ಅಲ್ಜೈಮರ್ ನಿಮ್ಮ ಮನೆಗೆ ಕಾಲಿಟ್ಟಾಗ

ರಘುವರ ದಾಸ್ ಒಂದು ಮುಂಜಾನೆ ಯಾವುದೇ ಸುಳಿವು ನೀಡದಂತೆ ಮನೆಯಿಂದ ಹೊರಟುಹೋದರು. ಇಡೀ ಕುಟುಂಬ ಗೊಂದಲದಿಂದ ಅವರಿಗಾಗಿ ಕಾಯುತ್ತ ಯಾತನೆಯಲ್ಲಿ ಕಳೆಯಿತು.

ಹಿತೇನ್ ವೃತ್ತಿಯಿಂದ ಒಬ್ಬ ಇಂಜಿನಿಯರ್. ಸುಶಿಕ್ಷಿತ ಹಾಗೂ ಕಠಿಣ ಪರಿಶ್ರಮದಿಂದಾಗಿ ವೃತ್ತಿಜೀವನದಲ್ಲಿ ಏಳಿಗೆಯನ್ನು ಹೊಂದುತ್ತಿರುವವನು. ಕೋಲ್ಕತ್ತಾದಲ್ಲಿ ನೆಲೆಸಿದ್ದ ಆತನ ಬಗ್ಗೆ ಗೆಳೆಯರ ಬಳಗದಲ್ಲಿ ಮಾತ್ರವಲ್ಲ, ವಿರೋಧಿಗಳ ನಡುವೆಯೂ ಒಳ್ಳೆಯ ಅಭಿಪ್ರಾಯವಿತ್ತು. ಆತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವಭಾವ, ಬಂದಿದ್ದನ್ನೆಲ್ಲ ಸ್ವೀಕರಿಸುತ್ತಾ ನಿಭಾಯಿಸುವ ರೀತಿ, ಎದೆಗುಂದದೆ ಕಷ್ಟಗಳನ್ನೆದುರಿಸುವ ಸಾಮರ್ಥ್ಯ ಹಾಗೂ ವೃತ್ತಿಬದುಕಿನಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದ ಬಗೆಯಿಂದಾಗಿ ಎಲ್ಲರೂ ಅವನನ್ನು ಮೆಚ್ಚುತ್ತಿದ್ದರು. ಹಿತೇನ್ ಸುನಂದಾಳನ್ನು ಮದುವೆಯಾಗಿದ್ದು, ಎರಡು ಚೆಂದದ, ಬುದ್ಧಿವಂತ ಹೆಣ್ಣುಮಕ್ಕಳನ್ನು ಹೊಂದಿದ್ದ.

ಸುನಂದಾಳ ತಂಗಿ ತನುಜಾ ಮತ್ತು ತಮ್ಮ ಸುಪ್ರಿಯೋ ಕೂಡ ಉದ್ಯೋಗಿಗಳು. ಅವರು ಕೋಲ್ಕತ್ತಾ ಹಾಗೂ ಕ್ಯಾಲಿಫೋರ್ನಿಯಾಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ನೆಲೆಸಿದ್ದರು. ಸುನಂದಾಳ ತಾಯಿ ಮಧುರಿಮಾ ದಾಸ್ ಹಾಗೂ ತಂದೆ ರಘುವರ ದಾಸ್ ಅದೇ ನಗರದಲ್ಲಿ ವಾಸಿಸುತ್ತಿದ್ದರು.

ವರ್ಷದ ಹಿಂದೆ, ಒಂದು ಶುಕ್ರವಾರದ ರಾತ್ರಿ 10 ಗಂಟೆ ಸುಮಾರಿಗೆ ಸುನಂದಾ ಹಾಗೂ ತನುಜಾರಿಗೆ ತಾಯಿಯಿಂದ ಕರೆ ಬಂತು. ಮಧುರಿಮಾ ವಿಪರೀತ ಗಾಬರಿಗೊಂಡಿದ್ದರು. ಅವರ ತಂದೆ ರಘುವರ ದಾಸ್, ಅಂದು ಬೆಳಗ್ಗೆ ಮನೆ ಬಿಟ್ಟವರು ಅಷ್ಟು ಹೊತ್ತಾದರೂ ಮರಳಿ ಬಂದಿರಲಿಲ್ಲ. ಫೋನ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಇದನ್ನು ಕೇಳುತ್ತಲೇ ಅವರಿಬ್ಬರೂ ತಾಯಿಯ ಮನೆಗೆ ಧಾವಿಸಿದರು. ಬೀದಿ ಬೀದಿ ಅಲೆದು ತಮ್ಮ ತಂದೆಗಾಗಿ ಹುಡುಕಾಟ ನಡೆಸಿದರು. ಪೊಲೀಸರಿಗೆ ದೂರು ನೀಡುವ ಯೋಚನೆಯನ್ನೂ ಮಾಡಿದರು. ಕೊನೆಗೆ ಒಂದಷ್ಟು ಹೊತ್ತು ಕಾದು ನೋಡಲು ತೀರ್ಮಾನಿಸಿದರು. ಮಧುರಿಮಾ ಅವರು ಇನ್ನೂ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ.

ರಘುವರ್ ದಾಸ್ ಇತ್ತೀಚಿನ ದಿನಗಳಲ್ಲಿ ಅದೆಷ್ಟು ಮರೆಗುಳಿಯೂ, ಅನ್ಯಮನಸ್ಕರೂ ಆಗಿದ್ದರೆಂದು ಹೇಳುತ್ತಿದ್ದರು. ಅವರು ಹೊತ್ತಲ್ಲದ ಹೊತ್ತಲ್ಲಿ ಮಲಗುತ್ತಿದ್ದರೆಂದೂ, ನಿದ್ರೆಯಲ್ಲಿ ನಡೆದಾಡುತ್ತಿದ್ದರೆಂದೂ ತಿಳಿಸಿದರು. ಹಿತೇನ್ ಪೋಲಿಸರಲ್ಲಿಗೆ ತೆರಳಿ ತನ್ನ ಮಾವ ನಾಪತ್ತೆಯಾಗಿದ್ದಾರೆಂದು ದೂರು ನೀಡಲು ತೆರಳಿದ. ಅಲ್ಲಿ ಆತನಿಗೆ, 24 ಗಂಟೆಗಳ ಕಾಲ ಕಾಯದ ಹೊರತು ದೂರು ದಾಖಲಿಸುವುದು ಸಾಧ್ಯವಿಲ್ಲವೆಂದು ಹೇಳಿದರು. ಅದಾಗಲೇ ಸಾಕಷ್ಟು ಕಡೆ ಹುಡುಕಾಟ ನಡೆಸಿದ್ದರಿಂದ ಕಾಯುತ್ತಾ ಕೂರುವುದೇ ಸೂಕ್ತವೆಂದು ಅವರೆಲ್ಲರೂ ತೀರ್ಮಾನಿಸಿದರು.

ಅದೃಷ್ಟವಶಾತ್, ರಘವರ್ ಅಂದು ನಡುರಾತ್ರಿ 2 ಗಂಟೆ ಹೊತ್ತಿಗೆ ಮನೆಗೆ ವಾಪಸಾದರು. ಅಷ್ಟು ಹೊತ್ತಿನವರೆಗೆ ಎಲ್ಲಿದ್ದರೆಂದು ಕೇಳಲಾಗಿ, ಕೇವಲ ಮೂರು ರಸ್ತೆ ಆಚೆಗೆ ನಡೆಯುತ್ತಿದ್ದ ಜಾತ್ರೆಯಲ್ಲಿದ್ದೆನೆಂದೂ, ಆಯೋಜಕರು 11 ಗಂಟೆಗೆ ಜಾತ್ರೆ ಮುಗಿಸಿ ತೆರಳುವವರೆಗೂ ಹರಟುತ್ತ ಕುಳಿತಿದ್ದೆನೆಂದೂ ಹೇಳಿದರು. ಅವರ ಮಾತು – ನಡವಳಿಕೆಗಳು ಎಂದಿನಂತೆ ಇರಲಿಲ್ಲ. ಆದರೂ ಅವರು ಮರಳಿ ಬಂದರಲ್ಲ ಅನ್ನುವ ಸಮಾಧಾನದ ನಿಟ್ಟುಸಿರಿನೊಂದಿಗೆ ಕುಟುಂಬದವರೆಲ್ಲ ಅವರವರ ಮನೆಗೆ ಮರಳಿದರು.

ರಘುವರ ದಾಸ್ ಭಾರತೀಯ ಸೇನೆಯಲ್ಲಿದ್ದು ನಿವೃತ್ತಿ ಹೊಂದಿದವರು. ಅವರು ಕ್ರೀಡಾಪಟು ಕೂಡಾ ಆಗಿದ್ದರು. ಅವರು ಚಿಕ್ಕಪುಟ್ಟ ವಿಷಯದಲ್ಲಿ ಕೂಡ ಶಿಸ್ತುಪಾಲನೆ ಮಾಡುತ್ತಿದ್ದರು. ಆದರೆ ಅಂದು ಅವರು ಹೇಳದೆ ಕೇಳದೆ ಅಷ್ಟು ಹೊತ್ತಿನವರೆಗೆ ಹೊರಗೆ ಇದ್ದುದು ಕುಟುಂಬದವರಲ್ಲಿ ಅಚ್ಚರಿ ಮೂಡಿಸಿತ್ತು. ಆತಂಕವನ್ನು ಕೂಡಾ…

ಸುನಂದಾ ಒಮ್ಮೆ ಸಂಪೂರ್ಣವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಂದೆಯ ಮನವೊಲಿಸಿದಳು. ಡಯಾಗ್ನೈಸ್ ಫಲಿತಾಂಶ ಮನೆ ಮಂದಿಗೆ ಅನಿರೀಕ್ಷಿತವಾಗಿತ್ತು. ರಘುವರ ದಾಸ್ ಅವರಿಗೆ ಆಲ್ಜೈಮರ್ ಕಾಯಿಲೆ ಇರುವುದು ಪತ್ತೆಯಾಗಿತ್ತು ಮತ್ತು ಇತ್ತೀಚಿನ ಕೆಲವು ವರ್ಷಗಳಿಂದ ಅವರು ಅಲ್ಜೈಮರ್ ಕಾಯಿಲೆಗೆ ಒಳಗಾಗಿದ್ದಾರೆ ಎಂಬುದೂ ತಿಳಿದು ಬಂತು.

ಆಲ್ಜೈಮರ್ ಪತ್ತೆಯಾದ ನಂತರದಲ್ಲಿ ರಘುವರ ದಾಸ್ ಅವರನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕಾದ ಅಗತ್ಯ ಉಂಟಾಯಿತು. ಅವರು ಆಹಾರ ಸೇವಿಸುವುದು ಕಡಿಮೆಯಾಗುತ್ತಾ ಹೋಯಿತು. ಅವರು ಊಟ ಉಪಹಾರಗಳಲ್ಲಿ ಆಸಕ್ತಿಯನ್ನೇ ಕಳೆದುಕೊಂಡರು. ಒಂದೊಮ್ಮೆ ಅವರು ಬಹಳ ಸೂಕ್ಷ್ಮವಾಗಿ ಜೋಡಿಸಿಡುತ್ತಿದ್ದ ವಸ್ತುಗಳು ಈಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಅದರ ಬಗ್ಗೆ ಕಾಳಜಿ ತೋರುತ್ತಿರಲಿಲ್ಲ. ಮಧುರಿಮಾ ಅವರು ತಮ್ಮ ಪತಿಗಾಗಿ ಕೈಲಾದ್ದೆಲ್ಲವನ್ನೂ ಮಾಡಲು ಬಯಸುತ್ತಿದ್ದರೂ ಅವರ ಕಾಯಿಲೆಯ ಸ್ವರೂಪದ ಅರಿವು ಸಾಧ್ಯವಾಗದೆ ಸೋಲುತ್ತಿದ್ದರು. ಸಹನೆ ಕಳೆದುಕೊಳ್ಳತೊಡಗಿದರು. ಕುಟುಂಬದ ಸದಸ್ಯರು ಮಧುರಿ ಅವರಿಗೆ ಸಹಾಯಕ್ಕೆ ಧಾವಿಸಿ ತಮ್ಮ ಕೈಲಾದುದನ್ನು ಮಾಡಿದರೂ ಸಮಸ್ಯೆ ಬಗೆಹರಿಯುತ್ತಿರಲಿಲ್ಲ.

ರಘುವರ್ ಅವರ ಕಾಯಿಲೆ ಕುಟುಂಬದ ಪ್ರತಿಯೊಬ್ಬರಿಗೂ ಹೆಚ್ಚುವರಿ ಹೊಣೆಯನ್ನು ಹೊರಿಸಿತು. ಅವರ ಹೆಣ್ಣುಮಕ್ಕಳು ಮಾತ್ರವಲ್ಲ, ನನ್ನ ಗೆಳೆಯ ಹಿತೇನ್ ಕೂಡ ಅದನ್ನು ಹೊತ್ತುಕೊಳ್ಳಬೇಕಾಯಿತು. ಅವನು ತನ್ನ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನ ಕಡಿಮೆಯಾಗದಂತೆ ನಿಭಾಯಿಸುತ್ತಲೇ ತನ್ನ ಮಾವನ ಕಾಳಜಿಯನ್ನೂ ಮಾಡಬೇಕಿತ್ತು. ನಾವು ಭೇಟಿಯಾದಾಗ ಈ ಬಗ್ಗೆ ಹೆಚ್ಚು ಮಾತನಾಡದೆ ಹೋದರೂ ಅವನು ಒತ್ತಡದಲ್ಲಿ ಇರುವುದನ್ನು ನಾನು ಗುರುತಿಸುತ್ತಿದ್ದೆ. ಅದು ಮುಂದೆ ಮತ್ತಷ್ಟು ಹೆಚ್ಚಾಗುತ್ತದೆ ಅನ್ನುವ ಅರಿವೂ ನಮಗಿತ್ತು.

ಸದ್ಯಕ್ಕೆ ರಘುವರ್ ಪರಿಸ್ಥಿತಿ ಮನೆಯವರೇ ಸಂಭಾಳಿಸಬಹುದಾದ ಹಂತದಲ್ಲಿದೆ. ಅದು ಮತ್ತಷ್ಟು ಹದಗೆಟ್ಟರೆ ಅವರನ್ನು ಜೆರಿಯಾಟ್ರಿಕ್ ಕೇರ್ ಸೌಲಭ್ಯವಿರುವ ಕಡೆ ಸೇರಿಸಬಹುದು. ಆದರೆ ಈ ಬಗ್ಗೆ ಅವರ ಕುಟುಂಬ ಇನ್ನೂ ಯೋಚನೆ ನಡೆಸಿಲ್ಲ.

ಆಲ್ಜೈಮರ್ ಕಾಯಿಲೆಯಿರುವ ವ್ಯಕ್ತಿಯನ್ನು ಮಾತ್ರವಲ್ಲ, ಹತ್ತಿರದ – ದೂರದ ಸಂಬಂಧಿಗಳಿಗೂ ಯಾತನೆಯನ್ನು ನೀಡುತ್ತದೆ. ಅಂಥವರಿಗೆ ಕುಟುಂಬದ ಮತ್ತು ಆಪ್ತರ ಪ್ರೀತಿ – ಕಾಳಜಿಗಳೇ ಮೊದಲ ಔಷಧವಾಗಿದೆ.

ಕೋರಿಕೆಯ ಮೇರೆಗೆ ಹೆಸರುಗಳನ್ನು ಗೌಪ್ಯವಾಗಿರಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org