲಾಗದಿರುವುದು. ಉದಾಹರಣೆಗೆ : ತನ್ನ ಮೊಮ್ಮಕ್ಕಳ ಹೆಸರು ಜ್ಞಾಪಕದಲ್ಲಿ ಇರದಿರಬಹುದು; ಅಥವಾ ಯಾರೋ ಒಬ್ಬ ಸಂಬಂಧಿಯ ಮನೆಗೆ ಹೋಗಿದ್ದು ಜ್ಞಾಪಕದಲ್ಲಿದ್ದು, ಅವರು ಯಾರೆಂಬುದನ್ನು ಮರೆಯುವುದು
 • ಸುಳಿವು ನೀಡಿದ ನಂತರವೂ ಕೆಲವು ಸ್ಥಳಗಳನ್ನು, ಕೆಲವರ ಹೆಸರನ್ನು, ಕೆಲವೊಂದು ಘಟನೆಗಳನ್ನು ನೆನಪಿಸಿಕೊಳ್ಳಲು ಆಗದಿರುವುದು
 • ಸಂಭಾಷಣೆ ನಡೆಸುತ್ತಿರುವಾಗ ಅಥವಾ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ ಕೆಲವೊಂದು ಸಾಮಾನ್ಯ ಪದಗಳನ್ನು ಮರೆಯುವುದು.
 • ತಮ್ಮ ನಡವಳಿಕೆಗಳಲ್ಲಿ ಅಥವಾ ಭಾವನೆಗಳಲ್ಲಿ ತೋರ್ಪಡಿಸುವ ತತ್ ಕ್ಷಣದ ಬದಲಾವಣೆಗಳು; ಅಥವಾ ತೀವ್ರ ಉದ್ವೇಗಕ್ಕೆ ಒಳಗಾಗುವುದು
 • ಮರೆವಿನಿಂದಾಗಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟ ಪಡುವುದು
 • ತಮ್ಮ ಅಗತ್ಯ ವಸ್ತುಗಳನ್ನು ಸೂಕ್ತ ಸ್ಥಳದಲ್ಲಿರಿಸದೇ ಬೇರೆಲ್ಲೋ ಇಟ್ಟುಬಿಡುವುದು; ಅಂದರೆ ವ್ಯಾಲೆಟ್ಟನ್ನು ಅಡುಗೆಮನೆಯ ಡ್ರಾವರ್’ಲ್ಲಿ ಇಡುವುದು ಅಥವಾ ರೆಫ್ರಿಜರೇಟರ್ ಒಳಗೆ ಇಟ್ಟುಬಿಡುವುದು
 • ತಮಗೆ ಚಿರಪರಿಚಿತವಾದ ಜಾಗಗಳಲ್ಲಿ ನಡೆದಾಡುವಾಗ ಅಥವಾ ಡ್ರೈವ್ ಮಾಡಿಕೊಂಡು ಹೋಗುವಾಗ ದಾರಿಯನ್ನು ಮರೆತು ಬಿಡುವುದು ಅಥವಾ ದಾರಿ ತಪ್ಪುವುದು
 • ಒಂದು ಸ್ಥಳವನ್ನು ತಲುಪಲು ಸರಿಯಾದ ದಾರಿಯನ್ನು ಕಂಡುಕೊಳ್ಳಲು ವಿಫಲರಾಗುವುದು
 • ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವುದು

ಇವುಗಳಲ್ಲಿ ಯಾವುದಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಲಕ್ಷಣಗಳು ಕಂಡುಬಂದರೆ ಅದು ಡಿಮೆನ್ಷಿಯಾದಿಂದ ಸಂಭವಿಸುವ ಮರೆವು ಎಂದು ತಿಳಿದುಕೊಳ್ಳಬಹುದು.

ಡಿಮೆನ್ಷಿಯಾ ಪತ್ತೆಯಾದ ನಂತರ ಏನು ಮಾಡಬೇಕು ?

ಡಿಮೆನ್ಷಿಯಾ, ವಯಸ್ಸಿನೊಂದಿಗೆ ವೃದ್ಧಿಸುವ ಕಾಯಿಲೆಯಾಗಿದೆ. ಇದು ಮೆದುಳಿನ ಮೇಲೆ ಪರಿಣಾಮ ಬೀರಿ, ಅದರ ಸಾಮರ್ಥ್ಯ ಕ್ಷೀಣಗೊಳಿಸುತ್ತದೆ. ಇದನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ತಡೆಗಟ್ಟುವುದರಿಂದ ಮಂದೆ ಎದುರಾಗಬಹುದಾದ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಅನಾಹುತಗಳನ್ನು ಕೆಲವು ಕಾಲದವರೆಗಾದರೂ ಮುಂದೂಡಬಹುದು. ನೀವು ನಿಮ್ಮ ಪೋಷಕರಲ್ಲಿ ಡಿಮೆನ್ಷಿಯಾದ ಗುಣ ಲಕ್ಷಣಗಳನ್ನು ಗುರುತಿಸಿದ್ದರೆ, ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಮನಃಶಾಸ್ತ್ರಜ್ಞರ ಅಥವಾ ನರರೋಗ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಮಧುಮೇಹ, ಹೈಪರ್ ಟೆನ್ಷನ್, ಕೊಲೆಸ್ಟರಾಲ್, ಮಾನಸಿಕ ಒತ್ತಡಗಳು, ಉದ್ವೇಗ, ವಿಟಮಿನ್ ‘ಬಿ’ ಕೊರತೆ ಮತ್ತು ಹೈಪೋಥೈರಾಯ್ಡಿಸಂ ಇವುಗಳೂ ಸಹ ಮರೆವಿನ ಕಾಯಿಲೆಗೆ ಕಾರಣವಾಗಿವೆ. ಇಂತಹ ದೈಹಿಕ - ಮಾನಸಿಕ ಒತ್ತಡಗಳಿಂದ ಡಿಮೆನ್ಷಿಯಾದ ತೀವ್ರತೆ ಹೆಚ್ಚಾಗಬಹುದು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿವೆ.

ಮರೆವಿನ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವ, ಅಥವಾ ತಡೆಗಟ್ಟುವ ಮಾರ್ಗಗಳು :

 • ಡಯಾಬಿಟೀಸ್, ಹೈಪರ್ ಟೆನ್ಷನ್, ಕೊಲೆಸ್ಟರಾಲ್, ಹೈಪೋಥೈರಾಯ್ಡಿಸಂ ಮತ್ತು ವಿಟಮಿನ್ ‘ಬಿ’ಯ ಕೊರತೆಯ ಬಗ್ಗೆ ಆಗಾಗ ಪರೀಕ್ಷಿಸಿಕೊಳ್ಳುವುದು.
 • ಒತ್ತಡ ಕಡಿಮೆ ಮಾಡಿಕೊಳ್ಳಲು ಅಗತ್ಯವಿರುವ ಜೀವನಶೈಲಿಯ ಬದಲಾವಣೆ ಮತ್ತು ಧೂಮಪಾನ/ಮದ್ಯಪಾನ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು.
 • ಮೆದುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸುವಂತಹ ಚಟುವಟಿಕೆಗಳಲ್ಲಿ ನಿರತರಾಗುವುದು. ಉದಾಹರಣೆಗೆ : ಸುಡೊಕು/ಪದಬಂಧವನ್ನು ಬಿಡಿಸುವುದು, ಚೆಸ್ ಅಥವಾ ಇನ್ನಿತರ ಬೋರ್ಡ್ ಗೇಮ್ ಆಡುವುದು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದೇ ಮುಂತಾದವು.
 • ಹೆಚ್ಚಿನ ದೈಹಿಕ ಚಟುವಟಿಕೆಗಳು ಮೆದುಳಿನ ರಕ್ತಸಂಚಾರವನ್ನು ಹೆಚ್ಚಿಸಲು ಮತ್ತು ಸುಗಮಗೊಳಿಸಲು ನೆರವಾಗಬಲ್ಲವು. ಇದರಿಂದ ಡಯಾಬಿಟಿಸ್, ಹೈಪರ್ ಟೆನ್ಷನ್, ಹಾಗೂ ಕೊಲೆಸ್ಟರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ.
 • ಹಣ್ಣು, ತರಕಾರಿಗಳು ಮತ್ತು ವಿಟಮಿನ್ ‘ಬಿ’ ಯಥೇಚ್ಛವಾಗಿರುವ ಆಹಾರ ಪದಾರ್ಥಗಳ ಸೇವನೆಯಿಂದ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ.

Dr P T Sivakumar, professor, geriatric psychiatric unit, NIMHANS ಅವರು ನೀಡಿದ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org