ಕೋವಿದ್ 19ರ ಸಂದರ್ಭದಲ್ಲಿ ವೃದ್ಧಾಪ್ಯದ ಆತಂಕ ಸಮಸ್ಯೆ- ಕೇಳಿಬರುವ ಪ್ರಶ್ನೆಗಳು
ವಿಶ್ವವ್ಯಾಪಿಯಾಗಿ ಹರಡಿರುವ ಕೋವಿದ್ 19 ಪಿಡುಗು ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೊರೋನಾ ವೈರಾಣು ವಿಶ್ವವ್ಯಾಪಿಯಾಗಿ ಹರಡುತ್ತಿರುವಂತೆಯೇ, ರಕ್ತದೊತ್ತಡ ಹೆಚ್ಚು ಇರುವವರು, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಇರುವವರು, ಮಧುಮೇಹಿಗಳು ಮತ್ತಿತರ ಸೂಕ್ಷ್ಮ ಅನಾರೋಗ್ಯ ಹೊಂದಿರುವವರು ಈ ಸೋಂಕಿಗೆ ಬೇಗನೆ ತುತ್ತಾಗುವ ಸಾಧ್ಯತೆಗಳಿವೆ. ವಯಸ್ಸಾದ ಹಿರಿಯರಿಗೆ ಈ ಸೋಂಕು ಬೇಗನೆ ತಗಲುತ್ತದೆ ಎನ್ನುವುದು ಸ್ಪಷ್ಟವಾಗಿದ್ದು, ಇದು ವೃದ್ಧರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಈ ಹಿನ್ನೆಲೆಯಲ್ಲಿ ನಾವು ನರರೋಗ ಮನೋವೈದ್ಯರಾದ ತನ್ವಿ ಮಲ್ಯ ಅವರ ಬಳಿ ಸಮಾಲೋಚನೆ ನಡೆಸಿ ಜನರು ಕೋವಿದ್ 19ರ ಸಂದರ್ಭದಲ್ಲಿ ವೃದ್ಧಾಪ್ಯದ ಆತಂಕ ಸಮಸ್ಯೆ ಹೊಂದಿರುವವರು ಎದುರಿಸುವ ಹಲವು ಪ್ರಶ್ನೆಗಳನ್ನು ಚರ್ಚೆ ಮಾಡಿದ್ದೇವೆ. ತನ್ವಿ ಮಲ್ಯ ಹಿರಿಯರ ಆರೋಗ್ಯಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ.
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆತಂಕ ಪಟ್ಟಿರುವ ಹಿರಿಯರಿಗೆ ನೆರವಾಗಲು ನಾವು ಏನು ಮಾಡಬಹುದು ?
ಮಲ್ಯ : ಕೋವಿದ್ 19ಗೆ ತಾವು ಸುಲಭ ತುತ್ತಾಗುತ್ತೇವೆ, ಸೋಂಕು ತಮಗೆ ಬೇಗನೆ ತಗಲುತ್ತದೆ ಎಂದು ಬಹುಪಾಲು ಹಿರಿಯರಿಗೆ ತಿಳಿದಿರುತ್ತದೆ. ಹಾಗಾಗಿ ಸತತವಾಗಿ ಟಿವಿ ಸುದ್ದಿಯನ್ನು ನೋಡುವುದರಿಂದ ಅವರಲ್ಲಿ ಆತಂಕ ಹೆಚ್ಚಾಗುತ್ತದೆ. ಈ ವಿಶ್ವವ್ಯಾಪಿ ಕೊರೋನಾ ವಿಚಾರವನ್ನು ಹೊರತುಪಡಿಸಿ ಇತರ ಸಕಾರಾತ್ಮಕ ವಿಷಯಗಳ ಬಗ್ಗೆ ಅವರೊಡನೆ ಚರ್ಚೆ ನಡೆಸುವುದು ಒಳಿತು. ನೀವು ಅವರ ಬಳಿ ಕೋವಿದ್ 19 ಕುರಿತು ಮಾತನಾಡಿದರೆ ಅಥವಾ ಅವರಲ್ಲಿ ಹೆಚ್ಚಿನ ಒತ್ತಡ ಕಂಡುಬಂದರೆ, ಅವರಿಗೆ ಭರವಸೆ ಮೂಡಿಸುವಂತಹ ಸರಿಯಾದ ಮಾಹಿತಿಯನ್ನು ನೀಡಿ.
ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ಅವರು ತಾವೇ ರೂಪಿಸಿಕೊಂಡಿರುವ ಒಂದು ಸಮುದಾಯದ ನಡುವೆಯೇ ಚಟುವಟಿಕೆಯಿಂದಿರುತ್ತಾರೆ. ಈ ಲಾಕ್ ಡೌನ್ ಅವಧಿಯಲ್ಲಿ ಅವರು ತಮಗೆ ಭಾವನಾತ್ಮಕವಾಗಿ ಪ್ರೇರಣೆಯಾಗಿದ್ದ ಚಟುವಟಿಕೆಯನ್ನು ಕಳೆದುಕೊಂಡಿದ್ದಾರೆ. ಅವರು ಪರಿಸ್ಥಿತಿಯನ್ನು ನಿಭಾಯಿಸುವಂತೆ ಮಾಡಲು ಏನು ಮಾಡಬಹುದು ?
ಮಲ್ಯ : ಇಂತಹ ಸಮಯದಲ್ಲಿ ಹಿರಿಯರಿಗೆ ಸಹಾಯ ಮಾಡಲು, ಸಾಧ್ಯವಾದಷ್ಟೂ ಅವರ ಸಾಮಾಜಿಕ ಸಕ್ರಿಯ ಚಟುವಟಿಕೆಗಳಿಗೆ ಆನ್ ಲೈನ್ ಮೂಲಕ ಅವಕಾಶ ಮಾಡಿಕೊಡಬಹುದು. ನಮಗೆ ನಮ್ಮ ನಿತ್ಯ ಜೀವನದ ಚಟುವಟಿಕೆಗಳನ್ನು ಆನ್ ಲೈನ್ ಮೂಲಕ ನಿರ್ವಹಿಸುವುದು ಬಹಳ ಸುಲಭ ಎನಿಸುತ್ತದೆ ಆದರೆ ಅವರಿಗೆ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರ ಜೀವನದ ಮುಖ್ಯ ಚಟುವಟಿಕೆಗಳನ್ನು ಆನ್ ಲೈನ್ ಮೂಲಕ ನಿರ್ವಹಿಸಲು ನೆರವಾದರೆ, ಅವರಿಗೆ ಕೋವಿದ್ 19 ಉಂಟುಮಾಡುವ ಸನ್ನಿವೇಶವನ್ನು ಎದುರಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅವರು ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ ಗೆಳೆಯರನ್ನು ಭೇಟಿ ಮಾಡುತ್ತಿದ್ದರೆ ಅವರೊಡನೆ ವಿಡಿಯೋ ಕಾಲ್ ಅಥವಾ ದೂರವಾಣಿ ಕರೆ ಮಾಡಿ ಮಾತನಾಡುವಂತೆ ಮಾಡಬಹುದು. ಅವರು ಯೋಗ ಅಥವಾ ಯಾವುದೇ ಚಿಕಿತ್ಸಕ ಕ್ರಿಯೆಯಲ್ಲಿ ತೊಡಗಿದ್ದರೆ, ಅದನ್ನೂ ಆನ್ ಲೈನ್ ಮೂಲಕ ಒದಗಿಸಲು ನೆರವಾಗಬಹುದು. ನೀವು ಮತ್ತು ನಿಮ್ಮ ಕುಟುಂಬದ ಇತರ ಸದಸ್ಯರು ಅವರಿಗೆ ಒಬ್ಬರಾದ ಮೇಲೊಬ್ಬರಂತೆ ದೂರವಾಣಿ, ಮೊಬೈಲ್ ಕರೆ ಮಾಡುವುದರ ಮೂಲಕ ಅವರನ್ನು ಸಾಮಾಜಿಕ ಅಂತರದಿಂದ ಕಾಪಾಡಬಹುದು.
ಇಂತಹ ಸನ್ನಿವೇಶದಲ್ಲಿ ಹಿರಿಯರು ತಾವಾಗಿಯೇ ಅನುಸರಿಸಬಹುದಾದ ಸ್ವಯಂ ಕಾಳಜಿಯ ಸಲಹೆಗಳೇನು ?
ಮಲ್ಯ : • ಅವರ ನಿತ್ಯ ಚಟುವಟಿಕೆಗಳನ್ನು ಸಾಧ್ಯವಾದಷ್ಟೂ ಆನ್ ಲೈನ್ ಮೂಲಕ ಮಾಡುವಂತೆ ಅನುಕೂಲ ಮಾಡುವುದರಿಂದ ಮಾಮೂಲಿನಂತೆ ಇರುತ್ತಾರೆ.
• ಅವರು ನಿತ್ಯವೂ ಭೇಟಿಯಾಗುವ ಗೆಳೆಯರು ಮತ್ತು ಕುಟುಂಗಳೊಡನೆ ಮೊಬೈಲ್ ಕರೆಯ ಮೂಲಕ ಮಾತನಾಡುವುದು.
• ಅತಿಹೆಚ್ಚು ಸುದ್ದಿ ನೋಡುವುದನ್ನು ತಪ್ಪಿಸುವುದು, ನಿಗದಿತ ಸಮಯದಲ್ಲಿ ಮಾತ್ರವೇ ಸುದ್ದಿಯನ್ನು ನೋಡುವುದು, ಇಂತಿಷ್ಟೇ ಸಮಯ ಟಿವಿ ನೋಡುವುದು ಮುಖ್ಯ. ಈ ಸಮಯದಲ್ಲಿ ಸುದ್ದಿ ಹೆಚ್ಚು ಪ್ರಭಾವ ಬೀರುವುದೇ ಅಲ್ಲದೆ ಆತಂಕವನ್ನೂ ಹೆಚ್ಚಿಸುತ್ತದೆ.
• ಮನೆಗೆಲಸಗಳಲ್ಲಿ ಅವರನ್ನೂ ತೊಡಗುವಂತೆ ಮಾಡುವುದು.
• ಅವರಲ್ಲಿ ಇರಬಹುದಾದ ಇತರ ಹವ್ಯಾಸಗಳು, ಕಲೆ, ಸಂಗೀತ, ಓದುವುದು, ತಂತ್ರಜ್ಞಾನದ ಬಳಕೆ ಮುಂತಾದುವಕ್ಕೆ ಅವಕಾಶ ಒದಗಿಸುವುದು.
ಅನೇಕ ಹಿರಿಯರು ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದಾರೆ. ಅವರ ಒಂಟಿತನ ನಿವಾರಿಸಲು ಹೇಗೆ ನೆರವು ನೀಡಲು ಸಾಧ್ಯ ?
• ನಿಮ್ಮ ಮನೆಯಲ್ಲಿರುವವರೆಲ್ಲರೂ ಒಬ್ಬರಾದಮೇಲೊಬ್ಬರಂತೆ ಪಾಳಿಯಲ್ಲಿ ಅವರೊಡನೆ ಮೊಬೈಲ್ ಸಂಭಾಷಣೆ ನಡೆಸಿ.
• ಕನಿಷ್ಟ 30 ರಿಂದ 60 ನಿಮಿಷಗಳ ಕಾಲ ಪ್ರತಿಬಾರಿ ಫೋನ್ ಮಾಡಿದಾಗಲೂ ಮಾತನಾಡಿ.
• ಅವರೊಡನೆ ವಿವಿಧ ವಿಚಾರಗಳನ್ನು ಕುರಿತು ಮಾತನಾಡಿ. ಅವರ ಬಾಲ್ಯದ ಘಟನೆಗಳು ಅಥವಾ ಅವರಿಗೆ ರುಚಿಸುವ ಖಾದ್ಯಗಳ ಬಗ್ಗೆ ಮಾತನಾಡಿ.
• ನಿಮ್ಮ ಕುಟುಂಬದ ಇತರರೊಡನೆ ಸೇರಿ ,ಹಿರಿಯರನ್ನೂ ಒಳಗೊಂಡಂತೆ ಗುಂಪು ವಿಡಿಯೋ ಚರ್ಚೆ ಏರ್ಪಡಿಸಿ, ಒಟ್ಟಾಗಿ ಚಿತ್ರ ಬರೆಯುವುದೋ ಅಥವಾ ಅಡುಗೆ ಮಾಡುವುದೋ ಮಾಡುವ ಮೂಲಕ ಒಟ್ಟಾಗಿದ್ದೇವೆ ಎಂಬ ಭಾವನೆ ಉಂಟುಮಾಡಬಹುದು.
ಅನೇಕ ಜನರಿಗೆ ಮನೆ ಕೆಲಸ ಮಾಡುವವರು ಕೆಲಸಕ್ಕೆ ಬರುತ್ತಿಲ್ಲವಾದ್ದರಿಂದ ತೊಂದರೆಯಾಗುತ್ತಿದೆ. ಹಿರಿಯರನ್ನು ನೋಡಿಕೊಳ್ಳುವವರು, ಕಚೇರಿಯ ಕೆಲಸವನ್ನು ಮನೆಯಿಂದಲೇ ಮಾಡುತ್ತಾ, ಹಿರಿಯರ ಕಾಳಜಿಯನ್ನೂ ವಹಿಸುತ್ತಾ, ಮನೆಗೆಲಸಗಳನ್ನೂ ಮಾಡಬೇಕಾಗಿದೆ. ಈ ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸಲು ಯಾವ ಸಲಹೆಗಳನ್ನು ನೀಡುತ್ತೀರಿ?
ಈ ಸಮಯದಲ್ಲಿ ಹಿರಿಯರ ಆರೋಗ್ಯದ ಕಾಳಜಿ ವಹಿಸುವುದೆಂದರೆ ಕೇವಲ ದೈಹಿಕ ಶ್ರಮ ವಹಿಸುವುದು ಮಾತ್ರವೇ ಅಲ್ಲ, ಭಾವನಾತ್ಮಕವಾಗಿಯೂ ಸ್ಪಂದಿಸುವುದು ಅಗತ್ಯ. ಇದು ಕೆಲವೊಮ್ಮೆ ತ್ರಾಸದಾಯಕವಾಗಿರಬಹುದು.
• ಜಾಗ ಸಾಲದೆ ಇದ್ದರೆ, ಕಾಳಜಿ ವಹಿಸುವವರು ಹಿರಿಯರಿಗೆ ಚಲನ ಚಿತ್ರ ನೋಡಲು ಅನುಕೂಲ ಮಾಡಿಕೊಡಬಹುದು. ಅಥವಾ ಅವರಿಗೆ ಖುಷಿಯಾಗುವ ಯಾವುದಾದರೂ ಚಟುವಟಿಕೆ ನಡೆಸಬಹುದು. ಆಗ ಕಾಳಜಿ ವಹಿಸುವವರಿಗೂ ತಮ್ಮದೇ ಆದ ಸಮಯ ಸಿಗುತ್ತದೆ.
• ಈ ಒಂಟಿತನದ ಸಮಯವನ್ನು ಸ್ವಯಂ ಕಾಳಜಿ ವಹಿಸಲು ಬಳಸಬಹುದು, ಉದಾಹರಣೆಗೆ ವ್ಯಾಯಾಮ, ಚಿತ್ರಕಲೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗುವುದು.
• ಸಮಯವನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ನಿತ್ಯ ಚಟುವಟಿಕೆಗಳನ್ನು ಯೋಜನಾಬದ್ಧವಾಗಿ ನಡೆಸಬೇಕು.
• ನೆರವಿಗಾಗಿ ಚಿಕಿತ್ಸಕರನ್ನು, ಗೆಳೆಯರನ್ನು ಸಂಪರ್ಕಿಸುವುದು.