ನಿರೂಪಣೆ: ದಿನಗಳು ಕಳೆದಂತೆ, ಇತ್ತೀಚಿನ ಸಂಭಾಷಣೆಗಳು ಆತನಿಗೆ ಮರೆತು ಹೋಗುತ್ತಿತ್ತು. ಪದೇ ಪದೇ ಕೇಳಿದ್ದನ್ನೇ ಕೇಳತೊಡಗಿದ್ದ.

ಕೌನ್ಸೆಲಿಂಗ್ ಮಾಡಿದ್ದು ಅವನ ರೋಗಲಕ್ಷಣವನ್ನು ಒಪ್ಪಿಕೊಳ್ಳಲು ಮತ್ತು ಆತನನ್ನು ಇನ್ನೂ ಹೆಚ್ಚು ಚೆನ್ನಾಗಿ ನೋಡಿಕೊಳ್ಳಲು ಕುಟುಂಬದವರಿಗೆ ಸಹಾಯಕಾರಿಯಾಗಿತ್ತು.

71 ವರ್ಷ ವಯಸ್ಸಿನ  ಆನಂದ (ಹೆಸರು ಬದಲಿಸಲಾಗಿದೆ) ಆರು ಜನರಿರುವ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಾರೆ. ಸರ್ಕಾರಿ ಸಂಸ್ಥೆಯೊಂದರಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ ಅವರು ಹತ್ತು ವರ್ಷಗಳ ಹಿಂದೆ ನಿವೃತ್ತನಾಗಿದ್ದರು. ಅವರದ್ದು ಕಡಿಮೆ ಮಾತು, ಕಠಿಣ ಶಿಸ್ತು ಮತ್ತು ಕೆಲಸದ ವಿಚಾರದಲ್ಲಿ ಅತ್ಯಂತ ಅಚ್ಚುಕಟ್ಟು.

ನಿವೃತ್ತಿಯಾದ ಕೆಲ ದಿನಗಳ ನಂತರ  ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ ಎಂಬುದನ್ನು ಕುಟುಂಬದವರು ಗಮನಿಸಿದರು. ಮನೆಯಲ್ಲಿ ವಸ್ತುಗಳನ್ನು ಎಲ್ಲೋ ಇಟ್ಟು, ಅದು ಮರೆತುಹೋಗಿ ಎಲ್ಲೆಲ್ಲೋ ಹುಡುಕುತ್ತಿದ್ದರು. ವಯಸ್ಸಾಗುತ್ತಿರುವ ಕಾರಣ ಅವರ ನೆನಪಿನ ಸಮಸ್ಯೆಯನ್ನು ಅರಳು ಮರಳು ಎಂದು ಸುಮ್ಮನಾದರು. ಯಾಕೆಂದರೆ ನೆನಪಿನ ಸಮಸ್ಯೆಯೊಂದನ್ನು ಬಿಟ್ಟು ಉಳಿದೆಲ್ಲ ನಿತ್ಯದ ಕೆಲಸಗಳನ್ನು ಆನಂದ ಅವರು ಅಚ್ಚುಕಟ್ಟಾಗಿಯೇ ಮಾಡುತ್ತಿದ್ದರು.

ದಿನಗಳು ಕಳೆದಂತೆ, ತೀರಾ ಇತ್ತೀಚಿನ ಸಂಭಾಷಣೆಗಳೂ ಅವರಿಗೆ ಮರೆತು ಹೋಗಲಾರಂಭಿಸಿದವು. ಒಂದೇ ಮಾಹಿತಿಯನ್ನು ಮತ್ತೆ ಮತ್ತೆ ಕೇಳುತ್ತಿದ್ದರು ಅಥವಾ ತುಂಬಾ ತಿಳಿದಿರುವ ಸ್ಥಳದ ದಾರಿ ತಿಳಿಯುತ್ತಿರಲಿಲ್ಲ. ನಿತ್ಯದ ಚಟುವಟಿಕೆಗಳನ್ನು ನಡೆಸುವಲ್ಲಿಯೂ ಅವರ ವೇಗ ಕುಂಠಿತಗೊಂಡಿತ್ತು. ಅರ್ಧಂಬರ್ಧ ಮಾಡಿದ ಯಾವುದೇ ಕೆಲಸವನ್ನು ನೆನಪಿಸಿದಾಗ, ಆನಂದ್‌ ಅವರಿಗೆ ಕಿರಿಕಿರಿ ಆಗುತ್ತಿತ್ತು.  "ನಂಗೆ ಏನ್ಮಾಡ್ಬೇಕು ಅಂತ ಗೊತ್ತು. ನೀನು ಮತ್ತೆ ಮತ್ತೆ ಹೇಳಬೇಕಾಗಿಲ್ಲ" ಎಂದು ಕೋಪಗೊಳ್ಳುತ್ತಿದ್ದರು. ಇಂತಹ ಮಾತುಗಳಿಂದಾಗಿ  ಮನೆಯಲ್ಲಿ ನೆಮ್ಮದಿ ಕೆಡುತ್ತಿತ್ತು.

ಒಂದು ದಿನ, ಆನಂದ ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ವಾಪಸಾಗಲಿಲ್ಲ. ಅವರ ಪತ್ನಿ ಮೊಬೈಲ್‌ ಫೋನಿಗೆ ಹಲವು ಬಾರಿ ಕರೆ ಮಾಡಿದರೂ ಆನಂದ್ ಸ್ವೀಕರಿಸಿರಲಿಲ್ಲ. ಕುಟುಂಬದ ಎಲ್ಲರೂ ಆತಂಕದಿಂದ ಅವರನ್ನು ಹುಡುಕಲು ಆರಂಭಿಸಿದರು. ಆಗ ಮನೆಯಿಂದ ಎರಡು ಬೀದಿಯ ಆಚೆ ಅವರು ಗೊಂದಲದಿಂದ ನಿಂತಿರುವುದು ಕಂಡುಬಂದಿತ್ತು. ಈ ಬಗ್ಗೆ ಕೇಳಲಾಗಿ, ಮನೆಗೆ ಹೋಗುವ ದಾರಿ ಬಗ್ಗೆ ಗೊಂದಲವಾಗಿತ್ತು ಹೀಗಾಗಿ ಏನು ಮಾಡಬೇಕು ಅಂತ ತಿಳಿಯದೇ ನಿಂತಿದ್ದೆ ಎಂದು ಹೇಳಿದರು. ಈ ಘಟನೆಯ ನಂತರ ಈ ಸಮಸ್ಯೆಗೆ ವೈದ್ಯರ ನೆರವು ಅಗತ್ಯ ಎಂಬುದು ಕುಟುಂbದವರಿಗೆ ಮನವರಿಕೆಯಾಗಿತ್ತು. ಕೂಡಲೇ ಅವರು ವೈದ್ಯರನ್ನು ಕಾಣಲು ನಿರ್ಧರಿಸಿದರು.

ಕುಟುಂಬದ ಇತಿಹಾಸದ ಬಗ್ಗೆ ವೈದ್ಯರು ಕೇಳಿದಾಗ, ಆನಂದ್‌ ಅವರ ತಾಯಿಗೆ ಕೂಡ ಇಳಿವಯಸ್ಸಿನಲ್ಲಿ ಇದೇ ಸಮಸ್ಯೆ ಇದ್ದಿದ್ದು ತಿಳಿದುಬಂತು. ಆಸ್ಪತ್ರೆಯಲ್ಲಿ, ಸಂಪೂರ್ಣ ಕೇಸ್‌ ಹಿಸ್ಟರಿಯನ್ನು ದಾಖಲಿಸಲಾಯಿತು. ವಿವರವಾದ ನರಮನೋವೈದ್ಯಕೀಯ ವಿಶ್ಲೇಷಣೆ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಮಾಡಿದಾಗ ನೆನಪಿನಶಕ್ತಿಯಲ್ಲಿನ ನಿಧಾನತೆ  ಮತ್ತು ಕೆಲವು ಆದೇಶಗಳನ್ನು ಅನುಸರಿಸುವಲ್ಲಿ ಸಮಸ್ಯೆ ಇರುವುದನ್ನು ಗುರುತಿಸಲಾಯಿತು. ಸಂಪೂರ್ಣ ತಪಾಸಣೆಯ ನಂತರ, ಆನಂದ್‌ಗೆ ಮೊದಲ ಹಂತದ ಅಲ್ಜೈಮರ್‌ ಖಾಯಿಲೆ ಇರುವುದು ಪತ್ತೆಯಾಯಿತು. ವಿಷಯ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು  ಅತ್ಯಂತ ಚಿಂತೆಗೀಡಾದರು. ಈ ಸಮಸ್ಯೆ ಮುಂದೆ ಹೇಗೆ ಹೆಚ್ಚಾಗಬಹುದು? ಮತ್ತು ಇದನ್ನು ಆರೈಕೆ ಮಾಡುವ ವಿಧಾನಗಳ ಬಗ್ಗೆ ಅವರು ವೈದ್ಯರ ಬಳಿ ಕೇಳಿದರು. ಅಜ್ಜಿ ಹೇಗೆ ಈ ಸಮಸ್ಯೆಯಿಂದ ಬಳಲಿದ್ದರು ಮತ್ತು ಅವರ ಸಮಸ್ಯೆಯನ್ನು ಹೇಗೆ ಅಸಡ್ಡೆ ಮಾಡಲಾಗಿತ್ತು ಎಂಬುದರ ಅರಿವಿದ್ದ ಪುತ್ರಿಯರು ತಮ್ಮ ತಂದೆಯ ಬಗ್ಗೆ ಅತಿಯಾದ ರಕ್ಷಣಾ ಮನೋಭಾವ ಹೊಂದಿದ್ದರು.
ಪುತ್ರಿಯರು ತಮ್ಮ ತಂದೆಯ ಅನಾರೋಗ್ಯವನ್ನು ಒಪ್ಪಿಕೊಂಡಿದ್ದರೂ, ಆನಂದ್ ಅವರ ಪತ್ನಿಗೆ ತನ್ನ ಪತಿ ಅಲ್ಜೈಮರ್‌ಗೆ ತುತ್ತಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಅತೀವ ಕಷ್ಟವಾಯಿತು. ಪತಿಯನ್ನು ನಿತ್ಯವೂ ಆರೈಕೆ ಮಾಡುವ ವಿಚಾರವೇ ಅವರನ್ನು ಕುಂದಿಸಿತ್ತು. ಯಾಕೆಂದರೆ ಆಕೆಗೂ 68 ವರ್ಷ ವಯಸ್ಸು. ಆಕೆ ಕೂಡ ತೀವ್ರ ಆಸ್ಟಿಯೋ ಅರ್ಥ್‌ರೈಟಿಸ್‌ನಿಂದ ಬಳಲುತ್ತಿದ್ದರು. ಯಾರೂ ತನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಪತಿಯೂ ಕೂಡ ತನ್ನನ್ನು ತಾನೇ ನೋಡಿಕೊಳ್ಳಬೇಕು ಎಂಬುದು ಆಕೆಯ ದೂರಾಗಿತ್ತು. ಹೆಣ್ಣುಮಕ್ಕಳಿಗೆ ಈ ಸಮಸ್ಯೆಯನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು.

ಹಲವು ಬಾರಿ ಕೌಟುಂಬಿಕ ಕೌನ್ಸೆಲಿಂಗ್ ಮಾಡಿದ ನಂತರ, ಆನಂದರ ಪತ್ನಿ ತನ್ನ ಪತಿಯ ಅನಾರೋಗ್ಯವನ್ನು ಒಪ್ಪಿಕೊಳ್ಳುವುದು ಸಾಧ್ಯವಾಯಿತು. ಆಕೆ ಮತ್ತು ಆಕೆಯ ಪುತ್ರಿಯರು ಆನಂದರ ದೈನಂದಿನ ಚಟುವಟಿಕೆಗಳನ್ನು ಮೊದಲೇ ಯೋಜಿಸಿ ನಿಗದಿಗೊಳಿಸಿದ್ದರು. ಅಲ್ಲದೇ ಆನಂದ್ ಕೂಡ  ಚಟುವಟಿಕೆಯಿಂದಿರಲು ಸಹಾಯಮಾಡುವ ನಿಟ್ಟಿನಲ್ಲಿ ಕೆಲವು ಹವ್ಯಾಸಗಳನ್ನು ರೂಢಿಸಿಕೊಂಡರು. ಕುಟುಂಬದ ಬೆಂಬಲ ಮತ್ತು ಆರೈಕೆಯಿಂದ ಅವರು ತಮ್ಮ ಪರಿಸ್ಥಿತಿಯನ್ನು ಎದುರಿಸುವುದು ಸಹಾಯಕವಾಯಿತು.

ನಿಮ್ಹಾನ್ಸ್‌ನಲ್ಲಿ  ಪಿಎಚ್‌ಡಿ ಅಧ್ಯಯನ ನಿರತರಾಗಿರುವ ಪ್ರಫುಲ್ಲಾ ಎಸ್‌ ಅವರು ನಿರೂಪಕರ ಅನುಮತಿಯಿಂದ ದಾಖಲಿಸಿದ ಸತ್ಯ ಘಟನೆಯಿದು. ಗೌಪ್ಯತೆಯ ಕಾರಣಕ್ಕಾಗಿ ಹೆಸರನ್ನು ಬದಲಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org